ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಒಮ್ಮೆ ಪಂಡಿತ್ ಜಸರಾಜ್ ರು ತಮ್ಮ ಗೆಳೆಯ ಮುಕುಂದ್ ಲಾಡ್ ಅವರೊಂದಿಗೆ ಟ್ರೇನ್ ನ ಜನರಲ್ ಕಂಪಾರ್ಟಮೆಂಟ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ಆ ಬೋಗಿಯೊಳಗೆ ಒಬ್ಬ ಮುದುಕ ಹಾಡುತ್ತ ಭಿಕ್ಷೆ ಬೇಡಲು ಬಂದ. ಟ್ರೇನ್ ನ ಗದ್ದಲದಲ್ಲಿ ಯಾರೋ ಡಿಕ್ಕಿ ಹೊಡೆದು ಆ ಮುದುಕ ಕೆಳಗೆ ಬಿದ್ದ. ಇದನ್ನು ನೋಡಿ ಕಸಿವಿಸಿಗೊಂಡ ಜಸರಾಜ್ ರು ಅವನನ್ನು ಎಬ್ಬಿಸಿ ಸೀಟ್ ಮೇಲೆ ಕೂರಿಸಿದರು. ಆ ಮುದುಕನಿಗೆ ಹಣ ಕೊಡುವಂತೆ ಸುತ್ತಲಿನ ಜನರಿಗೆ ಮನವಿ ಮಾಡಿದರು.
ನೀವು ಹಾಡಿದರೆ ಮಾತ್ರ ಹಣ ನೀಡುತ್ತೇವೆ ಅಂತ ಸುತ್ತಲಿನ ಜನ ಹೇಳಿದಾಗ, ಪಂಡಿತ್ ಜೀ ಪ್ರತಿಯೊಬ್ಬರೂ ನಾಲ್ಕಾಣೆ ನೀಡುವಂತೆ ಕರಾರು ಮಾಡಿ, ಆ ಮುದುಕನ ಬಳಿ ಇದ್ದ ವಾದ್ಯವನ್ನೇ ತೆಗೆದುಕೊಂಡು ಭಜನ್ ಹಾಡತೊಡಗಿದರು. ಪಂ. ಜಸರಾಜ್ ರಂಥ ಮಹಾನ್ ಗಾಯಕ ಟ್ರೇನ್ ನಲ್ಲಿ ಹಾಡುತ್ತಿರುವುದನ್ನು ನೋಡಿ ಅಲ್ಲಿಗೆ ಬಹಳಷ್ಟು ಜನ ಬಂದು ಸೇರಿದರು. ಸಾಕಷ್ಟು ಹಣ ಕೂಡ ಸಂಗ್ರಹವಾಯಿತು. ಮುದುಕನಿಗೆ ಸಂಗ್ರಹವಾಗಿದ್ದ ಎಲ್ಲ ಹಣ ಕೊಟ್ಟು ಮುಂದಿನ ಸ್ಟೇಷನ್ ನಲ್ಲಿ ಅವನನ್ನು ಬೀಳ್ಕೊಟ್ಟರು ಪಂ. ಜಸರಾಜ್.

