ಎಳೆ ಬಿಸಿಲಿನ ಸುಖ ಮತ್ತು ಸಾಪೇಕ್ಷ ಸತ್ಯ । ಕತೆ ಜೊತೆ ಕಾಡು ಹರಟೆ #15

ಆದ್ರಿಂದ್ಲೇ ಬಹುಶಃ ಸತ್ಯವನ್ನ ಹೇಳೋಕೆ ಆಗೋದಿಲ್ಲ ಅಂತ ಪ್ರಾಚೀನ ಕಾಲದ ದಾರ್ಶನಿಕರು ಹೇಳಿರೋದು. ಇದರ ಅರ್ಥ ಬಹುಶಃ ಸತ್ಯವನ್ನ ಬಣ್ಣಿಸೋಕೆ ಪದಗಳಿಲ್ಲ ಅಂತಲ್ಲ. ಸತ್ಯ ಸಾಪೇಕ್ಷ ಅನ್ನುವ ಕಾರಣದಿಂದ. ಸತ್ಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರೋದ್ರಿಂದ, ಸತ್ಯ ಅಂದ್ರೆ ಇಂಥದ್ದೇ ಅಂಥ ಅಧಿಕೃತವಾಗಿ ಹೇಳಲು ಸಾಧ್ಯವಿಲ್ಲ ಅಂತ. । ಚೇತನಾ ತೀರ್ಥಹಳ್ಳಿ

ಚೀನಾದಲ್ಲಿ ಚೌ ಆಡಳಿತ ಕಾಲದಲ್ಲಿ ಸುಂಗ್ ಹೆಸರಿನ ಹಳ್ಳಿಲಿ ಒಬ್ಬ ರೈತ ಇದ್ದ, ಅವ್ನು ಯಾವಾಗ್ಲೂ ಒರಟಾದ ಸೆಣಬಿನ ಬಟ್ಟೆ ಮಾತ್ರ ತೊಟ್ಕೋತ್ತಿದ್ದ. ಚಳಿಗಾಲದಲ್ಲೂ ಅವ್ನು ಬೇರೆ ಬಟ್ಟೆ ಹಾಕ್ಕೊಳ್ತಾ ಇರ್ಲಿಲ್ಲ. ಗದ್ದೇಲಿ ಹೊಲ ಉಳುವಾಗ ಬಿಸಿಲಲ್ಲಿ ತನ್ನ ಮೈ ಬೆಚ್ಚಗೆ ಮಾಡ್ಕೊಳ್ತಿದ್ದ.

ದೊಡ್ ದೊಡ್ಡ ಅರಮನೆ, ಚಳಿಕಾಯಿಸೋ ಅಗ್ಗಿಷ್ಟಿಕೆ ಗೂಡು, ರೇಷ್ಮೆ ಬಟ್ಟೆ, ನರಿದೋ ತೋಳದ್ದೋ ತುಪ್ಪಳದ ಕೋಟು, ಇವೆಲ್ಲ ಇರತ್ತೆ ಅಂತಾನೇ ಅವ್ನಿಗೆ ಗೊತ್ತಿರಲಿಲ್ಲ. ಒಂದಿನ ಅವ್ನು ತನ್ನ ಹೆಂಡ್ತಿ ಹತ್ರ, “ಎಳೆ ಬಿಸಿಲಲ್ಲಿ ಬೆನ್ನು ಕಾಯಿಸ್ಕೊಳೋದು ಎಂಥಾ ಸುಖ ಅಂತ ತುಂಬಾ ಜನಕ್ಕೆ ಗೊತ್ತೇ ಇಲ್ಲ. ಇದನ್ನ ಹೋಗಿ ದೊರೆ ಹತ್ರ ಹೇಳ್ತೀನಿ. ಇಷ್ಟೊಳ್ಳೆ ವಿಚಾರ ಹೇಳಿದ್ದಕ್ಕೆ ಅವ್ನು ನಂಗೆ ಬಹುಮಾನ ಕೊಟ್ರೂ ಕೊಡ್ಬಹುದು” ಅಂದ. ಅಷ್ಟೇ ಅಲ್ಲ, ದೊರೆನ ಭೇಟಿ ಮಾಡಕ್ಕೆ ಅವಕಾಶ ಕೊಡ್ಸು ಅಂತ ಊರಿನ್ ಶ್ರೀಮಂತ ವ್ಯಾಪಾರಿ ಹತ್ರ ಹೋಗೂಬಿಟ್ಟ.

ಆ ಶ್ರೀಮಂತ ಅವ್ನು ಹೇಳಿದ್ದೆಲ್ಲ ಕೇಳಿ, “ನಿನ್ನನ್ ನೋಡಿ ನಮ್ಮಪ್ಪ ಹೇಳಿದ್ ಕತೆ ನೆನಪಾಯ್ತು. ಒಂದ್ ಸಲ ಒಬ್ಬಂಗೆ ಹಬೆಯಾಡೋ ಹದ ಬೆಂದ ಬೀನ್ಸ್, ಸುಟ್ಟ ಗೆಣಸು, ಖಾರ ಮಸಾಲೆ ಹಚ್ಚಿದ ಬಾತುಕೋಳಿ ಮಾಂಸ – ಸ್ವರ್ಗ ಸುಖ ಅನಿಸಿಬಿಟ್ಟಿತ್ತು. ಇನ್ಮೇಲೆ ಊರಿಗೆ ಇದೇ ಆಹಾರ ಆಗ್ಬೇಕು ಅಂತ ಶಿಫಾರಸು ಮಾಡೋಕೆ ಊರಿನ ಮುಖಂಡನ ಹತ್ರ ಹೋದ. ಆ ಮುಖಂಡ ಎಲ್ಲಿ ನೋಡೇ ಬಿಡೋಣ ಅಂತ ಅವನ್ನ ತಿನ್ನೋಕೆ ಹೋದಾಗ ಬಾಯೆಲ್ಲ ಸುಟ್ಟು, ಖಾರ ಅತಿಯಾಗಿ ಒದ್ದಾಡೋ ಪರಿಸ್ಥಿತಿ ಬಂದುಬಿಡ್ತು. ಆಮೇಲೆ ಹೊಟ್ಟೆನೋವು ಶುರುವಾಯ್ತು. ಕೊನೆಗೆ ಆ ಮನುಷ್ಯ ಊರಿನವರ ಕೋಪಕ್ಕೆ ಗುರಿಯಾಗ್ಬೇಕಾಯ್ತು” ಅಂದ.

ಶ್ರೀಮಂತನ ಮಾತು ರೈತನಿಗೆ ಅರ್ಥವಾಯ್ತು. ಸುಮ್ಮನೆ ಮನೆಗೆ ವಾಪಸ್ ಬಂದ.

ನಮ್ದೇ ಕತೆ ತಾನೆ ಇದು? ನಾವೂ ಆ ರೈತನ ಥರಾನೇ!

ಎಳೆ ಬಿಸಿಲು ಮೈಗೆ ಸೋಕೋದು ಹಿತವೇನೋ ಹೌದು. ಆದ್ರೆ ಅದು ಎಲ್ರಿಗೂ ಎಲ್ಲಾ ಹೊತ್ತೂ ಹಾಗೆ ಅನಿಸ್ಲೇಬೇಕು ಅಂತೇನಿಲ್ಲ. ಜನ ತಮ್ಮ ಲೈಫ್ ಸ್ಟೈಲಿಗೆ, ಉದ್ಯೋಗಕ್ಕೆ, ಅನಿವಾರ್ಯಕ್ಕೆ ತಕ್ಕ ಹಾಗೆ ಇಷ್ಟಾನಿಷ್ಟಗಳನ್ನ ಬೆಳೆಸ್ಕೊಂಡಿರ್ತಾರೆ. ಕಂಫರ್ಟ್‌ಗಳನ್ನ ರೂಢಿಸ್ಕೊಂಡಿರ್ತಾರೆ. ಒಬ್ರಿಗೆ ನಡ್ಕೊಂಡ್ ಹೋಗೋದೇ ಸುಖ ಆದ್ರೆ ಒಬ್ರಿಗೆ ಆಟೋ ಬೇಕೇಬೇಕು. ಒಬ್ರಿಗೆ ಟ್ರೈನಲ್ಲಿ ಪ್ರಯಾಣ ಅರಾಮ್ ಅನಿಸಿದ್ರೆ ಇನ್ಯಾರಿಗೋ ಫ್ಲೈಟೇ ಬೇಕು. ಒಬ್ರಿಗೆ ಅಕ್ಕಿ ಅಡುಗೆ ಕಂಫರ್ಟಬಲ್ ಆದ್ರೆ ಒಬ್ರಿಗೆ ಗೋಧಿದು. ಹುಡುಕ್ತಾ ಹೋದ್ರೆ ಅವರವರ ಕಂಫರ್ಟ್‌ನ ಪುಷ್ಟೀಕರಿಸೋ ಲಾಜಿಕ್ ಕೂಡ ಸಿಗ್ತವೆ. ಅಕ್ಕಿ ಒಳ್ಳೇದು ಅನ್ನೋ ತೀರ್ಮಾನವನ್ನ ಹಿಡ್ಕೊಂಡು ಲಾಜಿಕ್ ಹುಡುಕಿದ್ರೆ ಅದನ್ನ ಸಾಬೀತುಪಡಿಸೋ ಪುರಾವೆಗಳೇ ಸಿಗ್ತವೆ. ಕೆಟ್ಟದ್ದು ಅಂತ ತೀರ್ಮಾನ ಮಾಡ್ಕೊಂಡು ಹುಡುಕ್ತಾ ಹೋದ್ರೆ ಅಂಥವೇ ಸಿಗ್ತವೆ.

ಆದ್ರೆ ನಾವು ಹಾಗಲ್ಲ. ನಾವು ಕಂಡುಕೊಂಡಿದ್ದೇ ಶ್ರೇಷ್ಠ, ನಾವು ಕಂಡುಕೊಂಡಿದ್ದೇ ಸತ್ಯ, ನಾವು ಅದನ್ನ ಪ್ರಯೋಗ ಮಾಡಿದೀವಿ, ಪರೀಕ್ಷೆ ಮಾಡಿದೀವಿ, ಸಾಬೀತು ಮಾಡಿದೀವಿ ಸೋ ಅದನ್ನೇ ಮತ್ತೊಬ್ರೂ ಮಾಡ್ಲಿ ಅಂತ ಬಯಸ್ತೀವಿ. ಅದು ಮನೆಮದ್ದು ಇರಬಹುದು, ಆಚಾರ ವಿಚಾರ ಇರಬಹುದು, ಆಹಾರ ವಿಹಾರ ಇರಬಹುದು, ಡಯೆಟ್ ಎಕ್ಸರ್ಸೈಸ್‌ಗಳೇ ಇರಬಹುದು. ನಮಗೆ ವರ್ಕೌಟ್ ಆಗಿದೆ, ನಮಗೆ ಸರಿ ಅನಿಸಿದೆ, ಮತ್ತೊಬ್ಬರಿಗೂ ಆಗೇ ಆಗುತ್ತೆ ಅನ್ನುವ ನಂಬಿಕೆ ನಮ್ಮದು. ಇದರ ಹಿಂದೆ ಬಹುತೇಕ ಒಳ್ಳೆಯ ಉದ್ದೇಶ ಇರುತ್ತೆ, ಕಾಳಜಿ ಇರುತ್ತೆ ನಿಜ. ಆದರೆ ಒಬ್ಬರಿಗೆ ಔಷಧ ಆಗಿದ್ದು ಮತ್ತೊಬ್ಬರಿಗೆ ವಿಷವಾಗಬಹುದು ಅನ್ನುವ ಎಚ್ಚರಿಕೆ ಇಲ್ಲದೆ ಹೋದರೆ, ಈ ಕಾಳಜಿಯೇ ಕೇಡಾಗಿ ಬದಲಾಗಿಬಿಡುತ್ತೆ.

ಆದ್ರಿಂದ್ಲೇ ಬಹುಶಃ ಸತ್ಯವನ್ನ ಹೇಳೋಕೆ ಆಗೋದಿಲ್ಲ ಅಂತ ಪ್ರಾಚೀನ ಕಾಲದ ದಾರ್ಶನಿಕರು ಹೇಳಿರೋದು. ಇದರ ಅರ್ಥ ಬಹುಶಃ ಸತ್ಯವನ್ನ ಬಣ್ಣಿಸೋಕೆ ಪದಗಳಿಲ್ಲ ಅಂತಲ್ಲ. ಸತ್ಯ ಸಾಪೇಕ್ಷ ಅನ್ನುವ ಕಾರಣದಿಂದ. ಸತ್ಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರೋದ್ರಿಂದ, ಸತ್ಯ ಅಂದ್ರೆ ಇಂಥದ್ದೇ ಅಂಥ ಅಧಿಕೃತವಾಗಿ ಹೇಳಲು ಸಾಧ್ಯವಿಲ್ಲ ಅಂತ.

ಆದ್ರಿಂದ, ನಮಗೇನು ಸತ್ಯ ಅನಿಸುತ್ತೋ ಅದನ್ನ “ನಂಗೆ ಹೀಗನಿಸಿದೆ. ನನ್ನ ಪಾಲಿಗೆ ಇದು ಒಳಿತಾಗಿ ಸಾಬೀತಾಗಿದೆ. ನಂಗೆ ಇದು ಕಂಫರ್ಟ್ ಕೊಡ್ತಿದೆ. ಬೇಕಿದ್ರೆ ನೀವೂ ಒಮ್ಮೆ ಟ್ರೈ ಮಾಡಿ ನೋಡಿ” ಅನ್ನುವ ವಿವೇಕ ಒಳ್ಳೆಯದು. ಇದು ಸಿದ್ಧಾಂತಗಳ ವಿಷಯದಲ್ಲೂ ಅಷ್ಟೇ, ಮತ – ಧರ್ಮ – ಪಂಥಗಳ ವಿಷಯದಲ್ಲೂ ಅಷ್ಟೇ.

ಬುದ್ಧನಂಥಾ ಬುದ್ಧನೇ, “ನಾನು ಹೇಳಿದ್ದೇ ಆತ್ಯಂತಿಕ ಅಲ್ಲ. ನೀವ್ಯಾರೂ ನನ್ನನ್ನ ಅನುಸರಿಸಬೇಕಿಲ್ಲ. ನಿಮಗಿದು ಸರಿ ಅನಿಸಿದ್ರೆ ಅಳವಡಿಸಿಕೊಳ್ಳಬಹುದು” ಅಂದಿದ್ದ. ಕೃಷ್ಣ ಕೂಡಾ ಅರ್ಜುನನಿಗೆ ಹೇಳೋದೆಲ್ಲ ಹೇಳಿ “ಯಥೇಚ್ಛಸಿ ತಥಾ ಕುರು” ಅಂದ. ಅಂದ್ರೆ, ನಾನು ಹೇಳೋದೆಲ್ಲ ಹೇಳಿಯಾಗಿದೆ, ನಿನಗೇನು ಅನಿಸುತ್ತೋ ಅದನ್ನೇ ಮಾಡು ಅಂತ.

ಇಂಥಾ ವಿವೇಚನೆ ಜ್ಞಾನಿಗಳಿಗೆ ಮಾತ್ರ ಸಾಧ್ಯವಾಗೋದಲ್ವಾ? ಆ ಶಿಖರವನ್ನೇರೋ ಮೊದಲ ಹೆಜ್ಜೆ, ನನ್ನ ಅನಿಸಿಕೆಯೇ ಪರಮಸತ್ಯವಲ್ಲ ಅಂತ ಒಪ್ಪಿಕೊಳ್ಳುವ ವಿನಯವಂತಿಕೆ.  

ಉಳಿದಂತೆ;
ಶ್ರಾವಣದ ಎಳೆಬಿಸಿಲು
ನನಗಂತೂ ಹಿತವೇ,
ಈ ಹೊತ್ತು
!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.