ಅಹಂ ನ ಕೊಲ್ಲುವುದು ಸಾಧ್ಯವಿಲ್ಲ ಏಕೆಂದರೆ ಅದು ಕೇವಲ ನೆರಳು ಮಾತ್ರ. ನೆರಳನ್ನು ಕೊಲ್ಲವುದು ಆಗದ ಮಾತು ~ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸತ್ಯದ ಹಾದಿಯ ಮೇಲೆ
ನಮ್ಮನ್ನು ಕೈ ಹಿಡಿದು ಮುನ್ನಡೆಸುವುದು
ಹೃದಯವೇ ಹೊರತು
ಬುದ್ಧಿಯಲ್ಲ.
ಈ ಪ್ರಯಾಣದಲ್ಲಿ ಹೃದಯ
ನಿಮ್ಮ ಪ್ರಧಾನ ಮಾರ್ಗದರ್ಶಿಯಾಗಿರಲಿ.
‘ಅಹಂ’ ತಕರಾರು ಮಾಡಿದರೆ
ಮುಟ್ಟಿ ಮಾತನಾಡಿಸಿ, ಒಪ್ಪಿಸಿ
ಸಾಧ್ಯವಾಗದಿದ್ದರೆ ಸವಾಲು ಹಾಕಿ
ಭೀಕರ ಯುದ್ಧವಾದರೂ ಚಿಂತೆಯಲ್ಲ
ಹೃದಯ, ನಿಮ್ಮ ಸುಳ್ಳು ಅಹಂ ಮೇಲೆ
ವಿಜಯ ಸಾಧಿಸಲಿ.
ನಿಮ್ಮೊಳಗಿನ
‘ಅಹಂ’ ನ ಎಳೆಗಳನ್ನು ಸ್ಪಷ್ಟವಾಗಿ
ಗುರುತಿಸಬಲ್ಲಿರಾದರೆ,
ಸತ್ಯದ ಹಾದಿಯಲ್ಲಿನ ದೊಡ್ಡ ಆತಂಕವೊಂದನ್ನು
ಯಶಸ್ವಿಯಾಗಿ ನಿಭಾಯಿಸಿದಂತೆ.
~ ಶಮ್ಸ್
ನೆರಳಿನೊಂದಿಗೆ ಫೈಟ್ ಮಾಡುವುದು ಕೂಡ ಮೂರ್ಖತನ, ನಿಮಗೆ ಸೋಲು ನಿಶ್ಚಿತ. ಇದಕ್ಕೆ ಕಾರಣ ನೆರಳು ನಿಮಗಿಂತ ಸಾಮರ್ಥ್ಯಶಾಲಿ ಎಂದಲ್ಲ, ಅಸಲಿಗೆ ನೆರಳಿಗೆ ಸ್ವಂತ ಅಸ್ತಿತ್ವ ಇಲ್ಲ, ಹಾಗೆಯೇ ಅಹಂ.
ಅಹಂ ಎನ್ನುವುದು ಸೆಲ್ಫ್ ನ ನೆರಳು. ಹೇಗೆ ದೇಹ ನೆರಳನ್ನು ಸೃಷ್ಟಿ ಮಾಡುತ್ತದೆಯೋ ಹಾಗೆಯೇ ಸೆಲ್ಫ್, ಅಹಂ ನ ಹುಟ್ಟು ಹಾಕುತ್ತದೆ. ಇದರ ಜೊತೆ ಹೋರಾಡುವುದು, ಇದನ್ನು ಕೊಲ್ಲುವುದು ಸಾಧ್ಯವಿಲ್ಲ. ಹಾಗೆ ನೋಡಿದರೆ ಸೆಲ್ಫ್ ನ ಕೊಲ್ಲುವುದು ಸ್ವತಃ ಅಹಂ.
ಇದನ್ನು ಕೇವಲ ಅರ್ಥ ಮಾಡಿಕೊಳ್ಳಬಹುದು. ನಿಮಗೆ ನೆರಳನ್ನು ಕೊಲ್ಲಬೇಕಾಗಿದ್ದರೆ ಬೆಳಕಿಗೆ ಆಹ್ವಾನ ನೀಡಿ. ಆಗ ನೆರಳು ತಾನೇ ಮಾಯವಾಗುತ್ತದೆ. ಹಾಗೆಯೇ ಅರಿವು ಸ್ಥಾಪಿತವಾದಾಗ, ಅಹಂ ತಾನೇ ಮಾಯವಾಗುತ್ತದೆ.
ಒಂದು ಸಂಜೆ ಝೆನ್ ಮಾಸ್ಟರ್ ರಾಜನ ಅರಮನೆಗೆ ಬಂದ. ಅವನ ಪ್ರಖರ ತೇಜಸ್ಸಿಗೆ ಬೆರಗಾದ ಅರಮನೆಯ ಕಾವಲುಗಾರರು, ಮಾಸ್ಟರ್ ನ ತಡೆಯುವ ಸಾಹಸ ಮಾಡಲಿಲ್ಲ.
ಮಾಸ್ಟರ್ ಸೀದಾ ರಾಜನ ಆಸ್ಥಾನದ ಒಳಗೆ ನುಗ್ಗಿ , ರಾಜನ ಎದುರು ಬಂದು ನಿಂತ. ಮಂತ್ರಾಲೋಚನೆಯಲ್ಲಿ ಮಗ್ನನಾಗಿದ್ದ ರಾಜ, ಮಾಸ್ಟರ್ ನನ್ನು ಗುರುತಿಸಿ, ಅರಮನೆಗೆ ಸ್ವಾಗತಿಸಿದ.
“ಸ್ವಾಗತ ಮಾಸ್ಟರ್, ನನ್ನಿಂದೇನಾಗಬೇಕು? ಅಪ್ಪಣೆಯಾಗಲಿ”
“ಮಹಾರಾಜ ಈ ರಾತ್ರಿಯನ್ನು ನಾನು ನಿನ್ನ ಈ ಛತ್ರದಲ್ಲಿ ಕಳೆಯಬಹುದೆ ? “
ಮಾಸ್ಟರ್ ನ ಮಾತು ಕೇಳಿ ರಾಜನಿಗೆ ಆಶ್ಚರ್ಯವಾಯಿತು, ಜೊತೆಗೆ ಇದು ಅಪಮಾನ ಕೊಡ ಅನಿಸಿತು.
“ಮಾಸ್ಟರ್, ಇದು ಛತ್ರವಲ್ಲ, ನನ್ನ ಅರಮನೆ”
ರಾಜ ಸಿಟ್ಟಿನಿಂದ ಉತ್ತರಿಸಿದ.
ಮಾಸ್ಟರ್ ಸೌಜನ್ಯದಿಂದ ರಾಜನಿಗೆ ಉತ್ತರಿಸಿದ.
“ ಮಹಾರಾಜ, ಒಂದು ಪ್ರಶ್ನೆ ಕೇಳಲಾ?
ನಿನಗಿಂತ ಮೊದಲು ಈ ಅರಮನೆ ಯಾರ ಸ್ವತ್ತಾಗಿತ್ತು? “
“ಯಾಕೆ? ನನ್ನ ಅಪ್ಪನದು. ಆದರೆ ಈಗ ಅವನು ಸತ್ತು ಹೋಗಿದ್ದಾನೆ”
“ಹೌದಾ, ಹಾಗಾದರೆ ನಿನ್ನ ಅಪ್ಪನಿಗಿಂತಲೂ ಮೊದಲು? “
ಮಾಸ್ಟರ್ ಮತ್ತೆ ಪ್ರಶ್ನೆ ಕೇಳಿದ.
“ಸಹಜವಾಗಿ ನನ್ನ ಅಜ್ಜನದು. ಆದರೆ ಅವನೂ ತೀರಿ ಹೋಗಿದ್ದಾನೆ” ಎಂದ ರಾಜ.
“ ಯಾವ ಕಟ್ಟಡದಲ್ಲಿ ಜನ ಕೆಲವು ದಿನ ಮಾತ್ರ ಉಳಿದುಕೊಳ್ಳುತ್ತಾರೋ, ಆ ಕಟ್ಟಡವನ್ನ ಯಾವ ಹೆಸರಿನಿಂದ ಕರೆಯುತ್ತೀ? ಅರಮನೆಯಾ? ಛತ್ರನಾ ? “
ಮಾಸ್ಟರ್ ಪ್ರಶ್ನೆಗೆ ರಾಜನ ಬಳಿ ಉತ್ತರವಿರಲಿಲ್ಲ.
*********************************

