ಈ ವಚನದ ದೃಷ್ಟಿಯಲ್ಲಿ ಸಮತಾ ಗುಣವೇ ದೇವರು. ಸಮತಾ ಗುಣ ಏನನ್ನೂ ಯಾರನ್ನೂ ತಿರಸ್ಕರಿಸದೆ, ಯಾವ ಕಾರಣಕ್ಕೂ ಇಬ್ಭಾಗವಾಗದೆ ಒಂದೇ ಅಂದದಲ್ಲಿ ಇರುತ್ತದೆ. ದೇವರ ಅಂಥ ಗುಣ ಬೇಕು ಹಿರಿಯರಿಗೆ… । ಓ.ಎಲ್.ನಾಗಭೂಷಣ ಸ್ವಾಮಿ
ಜಾತಿ ವಿಜಾತಿಯು ನೀರ್ಗುಡಿಯ ಹೋದರೆ
ಸುಡು ಹೋಗೆಂದು ನೂಂಕಿತ್ತೆ ಆ ಜಲವು!
ಆ ಜಲದಂತಾಗಬೇಡವೆ ಹಿರಿಯರಾದವರು.
ಎನ್ನ ಮನವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ
ನಿಮ್ಮದೊಂದು ಸಮತಾಬುದ್ಧಿ ಎನ್ನನೆಂದು ಬಂದು ಪೊರ್ದಿಪ್ಪುದೊ ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನದೇವರದೇವಾ (ಸಂ.೪, ವ.೪೫೮)
[ವಿಜಾತಿ- ಅನ್ಯ ಜಾತಿ, ಕೀಳು ಎಂದು ಹೇಳಲಾಗುತ್ತಿದ್ದ ಜಾತಿ; ನೀರ್ಗುಡಿಯ-ನೀರು ಕುಡಿಯಲು; ನೂಂಕಿತ್ತೆ-ನೂಕಿತ್ತೆ; ಮನವು+ಇಚ್ಛಂದ (ಇಬ್ಭಾಗ) +ವಾಗದೆ+ಒಂದೆ+ಅಂದದಲಿ(ರೀತಿಯಲ್ಲಿ) +ಇಪ್ಪ (ಇರುವ); ಪೊರ್ದಿರ್ಪುದೊ-ಹೊಂದಿರುವುದೋ]
ಯಾವ ಜಾತಿಯವರೇ ಆಗಲಿ ನೀರು ಕುಡಿಯಲೆಂದು ಹೋದರೆ `ನೀನು ಅಯೋಗ್ಯ, ಬೇರೆಯ ಜಾತಿಯವನು ಎಂದು ಅವನನ್ನು ನೂಕುತ್ತದೆಯೇ ನೀರು? ನಿಜವಾದ ಹಿರಿಯರಾದವರು ಹಾಗೆ ಇರಬೇಕಲ್ಲವೇ? ಮನಸ್ಸು ಇಚ್ಛಂದವಾಗದೆ (ಇಬ್ಭಾಗವಾಗದೆ) ಒಂದೇ ಅಂದದಲ್ಲಿ ಇರುವಂಥ ನಿಮ್ಮ ಸಮತಾಗುಣವನ್ನು ನನ್ನ ಮನಸ್ಸು ಎಂದು ಹೊಂದೀತು.
ಈ ವಚನದ ದೃಷ್ಟಿಯಲ್ಲಿ ಸಮತಾ ಗುಣವೇ ದೇವರು. ಸಮತಾ ಗುಣ ಏನನ್ನೂ ಯಾರನ್ನೂ ತಿರಸ್ಕರಿಸದೆ, ಯಾವ ಕಾರಣಕ್ಕೂ ಇಬ್ಭಾಗವಾಗದೆ ಒಂದೇ ಅಂದದಲ್ಲಿ ಇರುತ್ತದೆ. ದೇವರ ಅಂಥ ಗುಣ ಬೇಕು ಹಿರಿಯರಿಗೆ. ನೀರು ಎಲ್ಲರ ದಾಹವನ್ನೂ ತಣಿಸುತ್ತದೆಯೇ ಹೊರತು ಬಾಯಾರಿದವರ ಜಾತಿ, ಅಂತಸ್ತು, ಒಳ್ಳೆಯತನಗಳನ್ನು ಗಮನಿಸಿ ಬೇರೆ ಬೇರೆ ರೀತಿಯಲಿ ವರ್ತಿಸುವುದಿಲ್ಲ
ನಿಸರ್ಗಕ್ಕೆ ಸಮತಾಗುಣವಿರುವುದರಿಂದಲೇ ನಾವು ಬದುಕಿದ್ದೇವೆ. ಕೇವಲ ಉತ್ತಮರಿಗಾಗಿ ಮಾತ್ರ ಹೊಳೆಯ ಹರಿಯುವುದು, ಗಾಳಿ ಬೀಸುವುದು, ಸೂರ್ಯ ಹೊಳೆಯುವುದು ಮರ ಹಣ್ಣು ಕೊಡುವುದು ಎಂದಾಗಿದ್ದರೆ ಲೋಕದ ನೂರಕ್ಕೆ ಜನ ಬದುಕಲು ಆಗುತ್ತಲೇ ಇರಲಿಲ್ಲ. ಸೇಡಿಲ್ಲದ, ಕೇಡಿಲ್ಲದ, ತಿರಸ್ಕಾರವಿಲ್ಲದ ಸಮತಾಗುಣ ನನಗೆಂದು ದೊರೆಯುತ್ತದೆ? ಸಮತಾ ಗುಣವೇ ಛಂದ; ಅದೇ ನಿಯಮ. ಛಂದ ಕೆಟ್ಟರೆ ಮನಸ್ಸು ಇಬ್ಭಾಗ; ಹಾಗಾಗದೆ ಇರುವುದೇ ಅಂದ, ನೀರಿನ ಹಾಗೆ ಸಮತೆಯನ್ನು ಹೊಂದಿರುವ ಗುಣ ನನಗೆಂದು ಬಂದೀತು ಎಂದು ಸಿದ್ಧರಾಮ ವಚನ ಕೇಳುತ್ತಿದೆ.
ನಿಸರ್ಗದಲ್ಲಿ ಸಹಜವಾಗಿಯೇ ತೋರುವ ಸಮತಾ ಗುಣ ಅನುಸರಿಸಬೇಕಾದದ್ದು, ಮೇಲು ಕೀಳುಗಳೆಂಬ ಮನುಷ್ಯ ಕಲ್ಪಿತ ಜೋಡಣೆ ತಿರಸ್ಕಾರಕ್ಕೆ ತಕ್ಕದ್ದು ಅನ್ನುವ ಧೋರಣೆ ವಚನಗಳಲ್ಲಿ ವ್ಯಕ್ತವಾಗಿದೆ. ಅಲ್ಲಮನಂಥವರು ಗುಹೇಶ್ವರನನ್ನು ತಳವಾರ ಎಂದಿರುವುದು [ಸಂ.೨, ವ. ೫೪೧] ಉಳಿಯ ಮೊನೆಯಲ್ಲಿ ಪ್ರತ್ಯಕ್ಷನಾದ ಶಿವನನ್ನು ಮಾದಾರ ಧೂಳಯ್ಯ ಇತ್ತ ಯಾಕೆ ಬಂದೆ ಕೈಲಾಸಕ್ಕೆ ಹೋಗು, ಬೇಡಿದವರಿಗೆ ಮುಕ್ತಿ ಕೊಡು, ನನ್ನ ಇಷ್ಟದೈವದ ಕರುಣೆಯಿಂದ ಬದುಕಿಕೋ ಅನ್ನುವ ಮಾತು [ಸಂ.೮, ವ.೧೧೭೧] ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು ಎಂಬ ಬಸವ ವಚನ (ಸಂ.೧,ವ ೩೪೬) ಇಂಥ ಅನೇಕ ಉದಾಹರಣೆಗಳಿವೆ.ವಚನಕಾರರು ಜಾತಿ ಎಂಬ ಕೃತಕ ವಿಂಗಡಣೆಯನ್ನು ರೂಪಕದ ದಾರಿಯಲ್ಲಿ, ಇಷ್ಟದೈವಕ್ಕೆ ಜಾತಿಯ ಹಂಗಿಲ್ಲ ಎಂಬ ವಿಚಾರವಾಗಿ, ಮೇಲು ಜಾತಿಯ ಅಹಂಕಾರ ನೀಗಿಕೊಳ್ಲುವ ಛಲವಾಗಿ ಹಲವು ಬಗೆಗಳಲ್ಲಿ ಇಲ್ಲವಾಗಿಸಲು ಹೆಣಗಿದ್ದು ಕಾಣುತ್ತದೆ.
ಮನಸು ನೀರಿನಂತೆ ಇರಬೇಕು, ಅದಕ್ಕೆ ಸಮತೆಯ ಬುದ್ಧಿಯನ್ನು ಕಲಿಸಬೇಕು ಅನ್ನುವ ಮಾತು ಜಾತಿಯನ್ನು ನೀಗಿಕೊಳ್ಳುವುದು ಬುದ್ಧಿಪೂರ್ವಕವಾಗಿ ಆಗಬೇಕಾದ ಕೆಲಸ ಅನ್ನುವ ನಿಲುವಿನಿಂದ ಮೂಡಿದೆ.
ಸಿದ್ಧರಾಮ
ವಚನ ಯುಗದ ಪ್ರಮುಖ ವಚನಕಾರರಾದ ಸಿದ್ಧರಾಮ ಸೊನ್ನಲಿಗೆಯವರು; ಅವರ ಪ್ರಯತ್ನದಿಂದ ಅದು ನಗರವಾಗಿ ಬೆಳೆದು ಸೊಲ್ಲಾಪುರವಾಯಿತು ಎಂಬ ಮಾತಿದೆ. ಅಲ್ಲಮ, ಮಹದೇವಿ ಅಕ್ಕರಂತೆ ಸಿದ್ಧರಾಮ ಕೂಡ ಶ್ರೀಶೈಲ ಮಲ್ಲಿಕಾರ್ಜುನನ ಆರಾಧಕರು.. ಅವರು ಯೋಗ ಸಾಧಕರೆಂದೂ ಪ್ರಸಿದ್ಧರು. ಸಿದ್ಧರಾಮರ ಬದುಕು, ಸಾಧನೆಗಳನ್ನು ಕುರಿತು ರಾಘವಾಂಕನು ಸಿದ್ಧರಾಮ ಚರಿತೆಯನ್ನು ಬರೆದಿದ್ದಾನೆ. ಕರ್ಮಯೋಗದ ದಾರಿಯಲ್ಲಿ ಸಾಗಿ ಭಕ್ತಿ ಮಾರ್ಗಕ್ಕೆ ಹೊರಳಿದ ಈ ವಚನಕಾರರ ೧೯೯೨ ವಚನಗಳು ಪ್ರಕಟವಾಗಿವೆ. ಅಂಕಿತ ʻಕಪಿಲಸಿದ್ಧ ಮಲ್ಲಿಕಾರ್ಜುನʼ ಮತ್ತು ಅದರ ಭಿನ್ನ ರೂಪಗಳು. ಇವರ ವಚನಗಳ ಸಂಖ್ಯೆಯನ್ನು ಕುರಿತ ಚರ್ಚೆ ಇದ್ದೇ ಇದೆ.

