ಯಾವುದರಲ್ಲೂ ನಿಯಂತ್ರಣವನ್ನು ದಾಟಬಾರದು ಎನ್ನುವುದನ್ನ ನಮಗೆ ಮೊದಲಿನಿಂದಲೂ ಹೇಳಿಕೊಡಲಾಗಿದೆ, ಅದು ನಗು, ಅಳು, ಪ್ರೇಮ, ಕೋಪ, ಯಾವುದೂ ಆಗಬಹುದು, ಯಾವುದರಲ್ಲೂ ನಾವು ಮಿತಿಯನ್ನು ಮೀರಿ ಹೋಗಬಾರದು ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
ಯಾವ ಕೆಲಸ ಮಾಡಲಿ ನಾನು
ಈ ಬದುಕಿನಲ್ಲಿ?
ನಿಯಮಗಳನ್ನು ಮೀರುವ
ಜನರಲ್ಲಿನ ಆಕರ್ಷಣೆಯನ್ನೂ,
ಕಲಾವಿದನ ಉನ್ಮಾದವನ್ನೂ
ತೀವ್ರ ಕಾಮಿಯನ್ನೂ
ಅಪಾರವಾಗಿ ಪ್ರೀತಿಸುವ
ಈ ಪವಿತ್ರ ಭೋಳೆ ಮುದುಕನನ್ನು
ಕೆಲಸಕ್ಕಿಟ್ಟುಕೊಳ್ಳುವ ಉದಾರಿಗಳು
ಯಾರಿದ್ದಾರೆ ಇಲ್ಲಿ?
ಬಹುಶಃ ನಾನು
ಕವಿಯಾಗಬಹುದೇನೋ,
ನನ್ನ ಸುಂದರ ಖಾಲಿ ಕಾಗದಗಳ ಮೇಲೆ
ಭಗವಂತ ಬಂದು ಕೂಡಲಿದ್ದಾನೆ,
ಬಹುಶಃ ಅದಕ್ಕೇ ಅನಿಸುತ್ತದೆ ಅವನು
ಇಷ್ಟು ಶುದ್ಧವಾಗಿಟ್ಟಿದ್ದಾನೆ ನನ್ನ ಪ್ರೇಮವನ್ನು.
ನೀವು ಆ ಪುಟಗಳನ್ನು ಕಾಣಲು ಬಂದಾಗ
ಆತ ಒದ್ದರೂ ಒದೆಯಬಹುದು ನಿಮ್ಮನ್ನ
ತನ್ನ ದಿವ್ಯ ಪಾದಗಳಿಂದ.
– ಹಾಫಿಜ್
ಪ್ರತಿಯೊಂದಕ್ಕೂ ಮಿತಿ ಇದೆ, ಮತ್ತು ನಮಗೆ ಆ ಮಿತಿಯವರೆಗೆ ಹೋಗಲು ಮಾತ್ರ ಅವಕಾಶವಿದೆ, ನಂತರ ನಾವು ನಮ್ಮನ್ನು ಹಿಡಿದಿಟ್ಟುಕೊಳ್ಳಬೇಕು. ಬಹಳ ವರ್ಷಗಳ ಕಂಡಿಷನ್ ನಿಂದಾಗಿ ಈ ಒತ್ತಾಯ ಅಟೋಮ್ಯಾಟಿಕ್ ಆಗಿಬಿಟ್ಟಿದೆ, ಥೇಟ್ ಥರ್ಮೊಸ್ಟ್ಯಾಟ್ ( Temperature controller ) ನ ಹಾಗೆ. ನೀವು ಒಂದು ದೂರದ ವರೆಗೆ ಸರಾಗವಾಗಿ ಹೋಗುತ್ತೀರ, ನಂತರ unconscious ಆಗಿ ಥಟ್ಟನೇ ಏನೋ ಆಗುತ್ತದೆ, ಏನೋ ಒಂದು ಕ್ಲಿಕ್ ಆಗುತ್ತದೆ, ಮತ್ತು ಆಗ ನೀವು stop ಮಾಡಿಬಿಡುತ್ತೀರಿ.
ನಾನು ಕಲಿಸುವುದು ಹೇಗೆ “ಅನಿಯಂತ್ರಿತ” ಆಗಬೇಕು ಎನ್ನುವುದನ್ನ, ಏಕೆಂದರೆ ಅನಿಯಂತ್ರಿತರಾದಾಗ ಮಾತ್ರ ನೀವು ಸ್ವತಂತ್ರರಾಗುತ್ತೀರಿ. ಯಾವಾಗ ಮ್ಯಾನುಪ್ಯುಲೇಟ್ ಮಾಡುವ, ನಿರ್ದೇಶಿಸುವ, ಒತ್ತಾಯ ಮಾಡುವ ಮೈಂಡ್ ನಿಮ್ಮ ಹಿಂದೆ ಇರುವುದಿಲ್ಲವೋ ಆಗ ಎನರ್ಜಿಯ ಹರಿವು ಸಹಜವಾಗಿರುತ್ತದೆ ಮತ್ತು ಆಗ ಸಾಧ್ಯವಾಗುವ ಆನಂದ ಪ್ರಚಂಡವಾಗಿರುತ್ತದೆ.
ಗಿಡ ಮರಗಳಿಗೆ, ಪ್ರಾಣಿಗಳಿಗೆ ನಿಯಂತ್ರಣ ಏನೆಂದು ಗೊತ್ತಿಲ್ಲ ಆದ್ದರಿಂದ ಅವು ಹೆಚ್ಚು ಆನಂದವನ್ನು, ಸ್ವಾತಂತ್ರ್ಯವನ್ನು ಅನುಭವಿಸುತ್ತವೆ. ನಾವು ಗಿಡಮರಗಳಿಗಿಂತ, ಪ್ರಾಣಿಗಳಿಗಿಂತ, ಹಕ್ಕಿಗಳಿಂತ ಹೆಚ್ಚು ಆನಂದವನ್ನು ಅನುಭವಿಸಬಹುದು ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವ ಟ್ರ್ಯಾಪ್ ನಿಂದ ತಪ್ಪಿಸಿಕೊಂಡರೆ.
ಝೆನ್ ಮಾಸ್ಟರ್ ನ ಆಶ್ರಮದಲ್ಲಿ ಝೆನ್ ಅಭ್ಯಾಸ ಮಾಡುತ್ತಿದ್ದ ಒಬ್ಬ ಯುವ ಸನ್ಯಾಸಿ ತನ್ನ ಕಲಿಕೆಯ ಅವಧಿ ಮುಗಿಯುತ್ತಿದ್ದಂತೆಯೇ ದೇಶಾಂತರ ಹೊರಟು ಬಿಟ್ಟ. ಸುತ್ತಾಟದಲ್ಲಿ ತಾನು ಕಂಡದ್ದನ್ನ ಮತ್ತು ತನ್ನ ಅಧ್ಯಾತ್ಮ ಕಲಿಕೆಯ ಪ್ರಗತಿಯನ್ನು ಪತ್ರದ ಮೂಲಕ ಮಾಸ್ಟರ್ ಗೆ ತಿಳಿಸಬೇಕೆಂದು ಬಯಸಿದ.
ಆಶ್ರಮ ಬಿಟ್ಟು ಒಂದು ತಿಂಗಳಾದ ಮೇಲೆ ಮಾಸ್ಟರ್ ಗೆ ಮೊದಲ ಪತ್ರ ಬರೆದ “ ಮಾಸ್ಟರ್, ನನ್ನ ಪ್ರಜ್ಞೆ ವಿಸ್ತಾರಗೊಳ್ಳುತ್ತಿದೆ, ಬ್ರಹ್ಮಾಂಡದೊಂದಿಗೆ ಒಂದಾಗುತ್ತಿರುವ ಹಾಗೆ ಅನುಭವವಾಗುತ್ತಿದೆ “
ಪತ್ರ ಓದುತ್ತಿದ್ದಂತೆಯೇ ಮಾಸ್ಟರ್, ಪತ್ರ ಬಿಸಾಕಿ ಬಿಟ್ಟ.
ಎರಡನೇ ಪತ್ರದಲ್ಲಿ ಶಿಷ್ಯ ಹೀಗೆ ಬರೆದಿದ್ದ, “ ಸಮಸ್ತ ಚರಾಚರಗಳಲ್ಲಿ ಹುದುಗಿರುವ ದೈವಿಕತೆಯನ್ನು ನಾನು ಕಂಡುಕೊಂಡೆ “
ಪತ್ರ ಓದಿ ಮಾಸ್ಟರ್ ಗೆ ತೀವ್ರ ಹತಾಶೆಯಾಯಿತು.
ಒಂದು ತಿಂಗಳ ನಂತರ ಮತ್ತೆ ಪತ್ರ ಬಂತು
“ ಪ್ರಕೃತಿಯ ರಹಸ್ಯ ನನ್ನ ದಿವ್ಯ ದೃಷ್ಟಿಗೆ ಗೋಚರವಾಯಿತು “
ಪತ್ರ ಓದಿ ಮಾಸ್ಟರ್, ಆಕಳಿಸಿದ.
ಎರಡು ತಿಂಗಳ ನಂತರ ಬಂದ ಪತ್ರದಲ್ಲಿ ಹೀಗೆ ಬರೆದಿತ್ತು “ ಯಾರೂ ಹುಟ್ಟಿಲ್ಲ, ಯಾರೂ ಬದುಕುತ್ತಿಲ್ಲ, ಯಾರೂ ಸಾಯುವುದೂ ಇಲ್ಲ, ಏಕೆಂದರೆ ಆತ್ಮ ಒಂದು ಭ್ರಮೆ”
ಮಾಸ್ಟರ್ ಗೆ ಎಷ್ಟು ನಿರಾಶೆಯಾಯಿತೆಂದರೆ ಛೇ ಎನ್ನುತ್ತ ಗಾಳಿಯಲ್ಲಿ ತನ್ನ ಕೈ ತೂರಿದ.
ಹೀಗೇ ಒಂದು ವರ್ಷ ಕಳೆಯಿತು, ಶಿಷ್ಯನಿಂದ ಪತ್ರಗಳು ಬರುತ್ತಲೇ ಇದ್ದವು. ಮಾಸ್ಟರ್ ಗೆ ಸಮಾಧಾನವಾಗಲಿಲ್ಲ, ಶಿಷ್ಯನ ಕರ್ತವ್ಯಗಳನ್ನು ನೆನಪಿಸುತ್ತ, ಅವನ ಅಧ್ಯಾತ್ಮದ ಹಾದಿಯಲ್ಲಿನ ಸಮಸ್ಯೆಗಳನ್ನು ವಿವರಿಸಿ ಪತ್ರ ಬರೆದ.
ಶಿಷ್ಯ ತಿರುಗಿ ಉತ್ತರ ಬರೆದ “ ನಿಮ್ಮ ತಿಳುವಳಿಕೆ ಯಾರಿಗೆ ಬೇಕು? “
ಈ ಉತ್ತರ ಓದುತ್ತಿದ್ದಂತೆಯೇ, ಮಾಸ್ಟರ್ ಮುಖದಲ್ಲಿ ತೃಪ್ತಿ ಕಾಣಿಸಿಕೊಂಡಿತು.
“ ಓಹ್! ಕೊನೆಗೂ ತಿಳಿದುಕೊಂಡುಬಿಟ್ಟ”
*********************************

