ದಿವ್ಯ ಆಲಿಸುವಿಕೆಯ ( divine listening) ಕಲೆಯೇ ಧ್ಯಾನ. ಒಬ್ಬರು ಸರಿಯಾಗಿ ಆಲಿಸುವುದನ್ನು ಕಲಿಯುತ್ತಾರಾದರೆ ಅವರು ಧ್ಯಾನದ ಆಳ ರಹಸ್ಯಗಳನ್ನು ಗೊತ್ತು ಮಾಡಿಕೊಂಡಂತೆ. ಕೇಳುವುದು ( hearing) ಒಂದು ಸಂಗತಿಯಾದರೆ, ಆಲಿಸುವುದು ( listening) ಸಂಪೂರ್ಣವಾಗಿ ವಿಭಿನ್ನ. ಕೇಳುವುದು ಭೌತಿಕ ವಿದ್ಯಮಾನ ; ನೀವು ಕೇಳುತ್ತೀರಿ ಏಕೆಂದರೆ ನಿಮಗೆ ಕಿವಿಗಳಿವೆ. ಆಲಿಸುವಿಕೆ ಅಧ್ಯಾತ್ಮಿಕ ಸಂಗತಿ. ನೀವು ಗಮನವಿಡುವಾಗ, ನಿಮ್ಮ ಒಳಗಿನ ಅಸ್ತಿತ್ವ ನಿಮ್ಮ ಕಿವಿಯೊಂದಿಗೆ ಒಂದಾದಾಗ ಮಾತ್ರ ಆಲಿಸುವಿಕೆ ಸಾಧ್ಯವಾಗುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾರೋ ನನ್ನ ಮನೆಗೆ
ಬ್ಯಾಂಡ್ ಒಂದನ್ನ ಕಳುಹಿಸಿದ್ದರು.
ಬೆಳಿಗ್ಗೆ ಐದು ಗಂಟೆಗೇ ಆ ಬ್ಯಾಂಡಿನವರು
ಸಂಗೀತ ಶುರುಹಚ್ಚಿಕೊಂಡರು.
ನನಗೇನೋ ಇದು ನನ್ನಿಂದ ಹಾಡಿಸಲು
ಭಗವಂತ ಮಾಡಿದ ಸಂಚು ಅನ್ನಿಸಿತು.
ಆಮೇಲೆ ಚಂದ್ರ ಮತ್ತು
ಕೆಲ ಮಧುರ ಧ್ವನಿಯ ನಕ್ಷತ್ರಗಳು
ನಮ್ಮನ್ನು ಕೂಡಿಕೊಂಡವು.
ಭೂತಾಯಿ ತನ್ನ ಹೊಟ್ಟೆಯನ್ನೇ
ನಗಾರಿಯಂತೆ ಬಾರಿಸಲು
ಅವಕಾಶ ಮಾಡಿಕೊಟ್ಟಳು ನಮಗೆ
ನನಗೆ ಇದೆಲ್ಲ ಏನು ಎಂಬುದು
ಗೊತ್ತಾಗುವದಕ್ಕಿಂತ ಮುಂಚೆಯೇ ಅರಿವಾಯ್ತು,
ಮನುಷ್ಯ ಜಾತಿ
ಹಾಫಿಜ್ ನಂಥ ಹಳೆಯ ಸಂಗೀತ ಮಾಂತ್ರಿಕನಿಂದ
ಕೆಲ ಸಂಗೀತದ ಪಾಠಗಳನ್ನಷ್ಟೇ
ಆಲಿಸಿದ್ದರೂ ಸಾಕಿತ್ತು
ತೇಲಾಡುತ್ತಿತ್ತು ಖುಶಿಯಲ್ಲಿ
– ಹಾಫಿಜ್
ಹಕ್ಕಿಗಳ ಧ್ವನಿಯನ್ನು ಆಲಿಸಿ, ಗಿಡ ಮರಗಳನ್ನು ಹಾಯ್ದುಹೋಗುತ್ತಿರುವ ಗಾಳಿಯ ಸದ್ದನ್ನು ಆಲಿಸಿ, ನದಿಯ ನಿನಾದವನ್ನು ಆಲಿಸಿ, ಸಮುದ್ರದ ಭೋರ್ಗರೆತವನ್ನು ಆಲಿಸಿ ಮತ್ತು ಮೋಡಗಳ ಗುಡುಗನ್ನು, ಜನರ ದನಿಯನ್ನು, ದೂರ ಹಾಯ್ದು ಹೋಗುತ್ತಿರುವ ರೈಲಿನ ಸದ್ದನ್ನು ಆಲಿಸಿ – ಪ್ರತಿಯೊಂದನ್ನೂ ಆಲಿಸಿ. ಎಲ್ಲ ಧ್ವನಿಗಳನ್ನು ಯಾವ ಜಡ್ಜಮೆಂಟ್ ಇಲ್ಲದೇ ಆಲಿಸಿ. ನೀವು ಜಡ್ಜ್ ಮಾಡಿದ ಕ್ಷಣದಲ್ಲಿಯೇ, ಆಲಿಸುವಿಕೆ ನಿಂತು ಕೇಳುವಿಕೆ ಶುರುವಾಗುತ್ತದೆ.
ನಿಜವಾಗಿಯೂ ಗಮನವಿಟ್ಟು ಆಲಿಸುವವರು ಯಾವ ತೀರ್ಮಾನಕ್ಕೂ ಬರುವುದಿಲ್ಲ. ಏಕೆಂದರೆ ಬದುಕಿಗೆ ಯಾವ ತೀರ್ಮಾನವಿಲ್ಲ, ಅದು ನಿರಂತರ ಮುಂದುವರಿಕೆ. ಮೂರ್ಖ ಜನರು ಮಾತ್ರ ಬೇಗ ಒಂದು ತೀರ್ಮಾನಕ್ಕೆ ಬಂದುಬಿಡುತ್ತಾರೆ. ವಿವೇಕಿಗಳು ಯಾವಾಗಲೂ ಒಂದು ತೀರ್ಮಾನಕ್ಕೆ ಬರಲು ಹಿಂಜರಿಯುತ್ತಾರೆ. ಆದ್ದರಿಂದ ಯಾವ ಜಡ್ಜಮೆಂಟ್ ಇಲ್ಲದೇ ಆಲಿಸಿರಿ. ಸುಮ್ಮನೇ ಆಲಿಸಿರಿ – ಮೌನದಿಂದ – ಮುಕ್ತವಾಗಿ ಆಲಿಸಿರಿ. ಸುಮ್ಮನೇ ನಿಮ್ಮನ್ನು ಸುತ್ತುವರೆದಿರುವ ಧ್ವನಿಯ ಜೊತೆ ಒಂದಾಗಿರಿ.
ತೀವ್ರ ಕಿವುಡುತನದಿಂದ ಬಳಲುತ್ತಿದ್ದ ನಸ್ರುದ್ದೀನ್ ಗೆ ಪ್ರಸಿದ್ಧ ಕಂಪನಿಯೊಂದು ತಾನು ಹೊಸದಾಗಿ ಕಂಡುಹಿಡಿದಿದ್ದ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾದ hearing aid ನ್ನು ಟೆಸ್ಟ್ ಮಾಡಲು ಕೊಟ್ಟಿತ್ತು. ಒಂದು ವಾರದ ನಂತರ ನಸ್ರುದ್ದೀನ್ ನನ್ನು ಭೇಟಿಯಾದ ಕಂಪನಿಯ ಇಂಜಿನಿಯರ್ ಪ್ರಶ್ನೆ ಮಾಡಿದ,
“ ಹೊಸ Hearing aid ನ ಅನುಭವ ಹೇಗಿದೆ ನಸ್ರುದ್ದೀನ್ ? ಖುಶಿಯಾಯಿತಾ ?, ಮನೆಯವರಿಗೆ ನೀನು ಇದನ್ನ ಬಳಸುತ್ತಿರುವುದು ಗೊತ್ತಾಯಿತಾ ? “
“ ತುಂಬ ಕಷ್ಟ ಇದು, ಒಂದು ವಾರದಲ್ಲಿ ನಾನು ಮೂರು ಸಲ ನನ್ನ ವಿಲ್ ಬದಲಾಯಿಸಿದೆ “
ನಸ್ರುದ್ದೀನ್, Hearing aid ಕುರಿತಂತೆ ತನ್ನ ಫೀಡ್ ಬ್ಯಾಕ್ ಕೊಟ್ಟ.
ಕೇಳುವಿಕೆ ಮತ್ತು ಆಲಿಸುವಿಕೆ ( Hearing & Listening): ಓಶೋ 365 #Day 236

