ಅಷ್ಟು ತೀವ್ರಗಾಮಿಯಲ್ಲದಿದ್ದರೂ ಅಂಬಿಗರ ಚೌಡಯ್ಯ ಈ ವಚನದಲ್ಲಿ ಪೂಜೆಯ ಫಲವೆಂಬ ಕಲ್ಪನೆಯನ್ನೇ ಪ್ರಶ್ನೆ ಮಾಡುತ್ತಿರುವಂತಿದೆ... । ಓ.ಎಲ್.ನಾಗಭೂಷಣ ಸ್ವಾಮಿ
ಆರಿಕೆ ಬಿತ್ತಿದ ಗಿಡುವಿನ ಹೂವಕೊಯಿದು
ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು
ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ
ಪೂಜಿಸಿದ ಪುಣ್ಯ ಹೂವಿಗೋ ನೀರಿಗೋ ನಾಡೆಲ್ಲಕ್ಕೂ ಪೂಜಿಸಿದಾತಗೊ
ಇದ ನಾನರಿಯೆ ನೀ ಹೇಳೆಂದನಂಬಿಗ ಚೌಡಯ್ಯ (ಸಂ.೬,ವ.೫೪)
(ಆರಿಕೆ ಬಿತ್ತಿದ-ಸಾಲಾಗಿ ಬಿತ್ತಿದ [?])
ಬೇಸಾಯಗಾರನು ಸಾಲಾಗಿ ಬಿತ್ತಿದ ಗಿಡಗಳ ಹೂವನ್ನು ಕೊಯ್ದು, ಊರಿನ ಜನ ಕಟ್ಟಿಸಿದ ಕರೆಯ ನೀರನ್ನು ತಂದು, ನಾಡಿನ ಜನರೆಲ್ಲರೂ ನೋಡಲೆಂದು ಮಾಡಿದ ಪುಣ್ಯ ಹೂವಿಗೋ, ನೀರಿಗೋ, ನಾಡಿನ ಎಲ್ಲರಿಗೋ ಅಥವಾ ಪೂಜೆ ಮಾಡಿದವರಿಗೋ? ಇದು ನನಗೆ ತಿಳಿಯದು, ನೀನೇ ಹೇಳು.
ಪೂಜೆಯೆಂಬುದು ಅರ್ಥವಿಲ್ಲದ ಆಚರಣೆಯೆಂಬ ಮನೋಭಾವ ಹಲವು ವಚನಕಾರರಲ್ಲಿ ಕಾಣುತ್ತದೆ. ಅಲ್ಲಮವಚನಗಳಂತೂ ಪೂಜೆ ಸಾಧ್ಯವೇ ಇಲ್ಲ ಎಂಬ ನಿಲುವನ್ನು ವ್ಯಕ್ತಪಡಿಸುತ್ತವೆ. ಸಾಯುವವರ, ನೋಯುವವರ ಕೈಯಲ್ಲಿ ಪೂಜೆಯನ್ನು ಮಾಡಿಸಿಕೊಳ್ಳಲು ದೇವರಿಗೇ ಲಜ್ಜೆಯಾಗಬೇಕು (೨.೪೯೮) ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ ?
ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ (೨.೪೨೫) ಎಂಬ ವಚನಗಳನ್ನು ನೋಡಿ. ನಿಸರ್ಗವೇ ಪೂಜೆಯಲ್ಲಿ ತೊಡಗಿರುವಾಗ ಮನುಷ್ಯರು ಮಾಡುವ ಪೂಜೆ ತೋರಿಕೆಯಲ್ಲವೇ ಎಂದು ಕೇಳುವುದಿದೆ (೨.೧೯೮) ಮನೋಭಾವಗಳ ವರ್ತನೆಗಳ ಮೂಲಕವೇ ಪೂಜಿಸಬೇಕು ಅನ್ನುವುದೂ ಇದೆ. ಅಷ್ಟು ತೀವ್ರಗಾಮಿಯಲ್ಲದಿದ್ದರೂ ಅಂಬಿಗರ ಚೌಡಯ್ಯ ಈ ವಚನದಲ್ಲಿ ಪೂಜೆಯ ಫಲವೆಂಬ ಕಲ್ಪನೆಯನ್ನೇ ಪ್ರಶ್ನೆ ಮಾಡುತ್ತಿರುವಂತಿದೆ. ಬೇಡರ ಕಣ್ಣಪ್ಪ, ಕೋಳೂರು ಕೊಡಗೂಸುಗಳ ಕಥೆಯಲ್ಲಿಯೂ ಮುಗ್ಧತೆಯಿರದ ಪೂಜೆಗೆ ಅರ್ಥವಿಲ್ಲ ಎಂಬ ಧೋರಣೆಯೇ ವ್ಯಕ್ತವಾಗುತ್ತದೆ.
ಅಂಬಿಗರ ಚೌಡಯ್ಯ
೨೭೮ ವಚನಗಳು ದೊರೆತಿವೆ. ಅಂಬಿಗ ಚೌಡಯ್ಯ ಎಂಬುದೇ ವಚನಾಂಕಿತ. ಬದುಕಿನ ವಿವರಗಳು ತಿಳಿದಿಲ್ಲ. ಕಟುವಾದ ಮಾತಿನಲ್ಲಿ, ಕಟುವೆನಿಸುವ ರೀತಿಯಲ್ಲಿ ಸಮಾಜದ ವಿಮರ್ಶೆ ಮಾಡಿರುವ ವಚನಗಳು ಹೆಚ್ಚಾಗಿವೆ.

