ಯುವಕನಿಗೆ ರಾಮಾನುಜರ ಮಾತು ಅರ್ಥವಾಗೋದಿಲ್ಲ. ಪ್ರೀತಿ ಪ್ರೇಮಕ್ಕೂ ಭಗವಂತನ ಸಾಕ್ಷಾತ್ಕಾರಕ್ಕೂ ಏನು ಸಂಬಂಧ ಅಂತ ಕಣ್ ಕಣ್ಣು ಬಿಟ್ಕೊಂಡು ನಿಂತಲ್ಲೆ ನಿಂತುಕೊಳ್ತಾನೆ. ಆಗ ರಾಮಾನುಜರು… । ಸಂಗ್ರಹಾನುವಾದ: ಗಾಯತ್ರಿ
ಪರಿವ್ರಾಜಕರಾಗಿದ್ದ ರಾಮಾನುಜಾಚಾರ್ಯರು ಊರೂರು ಸುತ್ತುತ್ತಾಒಮ್ಮೆ ಒಂದು ಹಳ್ಳಿಯಲ್ಲಿ ಉಳಿದುಕೊಳ್ತಾರೆ. ವಾಡಿಕೆಯಂತೆ ಆ ಹಳ್ಳಿಯ ಜನರೆಲ್ಲ ಬಂದು ಅವರ ದರ್ಶನ ಪಡೀತಾ ಇರ್ತಾರೆ. ಅವರ ನಡುವಲ್ಲಿ ಒಬ್ಬ ಯುವಕನೂ ಇರ್ತಾನೆ. ತನ್ನ ಪಾಳಿ ಬಂದ ಕೂಡಲೇ ಆ ಯುವಕ ರಾಮಾನುಜರಿಗೆ ನಮಸ್ಕರಿಸಿ, “ನಂಗೆ ಭಗವಂತನ ಅನುಗ್ರಹ ಪಡ್ಕೋಬೇಕು ಅನ್ನೋ ಆಸೆ ಇದೆ. ದಯವಿಟ್ಟು ದಾರಿ ತೋರಿಸಿ” ಅಂತಾನೆ.
ರಾಮಾನುಜರು ಮುಗುಳ್ನಗುತ್ತಾ, “ಆಗಬಹುದು. ಆದರೆ ನನ್ನದೊಂದು ಪ್ರಶ್ನೆ ಇದೆ, ಅದಕ್ಕೆ ಉತ್ತರಿಸಿದ ಮೇಲೆ ನಿನಗೆ ಭಗವಂತನ ಅನುಗ್ರಹ ಪಡೆಯೋ ಅರ್ಹತೆ ಇದೆಯೋ ಇಲ್ವೋ ನಿರ್ಧರಿಸೋಣ” ಅಂತಾರೆ.
ಆ ಯುವಕ “ಓಹೋ! ಆದೀತು” ಅಂತಾನೆ. ಥಟ್ಟನೆ ರಾಮಾನುಜರು, “ನೀನು ಯಾರನ್ನಾದ್ರೂ ಪ್ರೇಮಿಸಿದ್ದೀಯಾ?” ಅಂತ ಕೇಳಿಬಿಡ್ತಾರೆ.
ಆ ಯುವಕ ಹಾವು ಮೆಟ್ಟಿದ ಹಾಗೆ ಗಾಬರಿಬಿದ್ದು, “ಅಯ್ಯೋ! ಖಂಡಿತವಾಗ್ಲೂ ನಾನು ಯಾರನ್ನೂ ಪ್ರೇಮಿಸಿಲ್ಲ. ಅಂಥ ಯೋಚನೆಯೆಲ್ಲ ನನ್ನ ಹತ್ತಿರವೂ ಸುಳಿಯೋದಿಲ್ಲ. ನಂಗೆ ಮೊದಲಿಂದ್ಲೂ ಭಗವಂತನಲ್ಲೇ ಆಸಕ್ತಿ” ಅಂತಾನೆ.
ರಾಮಾನುಜರು ಮುಸಿನಗುತ್ತಾ, “ಏನು!? ನೀನು ಅಂಥದನ್ನೆಲ್ಲ ಯಾವತ್ತೂ ಮಾಡಿಯೇ ಇಲ್ವಾ? ನಿಜ ಹೇಳ್ತಾ ಇದೀಯಾ? ಚೆನ್ನಾಗಿ ಯೋಚನೆ ಮಾಡಿ ಹೇಳು, ಎರಡನೇ ಸಲ ಕೇಳ್ತಿದ್ದೀನಿ; ನೀನು ಯಾರನ್ನೂ ಪ್ರೀತಿಸಿಲ್ವಾ?” ಅಂತ ಕೇಳ್ತಾರೆ.ಆ ಯುವಕ ಕೈ ಕೈಮುಗಿದು, “ನನ್ನನ್ನು ನಂಬಿ ಆಚಾರ್ಯರೇ. ನಾನು ಭಗವಂತನಲ್ಲಿ ಮನಸ್ಸು ನೆಟ್ಟವನು. ಪ್ರೀತಿ – ಪ್ರೇಮಕ್ಕೆಲ್ಲ ನನಗೆಲ್ಲಿ ಪುರುಸೊತ್ತು?” ಅಂತ ಅಂಗಲಾಚ್ತಾನೆ. ರಾಮಾನುಜರು ಪಟ್ಟುಬಿಡದೆ, “ನೋಡು, ಮೂರನೇ ಸಲ… ಇದೇ ಕೊನೆಯ ಸಲ ಕೇಳ್ತಿದ್ದೀನಿ, ಯಾರನ್ನೂ… ಅಂದ್ರೆ ಯಾರನ್ನೂ ಪ್ರೇಮಿಸಿಲ್ವಾ ನೀನು?” ಅಂತಾರೆ. ಆ ಯುವಕ ರಾಮಾನುಜರ ಮುಂದೆ ಉದ್ದಂಡ ಬಿದ್ದು, “ಕ್ಷಮಿಸಿ ಆಚಾರ್ಯರೇ, ನಾನು ಪ್ರೇಮದ ಆಲೋಚನೆಯನ್ನೇ ಮಾಡಿಲ್ಲ. ನಾನು ಭಗವಂತನ್ನ ಹುಡುಕ್ಕೊಂಡು ಅಲೀತಾ ಇದ್ದೀನಿ. ಈ ಪ್ರೇಮದ ಪ್ರಶ್ನೆ ಬಿಟ್ಟು ಬೇರೇನಾದ್ರೂ ಕೇಳಿ, ನಂಗೆ ಭಗವಂತನ್ನ ಪಡೆಯೋ ದಾರಿ ತೋರಿಸಿ” ಅಂತಾನೆ.
ರಾಮಾನುಜರು ಆತನಿಗೆ ತಾವೂ ಕೈಮುಗಿದು, “ನಾನಲ್ಲ ಕಣಯ್ಯಾ, ನೀನು ನನ್ನನ್ನ ಕ್ಷಮಿಸ್ಬೇಕು. ನೀನು ಹುಡುಕ್ತಿರೋ ಭಗವಂತನ್ನ ತಲುಪೋದಕ್ಕೆ ನಂಗೆ ಗೊತ್ತಿರೋ ದಾರಿ ಪ್ರೇಮ ಒಂದೇ. ಪೇಮದ ಬಗ್ಗೆ ಗೊತ್ತಿಲ್ಲ, ಯಾರನ್ನೂ ಪ್ರೀತಿ ಮಾಡಿಲ್ಲ ಅಂತೀಯ, ನೀನು ಹೇಗೆ ತಾನೆ ಭಗವಂತನ್ನ ತಲುಪೋದಕ್ಕೆ ಸಾಧ್ಯ?” ಅಂದುಬಿಡ್ತಾರೆ.
ಯುವಕನಿಗೆ ಏನೊಂದೂ ಅರ್ಥವಾಗೋದಿಲ್ಲ. ಪ್ರೀತಿ ಪ್ರೇಮಕ್ಕೂ ಭಗವಂತನ ಸಾಕ್ಷಾತ್ಕಾರಕ್ಕೂ ಏನು ಸಂಬಂಧ ಅಂತ ಕಣ್ ಕಣ್ಣು ಬಿಟ್ಕೊಂಡು ನಿಂತಲ್ಲೆ ನಿಂತುಕೊಳ್ತಾನೆ.
ಅನುಕಂಪವೇ ಮೈವೆತ್ತಂತಿದ್ದ ರಾಮಾನುಜರು, “ನೀನು ಯಾರನ್ನಾದ್ರೂ ಪ್ರೇಮಿಸಿದ್ರೆ, ಮತ್ತೊಂದು ವ್ಯಕ್ತಿಯನ್ನ, ಆತ್ಮವನ್ನ ಪ್ರೇಮಿಸುವ ಬಗೆ ನಿಂಗೆ ತಿಳಿದಿರುತ್ತಿತ್ತು. ಆಗ ನಿಂಗೆ ಭಗವಂತನ್ನ ಪ್ರೇಮಿಸೋಕೆ, ಆ ಪ್ರೇಮದ ಮೂಲಕ ಅವನನ್ನ ಪಡೆಯೋದಕ್ಕೆ ಸಾಧ್ಯ ಆಗ್ತಿತ್ತು. ಮತ್ತೊಂದು ಜೀವಿಯನ್ನ ಪ್ರೇಮಿಸ್ತೀಯಲ್ಲ, ಅದರ ವಿಸ್ತಾರ ರೂಪವೇ ಭಗವಂತನ ಪ್ರೇಮ. ನೀನು ನಿನ್ನ ಜೊತೆಗಿರುವ ಜನರನ್ನೆ ಪ್ರೀತಿಸದ ಮೇಲೆ, ಅವರ ಬಗ್ಗೆ ಪ್ರೇಮ ಬೆಳೆಸಿಕೊಳ್ಳದ ಮೇಲೆ, ಕಂಡರಿಯದ ಭಗವಂತನ್ನ ಹೇಗೆ ಪ್ರೀತಿಸ್ತೀಯ? ಅವನ ಅನುಗ್ರಹ ಹೇಗೆ ಪಡ್ಕೋತೀಯ?” ಅಂತ ಪ್ರಶ್ನೆ ಮಾಡ್ತಾರೆ.
ಆಗ ಯುವಕನಿಗೆ ರಾಮಾನುಜರು ಹೇಳಿದ ಪ್ರೇಮ ಯಾವ ಬಗೆಯದ್ದು ಅಂತ ಅರ್ಥ ಆಗುತ್ತೆ. ಕೇವಲ ಗಂಡು – ಹೆಣ್ಣಿನ ನಡುವಿನ ಪ್ರೇಮದ ಬಗೆಗಲ್ಲ, ಒಟ್ಟು ಜೀವಿಯೊಂದು ಮತ್ತೊಂದನ್ನ ಪ್ರೀತಿಸುವ ಬಗ್ಗೆ ಹೇಳಿದ್ದು ಅನ್ನೋದು ಅರ್ಥವಾಗುತ್ತೆ.
ಆ ಕ್ಷಣದಿಂದ ಆ ಯುವಕ ಪ್ರೇಮಿಸೋದನ್ನ, ತನ್ನ ಪ್ರೇಮವನ್ನ ಒಪ್ಪಿಕೊಳ್ಳೋದನ್ನ, ಜಾಹೀರುಗೊಳಿಸೋದನ್ನ ಕಲಿತುಕೊಳ್ತಾನೆ. ಅಲ್ಲಿಂದ ಅವನ ನಿಜವಾದ ಆಧ್ಯಾತ್ಮಿಕ ಪ್ರಯಾಣ ಶುರುವಾಗುತ್ತೆ.

