ಹಿರಿತನ ಇರೋದು ಗಾತ್ರದಲ್ಲಿ ಅಲ್ಲ ಅನ್ನೋದು ಈ ಕತೆಯ ನೀತಿ. ಹಾಗೇ, ದೊಡ್ಡಸ್ಥಿಕೆ ಅನ್ನೋದು ತೋರುಗಾಣಿಕೆಯಲ್ಲಿ ಇರೋದಿಲ್ಲ ಅನ್ನೊಂದು ಇದರ ಒಳಾರ್ಥ । ಚೇತನಾ ತೀರ್ಥಹಳ್ಳಿ
ಒಂದಾನೆ. ಅದರ ಮೇಲೊಂದು ಮಂಗ. ಮಂಗದ ಬೆನ್ನ ಮೇಲೆ ಮೊಲ. ಆ ಮೊಲದ ಮೇಲೊಂದು ಪಾರಿವಾಳ. ಇವೆಲ್ಲ ಒಂದು ಮರದ ಕೆಳಗೆ ನಿಂತಿವೆ, ಪಾರಿವಾಳದ ಕಣ್ಣ ಮುಂದೆ ಹಣ್ಣು ತೂಗುತ್ತಿದೆ.
ಈ ಚಿತ್ರ ಬೌದ್ಧ ವಿಹಾರಗಳಲ್ಲಿ, ಅದರಲ್ಲೂ ಲೆಹ್ ಮತ್ತು ಭೂತಾನ್ ಮೊನಾಸ್ಟರಿಗಳಲ್ಲಿ ವೀಶೇಷವಾಗಿ ಕಂಡುಬರುತ್ತದೆ. ಭೂತಾನ್‌ನಲ್ಲಿ ಈ ಚಿತ್ರ ಕೇವಲ ಮೊನಾಸ್ಟರಿಗೆ ಸೀಮಿತವಲ್ಲ, ಇದು ಆ ದೇಶದ ಸಾಂಸ್ಕೃತಿಕ ಲಾಂಛನದಂತೆ ಎಲ್ಲೆಂದರಲ್ಲಿ, ಬಗೆಬಗೆಯ ಮಾಧ್ಯಮಗಳ ಮೇಲೆ ರಾರಾಜಿಸುತ್ತ ಇರುತ್ತದೆ. ಈ ಚಿತ್ರ ಸ್ವಾರಸ್ಯಕರ ಕತೆಯೊಂದರ ಇಲಸ್ಟ್ರೇಶನ್.
ಒಂದು ಕಾಡಲ್ಲಿ ಒಂದು ಪಾರಿವಾಳ, ಮೊಲ, ಮಂಗ ಮತ್ತು ಆನೆ ಒಟ್ಟಾಗಿ ವಾಸ ಮಾಡ್ತಾ ಇರ್ತವೆ. ಒಂದು ಸಲ ಅವೆಲ್ಲ ಮಾತಾಡ್ತಾ ಒಂದು ದೊಡ್ಡ ಮರದ ಕೆಳಗೆ ಬರ್ತವೆ. ಆ ಮರದಲ್ಲಿ, ಎತ್ತರದಲ್ಲಿ ಒಂದೇ ಒಂದು ಹಣ್ಣು ತೂಗ್ತಾ ಇರುತ್ತೆ. ನಮ್ಮಲ್ಲಿ ಯಾಋ ಹಿರಿಯರೋ ಅವರಿಗೆ ಆ ಹಣ್ಣು ಅಂತ ಮಾತಾಡಿಕೊಳ್ತವೆ. ಆಗ ಆನೆ, ‘ನಾನು ಚಿಕ್ಕೋನಿದ್ದಾಗ ಈ ಮರ ಇಷ್ಟು ಎತ್ತರಕ್ಕೆ ಬೆಳೆದಿರ್ಲಿಲ್ಲ. ನಾನು ಇದರ ಪಕ್ಕ ನಡೀವಾಗ ಇದರ ಕೊಂಬೆಗಳು ನನ್ನ ಹೊಟ್ಟೆಗೆ ತಾಗ್ತಾ ಇದ್ವು’ ಅನ್ನುತ್ತೆ. ಮಂಗ, ‘ನಾನು ಚಿಕ್ಕೋನಿದ್ದಾಗ ಈ ಮರ ಇನ್ನೂ ಸಸಿಯಾಗಿತ್ತು. ನಾನು ಅದರ ಮೇಲೆ ಕೂತ್ಕೊಂಡು ಆಟ ಆಡ್ತಿದ್ದೆ’ ಅನ್ನುತ್ತೆ. ಮೊಲ, ‘ನಾನು ಚಿಕ್ಕೋನಿದ್ದಾಗ ಇದಿನ್ನೂ ಎರಡೇ ಎರಡು ಎಲೆಗಳಿದ್ದ ಮೊಳಕೆ ಗಿಡ ಆಗಿತ್ತು. ನಾನು ಇದರ ಎಲೆಗಳನ್ನ ನೆಕ್ತಾ ಇರ್ತಿದ್ದೆ’ ಅನ್ನುತ್ತೆ. ಪಾರಿವಾಳ, ‘ನಾನು ಈ ಮರನ ನೋಡೇ ಇರ್ಲಿಲ್ಲ. ಎಲ್ಲಿಂದಾನೋ ಒಂದು ಹಣ್ಣಿನ ಬೀಜ ತಂದು ಹಾಕಿದ್ದೆ, ಅದೇ ಇವತ್ತು ಇಷ್ಟು ದೊಡ್ಡ ಮರವಾಗಿ ನಿಂತಿರೋದು’ ಅನ್ನುತ್ತೆ. ಅದರ ಮಾತು ಕೇಳಿ ಉಳಿದವೆಲ್ಲ, ಪಾರಿವಾಳನೇ ಹಿರಿಯ ಅಂತ ಗೌರವಿಸಿ ಹಣ್ಣು ತಿನ್ನೋ ಗೌರವ ಅದಕ್ಕೇ ಬಿಟ್ಟುಕೊಡ್ತವೆ. ಆದರೆ ಪಾರಿವಾಳ ಆ ಹಣ್ಣನ್ನು ಎಲ್ಲರ ಜೊತೆ ಹಂಚಿ ತಿನ್ನುತ್ತೆ.
ನೋಡೋಕೆ ಮಿಕ್ಕವಕ್ಕಿಂತ ದೊಡ್ಡ ಗಾತ್ರ ಹೊಂದಿದ್ದ ಆನೆ, ಎಲ್ಲಕ್ಕಿಂತ ಕಿರಿಯನಾಗಿರುತ್ತೆ. ಆದ್ರಿಂದ, ಹಿರಿತನ ಇರೋದು ಗಾತ್ರದಲ್ಲಿ ಅಲ್ಲ ಅನ್ನೋದು ಈ ಕತೆಯ ನೀತಿ. ಹಾಗೇ, ದೊಡ್ಡಸ್ಥಿಕೆ ಅನ್ನೋದು ತೋರುಗಾಣಿಕೆಯಲ್ಲಿ ಇರೋದಿಲ್ಲ ಅನ್ನೊಂದು ಇದರ ಒಳಾರ್ಥ. ಈ ನೀತಿಯ ಜೊತೆಗೇಈ ಕತೆಯನ್ನ ಒಗ್ಗಟ್ಟು ಮತ್ತು ಸೌಹಾರ್ದದ ಸಂಕೇತವಾಗಿಯೂ ನೋಡಲಾಗುತ್ತೆ. ಆ ನಾಲ್ಕೂ ಪ್ರಾಣಿಗಳೂ ಒಂದರ ಮೇಲೊಂದು ಏರಿ ಹಣ್ಣು ಎಟುಕಿಸಿಕೊಳ್ಳುವ ಚಿತ್ರ ಬಿಡಿಸಲಾಗಿರುವುದು ಇದನ್ನು ಸಾರಲೆಂದೇ.
~
ವಿನಯ ಪಿಟಕದಲ್ಲಿ ಈ ಕತೆ ಬೇರೊಂದು ಆಯಾಮ ಕಟ್ಟಿಕೊಡುತ್ತೆ. ಅದರ ಪ್ರಕಾರ – ಪಾರಿವಾಳ, ಮೊಲ, ಮಂಗ ಮತ್ತು ಆನೆ ಕ್ರಮವಾಗಿ ಬೋಧಿಸತ್ವ, ಶಾರಿಪುತ್ರ, ಮೌದ್ಗಲ್ಯಾಯನ ಮತ್ತು ಆನಂದ.
ಬೌದ್ಧ ಸಂಘದಲ್ಲಿ ಒಮ್ಮೆ ಹಿರಿತನದ ಚರ್ಚೆ ಶುರುವಾಗಿಬಿಡುತ್ತೆ. ವಯಸ್ಸು ಅಥವಾ ದೀಕ್ಷೆ ಪಡೆದ ಯಾದಿಯ ಪ್ರಕಾರ ಹಿರಿತನವೋ ಅಥವಾ ಕಾರ್ಯದಿಂದಲೋ ಅನ್ನುವ ಚರ್ಚೆ ಕಾವೇರುತ್ತೆ. ಅದನ್ನು ಪರಿಹರಿಸಲು ಬುದ್ಧ ಈ ದೃಷ್ಟಾಂತ ಕತೆ ಹೇಳ್ತಾನೆ. ಅದರಿಂದ; ಮರದ ಹುಟ್ಟಿಗೆ ಪಾರಿವಾಳ ಕಾರಣವಾದಂತೆ ಸಂಘದ ಹುಟ್ಟಿಗೆ ಕಾರಣನಾದ ಬೋಧಿಸತ್ವ (ಬುದ್ಧ) ಎಲ್ಲರಿಗಿಂತ ಹಿರಿಯ, ನಂತರದಲ್ಲಿ ಆರಂಭದಿಂದಲೂ ಸಂಘದ ಜೊತೆಯಿದ್ದು ಅದರ ಬೆಳವಣಿಗೆಗೆ ಸಾಕ್ಷಿಯಾದ ಬುದ್ಧನ ಮುಖ್ಯ ಶಿಷ್ಯರಾದ ಶಾರಿಪುತ್ರ, ಮೌದ್ಗಲ್ಯಾಯನ ಮತ್ತು ಆನಂದರೇ ಹಿರಿಯರು ಅನ್ನೋದನ್ನು ಶಿಷ್ಯರು ಅರ್ಥ ಮಾಡಿಕೊಳ್ತಾರೆ.
~
ಈ ಕತೆಯಿಂದ ಇನ್ನೂ ಒಂದು ಪಾಠ ಕಲಿಯಬಹುದು. ಅದು, ಸಮುದಾಯದ ಏಳಿಗೆಗಾಗಿ ಅಹಂಕಾರ ತ್ಯಾಗ. ಕತೆಯ ಪ್ರಕಾರ ಆ ಹಣ್ಣನ್ನು ಎಟುಕಿಸಿಕೊಳ್ಳೋಕೆ ಆನೆ ಮೇಲೆ ಮಂಗ, ಮಂಗದ ಮೇಲೆ ಮೊಲ, ಮೊಲದ ಮೇಲೆ ಪಾರಿವಾಳ ನಿಂತುಕೊಳ್ತವೆ. ಇಲ್ಲಿ – ಪಾರಿವಾಳಕ್ಕೆ ಹಾರಲು ಬರುತ್ತೆ, ಮತ್ಯಾಕೆ ಅವಲಂಬನೆ ಅನ್ನುವ ಪ್ರಶ್ನೆ ಏಳುತ್ತದೆ. ಇದರ ಉತ್ತರ ಸರಳವಾಗಿದೆ. ಪಾರಿವಾಳ ಬುದ್ಧನ ಪ್ರತಿನಿಧಿ. ಬುದ್ಧ ಅದಾಗಲೇ ಬೋಧೆ ಪಡೆದಿದ್ದರೂ ಸಂಘದ ನಿಯಮಗಳನ್ನು ಪಾಲಿಸುತ್ತಿದ್ದ, ಭಿಕ್ಷಾ ಪಾತ್ರೆ ಹಿಡಿದು ಸಂಚರಿಸುತ್ತಿದ್ದ, ಧ್ಯಾನ ಮಾಡುತ್ತಿದ್ದ. ತಾನು ಬೋಧೆ ಪಡೆದವನೆಂಬ ಅಹಂಕಾರ ತೋರದೆ, ನಿಯಮ ಪಾಲನೆಯ ಮೂಲಕ ತನ್ನ ಅನುಯಾಯಿಗಳಿಗೆ ಮಾದರಿ ಹಾಕಿಕೊಟ್ಟ. ನಿಮ್ಮೆಲ್ಲರಿಂದಾಗಿ ನಾನು, ನಿಮ್ಮೆಲ್ಲರ ಜೊತೆ ನಾನು – ಅನ್ನುವ ಭಾವನೆ ಬೆಳೆಸಿದ. ಪಾರಿವಾಳವೂ ಹಾಗೇ. ತನಗೆ ಹಾರಲು ಬರುತ್ತದೆ, ನಿಮ್ಮ ಮರ್ಜಿ ಬೇಕಿಲ್ಲ ಎಂದು ಅಹಂಕಾರ ತೋರಲಿಲ್ಲ. ತನ್ನ ಗೆಳೆಯರ ಜೊತೆಗೂಡಿ, ಅವುಗಳ ಆಟದಲ್ಲಿ ಒಂದಾಯಿತು, ಅವು ರಚಿಸಿದ್ದ ಏಣಿಯ ಮೇಲೇರಿ ಹಣ್ಣು ಎಟುಕಿಸಿಕೊಂಡಿತು.
~
ಭೂತಾನ್ ನಲ್ಲಿ ಇದನ್ನು ಸೌಹಾರ್ದ ಮತ್ತು ಒಗ್ಗಟ್ಟಿನ ಸಂಕೇತವಾಗಿ ನೋಡುತ್ತಾರಂತೆ. ಜೊತೆಗೆ, ಪರಿಸರ ಸಂರಕ್ಷಣೆಯ ವಿವಿಧ ಮಜಲುಗಳಲ್ಲಿ ಈ ನಾಲ್ಕೂ (ಬಗೆಯ) ಪ್ರಾಣಿಗಳ ಕೊಡುಗೆ ಮತ್ತು ಮಹತ್ವವನ್ನು ಈ ಚಿತ್ರ ಸಂಕೇತಿಸುತ್ತದೆಯಂತೆ. ಪರಿಸರವನ್ನು ಉಸಿರಿನಂತೆ ಕಾಯುವ ಭೂತಾನೀ ಜನರು ಈ ಚಿತ್ರಕ್ಕೆ ಇಷ್ಟು ಮಹತ್ವ ಕೊಟ್ಟಿರುವುದು ಅಚ್ಚರಿಯ ವಿಷಯವೇನಲ್ಲ.

