ಮನುಷ್ಯನನ್ನು ಪ್ರಕೃತಿ ಸೃಷ್ಟಿಸಿರುವುದು ೮ ಗಂಟೆಗಳ ಪರಿಶ್ರಮದ ಕೆಲಸಕ್ಕೆ ಅನುವಾಗುವಂತೆ. ನಾಗರೀಕತೆ ಹೆಚ್ಚು ಮುಂದುವರೆದಂತೆ ತಂತ್ರಜ್ಞಾನ ಮನುಷ್ಯನ ಪರಿಶ್ರಮವನ್ನು ಬಹಳಷ್ಟು ಕಡಿಮೆ ಮಾಡಿದೆ, ಈಗ ನಮಗೆ ಕಠಿಣ ಪರಿಶ್ರಮ ಮಾಡುವಂಥ ಯಾವ ಅವಕಾಶ ಇಲ್ಲ, ಇದು ಸಮಸ್ಯೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಕಾಲದಲ್ಲಿ, ಮನಷ್ಯನಿಗೆ ಬದುಕು ಸಾಗಿಸಲು ಬೇಕಾಗುವಷ್ಟು ಸಾಮರ್ಥ್ಯ ಇರಲಿಲ್ಲ. ಈಗ ನಮ್ಮಲ್ಲಿ ಬದುಕಲು ಬೇಕಾಗಿರುವದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯ ಇದೆ. ಇದು ನಮ್ಮ ಅವಿಶ್ರಾಂತತೆಗೆ, ಹುಚ್ಚುತನಕ್ಕೆ, ನರ ದೌರ್ಬಲ್ಯಕ್ಕೆ ಕಾರಣವಾಗಿದೆ. ಸಾಮರ್ಥ್ಯ ಇದ್ದೂ ಅದನ್ನು ಸರಿಯಾಗಿ ಉಪಯೋಗಿಸುವ ದಾರಿ ಇಲ್ಲದಿರುವಾಗ ಅದು ಹುಳಿಯಾಗುತ್ತದೆ, ಕಹಿ ಯಾಗುತ್ತದೆ. ನಾವು ಪ್ರತಿದಿನ ಸಾಮರ್ಥ್ಯವನ್ನು ಗಳಿಸುತ್ತೇವೆ ಮತ್ತು ಅದನ್ನು ನಾವು ಪ್ರತಿದಿನ ಉಪಯೋಗಿಸಬೇಕು. ಅದನ್ನು ಕೂಡಿಡುವ ಹಾಗಿಲ್ಲ, ಈ ಬಗ್ಗೆ ನಾವು ಜಿಪುಣತನ ಮಾಡುವಂತಿಲ್ಲ. ಹಿಂದೆ ಜನ, ಕಠಿಣ ಪರಿಶ್ರಮ ಮಾಡುತ್ತಿದ್ದರು ಬೇಟೆಗಾರರಾಗಿ, ರೈತರಾಗಿ.
ಹೆಚ್ಚು ಕಡಿಮೆ ಈಗ ಅಂಥ ಪರಿಶ್ರಮದ ಕೆಲಸ ಇಲ್ಲವಾಗಿದೆ, ಸಮಾಜಗಳು ಹೆಚ್ಚು ಸಂಪತ್ಭರಿತವಾಗಿವೆ ಮತ್ತು ಹೆಚ್ಚು ಸಾಮರ್ಥ್ಯವನ್ನು ಹೊಂದಿವೆ ; ಆದ್ದರಿಂದ ಅವಿಶ್ರಾಂತತೆ ಸಹಜವಾಗಿ ಸಮಾಜಗಳಲ್ಲಿ ತುಂಬಿಕೊಂಡಿದೆ. ಆದ್ದರಿಂದ ಅಮೇರಿಕನ್ನರು ಜಗತ್ತಿನಲ್ಲಿಯೇ ಅತ್ಯಂತ ರೆಸ್ಟಲೆಸ್ ಜನರು. ಮತ್ತು ಇದರ ಭಾಗಶಃ ಕಾರಣ ಅಮೇರಿಕ ಸಂಪದ್ಭರಿತ ದೇಶವಾಗಿರುವುದು.
ಈಗ ನಾವು utility ( ಉಪಯುಕ್ತತೆ) ಐಡಿಯಾವನ್ನೇ ಡ್ರಾಪ್ ಮಾಡಬೇಕಾಗಿದೆ, ಏಕೆಂದರೆ ಇದು ಹಳೆಯ ಕಾಲದ್ದು. ಯಾವಾಗ ಸಾಮರ್ಥ್ಯ ಕಡಿಮೆಯಿದ್ದು ಕೆಲಸ ಜಾಸ್ತಿ ಇತ್ತೋ ಆಗ ಯುಟಿಲಿಟಿಗೆ ಅರ್ಥ ಇತ್ತು. ಈಗ ಅದಕ್ಕೆ ಯಾವ ಮೌಲ್ಯ ಇಲ್ಲ. ಆದ್ದರಿಂದ ನಿಮ್ಮ ಎನರ್ಜಿಯನ್ನು ಬಳಸುವ ವಿಧಾನಗಳನ್ನು ಹುಡುಕಿಕೊಳ್ಳಿ, ಆಟ, ಜಾಗಿಂಗ್, ಓಟ ಇತ್ಯಾದಿಗಳಲ್ಲಿ ಸಂತೋಷವನ್ನು ಕಂಡುಕೊಳ್ಳಿ. ನಿಮ್ಮ ಎನರ್ಜಿಯನ್ನು ನೀವು ಬಳಸಿಕೊಂಡಾಗ ನಿಮಗೆ ಪ್ರಶಾಂತತೆಯ ಅನುಭವವಾಗುವುದು. ಈ ಪ್ರಶಾಂತತೆ ಒತ್ತಾಯದ ಧ್ಯಾನಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದದ್ದು. ನಿಮ್ಮೊಳಗಿರುವ ಎನರ್ಜಿಯನ್ನು ನೀವು ಬಳಸದೇ ಹೋದಾಗ ನೀವು ಜ್ವಾಲಾಮುಖಿಯ ಮೇಲೆ ಕುಳಿತಿರುವಿರಿ ಮತ್ತು ನಿಮ್ಮೊಳಗೆ ನಿರಂತರವಾಗಿ ಕುದಿತವಿದೆ. ನೀವು ನಿಮ್ಮ ಎನರ್ಜಿಯನ್ನು ಹೆಚ್ಚು ಬಳಸಿದಂತೆಲ್ಲ, ನಿಮಗೆ ಹೆಚ್ಚು ತಾಜಾ ಎನರ್ಜಿ ಲಭ್ಯವಾಗುವುದು.

