ನಾವು ಎಲ್ಲಿಗೂ ಹೋಗಬೇಕಾಗಿಲ್ಲ ; ನಾವು ಎಲ್ಲಿರುವೆವೆನ್ನುವುದನ್ನ ಸುಮ್ಮನೇ ಗಮನಿಸಬೇಕು ಅಷ್ಟೇ. ನೀವು ಅರಿವನ್ನು ಹೊಂದಿದಾಗ, ನೀವು ಎಲ್ಲಿಗೆ ಹೋಗಬೇಕೆಂದು ಪ್ರಯತ್ನ ಮಾಡುತ್ತಿರುವಿರೋ ನೀವು ಅಲ್ಲಿಯೇ ಇರುವುದು ಥಟ್ಟನೇ ನಿಮ್ಮ ಗಮನಕ್ಕೆ ಬರುತ್ತದೆ. ~ ಓಶೋ ರಜನೀಶ್; ಕನ್ನಡಕ್ಕೆ’ ಚಿದಂಬರ ನರೇಂದ್ರ
ಒಬ್ಬನು ಹೇಗೆ ಇರಬೇಕೋ ಅವನು ಹಾಗೆಯೇ ಹುಟ್ಟಿದ್ದಾನೆ, ಬೇರೆ ಏನನ್ನೂ ಸೇರಿಸುವುದು ಬೇಕಾಗಿಲ್ಲ, ಯಾವ ಸುಧಾರಣೆಯ ಅವಶ್ಯಕತೆಯೂ ಇಲ್ಲ. ಸುಧಾರಣೆಗಾಗಿ ನಾವು ಮಾಡುವ ಎಲ್ಲ ಪ್ರಯತ್ನ ಇನ್ನಷ್ಟು ಗೊಂದಲಗಳನ್ನೂ ಮತ್ತಷ್ಟು ಅವ್ಯವಸ್ಥೆಯನ್ನೂ ಹುಟ್ಟುಹಾಕುತ್ತದೆ. ಸುಧಾರಣೆಗಾಗಿ ನೀವು ಹೆಚ್ಚು ಪ್ರಯತ್ನ ಮಾಡಿದಂತೆಲ್ಲ ಹೆಚ್ಚು ಕಷ್ಟಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ. ಏಕೆಂದರೆ ನಿಮ್ಮ ಪ್ರಯತ್ನ ನಿಮ್ಮ ವಾಸ್ತವಕ್ಕೆ ವಿರುದ್ಧವಾಗಿರುತ್ತದೆ. ನಿಮ್ಮ ವಾಸ್ತವ ನೀವು ಈಗ ಇರುವುದಕ್ಕಿಂತ ಭಿನ್ನವಾದದ್ದನ್ನು ಬಯಸುವುದಿಲ್ಲ; ಹಾಗಾಗಿ ನಿಮ್ಮನ್ನು ನೀವು ಇಂಪ್ರೂವ್ ಮಾಡಿಕೊಳ್ಳುವ ಯಾವ ಅವಶ್ಯಕತೆಯೂ ಇಲ್ಲ. ಅರಿವನ್ನು ಹೊಂದುವುದರ ಮೂಲಕ ಮಾತ್ರ ಬೆಳವಣಿಗೆ ಸಾಧ್ಯವಾಗುತ್ತದೆ.
ಇದು ಹೇಗೆಂದರೆ ನಿಮ್ಮ ಜೇಬನ್ನು ನೋಡಿಕೊಳ್ಳದೇ ನಿಮ್ಮನ್ನು ನೀವು ಭಿಕ್ಷುಕ ಎಂದುಕೊಂಡಂತೆ, ನಿಮ್ಮ ಜೇಬಿನಲ್ಲಿ ನಿಮ್ಮ ಇಡೀ ಬದುಕಿಗೆ ಬೇಕಾಗುವಷ್ಟು ಹಣ ಕೊಡುವ ಬೆಲೆ ಬಾಳುವ ವಜ್ರ ಇರುವಾಗಲೂ ನೀವು ಭಿಕ್ಷೆ ಬೇಡುತ್ತಿರುತ್ತೀರಿ. ಮುಂದೆ ಯಾವತ್ತೋ ಒಂದು ದಿನ ನೀವು ನಿಮ್ಮ ಜೇಬಿ ತಡಕಾಡಿದಾಗ ಥಟ್ಟನೇ ನಿಮಗೆ ಗೊತ್ತಾಗುತ್ತದೆ ನೀವು ಚಕ್ರವರ್ತಿಯ ಸಮ ಎನ್ನುವುದು. ವಾಸ್ತವದಲ್ಲಿ ಏನೂ ಬದಲಾವಣೆಯಾಗಿಲ್ಲ ಮೊದಲೂ ನಿಮ್ಮ ಜೇಬಿನಲ್ಲಿ ವಜ್ರ ಇತ್ತು, ಈಗಲೂ ನಿಮ್ಮ ಜೇಬಿನಲ್ಲಿ ವಜ್ರ ಇದೆ. ಈಗ ಆಗಿರುವ ಒಂದೇ ಬದಲಾವಣೆ ಎಂದರೆ ನಿಮ್ಮ ಜೇಬಿನಲ್ಲಿ ವಜ್ರ ಇರುವ ಬಗ್ಗೆ ಈಗ ನಿಮಗೆ ಅರಿವಾಗಿದೆ.
ಆದ್ದರಿಂದ ಏನೇ ಬೆಳವಣಿಗೆ ಆಗಿದ್ದರೆ ಅದು ನಿಮ್ಮ ಅರಿವಿನ ಬೆಳವಣಿಗೆ, ನಿಮ್ಮ ಅಸ್ತಿತ್ವದಲ್ಲಿ ಯಾವ ಬದಲಾವಣೆ ಆಗಿಲ್ಲ. ಅಸ್ತಿತ್ವ ಮೊದಲು ಹೇಗಿತ್ತೋ ಈಗಲೂ ಹಾಗೆಯೇ ಇದೆ. ಬುದ್ಧ, ಅಥವಾ ಕ್ರಿಸ್ತ, ಅಥವಾ ನೀವು ಅಥವಾ ಇನ್ಯಾರೋ ನೀವೆಲ್ಲ ಇರುವ ಸ್ಥಿತಿ ಒಂದೇ, ಇರುವ ಜಾಗ ಒಂದೇ, ಆದರೆ ಒಂದೇ ಬದಲಾವಣೆ ಎಂದರೆ ಯಾರು ಅರಿವನ್ನು ಹೊಂದಿದ್ದಾರೋ ಅವರು ಬುದ್ಧ ಆಗಿದ್ದಾರೆ, ಬಾಕಿ ಎಲ್ಲರಿಗೆ, ಯಾರಿಗೆ ಅರಿವು ಇಲ್ಲವೂ ಅವರು ಇನ್ನೂ ಭಿಕ್ಷುಕರು.
ಜ್ಞಾನೋದಯ ಎನ್ನುವುದು ಎಲ್ಲೊ ಒಂದು ಕಡೆ ನಿಮಗಾಗಿ ಕಾಯುತ್ತಿರುವ ಸಂಗತಿಯಲ್ಲ. ನೀವು ಈಗಾಗಲೇ ಅಲ್ಲಿದ್ದೀರಿ. ಜ್ಞಾನೋದಯ ಎಲ್ಲ ಕಡೆಯಿಂದಲೂ ನಿಮ್ಮನ್ನು ಸುತ್ತುವರೆದಿದೆ. ಅದು ನಿಮ್ಮ ಒಳಗೆ ಇದೆ, ನಿಮ್ಮ ಹೊರಗೆ ಇದೆ, ನಿಮ್ಮ ಹೃದಯದ ಪ್ರತಿ ಬಡಿತದಲ್ಲೂ ತುಂಬಿಕೊಂಡಿದೆ. ಆದರೆ ನೀವು ಅದನ್ನು ಬೇರೆ ಎಲ್ಲೋ, ಭವಿಷ್ಯದಲ್ಲಿ, ಇನ್ನಾವುದೋ ಗ್ರಹದಲ್ಲಿ ಹುಡುಕುತ್ತಿದ್ದೀರಿ.
ಜ್ಞಾನೋದಯವನ್ನ ಬೇರೆಲ್ಲೋ ಹುಡುಕಬೇಡಿ, ನಿಮ್ಮ ನೈಜ ಅಸ್ತಿತ್ವ ಕ್ಕೆ ಮರಳಿ ಬನ್ನಿ. ಜ್ಞಾನೋದಯ ಅಲ್ಲಿ ನಿಮಗಾಗಿ ಕಾಯುತ್ತಿದೆ. ಮುಟ್ಟುವ, ಸಾಧಿಸುವ ಎಲ್ಲ ಬಯಕೆಗಳನ್ನು ತ್ಯಜಿಸಿದ ಕ್ಷಣದಲ್ಲಿಯೇ ನಿಮಗೆ ಜ್ಞಾನದ ಸಾಕ್ಷಾತ್ಕಾರ ಆಗುವುದು. ಜ್ಞಾನೋದಯ ಪ್ರಯಾಣ ವಲ್ಲ, ನಿಮ್ಮ ಅಸ್ತಿತ್ವದ ತಿರುಳಿನ ಬಗ್ಗೆ ಅರಿವು ಹೊಂದುವುದು.
ಒಮ್ಮೆ ಶಿಷ್ಯ , ಒಂದು ಮೆಥೊಡಿಸ್ಟ್ ಚರ್ಚ ದಾಟಿ ಮನೆಗೆ ವಾಪಸ್ಸಾಗುತ್ತಿದ್ದಾಗ, ಚರ್ಚ್ ನ ಅಂಗಳದಲ್ಲಿ ಝೆನ್ ಮಾಸ್ಟರ್ ಚಿತ್ರಕ್ಕೆ ಬಣ್ಣ ತುಂಬುತ್ತಾ ಕುಳಿತದ್ದನ್ನು ಕಂಡ. ಹತ್ತಿರ ಹೋಗಿ ನೋಡಿ ಆಶ್ಚರ್ಯಚಕಿತನಾದ. ಮಾಸ್ಟರ್, ಚರ್ಚ ನ ಚಿತ್ರ ಬಿಡಿಸುತ್ತಿರಲಿಲ್ಲ, ಬದಲಾಗಿ ಚೀನಾ ದೇಶದ ಪ್ರಕೃತಿ ಚಿತ್ರ ಬಿಡಿಸುತ್ತಿದ್ದ.
ಅಲ್ಲಿ ದೊಡ್ಡ ಪರ್ವತ ಶ್ರೇಣಿ, ನದಿ, ಸುಂದರ ಜಲಪಾತ ಮತ್ತು
ತನ್ನ ಪುಟ್ಟ ಗುಡಿಸಲಿನ ಮುಂದೆ ಕಸ ಗುಡಿಸುತ್ತಿದ್ದ ಗೂನು ಬೆನ್ನಿನ ಹಸನ್ಮುಖಿ ಮುದುಕ.
ಶಿಷ್ಯ : ಏನು ಚಿತ್ರ ಇದು ಮಾಸ್ಚರ್ ?
ಮಾಸ್ಟರ್ : ಕೆಲವು ಕ್ಷಣಗಳ ಹಿಂದೆಯಷ್ಟೆ ಈ ಮುದುಕನಿಗೆ ಜ್ಞಾನೋದಯವಾಗಿದೆ.
ಶಿಷ್ಯ : ಮುಂದೆ ಏನು ಮಾಡುತ್ತಾನೆ ಮುದುಕ?
ಮಾಸ್ಟರ್ : ಅದನ್ನೆ ನೋಡುತ್ತಿದ್ದೆ, ಕಸ ಗುಡಿಸುವುದನ್ನು ಮುಂದುವರೆಸಿದ್ದಾನೆ.

