ಕರ್ಣನ ಸೈಕಾಲಜಿ : coffee house ಕತೆಗಳು

ಸಂಗ್ರಹಾನುವಾದ: ಚಿದಂಬರ ನರೇಂದ್ರ

ಸುಖ ದುಃಖಗಳನ್ನು ಸಮಾನವಾಗಿ ಕಾಣುವಂತೆ ಪ್ರೇರೇಪಿಸುವ ಗ್ರೀಕ್ ತತ್ವಶಾಸ್ತ್ರ stoicism ನಲ್ಲಿ Amor Fati ಎನ್ನುವ ಒಂದು ಶಕ್ತಿಶಾಲಿಯಾದ ಪರಿಕಲ್ಪನೆಯಿದೆ. ಹಾಗೆಂದರೆ ನಿಮ್ಮ ನಿಯತಿಯನ್ನು ಅದು ಎಷ್ಟೇ ದುಃಖದಾಯಕವಾಗಿದ್ದರೂ ಪ್ರೀತಿಸಿ ಎಂದು.

ಭಾರತೀಯ ಮಹಾಕಾವ್ಯ ಮಹಾಭಾರತದಲ್ಲಿ ಒಬ್ಬ ವ್ಯಕ್ತಿ ಇದ್ದಾನೆ, ಅವನು ಕೇವಲ stoicism ನ ಅಧ್ಯಯನ ಮಾಡಿದವನಾಗಿರಲಿಲ್ಲ ಅದನ್ನು ಬದುಕಿದವನಾಗಿದ್ದ. ಅವನೇ ಕರ್ಣ. Victim card  ನ ಪ್ಲೇ ಮಾಡಲು ಬದುಕಿನಲ್ಲಿ ಯಾರಿಗಾದರೂ ಅರ್ಹತೆ ಇದೆ ಎಂದರೆ ಅದು ಕರ್ಣನಿಗೆ.  ಹುಟ್ಟಿದಾಗಲೇ ಅವನ ತಾಯಿ ಅವನನ್ನು ತ್ಯಜಿಸಿದಳು, ಅವನ ಗುರು ವೇ ಅವನಿಗೆ ಶಾಪ ಕೊಟ್ಟ, ಅವನ ರಥದ ಸಾರಥಿಯೇ ಅವನಿಗೆ ಅತ್ಯಂತ ಮಹತ್ವದ ಕ್ಷಣದಲ್ಲಿ ಮೋಸ ಮಾಡಿದ, ದೈವ ಶಾಪದ ಕಾರಣವಾಗಿ ಅವನ ಬಳಿ ಇದ್ದ ಮಹಾ ಅಸ್ತ್ರ ಯುದ್ಧದಲ್ಲಿ ಅವನ ಉಪಯೋಗಕ್ಕೆ ಬರಲಿಲ್ಲ.

ಆಧುನಿಕ ಸೈಕಾಲೊಜಿಯಲ್ಲಿ ಹೀಗೆ ಒಂದಾದ ಮೇಲೊಂದರಂತೆ ಕೆಟ್ಟ ಸಂಗತಿಗಳು ನೀವು ಸೋಲುವವರೆಗೆ ಸಂಭವಿಸುತ್ತಲೇ ಹೋಗುವ ಸ್ಥಿತಿಯನ್ನು ವಿವರಿಸಲು Learned Helplessness ಎನ್ನುವ ಪರಿಕಲ್ಪನೆಯಿದೆ. ಯಾಕೆ ಎಲ್ಲ ಅನಾಹುತಗಳು ನನ್ನ ಸುತ್ತಲೇ ಸಂಭವಿಸುತ್ತಿವೆ?  ಆದರೆ ಕರ್ಣ ಯಾವತ್ತೂ ಈ ಪ್ರಶ್ನೆಯನ್ನು ಕೇಳಲಿಲ್ಲ. ಜಗತ್ತು ಕರ್ಣನಿಂದ ಎಲ್ಲವನ್ನೂ ಕಿತ್ತುಕೊಂಡಿತು ಆದರೆ ಕರ್ಣ ಜಗತ್ತಿಗೆ ತಾನು ಕೊಡುವುದನ್ನು ನಿಲ್ಲಿಸಲೇ ಇಲ್ಲ. ಆದ್ದರಿಂದ ನಾವು ಅವನನ್ನು ಕೇವಲ ಮಹಾವೀರ ಎಂದಷ್ಟೇ ಗುರುತಿಸುವುದಿಲ್ಲ, ಜಗತ್ತು ಅವನನ್ನು ದಾನಶೂರ ಕರ್ಣ ಎಂದೇ ಗೌರವಿಸುತ್ತದೆ.

ಕರ್ಣ ತನ್ನ ವ್ಯಕ್ತಿತ್ವವನ್ನು ತಾನು ಅನುಭವಿಸಿದ ಸಂದರ್ಭಗಳ ಮೇಲೆ ಕಟ್ಟಿಕೊಳ್ಳಲು ಬಯಸಲಿಲ್ಲ ಬದಲಾಗಿ ಅವನು ತನ್ನ ವ್ಯಕ್ತಿತ್ವವನ್ನ ತನ್ನ ಪ್ರತಿಕ್ರಿಯೆಗಳ ಮೇಲೆ ಕಟ್ಟಿಕೊಂಡ. ಥೇಟ್ ಇದನ್ನೇ holocaust  survivor ಜಗತ್ತಿನ ಶ್ರೇಷ್ಠ ಮನಶಾಸ್ತ್ರಜ್ಞ ವಿಕ್ಟರ್ ಫ್ರಾಂಕಲ್, ತಾನು  concentration camp ಗಳಲ್ಲಿ ಅಪಾರ ಯಾತನೆ ಅನುಭವಿಸಿ ಬಂದ ನಂತರ ಬರೆಯುತ್ತಾನೆ, ಎಲ್ಲವನ್ನೂ ಮನುಷ್ಯನಿಂದ ಕಿತ್ತುಕೊಳ್ಳಬಹುದು ಆದರೆ ಎಂಥದೇ ಸಂದರ್ಭದಲ್ಲಿ ತನ್ನ  attitude ನ ಆಯ್ಕೆ ಮಾಡಿಕೊಳ್ಳ ಬಯಸುವ ಮನುಷ್ಯನ ಕೊನೆಯ ಸ್ವಾತಂತ್ರ್ಯವನ್ನು ಅವನಿಂದ ಕಿತ್ತುಕೊಳ್ಳುವುದು ಸಾಧ್ಯವಿಲ್ಲ.

ಭಾರತೀಯ ತತ್ವಶಾಸ್ತ್ರ ಇದನ್ನು ಪ್ರಾರಬ್ಧ ಮತ್ತು ಪುರುಷಾರ್ಥಗಳ ನಡುವಿನ ವ್ಯತ್ಯಾಸ ಎಂದು ಗುರುತಿಸುತ್ತದೆ. ನಿಮ್ಮ ಪ್ರಾರಬ್ಧ ನಿಮ್ಮ ಹುಟ್ಟು, ನಿಮ್ಮ ಸಂಕಟ, ನೀವು ಅನುಭವಿಸಿದ ಸಂದರ್ಭಗಳಿಂದ, ಯಾವುದನ್ನು ನಿಮ್ಮಿಂದ ನಿಯಂತ್ರಿಸುವುದು ನಿಮ್ಮಿಂದ ಸಾಧ್ಯವಿಲ್ಲವೋ ಅಂಥ ಎಲ್ಲವುಗಳಿಂದ ರೂಪಿತವಾಗಿದ್ದರೆ, ನಿಮ್ಮ ಪುರುಷಾರ್ಥ ನೀವು ಇವುಗಳಿಗೆಲ್ಲ ಹೇಗೆ ಪ್ರತಿಕ್ರಯಿಸುತ್ತೀರಿ ಎನ್ನುವುದರ ಮೇಲೆ ನಿರ್ಭರವಾಗಿರುತ್ತದೆ. ತಾನು ಸೋಲುವುದು ಕರ್ಣನಿಗೆ ಗೊತ್ತಿತ್ತು, ನಿಯತಿ, ಕಾಲ, ದೈವ ಎಲ್ಲವೂ ಅವನಿಗೆ ವಿರುದ್ಧವಾಗಿತ್ತು. ಆದರೂ ಅವನು ಯುದ್ಧ ಮಾಡಿದ, ಏಕೆಂದರೆ ಅವನಿಗೆ ಒಂದು ಸಂಗತಿಯನ್ನು ಹೇಳಬೇಕಿತ್ತು ಅದೇನೆಂದರೆ ನಿಯತಿ ನಿಮ್ಮನ್ನು ಸೋಲಿಸಬಹುದು ಆದರೆ ಅದು ನಿಮ್ಮನ್ನು ಚೂರು ಚೂರು ಮಾಡಲಾರದು. 

ಬದುಕು ನಿಮಗೆ unfair ಆಗಿದೆ ಎಂದು ನಿಮಗೆ ಅನಿಸುತ್ತಿದೆಯಾದರೆ, ನಿಮಗೆ ನೆನಪಿರಲಿ ಯಾವತ್ತೂ ಬದುಕು ನಿಮಗೆ fair ಆಗಿರಬೇಕಾಗಿರಲಿಲ್ಲ. ಮನೆಯಲ್ಲಿ ಅಳುತ್ತ ಕುಳಿತು ಬಿಡಬೇಡಿ, ನೀವು ಬಲಿಪಶು ಅಲ್ಲ, ಸಂದರ್ಭಗಳು ಎಷ್ಟೇ ಕೆಟ್ಟದಾಗಿರಬಹುದು ನಿಮ್ಮೊಳಗಿನ ಕರ್ಣನನ್ನು ಎಚ್ಚರಿಸಿಕೊಳ್ಳಿ, ಈ ಎಲ್ಲಕ್ಕೂ ಪ್ರತಿಕ್ರಯಿಸುವ ನಿಮ್ಮ ಪುರುಷಾರ್ಥ ನಿಮ್ಮ ಕೈಯಲ್ಲೇ ಇದೆ.

*********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.