ನಮ್ಮ ನೋಟ, ಭಾವ ಹೇಗೋ ಹಾಗೆ ಅಕ್ಕನ ವಚನಗಳು ಅರ್ಥ ಆಗುತ್ತವೆ. ಬಗೆಬಗೆಯ ಮನುಷ್ಯಾನುಭವಗಳು ಹೆಣ್ಣಿನ ಮನಸಿನ ಮೂಲಕ ಹಾದು ಬಂದು ಕನ್ನಡದಲ್ಲಿ ಜೀವತಳೆದಿವೆ ಅನಿಸಿದೆ ನನಗೆ । ಓ.ಎಲ್.ನಾಗಭೂಷಣ ಸ್ವಾಮಿ
(ಹಿಂದಿನ ಸಂಚಿಕೆಯಿಂದ ಮುಂದುವರಿದಿದೆ…)
ಅಕ್ಕಮಹಾದೇವಿ ಹನ್ನೆರಡನೆಯ ಶತಮಾನದವಳು ಅನ್ನುವುದು ಅರ್ಥವಿಲ್ಲದ ವಾಡಿಕೆಯ ಮಾತು.
ಅಕ್ಕನ ವಚನಗಳ ಬಗ್ಗೆ ಬರೆಯಬೇಕೆಂದು ಗಮನವಿಟ್ಟು ಓದುತ್ತ ಇರುವಾಗ ಮರುಕ, ಜೊತೆಗೆ ಆತ್ಮವಿಶ್ವಾಸ ತುಂಬಿರುವ ಹೆಂಗಸೊಬ್ಬಳು ತನ್ನ ಮನಸಿನೊಳಗಿನ ಎಲ್ಲ ಥರದ ಮಾತನ್ನು ಸಭ್ಯತೆ ಮೀರದೆ ಆಪ್ತವಾಗಿ ನುಡಿಯುತಿದ್ದಾಳೆ, ಅದನ್ನು ಕೇಳುವ ಅವಕಾಶ ಒದಗಿದೆ ಅನಿಸಿತು.
ಕವಿ ಪಂಪ ಆದಿಪುರಾಣದ ಕಥೆಯನ್ನು ʻಓರಂತೆ ಭಾವಿಸಿʼ ಹೇಳಿದ್ದೇನೆ ಅನ್ನುತ್ತಾನೆ. ಅಂದರೆ ಪಾತ್ರಗಳಿಗೆ ಆದದ್ದನ್ನೆಲ್ಲ ʻನನಗೇ ಆಯಿತುʼ ಅನ್ನುವ ಹಾಗೆ ಭಾವಿಸುತ್ತ ಬರೆಯುವ ಹಂಬಲ ಅವನದು. ಈ ಹಂಬಲ ʻನನ್ನ ಪ್ರಾಣವನ್ನೇ ಹೀರುತಿತ್ತು,ʼ ಅನ್ನುತ್ತಾನೆ. ಹಾಗೆ ಕವಿಯ ಪ್ರಾಣವನ್ನೇ, ಉಸಿರನ್ನೇ ಹೀರಿಕೊಂಡು, ಕೂಸು ಹುಟ್ಟುವ ಹಾಗೆ, ಎರಡು ಕಾವ್ಯಗಳು ಮಾತಿನ ರೂಪಪಡೆದವು ಅನ್ನುವ ಅರ್ಥದ ಮಾತು ಹೇಳುತ್ತಾನೆ. ಜರ್ಮನಿಯ ಕವಿ ರಿಲ್ಕ್ ಕವಿ ಕೂಡ ʻಬರೆಯದಿದ್ದರೆ ಸತ್ತೇ ಹೋಗುತ್ತೇನೆ ಅನಿಸದಿದ್ದರೆ ಬರೆಯಲೇಬೇಡ,ʼ ಎಂದು ಯುವ ಕವಿಯೊಬ್ಬನಿಗೆ ಹೇಳಿದ. ನನಗೆ ಮುಖ್ಯವೆನಿಸಿದ ಅಕ್ಕನ ಈ ವಚನಗಳು ಕೂಡ ಅವಳ ಉಸಿರು, ಪ್ರಾಣಗಳನ್ನೆಲ್ಲ ಹೀರಿಕೊಂಡು ಮಾತಿನ ರೂಪತಳೆದ ಹಾಗಿವೆ.
ಜೀವ ಮಿಡಿಯುತ್ತಿದೆ ಅನಿಸುವ ಬರಹವನ್ನು ʻಓದುತ್ತಿರುವ ಸಂಗತಿಯೆಲ್ಲ ನನಗೇ ಆಗುತ್ತಿದೆʼ ಎಂದು ಓರಂತೆ ಭಾವಿಸಿಕೊಂಡೇ ಓದಬೇಕು, ಅನುಭವಿಸಬೇಕು. ಆಗ ಕಾವ್ಯ ಹುಟ್ಟುತ್ತದೆ. ಬರೆಯುವ ಯಾವುದೂ ಹೊಸತಲ್ಲ, ಇರುವ, ಕಾಣುವ ಯಾವುದೂ ಹೊಸತಲ್ಲ, ಅನುಭವಿಸಿದಾಗ ಮಾತ್ರ ಎಲ್ಲವೂ ಹೊಸತಾಗುತ್ತವೆ. ಅದಕ್ಕೇ ಬರೆಯುವುದು ಮತ್ತು ಓದುವುದು ಎರಡೂ ನಿತ್ಯವೂ ಹೊಸತೇ ಆಗಿರುತ್ತವೆ—ಕಡಲಿನ ಹಾಗೆ.
ಅಕ್ಕ ನುಡಿಯುವುದು ಹೆಣ್ಣು ಮನಸಿನ ಮಾತು. ಅದು ನನ್ನ ಅನುಭವಕ್ಕೆ ಬಂದ ಹಾಗೆ ಬರೆದೆ. ಮನಸು ತೆತ್ತು ಓದುವವರಿಗೆ ಅಕ್ಕನ ವಚನಗಳು ಕಿವಿಯಲ್ಲೇ ಪಿಸುಗುಟ್ಟಿದ ಹಾಗೆ ಕೇಳುತ್ತವೆ. ಓದುತ್ತಾ ಲೆಕ್ಕವಿರದಷ್ಟು ಭಾವಗಳು ಹುಟ್ಟಿ ಒಪ್ಪಿದ್ದ ವಿಚಾರಗಳೆಲ್ಲ ತಲೆಕೆಳಗಾಗುವಂತೆ, ನಮ್ಮನ್ನೇ ನೋಡಿಕೊಳ್ಳುವಂತೆ ಮಾಡುತ್ತವೆ. ಅಕ್ಕ ಕನ್ನಡದ ಲೋಕದಲ್ಲಿ ಹುಟ್ಟಿದ್ದರಿಂದ ಕನ್ನಡದಲ್ಲಿ ಹೇಳಿದ್ದಾಳೆ ಅಷ್ಟೇ. ಅಕ್ಕ ಹೇಳುವ ಅನುಭವಗಳು ಯಾವುದೇ ಕಾಲ, ದೇಶ, ಭಾಷೆಯ ಯಾವುದೇ ಹೆಣ್ಣಿಗೆ ಆಗುವ ಅನುಭವಗಳೇ.
ಅಕ್ಕನ ವಚನಗಳನ್ನು ಓದುತ್ತ ಅವಳದು ಒಲುಮೆ ಒಚ್ಚತವಾದ ಮನಸು ಅನಿಸಿತು ಒಚ್ಚತವೆಂದರೆ ಮೀಸಲು, ನಿಶ್ಚಿತ, ಹಿತ, ಪ್ರಿಯ, ಒಂದಾಗು, ಅಚ್ಚುಕಟ್ಟು, ಓರಣ, ನೆಮ್ಮದಿ, ಅಂದ, ಸೊಬಗು, ಮನಸಿಟ್ಟು ಒಪ್ಪಿಸು, ಹೆಚ್ಚಳ, ದಿಟ ಅನ್ನುವ ಅರ್ಥಗಳಿವೆ. ಅಕ್ಕನ ರಚನೆಯಲ್ಲಿ ಅಚ್ಚಕನ್ನಡ ಪದಗಳ ಬಳಕೆ ಹೆಚ್ಚು. ನಮಗೆದುರಾಗುವ ಅಪರಿಚಿತ ಪದಗಳನ್ನು ಸಂದರ್ಭಕ್ಕೆ ತಕ್ಕ ಅರ್ಥ ಮಾಡಿಕೊಳ್ಳಬೇಕು, ಸಾಧ್ಯವಾದರೆ ನಾವೂ ಬಳಸಬೇಕು.
ನಮ್ಮ ನೋಟ, ಭಾವ ಹೇಗೋ ಹಾಗೆ ಅಕ್ಕನ ವಚನಗಳು ಅರ್ಥ ಆಗುತ್ತವೆ. ಬಗೆಬಗೆಯ ಮನುಷ್ಯಾನುಭವಗಳು ಹೆಣ್ಣಿನ ಮನಸಿನ ಮೂಲಕ ಹಾದು ಬಂದು ಕನ್ನಡದಲ್ಲಿ ಜೀವತಳೆದಿವೆ ಅನಿಸಿದೆ ನನಗೆ. ನಮ್ಮ ಜೊತೆಯಲ್ಲಿ ಬದುಕುವ ಮನುಷ್ಯರನ್ನು ಗಮನಿಸಿದರೆ ಒಮ್ಮೊಮ್ಮೆ ಒಂದೊಂದು ಥರ ಅವರು ಕಾಣುತ್ತಾರಲ್ಲ ಹಾಗೆಯೇ ಈ ವಚನಗಳ ಮೂಲಕ ನಮ್ಮ ಮನಸಿನಲ್ಲಿ ಮೂಡುವ ಅಕ್ಕನ ಭಾವಚಿತ್ರದ Shadeಗಳು ಪ್ರತಿ ವಚನದೊಡನೆಯೂ ಪ್ರತಿ ಓದಿಗೂ ಬದಲಾಗುತ್ತ ಹೋಗುತ್ತವೆ—ಮನುಷ್ಯರ ಹಾಗೇ ಅಕ್ಕನ ವಚನಗಳೂ ಪೂರ್ತಿ ಅರ್ಥವಾಗಲಾರವು. ನಮ್ಮ ಕಾಲದ್ದಲ್ಲದ ಮಾತನ್ನು ನಮ್ಮ ಕಾಲದ್ದಾಗಿ ಓದುತ್ತಾ ನಮಗೆ ಆದ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವುದೇ ಸರಿಯಾದ ದಾರಿಯೇ ಹೊರತು ಯಾವುದೇ ಮಾತಿನ ಅರ್ಥ ಇದೇ, ಇಷ್ಟೇ, ಹೀಗೇ ಎಂದು ಸಾಧಿಸುವುದು ಅಲ್ಲ ಎಂದು ನಂಬಿದ್ದೇನೆ.
ಇದರೊಂದಿಗೆ ಅಕ್ಕನ ವಚನಗಳ ಸಂವಾದದ ಬಾಗ ಮುಗಿಯುತ್ತದೆ. ಮುಂದೆ ಬೇರೆಯ ವಚನಕಾರರನ್ನು ನೋಡೋಣ.

