ನಕ್ಷತ್ರಗಳು ಕಾಣುವ, ಕಾಣದಿರುವ ಸ್ಥಿತಿಯನ್ನು ಆನಂದ-ಅನಾನಂದಕ್ಕೂ ಜ್ಞಾನವಿರುವ ಮತ್ತು ಇಲ್ಲದಿರುವ ಸ್ಥಿತಿಯನ್ನು ಸೂರ್ಯೋದಯ, ಸೂರ್ಯಾಸ್ತಗಳಿಗೂ ಹೋಲಿಸುತ್ತ ಈ ವಚನ ರೂಪುಗೊಂಡಿದೆ । ಓ.ಎಲ್.ನಾಗಭೂಷಣ ಸ್ವಾಮಿ
ಆಕಾಶದಲ್ಲಿಯ ತಾರೆಗಳು ಕಾಣಬಾರದೆಂಬ
ಯೋಚನೆಯುಳ್ಳಡೆ ಸೂರ್ಯೋದಯಕ್ಕಯ್ಯಾ
ಆಕಾಶದಲ್ಲಿಯ ತಾರೆಗಳು ಕಾಣಬೇಕೆಂಬ
ಯೋಚನೆಯುಳ್ಳಡೆ ಸೂರ್ಯಾಸ್ತಮಾನಕ್ಕಯ್ಯಾ!
ಕಾಣಬಾರದು ಕಾಣಬಾರದು
ಜ್ಞಾನದಲ್ಲಿ ಆನಂದ ಅನಾನಂದವ
ಕಾಣಬಹುದು ಕಾಣಬಹುದು
ಅಜ್ಞಾನದಲ್ಲಿ ಸುಖದುಃಖೋಭಯದ್ವಂದ್ವವ.
ಭೋ ಭೋ ಕಪಿಲಸಿದ್ಧಮಲ್ಲಿಕಾರ್ಜುನ ಭೋ
(ಕಾಣಬಾರದು-ಕಾಣಲು ಸಾಧ್ಯವಿಲ್ಲ; ಅನಾನಂದ-ಆನಂದವಲ್ಲದ್ದು)
ಆಕಾಶದ ನಕ್ಷತ್ರಗಳು ಕಾಣಬಾರದೆಂದು ಬಯಸಿದರೆ ಸೂರ್ಯೋದಯವಾಗಬೇಕು. ಆಕಾಶದ ನಕ್ಷತ್ರ ಕಾಣಬೇಕೆಂಬ ಯೋಚನೆ ಇದ್ದರೆ ಸೂರ್ಯ ಮುಳುಗಬೇಕು. ಜ್ಞಾನ ಹುಟ್ಟಿದರೆ ಆನಂದ ಮತ್ತು ಅನಾನಂದ ಅಥವಾ ದುಃಖ ಇರುವುದಿಲ್ಲ. ಅಜ್ಞಾನ ಇದ್ದಾಗ ಮಾತ್ರವೇ ಇದು ಸುಖ, ಇದು ದುಃಖ ಅನ್ನುವ, ಇದು ಬೇಕು ಇದು ಬೇಡ ಅನ್ನುವ ದ್ವಂದ್ವ ಇರುತ್ತದೆ. ಇಬ್ಬಂದಿತನ ಇರುತ್ತದೆ. ನಮಗೆ ಪ್ರಿಯವಾದದ್ದು ಸುಖವಾಗಿ, ಅಪ್ರಿಯವಾದದ್ದು ದುಃಖವಾಗಿ ಕಾಣುತ್ತೇವೆ. ಸುಖ ಅಥವಾ ದುಃಖ ಅನ್ನುವುದು ನಮ್ಮಲ್ಲಿ ಹುಟ್ಟುವ ಭಾವನೆ. ವಾಸ್ತವ ಅನ್ನುತ್ತೇವಲ್ಲ ಅದಕ್ಕೆ ಯಾವ ರುಚಿಯೂ ಬಣ್ಣವೂ ಇಲ್ಲ, ಪ್ರಿಯ ಅಪ್ರಿಯವೆನ್ನುವುದೂ ಇಲ್ಲ. ನಕ್ಷತ್ರಗಳು ಕಾಣುವ, ಕಾಣದಿರುವ ಸ್ಥಿತಿಯನ್ನು ಆನಂದ-ಅನಾನಂದಕ್ಕೂ ಜ್ಞಾನವಿರುವ ಮತ್ತು ಇಲ್ಲದಿರುವ ಸ್ಥಿತಿಯನ್ನು ಸೂರ್ಯೋದಯ, ಸೂರ್ಯಾಸ್ತಗಳಿಗೂ ಹೋಲಿಸುತ್ತ ಈ ವಚನ ರೂಪುಗೊಂಡಿದೆ. ನಕ್ಷತ್ರ ಇರುವುದು, ಇಲ್ಲದಿರುವುದು ಎರಡೂ ಸೂರ್ಯೋದಯ ಸೂರ್ಯಾಸ್ತಗಳನ್ನು ಅವಲಂಬಿಸಿರುತ್ತವೆ. ಅದೇ ರೀತಿ ಸುಖ ದುಃಖ, ಅನಂದ ಅನಾನಂದಗಳು ನಮ್ಮ ಭಾವೋದಯ, ಭಾವಾಸ್ತವನ್ನು ಆಧರಿಸಿರುತ್ತವೆ. ನಿರ್ಭಾವವಾಗಿ ಬದುಕುವುದು ಸಾಧ್ಯವಾದರೆ ಸುಖ-ದುಃಖಗಳ ದ್ವಂದ್ವ ಇರದು.
ಸಿದ್ಧರಾಮ
ವಚನ ಯುಗದ ಪ್ರಮುಖ ವಚನಕಾರರಾದ ಸಿದ್ಧರಾಮ ಸೊನ್ನಲಿಗೆಯವರು; ಅವರ ಪ್ರಯತ್ನದಿಂದ ಅದು ನಗರವಾಗಿ ಬೆಳೆದು ಸೊಲ್ಲಾಪುರವಾಯಿತು ಎಂಬ ಮಾತಿದೆ. ಅಲ್ಲಮ, ಮಹದೇವಿ ಅಕ್ಕರಂತೆ ಸಿದ್ಧರಾಮ ಕೂಡ ಶ್ರೀಶೈಲ ಮಲ್ಲಿಕಾರ್ಜುನನ ಆರಾಧಕರು.. ಅವರು ಯೋಗ ಸಾಧಕರೆಂದೂ ಪ್ರಸಿದ್ಧರು. ಸಿದ್ಧರಾಮರ ಬದುಕು, ಸಾಧನೆಗಳನ್ನು ಕುರಿತು ರಾಘವಾಂಕನು ಸಿದ್ಧರಾಮ ಚರಿತೆಯನ್ನು ಬರೆದಿದ್ದಾನೆ. ಕರ್ಮಯೋಗದ ದಾರಿಯಲ್ಲಿ ಸಾಗಿ ಭಕ್ತಿ ಮಾರ್ಗಕ್ಕೆ ಹೊರಳಿದ ಈ ವಚನಕಾರರ ೧೯೯೨ ವಚನಗಳು ಪ್ರಕಟವಾಗಿವೆ. ಅಂಕಿತ ʻಕಪಿಲಸಿದ್ಧ ಮಲ್ಲಿಕಾರ್ಜುನʼ ಮತ್ತು ಅದರ ಭಿನ್ನ ರೂಪಗಳು. ಇವರ ವಚನಗಳ ಸಂಖ್ಯೆಯನ್ನು ಕುರಿತ ಚರ್ಚೆ ಇದ್ದೇ ಇದೆ.

