ಇಪ್ಪತ್ನಾಲ್ಕು ಗಂಟೆ ತೆಗೆದುಕೊಳ್ಳಿ ಮತ್ತು ನೀವು ಗೊತ್ತಿದ್ದೂ ಮಾಡುತ್ತಿರುವ ವಿಧ್ವಂಸಕ ಕೃತ್ಯಗಳನ್ನು (sabotage) ವಿವರವಾಗಿ ಪಟ್ಟಿ ಮಾಡಿ. ಪ್ರತಿಯೊಂದು ಕೃತ್ಯವನ್ನು ವಿವಿಧ ಕೋನಗಳಿಂದ ಗಮನಿಸಿ, ಪರಿಶೀಲಿಸಿ ಮತ್ತು ಈ ಯಾವುದೂ ಪುನರಾವರ್ತನೆಗೊಳ್ಳದಂತೆ ನೋಡಿಕೊಳ್ಳಿ. ಆಗ ಇದು ನಿಮ್ಮ ಧ್ಯಾನವಾಗುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾರು ಅವರು
ನನ್ನ ಆಟ ಕೆಡಿಸುತ್ತಿರುವವರು?
ನಾನು ಬಲಕ್ಕೆ ಬಿಟ್ಟ ಬಾಣ
ಎಡಕ್ಕೆ ಹೇಗೆ ಬಂತು?
ಜಿಂಕೆಯ ಬೆನ್ನುಹತ್ತಿದವನ
ಹಂದಿ ಯಾಕೆ ಅಟ್ಟಿಸಿಕೊಂಡು ಬಂತು?
ಅಂಗಡಿಗೆ ಹೊರಟವನ ಕಾಲುಗಳನ್ನ
ಜೈಲಿನತ್ತ ಹೊರಳಿಸಿದವರು ಯಾರು?
ಕೆಡವಲಿಕ್ಕೆ ಎಂದು ತೆರೆದ ಗುಂಡಿಯಲ್ಲಿ
ನಾನೇ ಜಾರಿ ಬಿದ್ದದ್ದು ಹೇಗೆ?
ಯಾರಿಗೋ ನಮ್ಮ ಆಟ ಹಿಡಿಸುತ್ತಿಲ್ಲ.
ಅದಕ್ಕೇ, ನಮಗೆ ಇರಲೇಬೇಕು
ನಮ್ಮ ಬೇಕುಗಳ ಬಗ್ಗೆ ಪುಟ್ಟ
ಸಂಶಯ.
-ರೂಮಿ.
ನಿಮ್ಮಿಂದ ಈ ಕೆಲಸ ಆಗುವುದಿಲ್ಲ ಎಂದು ನೀವು ಮೊದಲೇ ತೀರ್ಮಾನಿಸಿಬಿಟ್ಟರೆ, ಖಂಡಿತವಾಗಿ ಈ ಕೆಲಸ ನಿಮ್ಮಿಂದ ಸಾಧ್ಯವಾಗುವುದಿಲ್ಲ. ನಿಮ್ಮ ನಿರ್ಧಾರ ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರುವುದು. ಇದು ನಿಮ್ಮ ಮೇಲೆ ಸ್ವಯಂ ಸಲಹೆ ( auto suggestion) ಯಂತೆ ಕೆಲಸ ಮಾಡುವುದು. ಇದು ನಿಮ್ಮೊಳಗೆ ಬೀಜದಂತೆ ಕೆಲಸ ಮಾಡುವುದು. ಇದು ನಿಮ್ಮ ಇಡೀ ಬದುಕನ್ನು sabotage ಮಾಡುವುದು, ನಿಮ್ಮಿಂದ ಯಾವುದು ಸಾಧ್ಯ, ಯಾವುದು ಅಸಾಧ್ಯ ಎನ್ನುವುದನ್ನ ತೀರ್ಮಾನಿಸಲೂ ನೀವು ಅಸಮರ್ಥರಾಗುವಿರಿ. ಕೆಲಸ ಮಾಡಿದ ಮೇಲಷ್ಟೇ ಅದರ ಪರಿಣಾಮ ನಿಮಗೆ ಗೊತ್ತಾಗುವುದು. ಕೇವಲ ಬದುಕು ಮಾತ್ರ ಈ ನಿರ್ಧಾರ ಮಾಡುವುದು. ಆದ್ದರಿಂದ ಇದು ಮೂರ್ಖತನ, ಚೈಲ್ಡಿಶ್ ಆದರೆ ಕೆಲವು ಅಪ್ರಬುದ್ಧ ಸಂಗತಿಗಳು ಮುಂದುವರೆಯುತ್ತಲೇ ಇರುತ್ತವೆ. ಕ್ಯಾಸೆಟ್ ಮತ್ತೆ ಮತ್ತೆ ಅದೇ ಹಾಡು ಹಾಡುತ್ತಿರುತ್ತದೆ ಮತ್ತೆ ಇದು ಕೊನೆಗೆ ನಮ್ಮ ಹವ್ಯಾಸದ ಭಾಗವಾಗಿಬಿಡುತ್ತದೆ.
ಹೀಗೆ ಆಗದಿರುವಂತೆ ನೋಡಿಕೊಳ್ಳುವುದನ್ನ ತಪ್ಪಿಸಲು ಮೈಂಡ್ ತಂತ್ರ ಹೂಡುತ್ತಿರುತ್ತದೆ. ಒಮ್ಮೆ ನಿಮ್ಮಿಂದ ಸಾಧ್ಯವಿಲ್ಲವೆಂದು ನೀವು ನಿರ್ಧರಿಸಿದ ಮೇಲೆ ಯಾಕೆ ಚಿಂತೆ? ಯಾಕೆ ಸಂಘರ್ಷ? ಯಾಕೆ ಇಷ್ಟು ಬಿಕ್ಕಟ್ಟು? ಪ್ರಯತ್ನ? ನಿಮ್ಮಿಂದ ಸಾಧ್ಯವಿಲ್ಲ ಎನ್ನುವುದು ನಿಮಗೆ ಮೊದಲೇ ಗೊತ್ತು. ಈ ಸಂಘರ್ಷವನ್ನು ತಪ್ಪಿಸಬೇಕೆಂದು ನಿಮ್ಮ ಮೈಂಡ್ ಇದನ್ನು rationalise ಮಾಡಲು ಪ್ರಯತ್ನ ಮಾಡುತ್ತದೆ. ಮತ್ತು ಈ ಸಂಘರ್ಷವನ್ನು ನೀವು ಅವೊಯಿಡ್ ಮಾಡುವಿರಾದರೆ ನಿಮ್ಮಿಂದ ಯಾವುದೂ ಸಾಧ್ಯವಾಗುವುದಿಲ್ಲ, ಆಗ ನಿಮ್ಮ ನಿರ್ಧಾರ ಸರಿಯಾಗಿತ್ತು ಎಂದು ನೀವು ಎಂದುಕೊಳ್ಳುವಿರಿ. ಇದು ನಿಮ್ಮ ಮೈಂಡ್ ನಲ್ಲಿ ಪಕ್ಕಾಗಿ ಕುಳಿತುಬಿಡುತ್ತದೆ. ಒಂದು ಇನ್ನೊಂದನ್ನ ಗಟ್ಟಿಗೊಳ್ಳಿಸುತ್ತ ಮತ್ತೆ ಮತ್ತೆ ಪುನರಾವರ್ತನೆ ಗೊಳ್ಳುತ್ತಿರುತ್ತವೆ.
ಒಬ್ಬ ಹೆಣ್ಣು ಮಗಳು ಕಾಡಿನ ದಾರಿಯ ಮೂಲಕ ಹಾಯ್ದು ಮನೆಗೆ ವಾಪಸ್ಸಾಗುತ್ತಿದ್ದಳು. ದಾರಿಯಲ್ಲಿ ಅವಳಿಗೆ ಭಾರಿ ಮರವೊಂದನ್ನು ಗರಗಸದಿಂದ ಕತ್ತರಿಸುತ್ತಿದ್ದ ಒಬ್ಬ ಯುವಕ ಕಾಣಿಸಿದ. ಅವನ ಮೈಯಿಂದ ಬೆವರು ಧಾರಾಕಾರವಾಗಿ ಹರಿಯುತ್ತಿತ್ತು, ಅವ ತುಂಬ ಬಳಲಿದವನಂತೆ ಕಾಣಿಸುತ್ತಿದ್ದ.
“ಹುಡುಗಾ, ನೀನು ತುಂಬ ಅವಸರದಲ್ಲಿರುವಂತೆ, ತುಂಬ ಕಷ್ಟದಲ್ಲಿರುವಂತೆ ಕಾಣುತ್ತದೆ. ಬಹುಶಃ ನಿನ್ನ ಗರಗಸ ಮೊಂಡಾಗಿರಬಹುದು, ಯಾಕೆ ನೀನು ಮೊದಲು ಗರಗಸ ಹರಿತ ಮಾಡಿಕೊಳ್ಳಬಾರದು? “ ಹೆಣ್ಣು ಮಗಳು ಯುವಕನನ್ನು ಮಾತಾಡಿಸಿದಳು.
ಅವಳತ್ತ ತಿರುಗಿಯೂ ನೋಡದೆ ಆ ಯುವಕ ಉತ್ತರಿಸಿದ.
“ ಮೊದಲು ನಾನು ಈ ಮರ ಕತ್ತರಿಸಬೇಕು, ಆಮೇಲೆ ಇನ್ನೂ ಎರಡು ಮರ ಕತ್ತರಿಸುವುದಿದೆ. ಗರಗಸ ಹರಿತ ಮಾಡುತ್ತ ಕುಳಿತುಕೊಳ್ಳುವಷ್ಟು ಸಮಯ ನನ್ನ ಬಳಿ ಇಲ್ಲ.

