ಕೊನೆಗೂ ನಾವು ನೆನಪಿಡಬೇಕಾದದ್ದು ಏನೆಂದರೆ, ನಾವು ನಮ್ಮತನವನ್ನು ಉಳಿಸಿಕೊಳ್ಳಲು ಬೇರೆ ಎಲ್ಲವನ್ನೂ ಡ್ರಾಪ್ ಮಾಡಬೇಕಾಗುತ್ತದೆ. ಅಧ್ಯಾತ್ಮಿಕ ಅನುಭವಗಳು ಕೂಡ ನಮ್ಮನ್ನು ಭ್ರಷ್ಟಗೊಳಿಸುತ್ತವೆ; ಇವು ನಮಗೆ ಅಡತಡೆಗಳು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮನುಷ್ಯನ ಈ ಅಸ್ತಿತ್ವ
ಅತಿಥಿಗಳ ಒಂದು ತಂಗುದಾಣ
ಪ್ರತೀ ಮುಂಜಾನೆ
ಹೊಸ ಹೊಸ ಆಗಮನ.
ಆನಂದ, ದುಗುಡ, ಸ್ವಾರ್ಥ,
ಆಗಾಗ್ಗೆ ಪ್ರಕಟವಾಗುವ
ಕೊಂಚ ತಾತ್ಕಾಲಿಕ ಅರಿವು ಎಲ್ಲ
ಕರೆಯದೇ ಬಂದು ಹೋಗುವ
ಅತಿಥಿಗಳು.
ಎಲ್ಲರನ್ವೂ ಸ್ವಾಗತಿಸಿ, ಸತ್ಕರಿಸಿ.
~ ರೂಮಿ
ಏನೋ ಒಂದು ಸಂಭವಿಸಿದಾಗ ನಮ್ಮೊಳಗೆ ದ್ವಂದ್ವ ಹುಟ್ಟಿಕೊಳ್ಳುತ್ತದೆ. ನಿಮಗೆ ಇಷ್ಟವಾದ ಸಂಗತಿ ಸಂಭವಿಸಿದಾಗ ಅಂಥದು ಇನ್ನಷ್ಟು ಬೇಕು ಎನ್ನುವ ಬಯಕೆ ನಿಮ್ಮೊಳಗೆ ಹುಟ್ಟಿಕೊಳ್ಳುತ್ತದೆ. ನಿಮಗೆ ಸುಂದರ ಅನುಭೂತಿಯನ್ನು ಕೊಡುವ ಸಂಗತಿ ಸಂಭವಿಸುದಾಗ, ಅದು ನಿಮ್ಮಿಂದ ದೂರವಾಗಬಹುದು ಎನ್ನುವ ಭಯ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ಅನುಭವದೊಂದಿಗೆ ನಿಮ್ಮ ಮೈಂಡ್ ನ ಎಲ್ಲವೂ ಮತ್ತೆ ಮರಳಿ ಬರುತ್ತದೆ ಮತ್ತು ನೀವು ಸಿಕ್ಕಿ ಹಾಕಿಕೊಳ್ಳುತ್ತೀರಿ.
ನನ್ನ ಇಡೀ ಪ್ರಯತ್ನವೇ ಅನುಭವಗಳ ವಲಯದಿಂದ ನಿಮ್ಮನ್ನು ಆಚೆ ಕರೆದುಕೊಂಡು ಹೋಗುವುದು. ಏಕೆಂದರೆ ಆಗ ಮಾತ್ರ ನೀವು ಮೈಂಡ್ ನ ಮೀರುವುದು, ಮೌನವನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಯಾವಾಗ ನೀವು ಅನುಭವಗಳಿಂದ ರಹಿತರಾಗುತ್ತೀರೋ ಆಗ ನಿಮ್ಮೊಳಗೆ ಮೌನ ನೆಲೆಯಾಗುತ್ತದೆ. ಯಾವಾಗ ಆನಂದ ಇರುವುದಿಲ್ಲವೋ ಆಗ ನೀವು ಆನಂದದಲ್ಲಿ ನೆಲೆಯಾಗುತ್ತೀರಿ, ಏಕೆಂದರೆ ಆನಂದ ಅನುಭವವಲ್ಲ; ನಿಮಗೆ ಯಾವತ್ತೂ ಆನಂದದಲ್ಲಿರುವ (bliss) ಅನುಭವವಾಗುವುದಿಲ್ಲ. ಹಾಗೇನಾದರೂ ಆಗುತ್ತಿದೆಯಾದರೆ ಅದು ಖುಶಿ ( happiness) ಮಾತ್ರ. ಅದು ಸಮಯದ ಜೊತೆ ಕಳೆದು ಹೋಗುತ್ತದೆ ಮತ್ತು ನೀವು ಅಂಧಕಾರದಲ್ಲಿ ಕಳೆದುಹೋಗುತ್ತೀರ.
ಈ ವಿಷಯ ನಿಮಗೆ ಅರ್ಥವಾಯಿತೆಂದರೆ, ಆಗ ನಿನಗೆ ಯಾವ ತಂತ್ರವೂ ಅಧ್ಯಾತ್ಮಿಕ ಅಲ್ಲ. ಏಕೆಂದರೆ ಎಲ್ಲ ತಂತ್ರಗಳು ನಿಮಗೆ ಅನುಭವವನ್ನು ಮಾತ್ರ ಕೊಡುತ್ತವೆ. ಮತ್ತು ಒಂದು ದಿನ ನಿಮ್ಮ ಗುರಿ ಎಲ್ಲ ಅನುಭವಗಳನ್ನೂ ಡ್ರಾಪ್ ಮಾಡುವುದೇ ಆಗಿರಬೇಕು. ನೀವು ನಿಮ್ಮ ಮನೆಯಲ್ಲಿ ಏಕಾಂಗಿಯಾಗಿರುವಿರಿ, ಅಲ್ಲಿ ಯಾವ ಫರ್ನೀಚರ್ ಗಳೂ ಇಲ್ಲ, ಯಾವ ಅನುಭವಗಳೂ ಇಲ್ಲ. ಯಾವ ಅನುಭವಗಳೂ ಇಲ್ಲವಾದಾಗ ಮಾತ್ರ ನಿಮಗೆ ಆತ್ಯಂತಿಕದ ಅನುಭವವಾಗುತ್ತದೆ. ಆದರೆ ಇದು ಅನುಭವವಲ್ಲ, ಭಾಷೆಯಲ್ಲಿ ಹೇಳುವಾಗ ಬೇರೆ ರೀತಿ ಹೇಳುವುದು ಕಷ್ಟ.
ಒಮ್ಮೆ ಒಬ್ಬ ಪ್ರವಾಸಿ, ಝೆನ್ ಮಾಸ್ಟರ್’ ನ ಮನೆಗೆ ಬಂದ. ಅಲ್ಲಿ ಕೇವಲ ಒಂದು ಟೇಬಲ್ ಮತ್ತು ಒಂದು ಖುರ್ಚಿ ನೋಡಿದ ಪ್ರವಾಸಿಗೆ ಆಶ್ಚರ್ಯವಾಯಿತು.
ಪ್ರವಾಸಿ : ಬೇರೆ ಫರ್ನೀಚರ್ ಎಲ್ಲ ಎಲ್ಲಿ ?
ಮಾಸ್ಟರ್ : ಯಾಕೆ? ನಿನ್ನ ಫರ್ನೀಚರ್ ಎಲ್ಲಿ?
ಪ್ರವಾಸಿ : ನನ್ನ ಫರ್ನೀಚರ್ ? ನಾನು ಪ್ರವಾಸಿ, ಸುಮ್ಮನೇ ಇಲ್ಲಿಂದ ಹಾಯ್ದು ಹೋಗುತ್ತಿದ್ದೆ.
ಮಾಸ್ಟರ್ : ನಾನೂ ಅಷ್ಟೇ.

