ಅಜಿತ ಕೇಶಕಂಬಳಿ : ಲೋಕಾಯತದ ಮೊದಲ ದಾರ್ಶನಿಕ

ಬುದ್ಧನ ಸಮಕಾಲೀನ ಅಜಿತ ಕೇಶಕಂಬಳಿ ಈ ಲೋಕಾಯತ ಚಿಂತನೆಯನ್ನು ಪ್ರಚುರಪಡಿಸಿದ ಮೊದಲಿಗನೆಂದು ಹೇಳಲಾಗುತ್ತೆ. ಈತ ‘ತಮ್ ಜೀವಮ್, ತಮ್ ಶರೀರಮ್’ ವಾದ ಮುಂದಿಟ್ಟವನು. ದೇಹ, ಆತ್ಮ ಎಂದೆಲ್ಲ ಬೇರೆ ಬೇರೆ ಇಲ್ಲ, ನಮ್ಮ ದೇಹದಲ್ಲಿ ನಮ್ಮ ಜೀವ ಇದೆ ಅಷ್ಟೇ – ಇದು ಈ ಸಾಲಿನ ಸರಳ ಅರ್ಥ ~ ಚೇತನಾ ತೀರ್ಥಹಳ್ಳಿ

ಆಲಿಸಿದವರು ತಲೆದೂಗುವಂತೆ ಚಾತುರ್ಯದಿಂದ ಮಾತಾಡುತ್ತಿದ್ದ ಚಾರುವಾಕರು ಮತ್ತು ಲೌಕಿಕವೊಂದೇ ಆದಿಯೂ ಆತ್ಯಂತಿಕವೂ ಆದ ಸತ್ಯವೆಂದು ಪ್ರತಿಪಾದಿಸುತ್ತಿದ್ದ ಲೋಕಾಯತರು ಭಾರತೀಯ ಚಿಂತನೆಯ ಅವಿಭಾಜ್ಯ ಅಂಗಗಳು. ಅವರನ್ನು ಹೊರಗಿಟ್ಟು ಸಾವಿರಾರುಗಟ್ಟಲೆಯ ಭಾರತೀಯ ಅರಿವಿನ ಪರಂಪರೆಯನ್ನು ಚರ್ಚಿಸಲಾಗಲೀ ಇಂದಿನ ನಮ್ಮ ಒಟ್ಟು ಅಸ್ಮಿತೆಯ ಮೂಲವನ್ನು ನಿರ್ಧರಿಸಲಾಗಲೀ ಸಾಧ್ಯವಿಲ್ಲ. ಆದರೆ ನಮ್ಮ ‘ಜನಪ್ರಿಯ’ ತತ್ವಜ್ಞಾನಿಗಳು ಚಾರ್ವಾಕರನ್ನು ಹೊರಗಿಟ್ಟು ಭಾರತವನ್ನು ಬಿಂಬಿಸಲು ಅಷ್ಟೊಂದು ಹೆಣಗುವುದೇಕೆ?

ದೇವಿಪ್ರಸಾದ್ ಚಟ್ಟೋಪಾಧ್ಯಾಯರ ಹೊರತಾಗಿ ನೋಟಬಲ್ ಅನ್ನಬಹುದಾದ ಯಾರು ಕೂಡ ಭಾರತದ ಲೋಕಾಯತ ಚಿಂತನೆಯನ್ನು ನಮ್ಮ ನೆಲದಲ್ಲಿ ಹುಟ್ಟಿದ, ಇಂದಿನ ಬಹುತೇಕ ಭಾರತೀಯರ ಮನಸ್ಥಿತಿಯ ಮೂಲಧಾತುವೆಂದು ಗಟ್ಟಿದನಿಯಲ್ಲಿ ಹೇಳಲು ಹಿಂಜರಿಯುವುದೇಕೆ?ಊಹಿಸಬಹುದಾದ ಒಂದು ಕಾರಣ; ಲೋಕಾಯತ ಚಿಂತನೆಯನ್ನು ಮುನ್ನೆಲೆಯಲ್ಲಿ ಚರ್ಚಿಸಿದರೆ ಭಾರತಕ್ಕೆ ಅಂಟಿಸಲಾಗಿರುವ ಆಧ್ಯಾತ್ಮಿಕ ಪ್ರಭಾವಳಿ ಮಸುಕಾಗುತ್ತದೆ ಎಂದಿರಬಹುದು. ಇದು ಒಂದು ರೀತಿಯಲ್ಲಿ ಮೂಲದ ನಿರಾಕರಣೆ; ತಮ್ಮದಲ್ಲದ ಗುರುತನ್ನು ಬಲವಂತವಾಗಿ ಹೇರಿಕೊಳ್ಳುವ ಪ್ರಯತ್ನ.

ಬುದ್ಧನ ಸಮಕಾಲೀನ ಅಜಿತ ಕೇಶಕಂಬಳಿ, ಲೋಕಾಯತ ಚಿಂತನೆಯನ್ನು ಪ್ರಚುರಪಡಿಸಿದ ಮೊದಲಿಗನೆಂದು ಹೇಳಲಾಗುತ್ತೆ. ಈತ ‘ತಮ್ ಜೀವಮ್, ತಮ್ ಶರೀರಮ್’ ವಾದ ಮುಂದಿಟ್ಟವನು. ದೇಹ, ಆತ್ಮ ಎಂದೆಲ್ಲ ಬೇರೆ ಬೇರೆ ಇಲ್ಲ, ನಮ್ಮ ದೇಹದಲ್ಲಿ ನಮ್ಮ ಜೀವ ಇದೆ ಅಷ್ಟೇ – ಇದು ಈ ಸಾಲಿನ ಸರಳ ಅರ್ಥ.

ಅಜಿತ, “ಹೋಮ ಹವನಗಳಿಂದಾಗಲೀ ದಾನ ಧರ್ಮಗಳಿಂದಾಗಲೀ ಸ್ವರ್ಗ ಸಿಗುತ್ತದೆ ಅನ್ನುವುದೆಲ್ಲ ಸುಳ್ಳು. ಸತ್ಕರ್ಮ – ದುಷ್ಕರ್ಮಗಳ ಲೆಕ್ಕಗಳೂ ಪೊಳ್ಳು. ಅಂಥದೆಲ್ಲ ಏನೂ ಇಲ್ಲ. ಇರುವುದೊಂದೇ ದೇಹ, ಅದರಲ್ಲಿ ಜೀವ ಇದ್ದಷ್ಟು ಕಾಲ ಜೀವನ. ಆಮೇಲೆ ಅದೊಂದು ಹೆಣವಾಗಿ, ಕೊಳೆತು ಮಣ್ಣಲ್ಲಿ, ನೀರಲ್ಲಿ, ಗಾಳಿಯಲ್ಲಿ ಬೆರೆತು ಇಲ್ಲವಾಗುವುದು” ಎಂದು ವಾದಿಸುತ್ತಿದ್ದ. ಈತ ಅದ್ಯಾವ ಪರಿಯಲ್ಲಿ ತನ್ನ ವಾದ ಮುಂದಿಡುತ್ತಿದ್ದ ಅಂದರೆ, ಅವನ ಮಾತಿಗೆ ಪ್ರತ್ಯುತ್ತರವೇ ತೋಚದೆ ಎದುರಾಳಿಗಳು ತಲೆ ತಗ್ಗಿಸಿಬಿಡುತ್ತಿದ್ದರಂತೆ. ಅದಕ್ಕೇ ಅವನು ‘ಸೋಲಿಲ್ಲದ ಚಾರ್ವಾಕ’ನಾಗಿ, ‘ಅಜಿತ’ – ಅಂದರೆ ಯಾರಿಂದಲೂ ಗೆಲ್ಲಲಾಗದವನು ಅಂತಾಯಿತಂತೆ. ಮತ್ತೆ ಈತ, ಕೂದಲಿನ ಮೇಲಂಗಿ ತೊಡುತ್ತಿದ್ದನಂತೆ. ಅದಕ್ಕೇ ಈತನ ಅಡ್ಡ ಹೆಸರು ಕೇಶಕಂಬಳಿ ಎಂದಾಯಿತಂತೆ. ಒಟ್ಟಾರೆ ಸಾಂಪ್ರದಾಯಿಕ (ಆದರೆ ವರ್ತನೆಯಲ್ಲಿಲ್ಲದ) ಚಿಂತನೆಗೆ ಪ್ರತಿಯಾಗಿ ಅಸಾಂಪ್ರದಾಯಿಕ (ಆದರೆ ವರ್ತನೆಯಲ್ಲಿ ಹಾಸುಹೊಕ್ಕಾಗಿರುವ) ಚಿಂತನೆಯನ್ನು ಸಾರುತ್ತಿದ್ದ ಈ ವಿಲಕ್ಷಣ ವ್ಯಕ್ತಿಯನ್ನು ಆ ಕಾಲ ‘ಅಜಿತ ಕೇಶಕಂಬಳಿ’ ಎಂದು ಕರೆಯಿತು. ಮುಂದೆ ಈತನ ಭೋಗವಾದ ಅಥವಾ ಭೌತಿಕವಾದವನ್ನು ಅಭಿವೃದ್ಧಿಪಡಿಸಿದ ಲೋಕಾಯತರು ಅದನ್ನೊಂದು ದರ್ಶನವನ್ನಾಗಿ ರೂಪಿಸಿದರು.

ಇಂಥ ಮಹತ್ವದ ದಾರ್ಶನಿಕ ಅಜಿತನ ಕುರಿತು ಹೆಚ್ಚಿನ ವಿವರಗಳು ನಮ್ಮ ಭಾರತೀಯ ಕೃತಿಗಳಲ್ಲಿ ಬಹಳ ಬಹಳ ಕಡಿಮೆ. ಬೆರಳೆಣಿಕೆ ಗ್ರಂಥಗಳಲ್ಲಿ ಉಲ್ಲೇಖ ಸಿಕ್ಕಾವು (ಈತನ ಬಗ್ಗೆ ಅಧಿಕೃತ ವಿವರಣೆಯ ಆಕರ ಸಿಕ್ಕಿದ್ದು ಪೂರ್ವ ಏಷ್ಯಾದ ಪಠ್ಯಗಳಲ್ಲಿ). ಈತನ ಚಿತ್ರ, ಶಿಲ್ಪ ಇತ್ಯಾದಿಗಳ ನಿರೀಕ್ಷೆಯಂತೂ ಮಾಡುವುದೇ ಬೇಡ.

ಇಂಥಾ ಭಾರತೀಯ ತತ್ವಶಾಸ್ತ್ರಿಗಳ ಪಕ್ಷಪಾತಕ್ಕೆ ಗುರಿಯಾಗಿ ಹೊರಗಿಡಲ್ಪಟ್ಟ ಅಜಿತನ ಬಗ್ಗೆ ಚೀನಾದ ಬೌದ್ಧ ಪಠ್ಯಗಳಲ್ಲಿ ಒಂದಷ್ಟು ಉಲ್ಲೇಖಗಳು ಸಿಗುತ್ತವೆ. ಅಲ್ಲಿ ಅವನ ಹೆಸರು – ವುಶೆಂಗ್ ಫಾಹೆ ಎಂದು. ಅಲ್ಲಿನ ದಾಜು ಗುಹೆಗಳು ಮತ್ತು ಕಿಜಿಲ್ ಗುಹೆಗಳಲ್ಲಿರುವ ಬೌದ್ಧ ಭಿತ್ತಿ ಶಿಲ್ಪಗಳು ಮತ್ತು ಚಿತ್ರಗಳಲ್ಲಿ ಅಜಿತ ಕೇಶಕಂಬಳಿಯ ಚಿತ್ರಣವಿದೆ.

ಮುಖ್ಯವಾಗಿ ಚೀನಾದಲ್ಲಿ, ಉಳಿದಂತೆ ಜಪಾನ್, ಥಾಯ್ ಮತ್ತು ಬರ್ಮಾದ ಬದ್ಧ ಪಠ್ಯಗಳಲ್ಲಿ ಅಜಿತ ಕೇಶಕಂಬಳಿಯ ಚರ್ಚೆ ಇದೆ. ಚೀನಾದ ಎರಡು ಮುಖ್ಯ ಬೌದ್ಧ ಗುಹೆಗಳಲ್ಲಿನ ಶಿಲ್ಪ/ಚಿತ್ರಗಳಲ್ಲಿ ಬುದ್ಧನ ಸಮಕಾಲೀನರಾದ 6 ಅಸಾಂಪ್ರದಾಯಿಕ ಗುರುಗಳು ಅನ್ನುವ ಶೀರ್ಷಿಕೆಯಲ್ಲಿ ಅಜಿತನನ್ನೂ ಸೇರಿಸಲಾಗಿದೆ. ಇಲ್ಲಿ, ಅಸಾಂಪ್ರದಾಯಿಕ ಪದ ಬಳಕೆ – ಬೌದ್ಧ ಸಂಪ್ರದಾಯದ ಹೊರತಾದ ಅನ್ನುವ ಅರ್ಥದಲ್ಲಿ. ಈ ಆರರಲ್ಲಿ ಉಳಿದ ಐವರು: ಪೂರ್ಣ ಕಶ್ಯಪ, ಮಕ್ಕಲಿ ಗೋಸಾಲ, ಪಕುಧ ಕಚ್ಚಾಯನ, ಸಂಜಯ ಬೆಲತ್ತಿಪುತ್ತ ಮತ್ತು ನಿಗಂತ ನಾತಪುತ್ತ (ಮಹಾವೀರ).

ಪೂರ್ವ ಏಷ್ಯಾದಲ್ಲಿ ಬೌದ್ಧೀಯತೆಯ ಅಧ್ಯಯನದ ಜೊತೆಗೆ, ಬುದ್ಧ ಧರ್ಮವನ್ನು ವಿಶೇಷವಾಗಿಸುವ ಅಥವಾ ವಿಭಿನ್ನವಾಗಿಸುವ ಕಾರಣಗಳನ್ನು ಅರಿಯಲಿಕ್ಕಾಗಿ ಮತ್ತು ವಿಶ್ಲೇಷಿಸಲಿಕ್ಕಾಗಿ ಬುದ್ಧನ ಸಮಕಾಲೀನ ಗುರುಗಳ / ಚಿಂತನೆಗಳ ಅಧ್ಯಯನ ರೂಢಿ ಮೊದಲಾಯಿತು. ಅದರಲ್ಲೂ ಸಾಮಾನ್ಯ ಎದುರಾಳಿಯನ್ನು (ವರ್ಣ ಶ್ರೇಣೀಕರಣ ಮತು ಕರ್ಮ ಸಿದ್ಧಾಂತದ) ವೈದಿಕ ಚಿಂತನೆಯನ್ನು ಎದುರಿಸುವ ವಾರಗೆಯ ಚಿಂತಕರ ಬಗ್ಗೆ ಬೌದ್ಧರಿಗೆ ಕುತೂಹಲದ ಕಣ್ಣು. ಆದ್ದರಿಂದಲೇ ಬೌದ್ಧ ಪರಂಪರೆಯ ದೃಶ್ಯ ದಾಖಲೆಗಳಲ್ಲಿ ಬೌದ್ಧೇತರ ಅವೈದಿಕ ಗುರುಗಳಿಗೂ ಜಾಗ ದೊರಕಿತು.

ಇನ್ನು, ನಮ್ಮವರು ಯಾಕೆ ಇಂಥ ಅವಕಾಶ ಕೊಡಲಿಲ್ಲ ಅನ್ನುವ ಪ್ರಶ್ನೆಗೆ ಉತ್ತರ, ಭೂಮಿಯಲ್ಲಿ ಹುದುಗಿಹೋದ ಅಥವಾ ಭೂಮಿಯ ಮೇಲೇ ವಿರೂಪಗೊಂಡು ನಿಂತಿರುವ ಬೌದ್ಧ ವಿಹಾರಗಳಲ್ಲಿ ಉತ್ತರ ದೊರೆಯಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.