ಮೈಂಡ್ ಎನ್ನುವುದು ಪರಿಚಿತ, ಧ್ಯಾನ ಎನ್ನುವುದು ಅಪರಿಚಿತದಲ್ಲಿ ನೆಲೆಯಾಗುವುದು, ಮತ್ತು ದೈವತ್ವ ಎನ್ನುವುದು ಅಜ್ಞಾತ ( Unknowable) – ಹೇಗೆಂದರೆ ದಿಗಂತ ಅಪರಿಚಿತತೆಯ ಗಡಿಯಾದಂತೆ. ನೀವು ಹತ್ತಿರ ಬಂದಂತೆಲ್ಲ ಗಡಿ ನಿಮ್ಮಿಂದ ದೂರ ಸಾಗುವುದು . ಇದು ಕಾಮನಬಿಲ್ಲಿನಂತೆ; ಇದನ್ನು ಹಿಡಿದಿಟ್ಟುಕೊಳ್ಳುವುದು ಯಾವತ್ತೂ ಸಾಧ್ಯವಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮೊಳಗಿನ ದಿವ್ಯ ಶಕ್ತಿಗಳನ್ನು
ಹೇಗೆ ಕಂಡುಕೊಳ್ಳುವುದು?
ಪ್ರತಿಮೆ, ರೂಪಕಗಳ ಮೂಲಕ
ಉತ್ತರ ಹುಡುಕುವ ಪ್ರಯತ್ನ
ವ್ಯರ್ಥ ಎಂಬುದು ಸಿದ್ಧವಾಗಿ ಹೋಗಿದೆ.
ಕಾಮ ಹೇಗಿರತ್ತೆ ಎಂಬ ಮಗುವಿನ ಪ್ರಶ್ನೆಗೆ
ಸಿಹಿಯಾಗಿರತ್ತೆ, ಸಕ್ಕರೆಯ ಬೊಂಬೆಯಂತೆ
ಎಂದು ಉತ್ತರಿಸಿದರೆ ಹೇಗೆ?
ಇಂಥ ನಿಗೂಢಗಳ ಬಗ್ಗೆ ನೀವು ಏನೇ ಹೇಳಿ
ನನಗೆ ಗೊತ್ತು ಎಂಬ ಉತ್ತರ
ಮತ್ತು
ನನಗೆ ಗೊತ್ತಿಲ್ಲ ಎಂಬ ಉತ್ತರ ಮಾತ್ರ
ಸತ್ಯಕ್ಕೆ ಹತ್ತಿರವಾದ ಉತ್ತರಗಳು
ಎರಡೂ ಉತ್ತರಗಳಲ್ಲಿ ಅಂಥ ಸುಳ್ಳೆನಿಲ್ಲ.
- ರೂಮಿ.
ಅಜ್ಞಾತವನ್ನು ತಲುಪಲು ನೀವು ಪ್ರಯತ್ನ ಮಾಡಬಹುದು – ಅದನ್ನು ತಲುಪಲು ಪ್ರತಿ ಪ್ರಯತ್ನ ಮಾಡಬೇಕು – ಆದರೆ ಅದನ್ನು ತಲುಪುವುದು ಯಾವತ್ತೂ ಅಸಾಧ್ಯ.
ದೇವರು ಅಜ್ಞಾತ, ಅಜ್ಞಾತದ ಇರುವಿಕೆಯ ಕಾರಣವಾಗಿಯೇ ಬದುಕು ಸುಂದರ. ಅಸಾಧ್ಯತೆಯ ಇರುವಿಕೆಯ ಕಾರಣವಾಗಿಯೇ ಬದುಕು ಅನ್ವೇಷಣೆಯ ಅಪಾರ ಸುಂದರ ಸಾಹಸ. ಯಾವಾಗ ಸಂಗತಿ ಜ್ಞಾತ ವಾಗುತ್ತದೆಯೋ, ಸಾಧ್ಯವಾಗುತ್ತದೆಯೋ ಅದು ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದಲೇ ಪೂರ್ವಕ್ಕಿಂತ ಪಶ್ಚಿಮದಲ್ಲಿ ಬದುಕು ಹೆಚ್ಚು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ವಿಜ್ಞಾನ ನಿಮ್ಮನ್ನು ಹೆಚ್ಚು ಜ್ಞಾನವಂತರನ್ನಾಗಿಸಿರುವುದರಿಂದ, ವಿಜ್ಞಾನದ ಧೂಳು ನಿಮ್ಮನ್ನು ಆವರಿಸಿಕೊಂಡಿರುವುದರಿಂದ, ನಿಮ್ಮ ಬೆರಗುಗೊಳ್ಳು ಸಾಮರ್ಥ್ಯ ಕಡಿಮೆ ಕಡಿಮೆಯಾಗುತ್ತ ಹೋಗುತ್ತಿದೆ. ನೀವು ಅಜ್ಞಾತಕ್ಕೆ ಬಹುತೇಕ ಅಸಂವೇದನಾಶೀಲರಾಗುತ್ತ ಹೋಗುತ್ತಿದ್ದೀರಿ. ನಿಮಗೆ ಗೊತ್ತು ಎನ್ನುವ ಗೋರಿ, ಸಾವು ಇದೊಂದೇ. ಯಾವತ್ತೂ ಅಪರಿಚಿತಕ್ಕೆ, ಅಜ್ಞಾತಕ್ಕೆ ಲಭ್ಯವಾಗಿರಿ.
ಈ ಝೆನ್ ಕಥೆ ಗಮನಿಸಿ.
ಮೇಲಿನ ಸ್ಥಾನಕ್ಕೆ ಏರುತ್ತ ಡೋಜನ್ ಝೆಂಜಿ ಒಂದು ಘಟನೆಯ ಬಗ್ಗೆ ಹೇಳಿದರು,
ಝೆನ್ ಮಾಸ್ಟರ್ ಹೋಜನ್, ಮಾಸ್ಟರ್ ಕೈಶಿನ್ ಝೆಂಜಿಯ ಹತ್ತಿರ ಅಭ್ಯಾಸ ಮಾಡಿದ್ದ. ಒಮ್ಮೆ ಮಾಸ್ಟರ್ ಕೈಶಿನ್, ಹೋಜನ್ ನ ಕೇಳಿದ,
“ ಜೋಝಾ, ಎಲ್ಲಿಗೆ ಹೋಗುತ್ತಿದ್ದೀಯ? “
“ ನಾನು ತೀರ್ಥಯಾತ್ರೆ ಮಾಡುತ್ತಿದ್ದೇನೆ ಗೊತ್ತು ಗುರಿಯಿಲ್ಲದೆ. “ ಹೋಜನ್ ಉತ್ತರಿಸಿದ.
“ ನಿನ್ನ ತೀರ್ಥಯಾತ್ರೆಯ ಕಾರಣ ಏನು? “ ಮಾಸ್ಟರ್ ಕೈಶಿನ್ ಝೆಂಜಿ ಮತ್ತೆ ಕೇಳಿದ.
“ ನನಗೆ ಗೊತ್ತಿಲ್ಲ “ ಹೋಜನ್ ನ ಉತ್ತರ.
“ ಗೊತ್ತಿಲ್ಲ ಅನ್ನೋದು ಅತ್ಯಂತ ಆಪ್ತ ಕಾರಣ” ಮಾಸ್ಟರ್ ಕೈಶಿನ್ ಝೆಂಜಿಗೆ ತುಂಬ ಖುಶಿಯಾಯ್ತು.
ಕೈಶಿನ್ ಝೆಂಜಿಯ ಮಾತು ಕೇಳುತ್ತಿದ್ದಂತೆಯೇ, ಹೋಜನ್ ಗೆ ಜ್ಞಾನೋದಯವಾಯಿತು.

