ಒಮ್ಮೆ ನಿಮಗೆ ಕೆಲವೇ ದಿನಗಳಲ್ಲಿ ನೀವು ಸಾಯಲಿದ್ದೀರಿ ಎನ್ನುವುದು ಗೊತ್ತಾದಾಗ, ಕೂಡಲೇ ನಿಮಗೆ ಈ ಜಗತ್ತು – ಈ ಹಣ, ಈ ಬ್ಯಾಂಕ್, ಈ ವ್ಯಾಪಾರ, ಅದು ಇದು ಎಲ್ಲವೂ ಯೂಸ್ ಲೆಸ್ ಆಗಿಬಿಡುತ್ತದೆ. ಈಗ ನಿಮಗೆ ಯಾವುದೂ ಕನಸಲ್ಲ, ಮತ್ತು ಈಗ ನೀವು ಎಚ್ಚರವಾಗಿದ್ದೀರಿ ~ ಓಶೋ ರಜನೀಶ್ ; ಕನ್ನಡಕ್ಕೆ: ಚಿದಂಬರ ನರೇಂದ್ರ
ಬರಿಗೈಯಲ್ಲಿ ಈ ಜಗತ್ತಿನೊಳಗೆ
ದಾಖಲಾದೆ,
ಬರಿಗಾಲಲ್ಲಿ ಬಿಟ್ಟು ಹೋಗುತ್ತಿದ್ದೇನೆ.
ನನ್ನ ಬರುವಿಕೆ ಮತ್ತು ಹೋಗುವಿಕೆ
ತಮ್ಮೊಳಗೆ ತಾವೇ ತೊಡಕಾದ
ಎರಡು ಸಾಮಾನ್ಯ ಘಟನೆಗಳು.
ತನ್ನ ಸಾವಿನ ಕೆಲ ದಿನ ಮುಂಚೆ , ಕೋಝಾನ್ ತನ್ನ ಶಿಷ್ಯರೆಲ್ಲರಿಗೂ ತಾನು ಸತ್ತಾಗ ಯಾವ ಆಚರಣೆಗಳನ್ನೂ ಪಾಲಿಸದಂತೆ ಮತ್ತು ತನ್ನ ನೆನಪಲ್ಲಿ ಯಾವ ಕಾರ್ಯಗಳನ್ನು ಕೈಗೊಳ್ಳದಂತೆ ಎಚ್ಚರಿಕೆ ನೀಡಿದ. ತಾನು ಸಾಯುವ ದಿನ ಮುಂಜಾನೆ ಈ ಪದ್ಯ ರಚನೆ ಮಾಡಿ, ಬ್ರಶ್ ಕೆಳಗಿಟ್ಟು, ನೇರವಾಗಿ ಕುಳಿತ ಭಂಗಿಯಲ್ಲಿ ಪ್ರಾಣ ತ್ಯಾಗ ಮಾಡಿದ.
(ಕೋಝಾನ್ ತೀರಿಕೊಂಡದ್ದು, ಎರಡನೇ ತಿಂಗಳ, ಹನ್ನೆರಡನೇ ದಿನ, 1360 )
ಒಮ್ಮೆ ಯಾರಿಗಾದರೂ ತಾವು ಇಂಥ ನಿರ್ದಿಷ್ಟ ಸಮಯದಲ್ಲಿ ಸಾಯಲಿದ್ದೇವೆ ಎನ್ನುವುದು ಗೊತ್ತಾಗುವುದಾದರೆ, ಅವರು ಈಗಾಗಲೇ ಒಂದು ರೀತಿಯಲ್ಲಿ ಸತ್ತು ಹೋಗಿದ್ದಾರೆ ಮತ್ತು ಆಗ ಅವರು ಭವಿಷ್ಯದ ಬಗ್ಗೆ ಯೋಚಿಸಲು ಶುರು ಮಾಡುತ್ತಾರೆ – ಆಗ ಅವರಿಗೆ ಧ್ಯಾನ ಸಾಧ್ಯ. ಒಮ್ಮೆ ಮನುಷ್ಯನಿಗೆ ತಾನು ಸಾಯಲಿರುವುದು ಗೊತ್ತಾದರೆ, ಅವನು ತಾನೇ ತಾನಾಗಿ ತನ್ನಿಂದ ಎಲ್ಲ ಕಸವನ್ನು ದೂರ ಮಾಡಿಬಿಡುತ್ತಾನೆ. ಕೂಡಲೇ ಅವನ ಇಡೀ ದೃಷ್ಟಿ ಬದಲಾಗುವುದು.
ನಾಳೆ ಹೊರಡುವುದು ನಿಮಗೆ ನಿಶ್ಚಿತವಾಗಿದ್ದರೆ, ನೀವು ನಿಮ್ಮ ಸೂಟ್ ಕೇಸ್ ಪ್ಯಾಕ್ ಮಾಡಿಕೊಳ್ಳಲು ಶುರು ಮಾಡುತ್ತೀರಿ ಮತ್ತು ನಿಮಗೆ ನೀವು ಇರುವ ಹೊಟೆಲ್ ರೂಮಿನ ಬಗ್ಗೆ ಯಾವ ಚಿಂತೆ ಇಲ್ಲ. ಹಾಗೆ ನೋಡಿದರೆ ನೀವೀಗ ಇಲ್ಲಿ ಇಲ್ಲ ; ನೀವು ನಿಮ್ಮ ಸೂಟ್ ಕೇಸ್ ಮತ್ತು ಇತರ ಸರಂಜಾಮನ್ನ ಮ್ಯಾನೇಜ್ ಮಾಡುತ್ತಿದ್ದೀರಿ, ಮತ್ತು ನಿಮ್ಮ ಪ್ರಯಾಣದ ಬಗ್ಗೆ ಯೋಚನೆ ಮಾಡುತ್ತಿದ್ದೀರಿ. ನಾಳೆ ನೀವು ಸಾಯಲಿದ್ದೀರಿ ಎಂದು ನೀವು ಯಾರಿಗಾದರೂ ಹೇಳಿದಾಗ, ಅವರ ವಿಷಯದಲ್ಲೂ ಹೀಗೇ ಆಗುತ್ತದೆ. ಈಗ ಅವರಿಗೆ ಸಾವು ಖಚಿತ ಮತ್ತು ಅದನ್ನು ಅವಾಯ್ಡ್ ಮಾಡುವುದು ಸಾಧ್ಯವಿಲ್ಲ ಹಾಗು ಇನ್ನು ಮತ್ತೇ ಅದೇ ಬೇಜವಾಬ್ದಾರಿಯಿಂದ ಬದುಕುವುದು ಸಾಧ್ಯವಿಲ್ಲ , ಈಗಾಗಲೇ ಸಾಕಷ್ಟು ಬದುಕನ್ನು ವ್ಯರ್ಥ ಮಾಡಿಯಾಗಿದೆ. ಕೂಡಲೇ ಆ ಮನುಷ್ಯ ಜಗತ್ತಿಗೆ ಬೆನ್ನು ಮಾಡಿ ಭವಿಷ್ಯದ ಕತ್ತಲಲ್ಲಿ ಇಣುಕಿ ನೋಡಲು ಶುರು ಮಾಡುತ್ತಾನೆ.
ಆ ಕ್ಷಣದಲ್ಲಿ ನೀವು ಅವನಿಗೆ ಧ್ಯಾನದ ಬಗ್ಗೆ ಹೇಳಿದರೆ ಅವನು ಮನಸ್ಪೂರ್ತಿಯಾಗಿ ಒಪ್ಪಿಕೊಳ್ಳುತ್ತಾನೆ – ಮತ್ತು ಅದು ಅವನಿಗೆ ಅತ್ಯಂತ ಬೆಲೆಬಾಳುವ ಉಡುಗೊರೆಯಾಗಬಹುದು.
ಸಾವನ್ನು ಎದುರು ನೋಡ್ತಾ ಇರೋ ಝೆನ್ ಮಾಸ್ಟರ್, ತನ್ನ ಶಿಷ್ಯರನ್ನು ಎದುರು ಕೂರಿಸಿಕೊಂಡು ಒಂದು ಕೊನೆಯ ಮಾತು ಹೇಳೋದು ಝೆನ್’ಲ್ಲಿ ಒಂದು ಬಹು ಮುಖ್ಯ ಸಂಪ್ರದಾಯ. ಹೀಗೆ ಝೆನ್ ಮಾಸ್ಟರ್’ಗಳು ಹೇಳಿದ ಕೊನೆಯ ಮಾತುಗಳನ್ನ, ಪದ್ಯಗಳನ್ನ, ಝೆನ್ ವಿದ್ಯಾರ್ಥಿಗಳು ತುಂಬ ಆಸಕ್ತಿಯಿಂದ ಅಧ್ಯಯನ ಮಾಡುತ್ತಾರೆ.
ಝೆನ್ ಮಾಸ್ಟರ್ ಬಾಂಕಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಶಿಷ್ಯರೆಲ್ಲ ಬಾಂಕಿಯ ಸುತ್ತ ನೆರೆದಿದ್ದರು. ಸಾವಿಗೂ ಮೊದಲು ಕೊನೆಯದಾಗಿ ಒಂದು ಜ್ಞಾನದ ಮಾತು ಹೇಳುವಂತೆ ಹಿರಿಯ ಶಿಷ್ಯ, ಮಾಸ್ಟರ್ ಬಾಂಕಿಯನ್ನು ಕೇಳಿಕೊಂಡ.
ಒಂದು ನಿಮಿಷ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಿದ ಬಾಂಕಿ ಕೊನೆಯದಾಗಿ ಮಾತನಾಡಿದ,
“ ಸಾಯಲು ನನಗೆ ಭಯವಾಗುತ್ತಿದೆ “
ಈ ಮಾತು ಹೇಳಿತ್ತಿದ್ದಂತೆಯೇ ಬಾಂಕಿ, ಕೊನೆಯ ಉಸಿರೆಳೆದ.
ಈ ಮಾತು ಕೇಳುತ್ತಿದ್ದಂತೆಯೇ ಸುತ್ತ ಸೇರಿದ್ದ ಶಿಷ್ಯರಿಗೆಲ್ಲ ಆಶ್ಚರ್ಯ, ಆಘಾತ ಆಯಿತು. ಆಗ ಅಲ್ಲಿಗೆ ಬಂದ ಇನ್ನೊಬ್ಬ ಝೆನ್ ಮಾಸ್ಟರ್ ಗೆ, ಶಿಷ್ಯರು ಪ್ರಶ್ನೆ ಮಾಡಿದರು.
“ಮಾಸ್ಟರ್ ಬಾಂಕಿಗೆ ಜ್ಞಾನೋದಯವಾಗಿದ್ದರೆ, ಅವನು ಈ ಥರ ಉತ್ತರ ಕೊಡುತ್ತಿರಲಿಲ್ಲ ಅಲ್ಲವೆ? “
ಮಾಸ್ಟರ್ ಗದ್ಗತಿತನಾಗಿ ಉತ್ತರ ಕೊಟ್ಟ.
“ ಬಾಂಕಿಯ ಉತ್ತರ ಕೇಳಿದ ಮೇಲೆ ನನಗಂತೂ ಒಂದು ವಿಷಯ ಸ್ಪಷ್ಚವಾಯಿತು, ಬಾಂಕಿಗೆ ನಿಜವಾಗಿಯೂ ಜ್ಞಾನೋದಯವಾಗಿತ್ತು. ಏಕೆಂದರೆ ಝೆನ್’ಲ್ಲಿ ಎಲ್ಲಕ್ಕಿಂತಲೂ ಶ್ರೇಷ್ಠ ಜ್ಞಾನವೆಂದರೆ ಅದು ಪ್ರಾಮಾಣಿಕತೆ “

