ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಈಗ ನಿಮಗೆ ಕೇಳುತ್ತಿರುವ ಪ್ರಶ್ನೆಯ ಉತ್ತರವನ್ನು ನೀವು ಎಷ್ಟು ಪ್ರಯತ್ನ ಮಾಡಿದರೂ ಕೂಡುವುದು ಸಾಧ್ಯವಿಲ್ಲ. ಝೆನ್ ಬುದ್ಧಿಸಂ ನಲ್ಲಿ ಗುರುಗಳು ತಮ್ಮ ಶಿಷ್ಯರಿಗೆ ಇಂಥ ಪ್ರಶ್ನೆಗಳನ್ನೇ ಕೇಳುತ್ತಾರೆ. ಇಂಥ ಪ್ರಶ್ನೆಗಳಿಂದ ಅವರ ತಾರ್ತಿಕ ಮೈಂಡ್ ಗೊಂದಲಕ್ಕೊಳಗಾಗಿ ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತದೆ. ಈ ಥರದ ಒಂದು ಪ್ರಸಿದ್ಧ ಪ್ರಶ್ನೆಯೆಂದರೆ, “ಒಂದೇ ಕೈಯಿಂದ ಚಪ್ಪಾಳೆ ಹೊಡೆದಾಗ ಎಂಥ ಸಪ್ಪಳ ಕೇಳಿಸುತ್ತದೆ”. ಈ ಪ್ರಶ್ನೆ ಕೇಳಿದಕೂಡಲೇ ನಮ್ಮ ಮೆದುಳು ಇದಕ್ಕೆ ಉತ್ತರ ಕಂಡುಕೊಳ್ಳಲು ಕಾರ್ಯತತ್ಪರವಾಗುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ಇದಕ್ಕೆ ಉತ್ತರ ಕಂಡುಕೊಳ್ಳಲು ನಿಮ್ಮ ಮೆದುಳು ವಿಫಲವಾಗುತ್ತದೆ. ಆಗ ನೀವು ಗೊಂದಲಕ್ಕೊಳಗಾಗುತ್ತೀರಿ, ಇರಿಟೇಟ್ ಆಗುತ್ತೀರಿ, ಸ್ಟಕ್ ಆಗುತ್ತೀರಿ. ನಿಮ್ಮ ಮೆದುಳು ಪ್ರಯತ್ನ ಮಾಡಿ ಮಾಡಿ ಆಯಾಸಗೊಂಡು ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತದೆ. ಹೀಗೆ ಅದು ಸೋಲನ್ನು ಒಪ್ಪಿಕೊಂಡ ಕ್ಷಣದಲ್ಲಿಯೇ ನೀವು ಅಪರೂಪದ ಶಾಂತಿಯನ್ನು ಅನುಭವಿಸುವಿರಿ.
“Koan” ಝೆನ್ ಬುದ್ಧಿಸಂ ನಲ್ಲಿ ಕೇಳಲಾಗುವ ಅಪರೂಪದ ಒಗಟಿನಂಥ ಪ್ರಶ್ನೆ. ಈ ಪ್ರಶ್ನೆಯ ಉದ್ದೇಶವೇ ನಿಮ್ಮ ತಾರ್ಕಿಕ ಆಲೋಚನಾ ಸರಣಿಯನ್ನು ಭಗ್ನಗೊಳಿಸುವುದು. Koan ನ ಉದ್ದೇಶ ಉತ್ತರ ಕಂಡುಕೊಳ್ಳುವುದಲ್ಲ, ವಾಸ್ತವವನ್ನು ಅರ್ಥ ಮಾಡಿಕೊಳ್ಳುವುದಲ್ಲ, ಮಾಹಿತಿ ನೀಡುವುದಲ್ಲ , ಇದರ ಉದ್ದೇಶ ನಿಮ್ಮ ಥಿಂಕಿಂಗ್ ಹ್ಯಾಬಿಟ್ ನ ಮುರಿಯುವುದು. ಏಕೆಂದರೆ ಝೆನ್ ನ ಪ್ರಕಾರ ನಿಮ್ಮ ನಿರಂತರ ಥಿಂಕಿಂಗ್ ಕ್ರಿಯೆಯೇ ನಿಜವಾದ ಸಮಸ್ಯೆ. ನಿಮ್ಮ ತಾರ್ಕಿಕ ಮೈಂಡ್ ಗೆ ಉತ್ತರ ಬೇಕು, ವಿವರಣೆ ಬೇಕು, ಕಂಟ್ರೋಲ್ ಬೇಕು. ಆದ್ದರಿಂದ ಝೆನ್ “ಒಂದು ಕೈಯಿಂದ ಚಪ್ಪಾಳೆ ಹೊಡೆದಾಗ ಎಂಥ ಸಪ್ಪಳ ಕೇಳಿಸುತ್ತದೆ? ಎನ್ನುವ ವಿಚಿತ್ರ ಪ್ರಶ್ನೆ ಕೇಳುತ್ತದೆ. ಆಗ ನೀವು ಯೋಚಿಸಲು ಶುರು ಮಾಡುತ್ತಾರಿ, ಒಂದು ಕೈಯಿಂದ ಚಪ್ಪಾಳೆ ಹೊಡೆಯುವುದು ಸಾಧ್ಯವೇ ಇಲ್ಲ, ಆದ್ದರಿಂದ ಸದ್ದು ಬರುವ ಪ್ರಶ್ನೆಯೇ ಇಲ್ಲ… ಇತ್ಯಾದಿಯಾಗಿ. ಆದರೆ ನೀವು ತಪ್ಪು.
ಈ ಕತೆ ಟೋಯೋ ಎನ್ನುವ ವಿದ್ಯಾರ್ಥಿಯದು. ಟೋಯೋ ಹಲವಾರು ತಿಂಗಳವರೆಗೆ ಈ ಪ್ರಶ್ನೆಯ ಉತ್ತರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಾನೆ. ಅವನು ತನ್ನ ಗುರುವಿಗೆ ಹಲವಾರು ಉತ್ತರಗಳನ್ನು ನೀಡುವ ಪ್ರಯತ್ನ ಮಾಡಿದನಾದರೂ ಅವನ ಎಲ್ಲ ಉತ್ತರಗಳೂ ತಿರಸ್ಕರಿಸಲ್ಪಟ್ಟವು. ಕೊನೆಗೆ ಟೋಯೋ ಸೋಲೊಪ್ಪಿಕೊಂಡು ಒಂದು ಜಾಗಕ್ಕೆ ಬಂದು ಸಮಾಧಾನದಲ್ಲಿ ಕುಳಿತುಬಿಡುತ್ತಾನೆ. ಆಗ ಅವನು ಮೌನವಾಗಿದ್ದ, ಪ್ರಶಾಂತವಾಗಿದ್ದ, ಖಾಲೀಯಾಗಿದ್ದ. ಅವನ ಇಂಥ ಸ್ಥಿತಿಯನ್ನು ಗಮನಿಸಿ ಅವನ ಗುರುಗಳು ಹೇಳುತ್ತಾರೆ, “ಈಗ ನಿನಗೆ ಪ್ರಶ್ನೆಯ ಉತ್ತರ ಸಿಕ್ಕಿದೆ”. ಏಕೆಂದರೆ ಈ koan ನ solve ಮಾಡಲು ಹುಟ್ಟುಹಾಕಿಯೇ ಇಲ್ಲ. ಯಾವ ಉತ್ತರವೂ ಇಲ್ಲ ಎನ್ನುವುದು ನಿಮಗೆ ಅರ್ಥವಾಗಲೆಂದೇ ಈ ಪ್ರಶ್ನೆಯನ್ನು ರಚಿಸಲಾಗಿದೆ.
ನಮ್ಮ ಮೆದುಳಿಗೆ ಸಮಸ್ಯೆಯ ಪರಿಹಾರವನ್ನು ಹುಡುಕುವ ಚಟ. ಅದು ಕಂಟ್ರೋಲ್ ಮಾಡಲು ಹಾತೊರೆಯುತ್ತದೆ. ಅದಕ್ಕೆ ಬದುಕನ್ನು ಅರ್ಥ ಮಾಡಿಕೊಳ್ಳುವ ಚಟ. ಈ ಚಟವೇ ನಿಮ್ಮ ದುಗುಡದ ಕಾರಣ ಎಂದು ಝೆನ್ ಹೇಳುತ್ತದೆ. ಈ koan ನಿಮ್ಮ ಮೈಂಡ್ ನ ತನ್ನ ಖೆಡ್ಡಾಗೆ ಬೀಳುವಂತೆ ಮಾಡುತ್ತದೆ. ಆಗ ನಿಮ್ಮ ತರ್ಕ ವಿಫಲವಾಗುತ್ತದೆ, ನಿಮ್ಮ intuition ವಿಫಲವಾಗುತ್ತದೆ, ಸೃಜನಶೀಲತೆ ವಿಫಲವಾಗುತ್ತದೆ. ಈ ಸ್ಥಿತಿಯನ್ನೇ ಝೆನ್ collapse of intellect ಎಂದು ಗುರುತಿಸುತ್ತದೆ. ಪಾಶ್ಚಿಮಾತ್ಯ ತತ್ವಶಾಸ್ತ್ರದ ಪ್ರಕಾರ ನೀವು ಆಳವಾಗಿ ಯೋಚಿಸಬೇಕು, ಆಗ ನಿಮಗೆ ಸತ್ಯದ ಬಗ್ಗೆ ಗೊತ್ತಾಗುತ್ತದೆ. ಆದರೆ ಝೆನ್ ಪ್ರಕಾರ ನಿಮ್ಮ ಯೋಚನಾ ಪ್ರತ್ರಿಯೆಯೇ ಸತ್ಯವನ್ನು ಮುಟ್ಟಲು ನಿಮಗೆ ಅಡ್ಡಗಾಲಾಗಿದೆ. ಒಂದೇ ಕೈಯಿಂದ ಚಪ್ಪಾಳೆ ಹೊಡೆದಾಗ ಎಂಥ ಸಪ್ಪಳ ಕೇಳಿಸುತ್ತದೆ? ಇದು ಒಗಟು ಅಲ್ಲ. ಇದು ನಿಮ್ಮ ಉತ್ತರದ ಅವಶ್ಯಕತೆಯನ್ನು ನಾಶ ಮಾಡುವ ಒಂದು ರೀತಿಯ ಸಲಕರಣೆ.
********************************

