ಈ ವಚನ ಎರಡು ಕಾರಣಗಳಿಗೆ ಗಮನ ಸೆಳೆಯುತ್ತದೆ. ಸೂಳೆಯೊಬ್ಬಾಕೆ ಶರಣಳಾಗಿ ವಚನ ರಚನೆ ಮಾಡಿದ್ದು ಮೇಲು ನೋಟಕ್ಕೇ ಸ್ವಾಗತಾರ್ಹ ಅನಿಸುತ್ತದೆ. ಎರಡನೆಯ ಕಾರಣವೆಂದರೆ ಧರ್ಮನಿಷ್ಠೆ ಉಗ್ರವಾದರೆ ಸೂಳೆಯ ಬದುಕೂ ಎಷ್ಟು ಕಷ್ಟವಾಗುತ್ತದೆ ಎಂಬ ವರ್ಣೆನಯೂ ಇಲ್ಲಿರುವಂತಿದೆ । ಓ.ಎಲ್.ನಾಗಭೂಷಣ ಸ್ವಾಮಿ
ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ .
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ .
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗಕೊಯ್ಯರಯ್ಯಾ
ಒಲ್ಲೆನೊಲ್ಲೆ ಬಲ್ಲೆನಾಗಿ
ನಿಮ್ಮಾಣೆ ನಿರ್ಲಜ್ಜೆಶ್ವರಾ [೫.೧೨೩೪]
[ಒತ್ತೆ- ಮುಂಗಡ ಹಣ; ಹಿಡಿದಡೆ-ಹಿಡಿದರೆ; ವ್ರತಹೀನನನರಿದು ಬೆರೆದಡೆ-ವ್ರತಹೀನನೆಂದು ಗೊತ್ತಿತ್ತೂ ಅವನೊಡನೆ ಸೇರಿದರೆ]
ಒಬ್ಬರಿಂದ ಮುಂಗಡವನ್ನು ಪಡೆದಿದ್ದು ಮತ್ತೊಬ್ಬರಿಂದಲೂ ಮುಂಗಡವನ್ನು ಪಡೆದರೆ ʻಬತ್ತಲೆ ನಿಲ್ಲಿಸಿʼ ಕೊಲ್ಲುತ್ತಾರೆ. ವ್ರತಹೀನನೊಡನೆ ಅರಿತಿದ್ದೂ ಸಂಪರ್ಕ ಮಾಡಿದರೆ ಕಾದ ಕತ್ತಿಯಲ್ಲಿ ಕಿವಿ ಮೂಗು ಕೊಯ್ಯುತ್ತಾರೆ. ನನಗೆ ಗೊತ್ತು, ಆದ್ದರಿಂದಲೇ ಒಲ್ಲೆ.
ಈ ವಚನ ಎರಡು ಕಾರಣಗಳಿಗೆ ಗಮನ ಸೆಳೆಯುತ್ತದೆ. ಸೂಳೆಯೊಬ್ಬಾಕೆ ಶರಣಳಾಗಿ ವಚನ ರಚನೆ ಮಾಡಿದ್ದು ಮೇಲು ನೋಟಕ್ಕೇ ಸ್ವಾಗತಾರ್ಹ ಅನಿಸುತ್ತದೆ. ಎರಡನೆಯ ಕಾರಣವೆಂದರೆ ಧರ್ಮನಿಷ್ಠೆ ಉಗ್ರವಾದರೆ ಸೂಳೆಯ ಬದುಕೂ ಎಷ್ಟು ಕಷ್ಟವಾಗುತ್ತದೆ ಎಂಬ ವರ್ಣೆನಯೂ ಇಲ್ಲಿರುವಂತಿದೆ. ಒಬ್ಬರಿಂದಮುಂಗಡ ಹಣ ಪಡೆದು ಮತ್ತೊಬ್ಬರಿಂದದಲೂ ಮುಂಗಡ ಪಡೆದರೆ ಬತ್ತಲೆ ನಿಲ್ಲಿಸಿ ಕೊಲ್ಲುತ್ತಾರೆ ಎಂಬ ಮಾತು ಗಮನಿಸಿ. ಹಾಗೆಯೇ ಗೊತ್ತಿದ್ದೂ ನಾನು ವ್ರತಹೀನನ ಜೊತೆಯಲ್ಲಿ ಕೂಡಿದರೆ ಕಾದ ಕತ್ತಿಯಲ್ಲಿ ಕಿವಿ ಮೂಗು ಕೊಯ್ಯುತ್ತಾರೆ ಎಂಬ ಮಾತನ್ನೂ ಗಮನಿಸಿ. ವೇಶ್ಯೆಗೂ ಗೌರವ ಸ್ಥಾನ ಸಿಕ್ಕಿತೆಂದು ಹೆಮ್ಮೆಪಡಬೇಕೊ, ವೇಶ್ಯೆಯೂ ತಮ್ಮ ಮತೀಯರಿಗೆ ಮಾತ್ರ ಒದಗಬೇಕು ಎಂಬ ಅಂಧ ಮತಾಭಿಮಾನವನ್ನು ಅಕ್ಷೇಪಿಸಬೇಕೋ ತಿಳಿಯದಾಗುತ್ತದೆ. ಧರ್ಮದ ಆಚರಣೆಗಳ ವಿಮರ್ಶೆ ಎಂದು ನೋಡುವುದಾದರೆ ಇದು ಅತ್ಯಂತ ಕಟುವಾದ ವಿಮರ್ಶೆಯಾಗಿಯೇ ಕೇಳುತ್ತದೆ.
ಸೂಳೆ ಸಂಕವ್ವೆ
ಬದುಕಿನ ವಿವರಗಳು ತಿಳಿದಿಲ್ಲ. ನಿರ್ಲಜ್ಜೇಶ್ವರ ಎಂಬ ಅಂಕಿತದ ಒಂದೇ ಒಂದು ವಚನ ದೊರೆತಿದೆ. ಇದೇ ವಚನ ಕೇವಲ ಒಂದು ಸಾಲು ಮಾತ್ರ ಕಡಿಮೆಯಾಗಿ, ಇದೇ ಅಂಕಿತದೊಡನೆ ಕೊಟ್ಟಣದ ಸೋಮವ್ವನ ವಚನವಾಗಿಯೂ ದೊರೆತಿದೆ.

