ಜನ ಒಳ್ಳೆಯ ಕೆಲಸ ಮಾಡುತ್ತ ಒಳ್ಳೆಯವರಾಗುತ್ತ ಹೋಗುತ್ತಾರೆ. ಆದರೆ ಇದು ಮೌಲ್ಯ ಅಲ್ಲ, ಇದು ಕಣ್ಣಿಗೆ ಮಣ್ಣೆರಚುವಿಕೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಉತ್ತಮರಿಗೆ ಮಹಾತ್ಮರ ಪಟ್ಟ ಸಿಕ್ಕಾಗ
ಜನ, ಅಳಿದುಳಿದ ಕಸುವನ್ನೂ ಕಳೆದುಕೊಳ್ಳುತ್ತಾರೆ
ಆಸ್ತಿಯನ್ನು ಅಪೂರ್ವ ಎಂದಾಗ
ಜನ, ಕನ್ನ ಹಾಕಲು ಹಾತೊರೆಯುತ್ತಾರೆ
ಸಂತ, ಸ್ವತಃ ಮುಂದೆ ನಿಂತು ;
ಜನ ಕಲಿತಿರುವುದನ್ನ ಖಾಲಿ ಮಾಡಿ
ಮೊಗೆದು ಮೊಗೆದು ತುಂಬುತ್ತಾನೆ ಖಾಲಿ
ಹೂವುಗಳನ್ನ ಚೂಟಿ ಚೂಟಿ
ಬೇರುಗಳಿಗೆ ಉಣಿಸುತ್ತಾನೆ ನೀರು
ಅಂಗಿಯೊಳಗೆ ಗುಂಗಿಯ ಹುಳ ಬಿಟ್ಟು
ದೊಂಬರಾಟದವನ ಮಾಡುತ್ತಾನೆ ತಬ್ಬಿಬ್ಬು
ದುಡಿಯದಿರುವುದು ಸಹಜವಾದಾಗ
ಎಲ್ಲ ಉಸಿರಾಟ ನಿರಾತಂಕ.
~ ಲಾವೋತ್ಸೇ
ಒಳ್ಳೆಯ ಕೆಲಸಗಳನ್ನು ಮಾಡುವುದು ಜವಾಬ್ದಾರಿಯನ್ನು ತರುತ್ತದೆ, ಇದು ನಿಮ್ಮಲ್ಲಿ ಒಳ್ಳೆಯ ಅಹಂನ ಹುಟ್ಟಿಗೂ ಕಾರಣವಾಗುತ್ತದೆ. ಇದು ನಿಮ್ಮನ್ನು ಒಬ್ಬ ಮುಖ್ಯ ವ್ಯಕ್ತಿಯಾಗಿ ಪರಿಭಾವಿಸುವಂತೆ ಮಾಡುತ್ತದೆ : ಜಗತ್ತಿನ ಕಣ್ಣಲ್ಲಿ ಮಾತ್ರ ಅಲ್ಲ, ದೇವರ ಕಣ್ಣಲ್ಲಿಯೂ ಕೂಡ, ಇದು ದೇವರ ಎದುರು ನೀವು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ಆಗ ನೀವು ದೇವರಿಗೆ ನೀವು ಮಾಡಿದ ಎಲ್ಲ ಒಳ್ಳೆಯ ಕೆಲಸಗಳ ಪಟ್ಟಿ ನೀಡಬಹುದು. ಇದು ಅಹಂಕಾರದ ವರ್ತನೆ, ಮತ್ತು ಧಾರ್ಮಿಕ ವ್ಯಕ್ತಿ ಅಹಂಕಾರಿಯಾಗಿರುವುದಿಲ್ಲ.
ಧಾರ್ಮಿಕ ವ್ಯಕ್ತಿ ಅನೈತಿಕ (immoral) ಅಂತ ಅಲ್ಲ, ಆದರೆ ಅವನು ನೈತಿಕ (moral) ವ್ಯಕ್ತಿಯೂ ಅಲ್ಲ – ಅವನು ನೈತಿಕತೆ-ಅನೈತಿಕತೆಯನ್ನು ಮೀರಿದವನು ( amoral). ಅವನಿಗೆ ನಿಶ್ಚಿತವಾದ ಸ್ವಭಾವವಿಲ್ಲ. ಅವನ ಸ್ವಭಾವ ದ್ರವರೂಪದಂತೆ, ಜೀವಂತಿಕೆಯಿಂದ ಕೂಡಿದ್ದು ಪ್ರತಿ ಕ್ಷಣವೂ ಚಲನಶೀಲವಾದದ್ದು. ಅವನು ಸಂದರ್ಭಗಳಿಗೆ ಪ್ರತಿಕ್ರಯಿಸುವುದು ನಿರ್ದಿಷ್ಟ ಸಿದ್ಧಾಂತ, ನಿರ್ದಿಷ್ಟ ದೃಷ್ಟಿಕೋನಕ್ಕೆ ಅನುಗುಣವಾಗಿ ಅಲ್ಲ. ಅವನು ತನ್ನ ಪ್ರಜ್ಞೆಗೆ ಅನುಸಾರವಾಗಿ ನಡೆದುಕೊಳ್ಳುತ್ತಾನೆ. ಅವನ ಪ್ರಜ್ಞೆಯೇ ಅವನ ಸ್ವಭಾವ, ಇದರ ಹೊರತಾಗಿ ಅವನಿಗೆ ಬೇರೆ ಸ್ವಭಾವವಿಲ್ಲ.
ಇಬ್ಬರು ಝೆನ್ ಸನ್ಯಾಸಿಗಳು ನದಿಯಲ್ಲಿ ತಮ್ಮ ಊಟದ ತಟ್ಚೆ ತೊಳೆಯುತ್ತಿದ್ದಾಗ ಒಂದು ಚೇಳು ನದಿಯಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಕಂಡರು.
ತಟ್ಚನೆ ಒಬ್ಬ ಸನ್ಯಾಸಿ ಅದನ್ನು ನದಿಯಿಂದ ಹೊರ ತೆಗೆದು ದಂಡೆಯ ಮೇಲೆ ಬಿಟ್ಟ. ಹೀಗೆ ಮಾಡುವಾಗ ಚೇಳು ಸನ್ಯಾಸಿಯ ಬೆರಳಿಗೆ ಕಚ್ಚಿಬಿಟ್ಟಿತು. ಸನ್ಯಾಸಿ ತಲೆ ಕೆಡಿಸಿಕೊಳ್ಳದೆ ಮತ್ತೆ ತಟ್ಟೆ ತೊಳೆಯುವುದನ್ನು ಮುಂದುವರೆಸಿದ.
ಸ್ವಲ್ಪ ಹೊತ್ತಿನ ನಂತರ ಚೇಳು ಮತ್ತೆ ಜಾರಿ ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗ ತೊಡಗಿತು. ಸನ್ಯಾಸಿ ಮತ್ತೆ ಆ ಚೇಳನ್ನು ಎತ್ತಿ ದಂಡೆಯ ಮೇಲೆ ಬಿಟ್ಟ. ಚೇಳು ಮತ್ತೆ ಸನ್ಯಾಸಿಯ ಬೆರಳನ್ನು ಕಚ್ಚಿತು.
ಇದನ್ನೆಲ್ಲ ಗಮನಿಸುತ್ತಿದ್ದ ಇನ್ನೊಬ್ಬ ಸನ್ಯಾಸಿ ಕೇಳಿದ,
“ ಗೆಳೆಯಾ, ಕಚ್ಚುವುದು ಚೇಳಿನ ಸಹಜ ಧರ್ಮ, ಅದನ್ನು ಕಾಪಾಡಿ ಏನು ಪ್ರಯೋಜನ?
ಮೊದಲ ಸನ್ಯಾಸಿ ಉತ್ತರಿಸಿದ
“ ಗೆಳೆಯಾ, ನಾನು ಚೇಳನ್ನು ಕಾಪಾಡುತ್ತಿಲ್ಲ, ನನ್ನ ಸಹಜ ಧರ್ಮವನ್ನು ಕಾಪಾಡುತ್ತಿದ್ದೆನೆ ”

