ಮಾನಸಿಕ ಅಸ್ವಸ್ಥತೆ ( Neurosis ) : ಓಶೋ 365 #Day 265

ಯಾವಾಗ ನೀವು ಸೋಲನ್ನು ಸ್ವೀಕರಿಸುವುದಿಲ್ಲವೋ ಆಗ ಮಾನಸಿಕ ಅಸ್ವಸ್ಥತೆ ನಿಮ್ಮೊಳಗೆ ನೆಲೆಯೂರುತ್ತದೆ. ಗೆಲುವಿನ ಮೆಟ್ಟಲು ಹತ್ತುತ್ತಿರುವಾಗ ಇದು ಎಂದೂ ನಿಮ್ಮನ್ನು ಬಾಧಿಸುವುದಿಲ್ಲ ~ ಓಶೋ ರಜನೀಶ್;  ಕನ್ನಡಕ್ಕೆ: ಚಿದಂಬರ ನರೇಂದ್ರ


‘ಚೆಲುವು’ ಎಂದು ತೀರ್ಮಾನಿಸಿದಾಗಲೇ
ಹುಟ್ಟಿಕೊಂಡದ್ದು ಕುರೂಪ.
‘ಒಳ್ಳೆಯದು’ ಎಂದು ಹೆಸರಿಟ್ಟಾಗಲೇ
ಕೆಡುಕಿನ ನಾಮಕರಣ ಕೂಡ.

ಇರುವುದು ಮತ್ತು ಇರದಿರುವುದು
ಹುಟ್ಟಿಸುತ್ತವೆ ಒಂದನ್ನೊಂದು.
ಸರಳ ಮತ್ತು ಸಂಕೀರ್ಣ, ಆಸರೆ ಒಂದಕ್ಕೊಂದು.
ದೂರ – ಸಮೀಪ
ವ್ಯಾಖ್ಯಾನ ಮಾಡುತ್ತವೆ, ಒಂದು ಇನ್ನೊಂದನ್ನು.
ಆಳ ಮತ್ತು ಎತ್ತರ
ಸವಾರಿ ಮಾಡುತ್ತವೆ, ಒಂದರ ಮೇಲೊಂದು.
ಭೂತ ಮತ್ತು ಭವಿಷ್ಯ
ಹಿಂಬಾಲಿಸುತ್ತವೆ, ಒಂದನ್ನೊಂದು.

ಆದ್ದರಿಂದಲೇ ಸಂತನ ಕೆಲಸದಲ್ಲಿ
ದುಡಿಮೆ ಇಲ್ಲ,
ಕಲಿಸುವಿಕೆಯಲ್ಲಿ ಮಾತಿಲ್ಲ.
ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ
ಹೆಣ ಹೊರುವಲ್ಲಿಯೂ,
ತಾಯಿಯಾಗಲೊಲ್ಲ, ಕವಿಯಾಗಲೊಲ್ಲ,
ಬೀಜ ಬಿತ್ತಿ, ಪಾತಿ ಮಾಡಿ, ನೀರು ಉಣಿಸಿ
ಸುಮ್ಮನಾಗುತ್ತಾನೆ.
ಅಂತೆಯೇ ತಾವೋ ಅನನ್ಯ, ಅವಿನಾಶಿ.

~ ಲಾವೋತ್ಸೇ

ಯಾವಾಗ ಎಲ್ಲವೂ ನಿಮ್ಮ ಬಯಕೆಯಂತೆ ನಡೆಯುತ್ತಿರುತ್ತದೆಯೋ, ಯಾವಾಗ ನೀವು ಜಗತ್ತಿನ ಎತ್ತರದಲ್ಲಿ ನೆಲೆಯಾಗಿರುತ್ತಿರೋ ಆಗ ಯಾಕೆ ನಿಮ್ಮನ್ನು ಈ ಮಾನಸಿಕ ಅಸ್ವಸ್ಥತೆ ಕಾಡಬೇಕು? ಈ ಸಮಸ್ಯೆ ನಿಮ್ಮೊಳಗೆ ಕಾಣಿಸಿಕೊಳ್ಳುವುದು ಯಾವಾಗ ನಿಮ್ಮ ಆಸೆಯಂತೆ ಯಾವುದೂ ನಡೆಯುತ್ತಿಲ್ಲವೋ ಆವಾಗ. ನೀವು ಕರಾಳ ಕಂದರದಲ್ಲಿ ಜಾರಿ ಬಿದ್ದಿರುವಾಗ ಮತ್ತು ನೀವು ಎಲ್ಲ ಗೆಲುವಿನಿಂದ ವಂಚಿತರಾಗಿರುವಾಗ. ಗೆಲುವಿನ ದಾರಿಯಲ್ಲಿದ್ದಾಗ ಯಾವ ಎನರ್ಜಿ ನಿಮ್ಮ ಮಹತ್ವಾಕಾಂಕ್ಷೆಯನ್ನು ಪೋಷಿಸುತ್ತಿತ್ತೋ ಅದೇ ಎನರ್ಜಿ ನೀವು ಸೋಲಿನ ಪಥದಲ್ಲಿರುವಾಗ ನಿಮ್ಮ ವಿರುದ್ಧವಾಗಿ ಕೆಲಸ ಮಾಡುತ್ತಿದೆ, ಅದೇ ಎನರ್ಜಿ ಈಗ ನಿಮ್ಮನ್ನು ನಾಶ ಮಾಡುತ್ತಿದೆ.

ಪ್ರತಿ ಮಾನಸಿಕ ರೋಗಿಗೆ ಗೆಲ್ಲುವುದು ಸಾಧ್ಯವಾದರೆ, ಈ ಜಗತ್ತಿನಿಂದ ಮಾನಸಿಕ ಅಸ್ವಸ್ಥತೆ ಮಾಯವಾಗುತ್ತದೆ. ಹಿಟ್ಲರ್ ಯಶಸ್ಸಿನ ತುದಿಯಲ್ಲಿದ್ದಾಗ ಅವನೊಬ್ಬ ಮಾನಸಿಕ ರೋಗಿ ಎಂದು ಯಾರು ಸಂಶಯಿಸಲಿರಲಿಲ್ಲ. ಆದರೆ ಕೊನೆ ಕೊನೆಗೆ ಅವನಿಗೇ ಗೊತ್ತಾಯಿತು ಅವನೊಬ್ಬ ಮಾನಸಿಕ ರೋಗಿ ಎನ್ನುವುದು, ಹಾಗಾಗಿಯೇ ಅವನು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಯಾವಾಗ ನೀವು ಗೆಲ್ಲುತ್ತಿಲ್ಲವೋ ಆಗಲೇ ಈ ರೋಗ ಉಲ್ಬಣವಾಗುತ್ತದೆ. ಆದ್ದರಿಂದ ನೀವು ಗೆಲುವನ್ನು ಅನುಭವಿಸುತ್ತಿರುವಾಗ ಅದನ್ನು ತಲೆಗೆ ಏರಿಸಿಕೊಳ್ಳದೇ playful ಆಗಿರಿ. ಯಾವಾಗಲೂ Playful ಆಗಿರುವ ಮನೋವೃತ್ತಿಯನ್ನು ಬೆಳೆಸಿಕೊಳ್ಳಿ. ಗೆಲುವು ಮತ್ತು ಸೋಲು ಬದುಕಿನ ಮಾನದಂಡ ಅಲ್ಲ, ನೀವು ಏನು ಮಾಡುತ್ತೀರೋ ಅದನ್ನು ಆನಂದಿಸುವುದು ಬದುಕಿನ ಮಾನದಂಡ.

ಪ್ರತಿಯೊಂದು ಗೆಲುವಿನ ಹಿಂದೆಯೇ ಸೋಲು ಬೆನ್ನುಹತ್ತಿರುತ್ತದೆ. ಪ್ರತಿ ಹಗಲನ್ನು ರಾತ್ರಿ ಹಿಂಬಾಲಿಸುತ್ತಿರುತ್ತದೆ, ಪ್ರತಿ ಪ್ರೀತಿಯನ್ನು ಕರಾಳತೆ ಫಾಲೋ ಮಾಡುತ್ತದೆ. ಬದುಕು ಒಂದು ಚಲನೆ, ಪ್ರಗತಿ ; ಯಾವುದೂ ನಿಂತ ನೀರಲ್ಲ. ಈಗ ನಿಮಗೆ ಹರೆಯ ಮುಂದೆ ನಿಮಗೂ ವಯಸ್ಸಾಗುತ್ತದೆ. ಈಗ ನಮಗೆ ಹಲವಾರು ಗೆಳೆಯರಿದ್ದಾರೆ ಒಂದು ದಿನ ನಿಮಗೆ ಯಾರೂ ಗೆಳೆಯರಿರುವುದಿಲ್ಲ. ಈಗ ನಿಮ್ಮ ಬಳಿ ಇರುವ ಹಣ ಮುಂದೊಂದು ದಿನ ಕರಗಿ ಹೋಗುತ್ತದೆ. ನೀವು playful ಆಗಿರುವಾಗ ಯಾವುದೂ ತಪ್ಪಲ್ಲ. ಕೇವಲ ಒಂದು ಕ್ವಾಲಿಟಿಯನ್ನು ಬೆಳೆಸಿಕೊಳ್ಳಿ, ಸದಾ playful ಆಗಿರುವುದು.

ಒಂದು ಹಳ್ಳಿಯಲ್ಲಿ, ಮದುವೆಯಾಗದ ಒಬ್ಬ ಸುಂದರ ಯುವತಿ ಗರ್ಭಿಣಿಯಾದಳು. ಅವಳ ತಂದೆ ತಾಯಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಮಗುವಿನ ತಂದೆ ಯಾರೆಂದು ಕೇಳಿದಾಗ, ಗಲಿಬಿಲಿಗೊಳಗಾದ ಯುವತಿ ಗಾಬರಿಯಲ್ಲಿ, ಅದೇ ಊರಿನಲ್ಲಿ ವಾಸವಾಗಿದ್ದ ಝೆನ್ ಮಾಸ್ಟರ್ ಹಕುಯಿನ್ ನ ಹೆಸರು ಹೇಳಿಬಿಟ್ಟಳು.

ತಂದೆ ತಾಯಿ ಮಾಸ್ಟರ್ ಮನೆ ಬಾಗಲಿಗೆ ಬಂದು ಗಲಾಟೆ ಮಾಡತೊಡಗಿದರು. ವಿಷಯ ತಿಳಿದುಕೊಂಡ ಮಾಸ್ಟರ್ “ಹೌದಾ” ಎಂದು ಉತ್ತರಿಸಿ ಸುಮ್ಮನಾದ.

ಈ ಘಟನೆಯಿಂದ ಊರಲ್ಲಿ ಮಾಸ್ಟರ್ ನ ಪ್ರತಿಷ್ಠೆಗೆ ಭಾರೀ ಧಕ್ಕೆಯಾಯಿತು. ಊರ ಜನರೆಲ್ಲ ಅವನನ್ನು ದೂಷಿಸತೊಡಗಿದರು.

ಕೆಲ ತಿಂಗಳುಗಳ ನಂತರ ಆ ಯುವತಿ ಹೆಣ್ಣು ಮಗುವನ್ನು ಹೆತ್ತಳು. ತಂದೆ ತಾಯಿ ಆ ಮಗುವನ್ನು ಎತ್ತಿಕೊಂಡು ಮಾಸ್ಟರ್ ಮನೆಗೆ ಬಂದರು. ಮಗುವನ್ನು ಅವನೇ ಸಾಕಬೇಕು ಎಂದು ಒತ್ತಾಯ ಮಾಡತೊಡಗಿದರು. ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಂಡ.

ಎಷ್ಟೋ ತಿಂಗಳು ಮಾಸ್ಟರ್ ಮಗುವನ್ನು ಅಕ್ಕರೆಯಿಂದ ಬೆಳೆಸಿದ. ಆ ಯುವತಿ ಸುಳ್ಳು ಹೇಳಿದ ಪಾಪಪ್ರಜ್ಞೆ ಸಹಿಸಲಾಗದೇ, ತನ್ನ ತಂದೆ ತಾಯಿಯರಿಗೆ, ಅದೇ ಊರಿನ ಒಬ್ಬ ಯುವಕ ಇದಕ್ಕೆ ಕಾರಣ ಎಂದು ನಿಜ ಹೇಳಿದಳು.

ಕೂಡಲೇ ಯುವತಿಯ ತಂದೆ ತಾಯಿ, ಮಾಸ್ಟರ್ ಮನೆಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿ, ಅವನ ಕ್ಷಮೆ ಕೇಳಿ ಮಗುವನ್ನು ವಾಪಸ್ಸು ಕೊಡಬೇಕೆಂದು ಬೇಡಿಕೊಂಡರು.

ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ಅವರಿಗೆ ಒಪ್ಪಿಸಿದ.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.