ಏಕಾಗ್ರತೆ ( Concentration): ಓಶೋ 365 #Day 349

ಏಕಾಗ್ರತೆ, ಆಸಕ್ತಿಯನ್ನು ಹಿಂಬಾಲಿಸುತ್ತದೆ; ಅದು ಆಸಕ್ತಿಯ ನೆರಳು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ



ಏಕಾಗ್ರತೆ ಮಿಸ್ ಆಗುತ್ತಿದೆ ಎಂದು ನಿಮಗೆ ಅನಿಸುತ್ತಿದೆಯಾದರೆ, ನೇರವಾಗಿ ಏಕಾಗ್ರತೆಗೆ ಏನು ಮಾಡುವುದೂ ಸಾಧ್ಯವಿಲ್ಲ; ಮಾಡುವುದಾದರೆ ಏನನ್ನಾದರೂ ಆಸಕ್ತಿಗೆ ಮಾಡಬೇಕು. ಉದಾಹರಣೆಗೆ ಕ್ಲಾಸಿನಲ್ಲಿ ಕುಳಿತಿರುವ ಮಗು ಥಟ್ಟನೇ ಕಿಟಕಿಯ ಹೊರಗಿನ ಹಕ್ಕಿಗಳ ಚಿಲಿಪಿಲಿಯನ್ನು ಸಂಪೂರ್ಣ ಏಕಾಗ್ರತೆಯಿಂದ ಕೇಳಿಸಿಕೊಳ್ಳಲು ಶುರು ಮಾಡುತ್ತದೆ. “Concentrate” ಟೀಚರ್ ಮಗುವಿನ ಮೇಲೆ ಕಿರಿಚುತ್ತಾರೆ, ಆದರೆ ಮಗುವಿಗೆ ಬ್ಲಾಕ್ ಬೋರ್ಡ್ ಮೇಲೆ concentrate ಮಾಡುವುದು ಸಾಧ್ಯವಾಗುವುದಿಲ್ಲ. ಅದರ ಮೈಂಡ್ ಮತ್ತೆ ಮತ್ತೆ ಹಕ್ಕಿಗಳ ಚಿಲಿಪಿಲಿಯತ್ತ ಹೊರಳುತ್ತದೆ. ಹಕ್ಕಿಗಳು ಎಷ್ಟು ಖುಶಿಯಲ್ಲಿ ಚೀರಾಡುತ್ತಿವೆ ಮತ್ತು ಮಗುವಿಗೆ ಅವುಗಳಲ್ಲಿ ನಿಜವಾಗಿಯೂ ಆಸಕ್ತಿ ಮೂಡಿದೆ, ಆದ್ದರಿಂದ ಮಗುವಿನ ಏಕಾಗ್ರತೆ ಹಕ್ಕಿಗಳ ಮೇಲೆ ಇದೆ.

“Concentrate” ಟೀಚರ್ ಮತ್ತೆ ಕೂಗುತ್ತಾರೆ. ಟೀಚರ್ ಮಗುವಿನ ಏಕಾಗ್ರತೆಗೆ ಭಂಗ ತರಲು ಪ್ರಯತ್ನ ಮಾಡುತ್ತಿದ್ದಾರೆ. ಟೀಚರ್ ಗೆ ಮಗುವಿಗೆ ಯಾವುದರಲ್ಲಿ ಆಸಕ್ತಿ ಇಲ್ಲವೋ ಅಲ್ಲಿ ಏಕಾಗ್ರತೆ ಮೂಡಿಸವ ಬಯಕೆ.

ಆದ್ದರಿಂದ ಯಾವತ್ತೂ ನೆನಪಿನಲ್ಲಿರಲಿ: ನಿಮಗೆ ಸಂಗತಿಗಳು ನೆನಪಿನಲ್ಲಿ ಉಳಿಯುತ್ತಿಲ್ಲವೆಂದರೆ, ನಿಮಗೆ ಆ ಸಂಗತಿಗಳ ಮೇಲೆ ಆಸಕ್ತಿ ಉಳಿದಿಲ್ಲ ಎಂದು ಅರ್ಥ. ಅಥವಾ ನಿಮಗೆ ಬೇರೆ ಯಾವುದರ ಮೇಲೆಯೋ ಆಸಕ್ತಿ ಬೆಳೆದಿದೆ. ನಿಮಗೆ ಕೆಲಸಕ್ಕಿಂತ ಹಣದ ಮೇಲೆ ಆಸಕ್ತಿ ಹೆಚ್ಚಾಗಿರುವುದರಿಂದ ಕೆಲಸಗಳು ಈಗ ನೆನಪಲ್ಲಿ ಉಳಿಯುತ್ತಿಲ್ಲ. ಆದ್ದರಿಂದ ನಿಮ್ಮ ಆಸಕ್ತಿಗಳನ್ನು ಗಮನಿಸಿ.

ನೀವು ಏನನ್ನಾದರೂ ಮಾಡುತ್ತಿರಲಿ, ಅದರ ಮೇಲೆ ನಿಮಗೆ ಆಸಕ್ತಿಯಿದೆಯೆಂದರೆ, ಅದನ್ನು ಮರೆಯುವ ಬಗ್ಗೆ ಚಿಂತೆಯೇ ಬೇಡ. ಸಹಜವಾಗಿ ಅದು ನಿಮ್ಮ ನೆನಪಲ್ಲಿರುತ್ತದೆ. ಆದ್ದರಿಂದ ನಿಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ. Remain in the moment. ಮತ್ತು ಎರಡು ಮೂರು ತಿಂಗಳ ನಂತರ ನೆನಪು ಸುಮ್ಮನೇ ನಿಮ್ಮನ್ನು ಹಿಂಬಾಲಿಸುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆ.

ಸೂಫೀ ಜುನೈದ್ ತನ್ನ ಶಿಷ್ಯರೊಂದಿಗೆ ರಸ್ತೆಯ ಮೂಲಕ ಪ್ರಯಾಣ ಮಾಡುತ್ತಿದ್ದ. ರಸ್ತೆಯಲ್ಲಿ ಅವನಿಗೆ ಒಬ್ಬ ಮನುಷ್ಯ ಆಕಳೊಂದನ್ನು ಹಗ್ಗದಿಂದ ಎಳೆದುಕೊಂಡು ಬರುತ್ತಿರುವುದು ಕಾಣಿಸಿತು. ಸೂಫೀ ತನ್ನ ಶಿಷ್ಯರಿಗೆ ಹೇಳಿದ, “ ಆ ಮನುಷ್ಯನನ್ನು  ಹಿಡಿದು ನಿಲ್ಲಿಸಿ, ನಿಮಗೆಲ್ಲ ಒಂದು ಪ್ರಶ್ನೆ ಕೇಳಬೇಕು ನಾನು”

ಶಿಷ್ಯರು ಆಕಳನ್ನು ಎಳೆದುಕೊಂಡು ಹೋಗುತ್ತಿದ್ದ ಮನುಷ್ಯನನ್ನು ತಡೆದು ನಿಲ್ಲಿಸಿದರು.

ಜುನೈದ್ ತನ್ನ ಶಿಷ್ಯರಿಗೆ ಪ್ರಶ್ನೆ ಮಾಡಿದ. “ ಹೇಳಿ , ಇಲ್ಲಿ ಯಾರು ಯಾರನ್ನು ಕಟ್ಟಿ ಹಾಕಿದ್ದಾರೆ? ಮನುಷ್ಯ ಆಕಳನ್ನು ಹಗ್ಗದಿಂದ ಕಟ್ಟಿದ್ದಾನೋ ಅಥವಾ ಆಕಳು ಮನುಷ್ಯನನ್ನು ಹಗ್ಗದಿಂದ ಕಟ್ಟಿ ಹಾಕಿದೆಯೋ? “

“ ಇದೆಂಥ ಪ್ರಶ್ನೆ ? ಮನುಷ್ಯ ತಾನೇ ಆಕಳನ್ನು ಕಟ್ಟಿ ಹಾಕಿರುವುದು” ಶಿಷ್ಯನೊಬ್ಬ ಉತ್ತರಿಸಿದ.

“ ಓಹ್ ಹೌದಾ ! ಈಗ ನೋಡಿ “ ಎನ್ನುತ್ತಾ ಜುನೈದ್ ಚಾಕುವಿನಿಂದ ಆಕಳನ್ನು ಕಟ್ಟಿ ಹಾಕಿದ್ದ ಹಗ್ಗ ಕತ್ತರಿಸಿಬಿಟ್ಟ.  ಹಗ್ಗ ಕತ್ತರಿಸಿದೊಡನೆ ಆಕಳು ಅಲ್ಲಿಂದ ಓಡತೊಡಗಿತು. ಆಕಳ ಮಾಲಿಕನಿಗೆ ಸಿಟ್ಟು ಬಂತು, ಅವನೂ ಆಕಳ ಹಿಂದೆ ಓಡತೊಡಗಿದ.

“ ಈಗ ಹೇಳಿ ? ಆಕಳಿಗೆ ಆ ಮನುಷ್ಯನ ಬಗ್ಗೆ ಆಸಕ್ತಿ ಇಲ್ಲ, ಬದಲಾಗಿ ಅದು ಇವನಿಂದ ತಪ್ಪಿಸಿಕೊಳ್ಳಲು ಬಯಸುತ್ತಿದೆ. ಆದರೆ ಆ ಮನುಷ್ಯ ತನ್ನ ಲಾಭಕ್ಕಾಗಿ ಆಕಳನ್ನು ಬಯಸುತ್ತಿದ್ದಾನೆ.  ಹೀಗೆಯೇ ನಮ್ಮ ಮತ್ತು ನಮ್ಮ ಮನಸ್ಸಿನೊಡನೆಯ ಸಂಬಂಧ. ನಮ್ಮ  ಮನಸ್ಸಿನಲ್ಲಿ ಬರುತ್ತಿರುವ ನೂರಾರು ವಿಚಾರಗಳಿಗೆ ನಮ್ಮ ಬಗ್ಗೆ ಆಸಕ್ತಿ ಇಲ್ಲ. ನಾವೇ ಆ ವಿಚಾರಗಳ ಬಗ್ಗೆ  ತಲೆಕೆಡಿಸಿಕೊಂಡಿದ್ದೇವೆ. ಆ ವಿಚಾರಗಳ ಬಗ್ಗೆ ಆಸಕ್ತಿ ಕಳೆದುಕೊಂಡು ಕ್ಷಣದಲ್ಲಿಯೇ ಅವು ಆ ಆಕಳು ಓಡಿ ಹೋದಂತೆ ಓಡಿ ಹೋಗುತ್ತವೆ “

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.