ಒಳ್ಳೆಯವರಿಂದ ತೊಂದರೆ ಆಗೋದಿಲ್ವ? ವಾಲ್ಟೇರ್ ಮಾತು ಕೇಳಿ…

ಒಮ್ಮೆ ನೀವು ಮನುಷ್ಯರನ್ನು ವೈರಿಗಳಂತೆ  ನೋಡಲು ಶುರು ಮಾಡುತ್ತೀರಾದರೆ ಹಿಂಸೆ ಮಾಡುವುದರಿಂದ ಹೇಗೆ ತಪ್ಪಿಸಿಕೊಳ್ಳುತ್ತೀರಿ?  ಎಂದು ಕೇಳುತ್ತಾನೆ ವೋಲ್ಟೇರ್ | ಕನ್ನಡಕ್ಕೆ: ಚಿದಂಬರ ನರೇಂದ್ರ

ನೀವು ತುಂಬ ಒಳ್ಳೆಯವರು, ನಿಮ್ಮಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ನಿಮಗೆ ಯಾವಾಗಲಾದರೂ  ಅನಿಸಿದೆಯಾ?  ಆದರೆ ಫ್ರೆಂಚ್ ತತ್ವಜ್ಞಾನಿ ವೊಲ್ಟೇರ್ ( Voltaire) ನ ಪ್ರಕಾರ, ನಿಮ್ಮ ಕೇವಲ ಒಂದು ನಂಬಿಕೆ ಸಾಕು ನಿಮ್ಮನ್ನು ರಾಕ್ಷಸನನ್ನಾಗಿಸಲು. ಅವನ ಪ್ರಸಿದ್ಧ ಮಾತೊಂದಿದೆ, “Those who can make you believe absurdities can make you commit atrocities”.

ಜಗತ್ತಿನ ಎಲ್ಲ ಕೆಟ್ಟ ಕೆಲಸಗಳನ್ನ ಪ್ರತಿಬಾರಿ ಕೇವಲ ದುಷ್ಟ ಮನುಷ್ಯರೇ ಮಾಡಬೇಕಿಲ್ಲ, ಹೆಚ್ಚಿನ ಕೆಟ್ಟ ಕೆಲಸಗಳನ್ನ ಸಾಧಾರಣ ಜನರೇ, ಯಾರು ಯೋಚಿಸುವುದನ್ನು ಬಿಟ್ಟು ಬಿಟ್ಟಿದ್ದಾರೆಯೋ ಅವರೇ ಮಾಡುತ್ತಾರೆ, ಎಂದು ವೊಲ್ಟೇರ್ ವಾದ ಮಾಡುತ್ತಾನೆ. ಯಾವ ಕ್ಷಣದಲ್ಲಿ ನೀವು ಅತಾರ್ಕಿಕ ಸಂಗತಿಗಳನ್ನ, ಸುಳ್ಳುಗಳನ್ನ,  ಯಾವ ಪ್ರಶ್ನೆ ಕೇಳಿಕೊಳ್ಳದೇ ಸ್ವೀಕರಿಸಲು ಶುರು ಮಾಡುತ್ತೀರೋ , ಆಗ ನಿಮ್ಮನ್ನು ಹಿಂಸೆ ಮಾಡುವುದರಿಂದ ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ.

ಮನುಷ್ಯರಲ್ಲಿ ಕಾರುಣ್ಯ ಎನ್ನುವ ಸಂಗತಿ ಅಂತರ್ಗತವಾಗಿದೆ. ಯಾವಾಗ ನೀವು ಒಬ್ಬ ಬಡ ಹುಡುಗ ಅಳುತ್ತ ಕುಳಿತಿರುವುದನ್ನ ನೋಡುತ್ತೀರೋ ಆಗ ನಿಮಗೆ ಆ ಮಗುವಿಗೆ ಏನಾದರೂ ಸಹಾಯ ಮಾಡಬೇಕು ಎಂದು ಸಹಜವಾಗಿ ಅನಿಸುತ್ತದೆ. ಆದರೆ ಒಬ್ಬ ರಾಜಕಾರಣಿ, ಒಬ್ಬ ಸಮುದಾಯದ ನಾಯಕ , ಒಬ್ಬ ಡಿಕ್ಟೇಟರ್, ನಿಮ್ಮ ಸತ್ಯವನ್ನು ನಾಶ ಮಾಡಿ, ನಿಮ್ಮೊಳಗೆ ಸುಳ್ಳನ್ನು ತುಂಬಿ, ಅಸಂಗತತೆಯನ್ನು ತುಂಬಿ, ಆ ಮಗು ಒಂದು ಸೈತಾನ, ಆ ಮಗುವನ್ನು ಕೊಲ್ಲುವುದು ದೇವರ ಬಯಕೆಯಾಗಿದೆ ಎಂದು ನಿನ್ನನ್ನು ಒಪ್ಪಿ ಬಲ್ಲನಾದರೆ,  ಆಗ ಆ ಕೆಲಸ ಮಾಡುವುದಕ್ಕೆ ನೀನು ಹಿಂದೆ ಮುಂದೆ ನೋಡುವುದಿಲ್ಲ.

ಈ ಅಸಂಗತತೆಗಳು ನಿಮ್ಮ ತಾರ್ಕಿಕತೆಗೆ ವಿರುದ್ಧವಾಗಿವೆ. ಆದರೆ ನೀವು ಅಸಂಗತತೆಗಳನ್ನು ಒಪ್ಪಿಕೊಂಡುಬಿಟ್ಟಿರಾದರೆ, ನಿಮ್ಮೊಳಗಿನ ಕಾರುಣ್ಯ ನಾಶವಾಗಿಬಿಡುತ್ತದೆ.  ಒಮ್ಮೆ ನೀವು ನಿಮ್ಮ ತಾರ್ಕಿಕತೆಗಳನ್ನು ಈ ಕುರುಡು ನಂಬಿಕೆಗಳಿಗೆ ಒಪ್ಪಿಸಿಬಿಟ್ಟರೆ ನೀವು ನಿಮ್ಮ ನೈತಿಕ ದಿಕ್ಸೂಚಿಯನ್ನು ಕಳೆದುಕೊಂಡುಬಿಡುತ್ತೀರಿ. ಆಗ ನೀವು ನಿಮಗಾಗಿ ಯೋಚಿಸುವುದನ್ನ ನಿಲ್ಲಿಸಿ ನಿಮ್ಮನ್ನು ಕಂಟ್ರೋಲ್ ಮಾಡುವವರಿಗಾಗಿ ಯೋಚಿಸಲು ಶುರು ಮಾಡುತ್ತೀರಿ.

ಇದನ್ನು ವಿವರಿಸಲು ವೊಲ್ಟೇರ್ crusades ಮತ್ತು inquisition ಗಳ ಉದಾಹರಣೆ ಕೊಡುತ್ತ, ಹೇಗೆ ಸಾಧಾರಣ ಜನರು ಆಯುಧಗಳಾಗಿ ಬದಲಾಗುತ್ತಾರೆ ಎನ್ನುವುದನ್ನ ವಿವರಿಸುತ್ತಾನೆ. Crusades ಅಂಥ ಒಂದು ನೆಲವನ್ನು ಆಕ್ರಮಿಸಿಕೊಳ್ಳಲು ದೇವರ ಹೆಸರಿನಲ್ಲಿ ಮಾಡಿದ ಯುದ್ಧವಾಗಿತ್ತು. ಮತ್ತು inquisition ಅಂಥ ಒಂದು ಕೋರ್ಟ ಆಗಿತ್ತು, ಎಲ್ಲಿ ಜನರ ವಿಭಿನ್ನ ನಂಬಿಕೆಗಳ ಕಾರಣವಾಗಿ ಅವರನ್ನು ಹಿಂಸಿಸಲಾಗುತ್ತಿತ್ತು, ಅವರಿಗೆ ಮರಣ ಶಾಸನ ವಿಧಿಸಲಾಗುತ್ತಿತ್ತು.

ನೀವು ಸೆಕ್ಯುಲರ್ ಆಗಿದ್ದರೆ ಸಾಕು  ಈ ಸಮಸ್ಯೆ ಇರೋದಿಲ್ಲ ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು.  ಏಕೆಂದರೆ ಆಧುನಿಕ ರಾಜಕಾರಣ ಕೂಡ ಇದೇ ಟ್ರಿಕ್ ಮಾಡುತ್ತದೆ. ರಾಜಕೀಯ ಪಕ್ಷಗಳು ಹೇಗೆ ಮಾತನಾಡುತ್ತವೆ ಎನ್ನುವುದನ್ನ ಗಮನಿಸಿ. ಅವರು, ಕೇವಲ ನಾವು ಪ್ರತಿಪಕ್ಷದ ಟ್ಯಾಕ್ಸ್ ನೀತಿಯನ್ನ ವಿರೋಧಿಸುತ್ತೇವೆ ಎಂದಷ್ಟೇ ಹೇಳುವುದಿಲ್ಲ. ಅವರು, ಪ್ರತಿಪಕ್ಷದವರು ದ್ರೋಹಿಗಳು, ಅವರು ಈ ದೇಶವನ್ನು ನಾಶಮಾಡುತ್ತಾರೆ, ಅವರು evil,  ಎಂದೆಲ್ಲ ನಿಮ್ಮನ್ನು ಒಪ್ಪಿಸುತ್ತಾರೆ. ಒಮ್ಮೆ ನೀವು ಮನುಷ್ಯರನ್ನು ವೈರಿಗಳಂತೆ  ನೋಡಲು ಶುರು ಮಾಡುತ್ತೀರಾದರೆ ಹಿಂಸೆ ಮಾಡುವುದರಿಂದ ಹೇಗೆ ತಪ್ಪಿಸಿಕೊಳ್ಳುತ್ತೀರಿ?  ಮೂಲಭೂತವಾದಿಗಳು ಯಾವಾಗಲು ದೇವರು ಅವರ ಪರ ಇದ್ದಾನೆ , ಇತಿಹಾಸ ಅವರ ಪರವಾಗಿದೆ , ಆದ್ದರಿಂದ ಅವರು ಮಾಡುವುದು ಎಲ್ಲವೂ ಸರಿ ಎಂದು ನಿಮ್ಮನ್ನು ನಂಬಿಸುತ್ತಾರೆ, ಮೊದಲು ಪುರೋಹಿತ ವರ್ಗ ಮಾತ್ರ ಮಾಡುತ್ತಿದ್ದ ಈ  ಹಿಂಸಾ ಪ್ರೇರಣೆಯನ್ನ ಈಗ ರಾಜಕಾರಣಿಗಳೂ ಮಾಡುತ್ತಿದ್ದಾರೆ.

ಇದರಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಎಂದರೆ, ಸಂದೇಹವಾದ ( skepticism ). ಈ ಪ್ರಭಾವಶಾಲಿಗಳ ಪ್ರತಿಯೊಂದನ್ನೂ ಪ್ರಶ್ನೆ ಮಾಡಿ. ನಿಮ್ಮ ಬಗ್ಗೆ ನೀವು ಯೋಚಿಸಿ, ಅವರಿಗೆ ಈ ಅವಕಾಶವನ್ನು ಕೊಡಬೇಡಿ.

*******************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.