ನೀವು ಏನು ಮಾಡಿದಿರಿ? ಯಾಕೆ ಮಾಡಿದಿರಿ? ನೀವು ನಿಮ್ಮ ಬಗ್ಗೆ ರಿಫ್ಲೆಕ್ಟ್ ಮಾಡಿಕೊಳ್ಳುವುದು ಉತ್ತಮ ಸೂಚನೆ, ಒಳ್ಳೆಯ ಸಂಕೇತ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನೀವು ಒಬ್ಬರ ಕ್ರಿಯೆಯ ಬಗ್ಗೆ, ಅವರ ಬದ್ಧತೆಯ ಬಗ್ಗೆ, ಗುರಿಯ ಬಗ್ಗೆ, ದಿಕ್ಕಿನ ಬಗ್ಗೆ ಯೋಚನೆ ಮಾಡಲು ಶುರು ಮಾಡಿದಾಗ ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಈ ಗೊಂದಲವನ್ನು ತಡೆಯಲು ಬಹುತೇಕರು ತಾವು ಏನು ಮಾಡುತ್ತಿದ್ದೇವೆ ಎನ್ನುವುದರ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ, ಅವರು ಸುಮ್ಮನೇ ತಮ್ಮ ಕೆಲಸ ಮಾಡುತ್ತ ಹೋಗುತ್ತಾರೆ. ಒಂದು ಸಂಗತಿಯಿಂದ ಇನ್ನೊಂದು ಸಂಗತಿಗೆ ಅವರು ಸುಮ್ಮನೇ ಜಂಪ್ ಮಾಡುತ್ತ ಹೋಗುತ್ತಾರೆ, ಕೊನೆಗೆ ದಣಿವಾಗಿ ನಿದ್ದೆ ಹೋಗಿಬಿಡುತ್ತಾರೆ. ಮತ್ತೆ ಮರುದಿನ ಮುಂಜಾನೆ ನೆರಳಿನ ಬೆನ್ನು ಹತ್ತಿ ಹೋಗುತ್ತಾರೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯುತ್ತದೆ ಮತ್ತು ಅವರಿಗೆ ತಾವು ಯಾರು, ತಾವು ಏನು ಮಾಡುತ್ತಿದ್ದೇವೆ? ಯಾಕೆ ಮಾಡುತ್ತಿದ್ದೇವೆ? ಎನ್ನುವುದು ಗೊತ್ತಾಗದೆ ಸತ್ತು ಹೋಗುತ್ತಾರೆ. ಈಗ ನಿಮಗೆ ಎಲ್ಲದರ ಬಗ್ಗೆಯೂ ಹಿಂಜರಿಕೆ. ಇದು ವಿವೇಕದ ಶುರುವಾತು. ಕೇವಲ ಮೂರ್ಖರು ಮಾತ್ರ ಯಾವುದಕ್ಕೂ ಹಿಂಜರಿಯುವುದಿಲ್ಲ. ಇದು ಹುಡುಕಾಟದಲ್ಲಿರುವವರಿಗೆ ಉಡುಗೊರೆಯಂತೆ, ಇನ್ನಷ್ಟು ಉಡುಗೊರೆಗಳು ನಿಮಗಾಗಿ ಕಾದಿವೆ.
ಸೆಂಟ್ ಫ್ರಾನ್ಸಿಸ್ ಜಪಾನ್ ಪ್ರವಾಸಕ್ಕೆ ಬಂದಾಗ, ಝೆನ್ ಮಾಸ್ಟರ್ ನಿನ್ಶಿಸ್ತು ನ ಆಶ್ರಮ ನೋಡುವ ಆಸೆ ವ್ಯಕ್ತ ಪಡಿಸಿದ. ಮಾಸ್ಟರ್ ನಿನ್ಶಿಸ್ತು ಅತಿಥಿಯನ್ನು ಕರೆದುಕೊಂಡು ತನ್ನ ಆಶ್ರಮದ ಎಲ್ಲ ವಿಭಾಗಗಳನ್ನು ತೋರಿಸುತ್ತ ಬಂದ.
ಧ್ಯಾನದ ಭಾಗಕ್ಕೆ ಬಂದಾಗ, ಅಲ್ಲಿ ಹತ್ತಾರು ಸನ್ಯಾಸಿಗಳು ಗಂಭೀರವಾಗಿ ಧ್ಯಾನ ಮಾಡುತ್ತ ಕುಳಿತಿರುವುದನ್ನೂ, ಆ ಸನ್ಯಾಸಿಗಳ ಮುಖದಲ್ಲಿನ ತೇಜಸ್ಸನ್ನೂ ಕಂಡು ಸೆಂಟ್ ಫ್ರಾನ್ಸಿಸ್ ಗೆ ತುಂಬ ಖುಶಿಯಾಯಿತು.
“ ಏನು ಮಾಡುತ್ತಿದ್ದಾರೆ ಇವರೆಲ್ಲ? ಯಾವ ಧ್ಯಾನ ಇದು? “ ಎಂದು ಮಾಸ್ಟರ್ ನಿನ್ಶಿಸ್ತು ನ ಪ್ರಶ್ನೆ ಮಾಡಿದ.
ನಿನ್ಶಿಸ್ತು, ನಗುತ್ತ ಉತ್ತರಿಸಿದ.
“ಕೆಲವರು ಕಳೆದ ತಿಂಗಳು ಗಳಿಸಿದ ಲಾಭ ಲೆಕ್ಕ ಹಾಕುತ್ತಿದ್ದಾರೆ. ಇನ್ನೂ ಕೆಲವರು ಬರುವ ತಿಂಗಳ ಖರ್ಚಿಗೆ ಚಿಂತೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಬರಲಿರುವ ರಜೆ ಹೇಗೆ ಕಳೆಯಬೇಕೆಂದು ವಿಚಾರ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಂಥ ಮುಖ್ಯ ಕೆಲಸ ಏನೂ ಮಾಡುತ್ತಿಲ್ಲ “

