ವಚನ ವೈವಿಧ್ಯ#20: ಅಂದೂ ಇಂದೂ ದಾರಿ ಒಂದೇ- ಸಿದ್ಧರಾಮ

ಈ ಸಿದ್ಧರಾಮ ವಚನವು ಅಂದು ಇಂದುಗಳ ಭೇದ ಎಂದೆಂದೂ ಕಾಣದು ಅನ್ನುತ್ತಿದೆ. ವಚನದ ರಚನೆಯಲ್ಲಿ ಅಂದು, ಇಂದು, ಎಂದೆಂದೂ ಎಂಬ ಪದಗಳ ಜೋಡಣೆ, ನಡೆಯರು, ಕಾಣರು, ಕಾಣೆ ಎಂಬ ಕ್ರಿಯಾಪದಗಳಿಗೆ ಶಕ್ತಿ ತುಂಬಿರುವ ರೀತಿ ಗಮನ ಸೆಳೆಯುತ್ತದೆ । ಓ.ಎಲ್.ನಾಗಭೂಷಣ ಸ್ವಾಮಿ

ಅಂದಿನವರು ನಡೆದ ದಾರಿ ಇಂದಿನವರು ನಡೆಯರು
ಇಂದಿನವರು ನಡೆದ ದಾರಿ ಅಂದಿನವರು ಕಾಣರು
ಅಂದಂದೆಂಬ ದ್ವಂದ್ವ ಭೇದವನೆಂದೆಂದು ಕಾಣೆ
ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ (ಸಂ೪.ವ.೧೫೬೭)

[ಅಂದಿನವರು-ಹಿಂದಿನವರು; ದ್ವಂದ್ವ-ವಿರೋಧ; ಭೇದ-ವ್ಯತ್ಯಾಸ]

ಹಿಂದಿನವರು ನಡೆದ ದಾರಿಯಲ್ಲಿ ಇಂದಿನವರು ನಡೆಯುವುದಿಲ್ಲ. ಇಂದಿನವರು ನಡೆಯುವ ದಾರಿಯನ್ನು ಅಂದಿನವರು ಕಾಣಲು ಸಾಧ್ಯವಿಲ್ಲ.‌ ನಾನು ಮಾತ್ರ ಅಂದು-ಅಂದು, ಇಂದು ಇಂದು  ಅನ್ನುವ ಭೇದವನ್ನು ಎಂದೆಂದೂ ಕಾಣೆ.

ಕಾಲ ಬದಲಾಗುತ್ತದೆ ಅನ್ನುವುದು ಲೋಕಾರೂಢಿಯ ಮಾತು. ಹಿಂದಿನ ಕಾಲದವರ ಹಾಗೆ ನಾವು ನಡೆದುಕೊಳ್ಳಲು ಆಗುವುದಿಲ್ಲ, ಹಾಗೆ ನಡೆದುಕೊಳ್ಳುವುದು ಬೇಕಾಗಿಲ್ಲ ಎಂಬುದು ಇಂದಿನವರು ಕೊಟ್ಟುಕೊಳ್ಳುವ ಸಮರ್ಥನೆ. ಇಂದಿನವರು ಹೇಗೆ, ಯಾವ ದಾರಿಯಲ್ಲಿ ನಡೆಯುತ್ತಾರೆಂಬುದನ್ನು ಹಿಂದಿನವರು ಕಾಣಲು ಸಾಧ್ಯವೇ ಇಲ್ಲ. ಇಂದಿನ ಜನರ ನಡೆಯನ್ನು ಹಿಂದಿನವರು ಮೆಚ್ಚಲು ಅಥವ ಟೀಕಿಸಲು ಸಾಧ್ಯವಿಲ್ಲ. ಹಿಂದಿನ ಬದುಕಿನ ರಿವಾಜು ಇವತ್ತು ಪಾಲಿಸಬೇಕಾಗಿಲ್ಲ. ಯಾಕೆಂದರೆ ʻಅಂದುʼ ಬೇರೆ, ʻಇಂದುʼ ಬೇರೆ. ಅಂದು ಎಂಬುದು ಅಂದೇ ಮುಗಿಯಿತು, ಇಂದು ಹೊಸತು

ಆದರೆ, ಬದಲಾಯಿತು ಅನ್ನುವುದು ನಿಜವಲ್ಲ. ಮನುಷ್ಯರಾಗಿ ನಾವು ಎದುರಿಸುವ ಪ್ರಶ್ನೆ, ಅನುಭವಿಸುವ ತಾಕಲಾಟ, ಪಡೆಯುವ ಖುಷಿ, ಅನುಭವಿಸುವ ನೋವು, ಒಳ್ಳೆಯತನ, ಧೂರ್ತತೆ, ಕಪಟ, ಪಡುವ ಸಂತೋಷ  ಇಂಥ ಒಳಗಿನ ಸಂಗತಿಗಳಲ್ಲಿ ಅಂದಿನವರಿಗೂ ಇಂದಿನವರಿಗೂ ವ್ಯತ್ಯಾಸ ನಿಜವಾಗಲೂ ಇದೆಯೇ? ಹೊರಗಿನ ಸಂಗತಿ ಬದಲಾಗಿವೆ. ಪ್ರಯಾಣದ ರೀತಿ, ಸೌಕರ್ಯ; ಸುದ್ದಿ ತಲುಪಿಸುವ ವೇಗ ಇಂಥವು. ಆದರೆ ಪ್ರಯಾಣ ತಪ್ಪಿಲ್ಲ, ಹೇಳುವ ಸುದ್ದಿಯಲ್ಲಿ ಸತ್ಯ, ಸುಳ್ಳು ಬೆರೆಯುವುದು ತಪ್ಪಿಲ್ಲ…ಹೀಗೇ ಮುಂದುವರೆಸಬಹುದು. ಅದಕ್ಕೇ ಈ ಸಿದ್ಧರಾಮ ವಚನವು ಅಂದು ಇಂದುಗಳ ಭೇದ ಎಂದೆಂದೂ ಕಾಣದು ಅನ್ನುತ್ತಿದೆ. ವಚನದ ರಚನೆಯಲ್ಲಿ ಅಂದು, ಇಂದು, ಎಂದೆಂದೂ ಎಂಬ ಪದಗಳ ಜೋಡಣೆ, ನಡೆಯರು, ಕಾಣರು, ಕಾಣೆ ಎಂಬ ಕ್ರಿಯಾಪದಗಳಿಗೆ ಶಕ್ತಿ ತುಂಬಿರುವ ರೀತಿ ಗಮನ ಸೆಳೆಯುತ್ತದೆ. ಕಾಲ ಬದಲಾಯಿತು ಅನ್ನುವುದು ಸುಳ್ಳು ಎಂಬುದು ಟಾಲ್ಸ್‌ಟಾಯ್‌ ಕೂಡ ಮತ್ತೆ ಮತ್ತೆ ಹೇಳುವ ಮಾತು.


ಸಿದ್ಧರಾಮ

ವಚನ ಯುಗದ ಪ್ರಮುಖ ವಚನಕಾರರಾದ ಸಿದ್ಧರಾಮ ಸೊನ್ನಲಿಗೆಯವರು; ಅವರ ಪ್ರಯತ್ನದಿಂದ ಅದು ನಗರವಾಗಿ ಬೆಳೆದು ಸೊಲ್ಲಾಪುರವಾಯಿತು ಎಂಬ ಮಾತಿದೆ. ಅಲ್ಲಮ, ಮಹದೇವಿ ಅಕ್ಕರಂತೆ ಸಿದ್ಧರಾಮ ಕೂಡ ಶ್ರೀಶೈಲ ಮಲ್ಲಿಕಾರ್ಜುನನ ಆರಾಧಕರು.. ಅವರು ಯೋಗ ಸಾಧಕರೆಂದೂ ಪ್ರಸಿದ್ಧರು. ಸಿದ್ಧರಾಮರ ಬದುಕು, ಸಾಧನೆಗಳನ್ನು ಕುರಿತು ರಾಘವಾಂಕನು ಸಿದ್ಧರಾಮ ಚರಿತೆಯನ್ನು ಬರೆದಿದ್ದಾನೆ. ಕರ್ಮಯೋಗದ ದಾರಿಯಲ್ಲಿ ಸಾಗಿ ಭಕ್ತಿ ಮಾರ್ಗಕ್ಕೆ ಹೊರಳಿದ ಈ ವಚನಕಾರರ ೧೯೯೨ ವಚನಗಳು ಪ್ರಕಟವಾಗಿವೆ. ಅಂಕಿತ ʻಕಪಿಲಸಿದ್ಧ ಮಲ್ಲಿಕಾರ್ಜುನʼ ಮತ್ತು ಅದರ ಭಿನ್ನ ರೂಪಗಳು. ಇವರ ವಚನಗಳ ಸಂಖ್ಯೆಯನ್ನು ಕುರಿತ ಚರ್ಚೆ ಇದ್ದೇ ಇದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.