ನಿಮ್ಮ ನಿರ್ಧಾರ ( Your Decision): ಓಶೋ 365 #Day 328

ಜಗತ್ತಿನ ಎಲ್ಲ ಪ್ರೇಮವನ್ನೂ ನಿಮಗೆ ಧಾರೆಯೆರೆಯಬಹುದು ಆದರೆ ನೀವು ಅಸಂತುಷ್ಟರಾಗಿಯೇ ಉಳಿಯಲು ನಿರ್ಧರಿಸಿದಾಗ, ನೀವು ಅಸಂತುಷ್ಟರಾಗಿಯೇ ಇರುತ್ತೀರಿ. ಮತ್ತು ಜನ ಯಾವ ಕಾರಣವೂ ಇಲ್ಲದೆ ಅಪಾರ ಖುಶಿಯನ್ನ ಅನುಭವಿಸಬಹುದು. ಏಕೆಂದರೆ ಖುಶಿ ಮತ್ತು ದುಃಖ ನಿಮ್ಮ ನಿರ್ಧಾರಗಳು ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ

ಪ್ರೇಮಿಯ ಖಾಸಗೀತನ
ತನ್ನ ಸುತ್ತ ಚಾಚಿಕೊಂಡಿರುವುದು
ಗೊತ್ತಾಯಿತೆಂದರೆ
ಪ್ರೇಮದಲ್ಲಿ ಮುಳುಗಿದವರಿಗೆ
ನಿದ್ದೆ ಸಾಧ್ಯವಾಗುವುದೇ ಇಲ್ಲ.

ಕೊಂಚ ಬಾಯಾರಿದ ಪ್ರೇಮಿ
ಸ್ವಲ್ಪ ಹೊತ್ತು ಮಲಗಬಹುದೇನೋ,
ಆದರೆ ಅವರಿಗೆ ನಿದ್ದೆಯಲ್ಲೂ
ನೀರಿನ ಕನಸು,
ತುಂಬಿ ಹರಿಯುವ ಹಳ್ಳದ ಪಕ್ಕ
ತಂಬಿಗೆ ತುಂಬ ನೀರು
ಅಥವಾ
ಆ ಇನ್ನೊಬ್ಬರ ಎದೆಯಿಂದ
ಚಿಮ್ಮುತ್ತಿರುವ  ಆರ್ದ್ರ ಅಂತಃಕರಣ.

ಇಡೀ ರಾತ್ರಿ
ಈ ಅಪರೂಪದ ಸಂಭಾಷಣೆಗೆ ಕಿವಿಯಾಗಿರಿ,
ಇದೊಂದೇ ಕ್ಷಣ
ನಿಮಗೆ ದಕ್ಕಬಹುದಾದದ್ದು, ದಕ್ಕಬೇಕಾದದ್ದು.

~ ರೂಮಿ

ಖುಶಿ ಮತ್ತು ದುಃಖ ನಿಮಗೆ ಮಾತ್ರ ಸಂಬಂಧಿಸಿದವು ಎನ್ನುವುದು ನಿಮಗೆ ಗೊತ್ತಾಗಲು ಬಹಳ ಸಮಯ ಬೇಕಾಗುತ್ತದೆ. ಏಕೆಂದರೆ ನಿಮ್ಮ ಮೈಂಡ್ ಗೆ ನಿಮ್ಮ ದುಃಖದ ಕಾರಣ ಇನ್ನೊಬ್ಬರು ಎಂದು ಯೋಚಿಸುವುದು ಬಹಳ ಸುಲಭ. ನಿಮ್ಮ ಮೈಂಡ್ ಅಸಾಧ್ಯ ಕಂಡಿಷನ್ ಗಳನ್ನು ಹಾಕುತ್ತ ಹೋಗುತ್ತದೆ, ಒಮ್ಮೆ ಈ ಎಲ್ಲ ಕಂಡಿಷನ್ ಗಳು ಪೂರ್ತಿಯಾದಾಗ ಮಾತ್ರ ನೀವು ಖುಶಿಯಾಗಿರುವುದು ಸಾಧ್ಯ ಎಂದು ನಿಮ್ಮನ್ನು ನಂಬಿಸುತ್ತದೆ. ಇಂಥ ಕುರೂಪಿ ಜಗತ್ತಿನಲ್ಲಿ, ಕುರೂಪಿ ಜನರೊಡನೆ, ಕುರೂಪಿ ಸನ್ನಿವೇಶಗಳಲ್ಲಿ ಖುಶಿಯಾಗಿರುವುದು ಹೇಗೆ ಸಾಧ್ಯ ಎಂದು ಮೈಂಡ್ ನಿಮ್ಮನ್ನು ಪ್ರಶ್ನೆ ಮಾಡುತ್ತದೆ.

ನೀವು ನಿಮ್ಮನ್ನು ಸರಿಯಾಗಿ ಗಮನಿಸಿದಾಗ ನಿಮಗೆ ನಿಮ್ಮ ಬಗ್ಗೆ ನಗು ಉಕ್ಕುತ್ತದೆ. ಇದು ಹಾಸ್ಯಾಸ್ಪದ ಬಹಳ ಹಾಸ್ಯಾಸ್ಪದ. ನಾವು ಮಾಡುತ್ತಿರುವುದೆಲ್ಲ ಅಸಂಬದ್ಧ. ಹಾಗೆ ಮಾಡಲು ಯಾರೂ ನಮ್ಮನ್ನು ಒತ್ತಾಯಿಸುತ್ತಿಲ್ಲವಾದರೂ ನಾವು ಹಾಗೆ ಮಾಡುತ್ತಲೇ ಇದ್ದೇವೆ – ಮತ್ತು ಸಹಾಯಕ್ಕಾಗಿ ಅಂಗಲಾಚುತ್ತಿದ್ದೇವೆ. ಆದರೆ ನೀವು ಇಂಥ ಸನ್ನಿವೇಶದಿಂದ ಸುಲಭವಾಗಿ ಹೊರಗೆ  ಬರಬಹುದು ; ಏಕೆಂದರೆ ಅಸಂತುಷ್ಟರಾಗಿಯೇ ಉಳಿಯುವ ಆಟವನ್ನು ಆಡುತ್ತಿರುವವರು ನೀವು ಮತ್ತು ಸಹಾಯ ಹಾಗು ಅನುಕಂಪಕ್ಕಾಗಿ ಹಾತೊರೆಯುತ್ತಿರುವವರು ಕೂಡ ನೀವು.

ನೀವು ಖುಶಿಯಾಗಿರುವಾಗ, ಪ್ರೇಮ ನಿಮ್ಮತ್ತ ಹರಿದು ಬರುತ್ತದೆ…. ಅದಕ್ಕಾಗಿ ನೀವು ಅಂಗಲಾಚುವ ಅವಶ್ಯಕತೆ ಇಲ್ಲ. ಇದು ಬಹಳ ಮೂಲಭೂತವಾದ ನಿಯಮ. ಹೇಗೆ ನೀರು ಮೇಲಿನಿಂದ ಕೆಳಗೆ ಹರಿಯುತ್ತದೆಯೋ ಹಾಗೆ ಪ್ರೇಮ ಖುಶಿಯತ್ತ ಹರಿದು ಬರುತ್ತದೆ.

ಮುಲ್ಲಾ ನಸ್ರುದ್ದೀನ ನಿಗೆ ಕರಡಿಗಳೆಂದರೆ ಭಾರಿ ಭಯ. ಒಂದು ದಿನ ರಾಜ್ಯದ ಸುಲ್ತಾನ ಕರಡಿ ಬೇಟೆಗೆ ತನ್ನೊಡನೆ ಬರುವಂತೆ ನಸ್ರುದ್ದೀನ ನನ್ನು ಆಹ್ವಾನಿಸಿದ.

ತನ್ನ ಕರಡಿಗಳ ಕುರುತಾದ  ಭಯವನ್ನು ಸುಲ್ತಾನನಿಗೆ ಹೇಗೆ ಹೇಳುವುದು ಎಂದು ಗೊತ್ತಾಗದೆ, ನಸ್ರುದ್ದೀನ್ ಹೆದರಿಕೆಯಿಂದಲೇ ಸುಲ್ತಾನನಿಗೆ ಒಪ್ಪಿಗೆ ಕೊಟ್ಟುಬಿಟ್ಟ.

ಬೇಟೆ ಮುಗಿಸಿ ಹಿಂತಿರುಗಿದ ನಸ್ರುದ್ದೀನ ನನ್ನು ಅವನ ಗೆಳೆಯ ಪ್ರಶ್ನೆ ಮಾಡಿದ, “ ಹೇಗಿತ್ತು ಕರಡಿ ಬೇಟೆ? “

“ ಅದ್ಭುತವಾಗಿತ್ತು“ ನಸ್ರುದ್ದೀನ್ ಉತ್ತರಿಸಿದ.

“ ಹೌದಾ, ಎಷ್ಟು ಕರಡಿಗಳನ್ನು ಬೇಟೆಯಾಡಿದಿರಿ? “ ಗೆಳೆಯ ತಿರುಗಿ ಪ್ರಶ್ನೆ ಮಾಡಿದ.

“ ಒಂದೂ ಇಲ್ಲ “ ಉತ್ತರಿಸಿದ ನಸ್ರುದ್ದೀನ.

“ ಮತ್ತೆ ಯಾಕೆ ಹೇಳಿದೆ? ಬೇಟೆ ಅದ್ಭುತವಾಗಿತ್ತು  ಅಂತ? “ ಗೆಳೆಯನ ಪ್ರಶ್ನೆ.

“ ಕರಡಿಗಳನ್ನು ಕಂಡರೆ ಹೆದರಿ ಸಾಯುವವನಿಗೆ ಒಂದು ಕರಡಿಯೂ ಕಾಣಿಸಲಿಲ್ಲವೆಂದರೆ , ಅದು ಅವನಿಗೆ ಅದ್ಭುತವೇ ಅಲ್ವ “ ಮುಲ್ಲಾ ನಗುತ್ತ ಉತ್ತರಿಸಿದ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.