ವಚನ ವೈವಿಧ್ಯ#5 : ಇದು ಯಾರ ಮೈ-ಜೇಡರ ದಾಸಿಮಯ್ಯ

ಜಗತ್ತಿನ ಇಚ್ಛೆಯಂತೆ ನಡೆಯಬೇಕೆನ್ನುವ ಬಲವಂತ, ದೇವರ ಆದರ್ಶದಂತೆ ಇರಲಾಗದ ಯಾತನೆ ಇವುಗಳ ಇಬ್ಬಂದಿಯೇ ದಾಸಿಮಯ್ಯನವರಿಗೆ ಮುಖ್ಯವಾದಂತೆ ತೋರುತ್ತದೆ… । ಓ.ಎಲ್.ನಾಗಭೂಷಣ ಸ್ವಾಮಿ

ಎನ್ನೊಡಲಾದಡೆ ಎನ್ನಿಚ್ಛೆಯಲ್ಲಿರದೆ
ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ
ಅದು ಎನ್ನೊಡಲೂ ಅಲ್ಲ
ನಿನ್ನೊಡಲೂ ಅಲ್ಲ
ಅದು ನೀ ಮಾಡಿದ ಜಗದ ಬಿನ್ನಾಣದೊಡಲು
ಕಾಣಾ
ರಾಮನಾಥ

(ಬಿನ್ನಾಣ-ವಿಜ್ಞಾನ ಎಂಬ ಪದದ ತದ್ಭವ, ತಿಳಿವಳಿಕೆ ಎಂಬ ಅರ್ಥ; ಚೆಲುವು, ಲಾವಣ್ಯ; ಹೆಣ್ಣು ತೋರುವ ಪ್ರಚೋದನಕಾರೀ ನಡವಳಿಕೆ)

ಇದು ನನ್ನ ಮೈಯಾದರೆ ನನ್ನ ಮಾತು ಕೇಳಬೇಕು, ಕೇಳುತ್ತಿಲ್ಲ. ದೇವರೇ, ಇದು ನಿನ್ನ ಮೈಯಾದರೆ ನಿನ್ನ ಮಾತು ಕೇಳುತ್ತಿರಬೇಕು. ಕೇಳುತ್ತಿಲ್ಲವಲ್ಲಾ. ಇದು ನನ್ನ ಒಡಲೂ ಅಲ್ಲ, ನಿನ್ನ ಒಡಲೂ ಅಲ್ಲ, ಈ ನೀನು ಮಾಡಿದ ಲೋಕದ ಬಿನ್ನಾಣಕ್ಕೆ ಸಿಕ್ಕಿಬಿದ್ದ ಒಡಲು. – ಜೇಡರ ದಾಸಿಮಯ್ಯನವರ ಈ ಮಾತು ನಮ್ಮ ವ್ಯಕ್ತಿತ್ವಗಳು ಆದರ್ಶಗಳಿಂದ ಅಲ್ಲ, ನಮ್ಮ ಸುತ್ತಲ ವಾಸ್ತವ ಪರಿಸರದಿಂದ ರೂಪುಗೊಳ್ಳುತ್ತದೆ ಅನ್ನುವ ನಿಲುವಿನಿಂದ ಮೂಡಿದಂತಿದೆ. ಬಿನ್ನಾಣ ಎಂಬ ಮಾತಿಗೆ ತೋರಿಕೆಯ ವೈಭವ, ಆಕರ್ಷಣೆ ಎಂಬ ಅರ್ಥಗಳಿವೆ. ಅದು ವಿಜ್ಞಾನ ಎಂಬ ಮಾತಿನ ತದ್ಭವವೂ ಹೌದು. ಈ ಲೋಕದ ವ್ಯವಹಾರದ ವಿಜ್ಞಾನ ನಮ್ಮ ನಮ್ಮ ವ್ಯಕ್ತಿತ್ವಗಳನ್ನು ತಿದ್ದುತ್ತದೆ. ʻಇದು ನಮ್ಮ ಇಚ್ಛೆ,ʼ ಅಂದುಕೊಳ್ಳುವ ನಮ್ಮ ಭಾವ ಮತ್ತು ನಮ್ಮ  ದೇವರ ಕಲ್ಪನೆ ಎರಡೂ ನಮಗೆ ದೊರೆತ ಜಗತ್ತಿನಸಂಪರ್ಕದಿಂದಲೇ ಮೂಡಿದ್ದಲ್ಲವೇ? ಹಾಗಿದ್ದರೆ, ʻನಾವು ಹೀಗೇಕೆʼ ಅನ್ನುವ ಪ್ರಶ್ನೆಗೆ ʻನಮ್ಮ ಸುತ್ತಲ ಜಗತ್ತೇ ಕಾರಣ,ʼ ಎಂದೆನ್ನಬಹುದೇ?

ಆಗದೇನೋ. ಯಾಕೆಂದರೆ ಜಗತ್ತಿನ ಇಚ್ಛೆಯಂತೆ ನಡೆಯಬೇಕೆನ್ನುವ ಬಲವಂತ, ದೇವರ ಆದರ್ಶದಂತೆ ಇರಲಾಗದ ಯಾತನೆ ಇವುಗಳ ಇಬ್ಬಂದಿಯೇ ದಾಸಿಮಯ್ಯನವರಿಗೆ ಮುಖ್ಯವಾದಂತೆ ತೋರುತ್ತದೆ. ಇವೆಲ್ಲದರ ಮೂಲದಲ್ಲಿರುವುದು ಕೂಡ ನಾನು ಅನ್ನುವ ಕಲ್ಪನೆಯನ್ನು ವಿವರಿಸಿಕೊಳ್ಳಲಾಗದ ತೊಳಲಾಟವೇ ಇರಬಹುದು. ಬಿನ್ನಾಣ ಎಂಬ ಮಾತಿಗೆ ಇರುವ ಮೂರು ಅರ್ಥಗಳೂ ಈ ವಚನಕ್ಕೆ ಹೊಂದುವಂತಿವೆ. ನಾವು ಕಟ್ಟಿಕೊಳ್ಳುವ ಲೋಕ ನಮ್ಮ ತಿಳಿವಳಿಕೆಗೆ ಬಂದ ಅನುಭವದ, ಭಾಷೆಯ ಫಲಿತಾಂಶ; ನಾವು ಲೋಕದ ಚೆಲುವು ಎಂದು ಯಾವುದನ್ನು ತಿಳಿಯುತ್ತೇವೋ ಬಯಸುತ್ತೇವೋ ಅದಕ್ಕೆ ವಶವಾದವರು ನಾವು; ಹೆಣ್ಣು ತನ್ನ ಬಿನ್ನಾಣದಿಂದ ಇನ್ನೊಂದು ಜೀವವನ್ನು ಸೆಳೆಯುವ ಹಾಗೆ ಲೋಕದ ಚೆಲುವೂ ಸೆಳೆದು ರೂಪಗೊಂಡದ್ದು ಮನುಷ್ಯರ ವ್ಯಕ್ತಿತ್ವ ಅನ್ನುವ ವಿಚಾರಗಳು ಇಲ್ಲಿರುವಂತಿದೆ.


ಜೇಡರ ದಾಸಿಮಯ್ಯ

ವಚನ ಯುಗದ ಹಿರಿಯರ ರಚನೆಕಾರರಲ್ಲಿ ಒಬ್ಬರಾದ ಜೇಡರ ದಾಸಿಮಯ್ಯ ಕಲಬುರ್ಗಿ ಜಿಲ್ಲೆಯ ಮುದನೂರಿನವರು. ನೇಯ್ಗೆ ಇವರ ವೃತ್ತಿ  ಇವರ ೧೭೬ ವಚನಗಳು ಪ್ರಕಟವಾಗಿವೆ. ರಾಮನಾಥ ಎಂಬುದು ವಚನಾಂಕಿತ. ತ್ರಿಪದಿಗಳು ವಚನವಾಗಿ ರೂಪಾಂತರ ಹೊಂದುತ್ತಿದ್ದ ಬಗೆಯನ್ನು ದಾಸಿಮಯ್ಯ ವಚನಗಳಲ್ಲಿ ಕಾಣಬಹುದು. ವಚನ ಯುಗದ ಮುಖ್ಯ ಚಿಂತನೆಗಳು ದಾಸಿಮಯ್ಯ ವಚನಗಳಲ್ಲಿ ಬೀಜರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ವಚನ ಪ್ರಕಾರದ ಮುಖ್ಯಗುಣಗಳಾದ ಸಂಕ್ಷಿಪ್ತತೆ, ಸರಳತೆ ಹಾಗೂ ಅರ್ಥಪ್ರಚುರತೆ ದಾಸಿಮಯ್ಯ ವಚನಗಳಲ್ಲಿ ಎದ್ದು ಕಾಣುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.