ಕನಸಿನಲ್ಲಿ, ಖಾಲೀ ಕೋಣೆಯ ಮನೆ, ಅಪರಿಚಿತನಂತೆ ಕಾಣುವ ಪರಿಚಿತ ಮುಖ, ಕಣ್ಣೊಳಗೆ ಯಾವುದನ್ನೂ ಪ್ರತಿಫಲಿಸದ ಕನ್ನಡಿ, ಇವು ಯಾವುದೇ ಕಾವ್ಯಾತ್ಮಕ ಆಕಸ್ಮಿಕಗಳಲ್ಲ. ಇವು ಆರೋಗ್ಯವಂತ ಮನಸ್ಸು ನೋವನ್ನು ಅನುಭವಿಸಿಯೂ ಪ್ರಶಾಂತವಾಗಿರಬಲ್ಲದು ಎಂದು ನೀಡುವ ಎಚ್ಚರಿಕೆಗಳು… ~ ಕಾರ್ಲ್ ಯೂಂಗ್ | ಕನ್ನಡಕ್ಕೆ: ಚಿದಂಬರ ನರೇಂದ್ರ
ಅತ್ಯಂತ ಅಪಾಯಕಾರಿ ಮಾನಸಿಕ ಅವ್ಯವಸ್ಥೆಯ ಸೂಚನೆ ಎಂದರೆ ಅದು ಪ್ಯಾನಿಕ್ ಅಲ್ಲ, ಕ್ರೋಧ ಅಲ್ಲ, ದುಗುಡವೂ ಅಲ್ಲ. ನೀವು ಯಾವುದನ್ನ ಫೀಲ್ ಮಾಡಬೇಕೋ ಅದನ್ನ ಫೀಲ್ ಮಾಡಿಕೊಳ್ಳುವುದನ್ನ ನಿಲ್ಲಿಸಿಬಿಟ್ಟ ಕ್ಷಣದಲ್ಲಿ ನೀವು ತೋರುವ ಅಸ್ವಾಭಾವಿಕ ಶಾಂತತೆ. ಯಾವಾಗ ಒಬ್ಬ ವ್ಯಕ್ತಿ ಗಾಯವನ್ನು ನೋಡಿಯೂ ಏನೂ ಫೀಲ್ ಮಾಡಿಕೊಳ್ಳುತ್ತಿಲ್ಲ ಎಂದರೆ, ಅದನ್ನ ಅವಸರದಲ್ಲಿ ಅವರ ಸಾಮರ್ಥ್ಯ ಎಂದುಕೊಳ್ಳಬೇಡಿ. ಬಹುತೇಕ ಅದು ಮಾನಸಿಕತೆಯ ಕೊನೆಯ ಡಿಫೆನ್ಸ್. ಅಹಂ ನ ಮುಂದುವರಿಕೆಗಾಗಿ, ಆತ್ಮ ತನ್ನನ್ನು ತಾನು ಪ್ರಜ್ಞಾರಹಿತ ಸ್ಥಿತಿಗೆ ತಳ್ಳಿಕೊಳ್ಳುವುದು. ಇದು ಬದುಕು ಯಾಂತ್ರಿಕವಾಗುವ ಶಬ್ದರಹಿತ ಸ್ವಿಚ್. ಈಗ ನೀವು ಮಾತನಾಡುತ್ತಿದ್ದೀರ, ಕೆಲಸ ಮಾಡುತ್ತಿದ್ದೀರ, ನಗುತ್ತಿದ್ದೀರ, ಉತ್ತರಿಸುತ್ತಿದ್ದೀರ ಆದರೆ ನಿಮ್ಮೊಳಗಿನ ಏನೋ ಒಂದು ತನ್ನನ್ನು ತಾನು ಕರಾಳತೆಯೊಳಗೆ ತಳ್ಳಿಕೊಂಡು ಬಿಟ್ಟಿದೆ.
ನನ್ನ ಹಲವಾರು ಕೆಲಸಗಳಲ್ಲಿ ಇಂಥ ಕುಸಿದು ಬೀಳುವ ಮೊದಲಿನ, ದ್ರೋಹದ ಮುಂಚಿನ, ಬದುಕಿನಿಂದ ಥಟ್ಟನೇ ಮಾಯವಾಗುವ ಮೊದಲಿನ, ಕರಾಳ ಪ್ರಶಾಂತತೆಯ ಸ್ಥಿತಿಯನ್ನು ಗಮನಿಸಿದ್ದೇನೆ. ಏಕೆಂದರೆ ಯಾವಾಗ ಭಾವನೆಗಳು ಸತ್ತು ಹೋಗುತ್ತವೆಯೋ ಆಗ ಪ್ರಜ್ಞೆ ಬಹುತೇಕ ಅವನ್ನು ಹಿಂಬಾಲಿಸುತ್ತದೆ ಮತ್ತು ಯಾವಾಗ ಪ್ರಜ್ಞೆ ವಿಫಲವಾಗುತ್ತದೆಯೋ ಆಗ ಅದರ ನೆರಳು ನಿಮ್ಮೊಂದಿಗೆ ರಹಸ್ಯವಾಗಿ ನೆಗೋಷಿಯೇಟ್ ಮಾಡಲು ಶುರು ಮಾಡುತ್ತದೆ. ಆಗ ಅದು ನಿಮಗೆ ಹೇಳುತ್ತದೆ nothing matters, no one is real ಮತ್ತು ಆಗ ಅದು ನಿಮಗೆ ಬೆಚ್ಚಗಿನ ತರ್ಕಬದ್ಧತೆಯೊಂದಿಗೆ ತಣ್ಣಗಿನ ಪರಿಹಾರಗಳನ್ನು ಸೂಚಿಸಲು ಶುರು ಮಾಡುತ್ತದೆ.
ಆದ್ದರಿಂದಲೇ ನೀವು ಯಾವಾಗಲೂ ಎಚ್ಚರದಿಂದಿರಬೇಕು. ಅಪ್ರಜ್ಞೆ, ಸಂಕೇತಗಳ ಮೂಲಕ ಮಾತನಾಡಲು ಶುರು ಮಾಡುತ್ತದೆ. ಕನಸಿನಲ್ಲಿ, ಖಾಲೀ ಕೋಣೆಯ ಮನೆ, ಅಪರಿಚಿತನಂತೆ ಕಾಣುವ ಪರಿಚಿತ ಮುಖ, ಕಣ್ಣೊಳಗೆ ಯಾವುದನ್ನೂ ಪ್ರತಿಫಲಿಸದ ಕನ್ನಡಿ, ಇವು ಯಾವುದೇ ಕಾವ್ಯಾತ್ಮಕ ಆಕಸ್ಮಿಕಗಳಲ್ಲ. ಇವು ಆರೋಗ್ಯವಂತ ಮನಸ್ಸು ನೋವನ್ನು ಅನುಭವಿಸಿಯೂ ಪ್ರಶಾಂತವಾಗಿರಬಲ್ಲದು ಎಂದು ನೀಡುವ ಎಚ್ಚರಿಕೆಗಳು. ಅಪಾಯಕಾರಿ ಮನಸ್ಸು ಏನನ್ನೂ ಅನುಭವಿಸದೇ ಅದನ್ನ ಪ್ರಶಾಂತತೆ ಎಂದುಕೊಳ್ಳುತ್ತದೆ.
ನೀವು ನಿಮ್ಮೊಳಗೆ ಇಂಥ ಪ್ರಶಾಂತತೆಯನ್ನ ಗಮನಿಸಿದಾಗ ಅದನ್ನು ಸಂಭ್ರಮಿಸಲು ಹೋಗಬೇಡಿ, ಬದಲಾಗಿ ಅದರ ಜೊತೆ ಕುಳಿತು, ನೀವು ನಿಮ್ಮೊಳಗೆ ಏನನ್ನ ಜೀವಂತವಾಗಿ ಹುಗಿದಿರುವಿರಿ ಎನ್ನುವ ಬಗ್ಗೆ ಪ್ರಶ್ನೆ ಮಾಡಿಕೊಳ್ಳಿ ಏಕೆಂದರೆ ನೀವು ಅನುಭವಿಸಲು ನಿರಾಕರಿಸುವುದು ನಾಶವಾಗಿ ಹೋಗಿರುವುದಿಲ್ಲ. ಬದಲಾಗಿ ಅದು ಸ್ವಲ್ಪ ಹೊತ್ತು ಕಾಯ್ದು ಮತ್ತೆ ವಾಪಸ್ ಬರುತ್ತದೆ ಭಾವನೆಯಾಗಿ ಅಲ್ಲ, ದುರಾದೃಷ್ಟವಾಗಿ.

