ಅಕ್ಕಮಹಾದೇವಿಯ ಈ ವಚನ ಲಜ್ಜೆಯೆನ್ನುವ ಪರಿಕಲ್ಪನೆಯನ್ನೇ ಪ್ರಶ್ನಿಸುತ್ತದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6, ಲಜ್ಜೆಯಳಿದು-ನಾನು ನೀನಾಗಿ
ಕೈಸಿರಿಯ ದಂಡವ ಕೊಳಬಹುದಲ್ಲದೆ,
ಮೈಸಿರಿಯ ದಂಡವ ಕೊಳಲುಂಟೆ
ಉಟ್ಟಂತಹ ಉಡಿಗೆ ತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ,
ಮುಚ್ಚಿರ್ದ ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೆ
ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡುಗೆ ತೊಡುಗೆಯ ಹಂಗೇಕೋ ಮರುಳೆ [೧೮೬]
[ಕೈಸಿರಿ=ಕೈಯಲ್ಲಿರುವ ಸಂಪತ್ತು, ಮೈಸಿರಿ=ದೇಹದ ಸಂಪತ್ತು, ಮುಚ್ಚಿರ್ದ=ಮುಚ್ಚಿದ್ದ, ಮುಸುಕಿರ್ದ=ಮುಸುಕಿದ್ದ; ನಿರ್ವಾಣ=ಇಲ್ಲವಾಗುವುದು, ಕೊನೆಯಾಗುವುದು, ಹುಟ್ಟುಸಾವುಗಳಿಂದ ಬಿಡುಗಡೆ, ಬತ್ತಲೆ]
ಕೈಯಲ್ಲಿರುವ ಸಂಪತ್ತನ್ನು ದಂಡದ ರೂಪದಲ್ಲಿ ವಸೂಲಿ ಮಾಡಿ ಕಿತ್ತುಕೊಳ್ಳಬಹುದು. ಮೈಯೊಳಗಿನ ಸಿರಿಯನ್ನು ಹಾಗೆ ಕೊಳ್ಳಲು ಸಾಧ್ಯವೇ? ಉಟ್ಟ ಉಡುಗೆ, ತೊಟ್ಟ ತೊಡುಗೆಯನ್ನೆಲ್ಲ ಸೆಳೆದುಕೊಳ್ಳಬಹುದು, ಇಡೀ ಮೈಯನ್ನು ಮುಚ್ಚಿರುವ, ಮುಸುಕಿರುವ ಬತ್ತಲೆತನವನ್ನು ಹೇಗೆ ಸೆಳೆದುಕೊಳ್ಳಲು ಸಾಧ್ಯ ಚೆನ್ನಮಲ್ಲಿಕಾರ್ಜುನ ದೇವರ ಬೆಳಗನ್ನು ಉಟ್ಟು ಲಜ್ಜೆಗೆಟ್ಟವಳು ನಾನು. ನನಗೇಕೆ ಉಡುಗೆ ತೊಡುಗೆಯ ಹಂಗು. ನಿರ್ವಾಣವನ್ನು ಇಲ್ಲವಾಗುವುದು ಅನ್ನುವ ಅರ್ಥದಲ್ಲಿ ನೋಡಿದರೆ ನಾನು ಇಲ್ಲವಾಗಿರುವಾಗ …ಯಾವ ಹಂಗು, ಹುಟ್ಟು ಸಾವುಗಳನ್ನು ಮೀರಿದ ಮೇಲೆ ಯಾವ ಹಂಗು ಎಂದು ಈ ವಚನಾರ್ಥವನ್ನು ವಿವರಿಸಿಕೊಳ್ಳಬಹುದು.
ಅಕ್ಕಮಹಾದೇವಿಯ ಈ ವಚನ ಲಜ್ಜೆಯೆನ್ನುವ ಪರಿಕಲ್ಪನೆಯನ್ನೇ ಪ್ರಶ್ನಿಸುತ್ತದೆ. ಶೂನ್ಯಸಂಪಾದನೆಯಲ್ಲಿ ಅಕ್ಕನನ್ನು ಕುರಿತು ಬಸವಣ್ಣನವರ ಈ ವಚನವಿದೆ, ನೋಡಿ
ಕಾಯದ ಲಜ್ಜೆಯ ಕಲ್ಪಿತವ ಕಳೆದು,
ಜೀವದ ಲಜ್ಜೆಯ ಮೋಹವನಳಿದು,
ಮನದ ಲಜ್ಜೆಯ ನೆನಹ ಸುಟ್ಟು,
ಭಾವದ ಕೂಟ ಬತ್ತಲೆಯೆಂದರಿದು,
ತವಕದ ಸ್ನೇಹ ವ್ಯವಹಾರಕ್ಕೆ ಹುಗದು.
ಕೂಡಲಸಂಗಮದೇವಯ್ಯಾ,
ಎನ್ನ ಹೆತ್ತ ತಾಯಿ ಮಹದೇವಿಕ್ಕನ ನಿಲವ ನೋಡಯ್ಯಾ ಪ್ರಭುವೆ. [೧.೧೧೪೫]
ಅಕ್ಕಮಹಾದೇವಿಯನ್ನು ಪ್ರಾಚೀನ ಕನ್ನಡ ಮನಸ್ಸು ಗ್ರಹಿಸಿ ಕೊಂಡಾಡಿದ ರೀತಿ ಈ ವಚನದಲ್ಲಿದೆ. ದೇಹದ ಲಜ್ಜೆ ಕೇವಲ ಕಲ್ಪನೆ, ಜೀವಕ್ಕಾಗಿ ಲಜ್ಜೆ ಪಡುವುದು ಮೋಹ, ಮನಸಿನ ಲಜ್ಜೆ ಕೇವಲ ನನೆಪಿನ ಕಾರಣಕ್ಕೆ ಹುಟ್ಟಿದ್ದು, ಇವನ್ನೆಲ್ಲ ಬಗೆಯ ಲಜ್ಜೆಗಳನ್ನು ಅಕ್ಕಮಹಾದೇವಿ ಸುಟ್ಟಿದ್ದಳು. ಬರಿಯ ತವಕಪಟ್ಟರೆ ಅದರಿಂದ ಸ್ನೇಹ ಸಿದ್ಧಿಸದು. ಭಾವದ ಕೂಟ ಬತ್ತಲೆ ಎಂದು ಅರಿತು ಚೆನ್ನಮಲ್ಲಿಕಾರ್ಜುನನೊಡನೆ ಒಂದಾದ ತಾಯಿ ಎಂದು ಅಕ್ಕನನ್ನು ಈ ವಚನ ಗೌರವಿಸುತ್ತದೆ.

