ವಚನ ವೈವಿಧ್ಯ#34 : ಸುದ್ದಿ ಹೇಳದೆ ಬಯಲಾದ-ಮುಕ್ತಾಯಕ್ಕ

ಸಾವನ್ನು ಎಷ್ಟು ಬೇರೆ ಬೇರೆ ಥರದಲ್ಲಿ ಈ ವಚನ ವಿವರಿಸುತ್ತಿದೆ ನೋಡಿ. ಹರಿಯುವ ತೊರೆಗೆ ಕಟ್ಟೆ ಕಟ್ಟಿ ನೀರು ಹಿಡಿದಿಡಲು ಆಗದು. ಬದುಕಿನ ತೊರೆ ಹರಿದು ಸಾಗಲೇ ಬೇಕು… । ಓ.ಎಲ್.ನಾಗಭೂಷಣ ಸ್ವಾಮಿ

ತೊರೆಯ ಕಟ್ಟೆಯಕಟ್ಟಿ ನಿಲಿಸಲುಬಹುದೆ
ನೆರೆ ಮರುಳಿಗೆ ಬುದ್ದಿಯ ಹೇಳಲುಬಹುದೆ
ತರಿಸಲುವೋದವನಿದಿರಿಚ್ಚೆಯನರಿಯದೆ ಮರೆದಿದ್ದಡೆ
ಹಗೆ ಇರಿವುದ ಮಾಣ್ಬನೆ
ದೂರದಲ್ಲಿ ಹೋದವ ಊರ ಸುದ್ದಿಯನರಿಯ .
ಹೇಳದೆ ಬಯಲಾದ ಕಾಣಾ ಎನ್ನ ಅಜಗಣ್ಣತಂದೆ. [೫.೧೧೧೮]

[ನೆರೆ ಮರುಳು-ಪೂರಾ ಹುಚ್ಚು; ಹಗೆ-ಶತ್ರು; ತಱಿಸಲುವೋಗು-ಆಧಿಪತ್ಯ ಸಾಧಿಲು ಹೋಗು; ಇದಿರಿಚ್ಚೆ-ಎದುರಿನ/ಎದುರಾಳಿತ ಇಚ್ಛೆ;  ಮಾಣ್ಬನೆ-ಬಿಡುವನೆ]

ತೊರೆಗೆ ಕಟ್ಟೆಯನ್ನು ಕಟ್ಟಿ ನೀರು ನಿಲ್ಲಿಸಲು ಸಾಧ್ಯವೇ? ಪೂರಾ ಹುಚ್ಚರಾಗಿರುವವರಿಗೆ ಬುದ್ಧಿ ಹೇಳಲು ಸಾಧ್ಯವೇ? ನಮ್ಮನ್ನು ಅಧೀನಗೊಳಿಸಿಕೊಳ್ಳಲು ಬಯಸುವ ಶತ್ರುವಿನ ಇಚ್ಛೆಯನ್ನು ಅರಿಯದೆ ಮರೆತಿದ್ದರೆ ಅವನು ಬಂದು ಇರಿಯುವುದನ್ನು ಬಿಡುತ್ತಾನೆವೇ? ದೂರಕ್ಕೆ ಹೋದ ಊರ ಸುದ್ದಿಯನ್ನು ಹೇಳದೆ ಇನ್ನಿಲ್ಲವಾದ, ನನ್ನ ಅಜಗಣ್ಣತಂದೆ.

ಸಾವನ್ನು ಎಷ್ಟು ಬೇರೆ ಬೇರೆ ಥರದಲ್ಲಿ ಈ ವಚನ ವಿವರಿಸುತ್ತಿದೆ ನೋಡಿ. ಹರಿಯುವ ತೊರೆಗೆ ಕಟ್ಟೆ ಕಟ್ಟಿ ನೀರು ಹಿಡಿದಿಡಲು ಆಗದು. ಬದುಕಿನ ತೊರೆ ಹರಿದು ಸಾಗಲೇ ಬೇಕು. ಪೂರಾ ಹುಚ್ಚರಾದವರು-ಲೌಕಿಕ ಬದುಕಿನ ಹುಚ್ಚು ಹಿಡಿಸಿಕೊಂಡವರಿಗೇ ಆಗಲಿ, ಅಧ್ಯಾತ್ಮದ ಹುಚ್ಚು ಹಿಡಿಸಿಕೊಂಡವರಿಗೇ ಆಗಲಿ ಬುದ್ಧಿ ಹೇಳಲು ಸಾಧ್ಯವೇ? ತರ್ಕದ ಎಚ್ಚರ ಇರದಿದ್ದರೆ ಸಾವು ಅನ್ನುವ ಶತ್ರು ಬಂದು ಇರಿಯುವುದನ್ನು ತಪ್ಪಿಸಲಾಗದು. ನಮ್ಮನ್ನು ವಶಮಾಡಿಕೊಳ್ಳುವುದೇ ನಮಗೆ ಇದಿರಾಗಿರುವ ಅವನ ಇಚ್ಛೆ. ದೂರದ ಊರಿಗೆ ಹೋದ ಅಜಗಣ್ಣ ಊರಿನ ಸುದ್ದಿ ಹೇಳದೆ ಇಲ್ಲವಾದ.

ಸಾವು ತಪ್ಪದು, ಆದರೆ ಸಾವನ್ನು ಒಪ್ಪಲು ಮನಸಿನಲ್ಲ. ಅಣ್ಣ ತಾನು ತಿಳಿದ ಸಾವಿನೂರಿನ ಸುದ್ದಿ ತಿಳಿಸದೆ ಮರೆಯಾದ. ಆತ್ಯಂತಿಕ ಅನ್ನಬಹುದಾದ ಅನುಭವವನ್ನು ಯಾರೂ ತಿಳಿಸಲಾರರು.


ಮುಕ್ತಾಯಕ್ಕ

ಲಕ್ಕುಂಡಿ ಎಂಬ ಊರಿನ ವಚನಕಾರ್ತಿ. ಅಜಗಣ್ಣನ ತಂಗಿ. ಮುಕ್ತಾಯಕ್ಕ ರಚಿಸಿರುವ ೩೭ ವಚನಗಳು ದೊರೆತಿವೆ. ಶೂನ್ಯ ಸಂಪಾದನೆಗಳಲ್ಲಿ ಅಲ್ಲಮ ಮತ್ತು ಮುಕ್ತಾಯಕ್ಕನ ಸಂವಾದ ಆರಂಭದಲ್ಲೇ ಬರುತ್ತದೆ ಈಕೆ ತನ್ನಣ್ಣ ಅಜಗಣ್ಣನನ್ನೇ ಗುರುವೆಂದು ನಂಬಿ ಸಾಧನೆ ಮಾಡಿದ ಹೆಣ್ಣುಮಗಳು. ಅನುಭಾವವು ಮಾತಿನಲ್ಲಿ ಹೇಳುವಂಥದಲ್ಲ, ಅದು ಶುದ್ಧಾಂಗವಾಗಿ ವೈಯಕ್ತಿಕ ಎಂಬುದು ಆಕೆಯ ನಿಲುವು. ಅಲ್ಲಮನಷ್ಟೇ ಪ್ರಖರವಾಗಿ ವಿಷಯ ಮಂಡನೆ ಮಾಡಿರುವುದನ್ನು ಈಕೆಯ ವಚನಗಳಲ್ಲಿ ಕಾಣುತ್ತೇವೆ. ಅನುಭಾವವೂ ಜ್ಞಾನದ ಮಾರ್ಗ ಎಂದು ಅಲ್ಲಮ ಈಕೆಯ ಮನ ಒಲಿಸುತ್ತಾನೆ. ಈ ಮನವೊಲಿಸುವಿಕೆ ಇರದಿದ್ದರೆ ಶೂನ್ಯಸಂಪಾದನೆಗೆ ತಳಹದಿಯೇ ಇರುತ್ತಿರಲಿಲ್ಲ. ಅನುಭಾವವನ್ನು ಕುರಿತು ಮಾತಾಡುವ ಅಗತ್ಯವನ್ನು ಅಲ್ಲಮನ ವಚನಗಳಲ್ಲಿ ಕಂಡರೆ ಮಾತಿಗೆ ಒಗ್ಗದ ತೀವ್ರಾನುಭವ ಮುಕ್ತಾಯಕ್ಕನವರ ರಚನೆಗಳಲ್ಲಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.