ಆದರ್ಶಗಳು ( Ideals ): ಓಶೋ 365 #Day 234


ಯಾವಾಗ ಜನರಿಗೆ ದೊಡ್ಡ ದೊಡ್ಡ ಆದರ್ಶಗಳನ್ನು ಹೇಳಿಕೊಡಲಾಗುತ್ತದೆಯೋ ಆಗ ಅವರಿಗೆ ಅಸಹ್ಯದ ಮತ್ತು ತಪ್ಪಿತಸ್ಥ ಭಾವ ಕಾಡಲು ಶುರು ಮಾಡುತ್ತದೆ. ಏಕೆಂದರೆ ಆ ಆದರ್ಶಗಳು ಮೂರ್ಖತನದವು ಮತ್ತು ಅಸಾಧ್ಯವಾದವು; ಯಾರಿಗೂ ಅವನ್ನು ಅಳವಡಿಸಿಕೊಳ್ಳುವುದು ಸಾಧ್ಯವಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ನರಕದ ಬಗ್ಗೆ ಚಿಂತೆ,
ಸ್ವರ್ಗದ ಬಗ್ಗೆ ಕನಸು
ಎರಡೂ ತಮಾಷೆಯ ಸಂಗತಿಗಳೇ.

ನರಕ, ಬೇರೆಲ್ಲೂ ಇಲ್ಲ
ನರಕದ ಅಸ್ತಿತ್ವ ಇಲ್ಲೇ,  ಈ ಕ್ಷಣದಲ್ಲೆ.
ಹಾಗೆಯೇ ಸ್ವರ್ಗ ಕೂಡ.

ಪ್ರತೀ ಬಾರಿ ನಾವು ಪ್ರೀತಿಸಿದಾಗ
ಸ್ವರ್ಗದ ಅಂಗಳದಲ್ಲಿ ದಾಖಲಾಗುತ್ತೇವೆ
ಮತ್ತು
ದ್ವೇಷ, ಅಸೂಯೆ, ಹಿಂಸೆಯಲ್ಲಿ
ಒಂದಾದಾಗ
ನರಕದ ಕೆನ್ನಾಲಿಗೆಗೆ ಆಹಾರವಾಗುತ್ತೆವೆ.

~ ಶಮ್ಸ್

ನಮ್ಮ ಎದುರು ಆದರ್ಶಗಳಿರುವಾಗ, ಏನೇ ಮಾಡಿದರೂ  ನಾವು ಸಫಲರಾಗುವುದಿಲ್ಲ ಏಕೆಂದರೆ ಆದರ್ಶಗಳು ಅಸಾಧ್ಯದವು, ಅಮಾನವೀಯವಾದವು. ಅವನ್ನು  “superhuman” ಎಂದು ಕರೆಯುತ್ತಾರಾದರೆ ನಿಜವಾಗಿಯೂ ಅವು “inhuman”. ಆದರ್ಶಗಳ ಜೊತೆಗಿನ ಬದುಕು ಸ್ವ-ಹಿಂಸೆ ಮತ್ತು ನೀವು ಏನೇ ಮಾಡಿದರೂ ಅದು ತಪ್ಪು. ಇದು ನಿಮಗೆ ತೊಂದರೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಆದರ್ಶಗಳನ್ನು ಡ್ರಾಪ್ ಮಾಡಿ ಮತ್ತು ಸಹಜವಾಗಿರಿ.

ವಾಸ್ತವವಾದಿಯಾಗಿರಿ. ಒಮ್ಮೆ ನೀವು ವಾಸ್ತವವಾದಿಯಾದರೆ, ಆಗ ಎಲ್ಲವೂ ಪರಿಪೂರ್ಣ, ಎಲ್ಲವೂ ಸುಂದರ. ಯಾವಾಗ ನಿಮ್ಮ ಎದುರು ಪರಿಪೂರ್ಣತೆಯ ಆದರ್ಶ ಇಲ್ಲವೋ ಆಗ ಎಲ್ಲವೂ ಪರಿಪೂರ್ಣ ಏಕೆಂದರೆ, ನಿಮಗೆ ಹೋಲಿಕೆ ಮಾಡಲು, ಖಂಡನೆ ಮಾಡಲು ಯಾವ ಮಾನದಂಡ ಇಲ್ಲ.

ಖಂಡನೆ ಮಾಡುವಂಥ ಯಾವ ಸಂಗತಿಯ ಬಗ್ಗೆಯೂ ನನಗೆ ಗೊತ್ತಿಲ್ಲ. ಆದರೆ ಶತಮಾನಗಳಿಂದ ನಮ್ಮ ಮೈಂಡ್ ನ ಖಂಡನೆ ಮಾಡಲು ತರಬೇತು ಮಾಡಲಾಗಿದೆ. ಇದು ಅಧಿಕಾರಶಾಹಿ ಮತ್ತು ಪುರೋಹಿತಶಾಹಿಯ ಕೈಯಲ್ಲಿರುವ ದೊಡ್ಡ ತಂತ್ರ – ಇದು ನಿಮ್ಮೊಳಗೆ ತಪ್ಪಿತಸ್ಥ ಭಾವವನ್ನು ಹುಟ್ಟಿಸುತ್ತದೆ. ಮತ್ತು ನಂತರ ಅವರು ನಿಮ್ಮನ್ನು ಮ್ಯಾನುಪ್ಯುಲೇಟ್ ಮಾಡಬಹುದು. ನನಗೆ ಗೊತ್ತಿರುವ ಪ್ರಕಾರ, ಮನುಷ್ಯನೊಬ್ಬನನ್ನು ಮ್ಯಾನುಪ್ಯುಲೇಟ್ ಮಾಡುವುದು ಎಂದರೆ ಅತ್ಯಂತ ಕೆಟ್ಟ ಅಪರಾಧವನ್ನು ಮಾಡಿದಂತೆ.

ಜಪಾನ್ ನ ಮಹತ್ವದ ಝೆನ್ ಸಾಧಕರಲ್ಲಿ ಮಾಸ್ಟರ್ ಬಾಂಕಿಯೂ ಒಬ್ಬ. ವರ್ಷಗಟ್ಟಲೆ ಋಷಿಯಂತೆ ಬದುಕಿದ್ದ ಬಾಂಕಿ, ತನಗೆ ಜ್ಞಾನೋದಯವಾದ ಮೇಲೂ , ಝೆನ್ ಸಂಸ್ಥಾನಗಳ ಗೌರವ ಪದವಿಗಳನ್ನು ತಿರಸ್ಕರಿಸಿ, ಅಡುಗೆ ಮನೆಯಲ್ಲಿ ಬಾಣಸಿಗರಿಗೆ ಸಹಾಯ ಮಾಡುತ್ತ,  ತನ್ನ ಶಿಷ್ಯರಿಗೆ ಪಾಠ ಹೇಳಿಕೊಂಡು ಸಾಮಾನ್ಯರಂತೆ  ಬದುಕಿದ್ದ. ಬಾಂಕಿಯ ಅಪಾರ ಜ್ಞಾನದ ಅರಿವಿದ್ದ ಜನ ದೂರದ ಊರುಗಳಿಂದ ಅವನ ಮಾತು ಕೇಳಲು ಬರುತ್ತಿದ್ದರು.

ಹೀಗಿರುವಾಗ ಒಮ್ಮೆ ಅವನ ಶಿಷ್ಯನೊಬ್ಬ ಕಳ್ಳತನ ಮಾಡುವಾಗ ಉಳಿದ ಶಿಷ್ಯರ ಕೈಗೆ ಸಿಕ್ಕು ಬಿದ್ದ. ಒಬ್ಬ ಯುವ ಸನ್ಯಾಸಿ ಕಳ್ಳ ಶಿಷ್ಯನನ್ನು ಎಳೆದುಕೊಂಡು ಬಂದು ಬಾಂಕಿಯ ಮುಂದೆ ನಿಲ್ಲಿಸಿದ.  ಆ ಕಳ್ಳ ಶಿಷ್ಯನನ್ನು ಆಶ್ರಮದಿಂದ ಹೊರಗೆ ಹಾಕಬೇಕು ಎನ್ನುವುದು ಉಳಿದ ಎಲ್ಲರ ಅಪೇಕ್ಷೆಯಾಗಿತ್ತು. ಆದರೆ ಮಾಸ್ಟರ್ ಬಾಂಕಿ ತನ್ನ ಶಿಷ್ಯರ ದೂರನ್ನು ನಿರ್ಲಕ್ಷ ಮಾಡಿದ.

ಕೆಲ ದಿನಗಳ ನಂತರ ಕಳ್ಳ ಶಿಷ್ಯ ಮತ್ತೊಮ್ಮೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ. ಈ ಬಾರಿಯೂ ಬಾಂಕಿ ಕಳ್ಳನನ್ನು ಆಶ್ರಮದಿಂದ ಹೊರಗೆ ಹಾಕಬೇಕು ಎನ್ನುವ ಇತರೆ ಶಿಷ್ಯರ ಫಿರ್ಯಾದನ್ನು ವಜಾ ಮಾಡಿದ.

ಬಾಂಕಿಯ ಈ ವರ್ತನೆಯಿಂದ ಅಸಮಾಧಾನಗೊಂಡ ಶಿಷ್ಯರೆಲ್ಲ ಸೇರಿ ಮಾಸ್ಟರ್ ಬಾಂಕಿಗೊಂದು ಪತ್ರ ಬರೆದರು. ಆ ಕಳ್ಳನನ್ನು ಆಶ್ರಮ ಬಿಟ್ಟು ಹೊರಗೆ ಹಾಕದಿದ್ದರೆ, ತಾವೆಲ್ಲ ಆಶ್ರಮ ತೊರೆದು ಹೋಗುವುದಾಗಿ ಬೆದರಿಕೆ ಹಾಕಿದ್ದರು.

ಪತ್ರ ಓದಿದ ಮಾಸ್ಟರ್ ಬಾಂಕಿ ತನ್ನ ಎಲ್ಲ ಶಿಷ್ಯರನ್ನೂ ಸುತ್ತ ಕೂರಿಸಿಕೊಂಡು ಮಾತನಾಡತೊಡಗಿದ.

“ ನೀವೆಲ್ಲ ಜ್ಞಾನಿಗಳಿದ್ದೀರಿ, ನಿಮಗೆ ಸರಿ ತಪ್ಪುಗಳ ಅರಿವಾಗುತ್ತದೆ. ಬೇಕಾದರೆ, ನೀವು ಬೇರೆ ಆಶ್ರಮಕ್ಕೆ ಹೋಗಿ ಅಭ್ಯಾಸ ಮುಂದುವರೆಸಬಹುದು. ಆದರೆ ನೀವು ಯಾರನ್ನ ಕಳ್ಳ ಎಂದು ದೂಷಿಸುತ್ತಿದ್ದೀರೋ ಆ ಪಾಪದ ಮನುಷ್ಯನಿಗೆ ಸರಿ – ತಪ್ಪು ಗಳು ಗೊತ್ತಾಗುವುದಿಲ್ಲ. ನಾನೂ ಅವನನ್ನು ಆಶ್ರಮದಿಂದ ಹೊರಗೆ ಕಳುಹಿಸಿ ಬಿಟ್ಟರೆ, ಅವನಿಗೆ ಬೇರೆ ಯಾರು ಹೇಳಿಕೊಡುತ್ತಾರೆ? ಅವನಿಗೆ ಸರಿ ತಪ್ಪುಗಳ ನಡುವೆ ತಾರತಮ್ಯ ಮಾಡುವುದು ಗೊತ್ತಾಗುವ ತನಕ ನಾನು ಅವನನ್ನು ಬಿಟ್ಟು ಕೊಡುವುದಿಲ್ಲ. “

ಮಾಸ್ಟರ್ ಬಾಂಕಿಯ ಈ ಮಾತುಗಳನ್ನು ಕೇಳುತ್ತಿದ್ದಂತೆಯೇ, ಕಳ್ಳ ಶಿಷ್ಯನ ಕಣ್ಣುಗಳು ತುಂಬಿ ಬಂದವು. ಆ ಕ್ಷಣದಲ್ಲಿಯೇ ಅವನ ಕಳ್ಳತನದ ಚಟ ಕರಗಿ ಹೋಗಿ ಬಿಟ್ಟಿತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.