ಸಾಕ್ರೆಟಿಸ್ ನಿಗೆ ಸಾಯುವುದು ಕೇವಲ ಒಂದು ಘಟನೆಯಾಗಿರಲಿಲ್ಲ, ಅವನಿಗೆ ಸಾವು ಒಂದು ಔಷಧಿಯಾಗಿತ್ತು… : ಚಿದಂಬರ ನರೇಂದ್ರ
ಸಾಕ್ರೆಟಿಸ್ ನಿಗೆ ವಿಷ ಕೊಡಲಾದ ವಿಷಯದ ಬಗ್ಗೆ ನಮಗೆಲ್ಲ ಗೊತ್ತು. ಆದರೆ ನಿಮಗೆ ಅವನ ಕೊನೆಯ ಮಾತುಗಳ ಬಗ್ಗೆ ಗೊತ್ತಾ? ಅವನ ಕೊನೆ ಮಾತು ಒಂದು ಒಗಟಿನ ಹಾಗಿತ್ತು. ಈ ಮಾತನ್ನು ಅರ್ಥ ಮಾಡಿಕೊಳ್ಳಲು ಮಾನವತೆಗೆ ಎರಡು ಸಾವಿರ ವರ್ಷ ಬೇಕಾಯಿತು. ಯಾವಾಗ ವಿಷ ಅವನ ದೇಹವನ್ನು ಮರಗಟ್ಟಿಸತೊಡಗಿತೋ ಆಗ ಸಾಕ್ರೆಟಿಸ್ ರೋಧಿಸಲಿಲ್ಲ, ದಯೆಗಾಗಿ ಅಂಗಲಾಚಲಿಲ್ಲ, ಅವನು ತನ್ನ ಗೆಳೆಯ ಕ್ರಿಟೋ ನತ್ತ ನೋಡಿ ಹೇಳಿದ, “Crito we owe a rooster to Asclepius, pay it and do not neglect it”.
ಕೇಳಲು ಇದು ಯಾವುದೋ ಒಂದು ಸಾಧಾರಣ ಮಾತಿನ ಹಾಗಿದೆ. Asclepius ಹೀಲಿಂಗ್ ನ, ಚಿಕಿತ್ಸೆಯ ಗ್ರೀಕ್ ದೇವರು. ಯಾವಾಗ ಮನುಷ್ಯನ ರೋಗ ಗುಣವಾಗುತ್ತಿತ್ತೋ ಆಗ Asclepius ಗೆ ಕೋಳಿಯನ್ನು ಬಲಿ ಕೊಡಲಾಗುತ್ತಿತ್ತು. ಮತ್ತು ಸಾಕ್ರೆಟಿಸ್ ನ ಕೊನೆಯ ಮಾತುಗಳ ಅರ್ಥ ಇದೇ ಆಗಿತ್ತು, “ನಾನು ಈಗ ಗುಣವಾಗುತ್ತಿದ್ದೇನೆ ಆದ್ದರಿಂದ Asclepius ಗೆ ಕೋಳಿ ಬಲಿ ಕೊಡೋದನ್ನ ಮರೆಯ ಬೇಡ”. ಸಾಕ್ರೆಟಿಸ್ ನಿಗೆ ಸಾಯುವುದು ಕೇವಲ ಒಂದು ಘಟನೆಯಾಗಿರಲಿಲ್ಲ, ಅವನಿಗೆ ಸಾವು ಒಂದು ಔಷಧಿಯಾಗಿತ್ತು.
ಆದರೆ ಯಾಕೆ, ಬದುಕನ್ನು ಅಪಾರವಾಗಿ ಪ್ರೀತಿಸಿದ ಒಬ್ಬ ಮನುಷ್ಯ, ಬದುಕನ್ನು ರೋಗ ಎಂದು ಹೇಳುತ್ತಿದ್ದಾನೆ? ಪ್ಲೇಟೋ ನ ಪುಸ್ತಕ The Phaedo ದಲ್ಲಿ ಸಾಕ್ರೆಟಿಸ್ ತಿಳಿಹೇಳುವುದೇನೆಂದರೆ, ಈ ಶರೀರ, ಆತ್ಮಕ್ಕೆ ಒಂದು ಜೈಲು ಇದ್ದಂತೆ. ಒಮ್ಮೆ ನೀವು ಈ ಬಗ್ಗೆ ಯೋಚಿಸಿ, ದಿನದ ಎಷ್ಟು ಸಮಯ ದೇಹದ ಸೇವೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಿ. ದೇಹವನ್ನು ಸ್ವಚ್ಛ ಮಾಡಿಕೊಳ್ಳುವುದು, ಅದಕ್ಕೆ ಊಟ ಮಾಡಿಸುವುದು, ನಿದ್ದೆ ಮಾಡಿಸುವುದು, ಅದಕ್ಕೆ ಉಪಚಾರ ಮಾಡುವುದು, ಔಷಧಿ ಕೊಡುವುದು ಇತ್ಯಾದಿಯಾಗಿ. ನಿಮ್ಮ ದೇಹ ಚೀರುತ್ತದೆ, ನನಗೆ ಹಸಿವಾಗಿದೆ, ನನಗೆ ಸುಸ್ತಾಗಿದೆ, ನನಗೆ ಸೆಕ್ಸ್ ಬೇಕು ಮುಂತಾಗಿ. ಸಾಕ್ರೆಟಿಸ್ ನ ವಾದ ಏನೆಂದರೆ ದೇಹದ ಈ ಗದ್ದಲದ ಕಾರಣವಾಗಿಯೇ ನಿಮಗೆ ಯಾವತ್ತೂ ಸ್ಪಷ್ಟವಾಗಿ ಯೋಚಿಸುವುದು ಸಾಧ್ಯವಾಗುವುದಿಲ್ಲ. ನಿಮ್ಮ ಆತ್ಮಕ್ಕೆ ಸತ್ಯ ಬೇಕಾಗಿದ್ದರೆ, ನಿಮ್ಮ ದೇಹ ಸುಖಕ್ಕಾಗಿ ಹಾತೊರೆಯುತ್ತಿದೆ. ನಿಮ್ಮ ಆತ್ಮ ಹಾರಲು ಬಯಸುತ್ತಿದೆಯಾದರೆ, ನಿಮ್ಮ ದೇಹ ಒಂದು ಪಂಜರದ ಹಾಗೆ ಕೆಲಸ ಮಾಡುತ್ತಿದೆ. ಸಾಕ್ರೆಟಿಸ್ ಹೇಳೆವುದೇನೆಂದರೆ ನಾವು ಎಂಥ ಜೈವಿಕ ಪಂಜರದಲ್ಲಿ ಬಂಧಿಯಾಗಿದ್ದೇವೆಯೆಂದರೆ, ಅದು ಕಾಮ, ನೋವು, ಭಯ ಗಳನ್ನು ಬಳಸುತ್ತ ನಮ್ಮನ್ನು ನಮ್ಮ ಗುರಿಯಿಂದ ವಿಮುಖರನ್ನಾಗಿಸುತ್ತಿದೆ.
ಈ ತಿಳುವಳಿಕೆಯಿಂದಲೇ ನಮಗೆ ಫಿಲಾಸೊಫಿಯ ಡೆಫನೀಷನ್ ಸಿಗುತ್ತದೆ. ಸಾಕ್ರೆಟಿಸ್ ನ ಪ್ರಕಾರ ಫಿಲಾಸೊಫಿ ಎಂದರೆ ಪುಸ್ತಕ ಓದುವುದಲ್ಲ, ಅವನ ಪ್ರಕಾರ ಯಾರು ಸಾಯುವುದನ್ನೇ ತನ್ನ ಕೆಲಸ ಮಾಡಿಕೊಂಡಿದ್ದಾನೋ ಅವನೇ ನಿಜವಾದ ತತ್ವಜ್ಞಾನಿ. ಇಲ್ಲಿ ಸಾಯುವ ಕೆಲಸ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಲ್ಲ. ಸಾಯುವ ಕೆಲಸ ಎಂದರೆ ಬದುಕಿನುದ್ದಕ್ಕೂ ತನ್ನ ಆತ್ಮವನ್ನು ದೇಹದಿಂದ ಬೇರೆ ಮಾಡಿಕೊಳ್ಳಲು ಪ್ರಯತ್ನಿಸುವುದು, ಆತ್ಮ ದೇಹದ ಅಡಿಯಾಳಾಗದಂತೆ ನೋಡಿಕೊಳ್ಳುವುದು. ಆ ಮನುಷ್ಯ ಹಸಿವು ಮತ್ತು ಭಯವನ್ನು ಮರೆಯಲು ಪ್ರಯತ್ನಿಸುತ್ತಾನೆ. ಅವನು ಎಲ್ಲಿ ಶರೀರಕ್ಕೆ ಆತ್ಮವನ್ನು ಮುಟ್ಟುವುದೂ ಸಾಧ್ಯವಿಲ್ಲವೋ ಅಂಥ ಸ್ಪಷ್ಟ ವಿಚಾರಗಳ ಜಗತ್ತಿನಲ್ಲಿ ಬದುಕಲು ಬಯಸುತ್ತಾನೆ.
ಯಾವಾಗ ಸಾವು ಎದುರಾಗುತ್ತದೆಯೋ ಆಗ ಅಸಲೀ ತತ್ವಜ್ಞಾನಿಗೆ ಭಯವಾಗುವುದಿಲ್ಲ. ಆಗ ಅವನಿಗೆ ಒಂದು ಬಗೆಯ ಸಮಾಧಾನವಾಗುತ್ತದೆ. ಅವನಿಗೆ ಈಗ ಪಂಜರದ ಬಾಗಿಲು ತೆರೆದುಕೊಂಡಿದೆ ಮತ್ತು ಮುಂದೆ ಇರುವುದೆಲ್ಲ ಕೇವಲ ಸ್ವಾತಂತ್ರ್ಯ ಮಾತ್ರ. ನೀವು ಕೇವಲ ದೇಹಕ್ಕಾಗಿ ಬದುಕುತ್ತಿದ್ದೀರಾದರೆ, ಸಾವು ನಿಮ್ಮ ಎಲ್ಲದರ ಕೊನೆಯಾಗಿದೆ, ಆದರೆ ನೀವು ಮನಸ್ಸಿಗಾಗಿ ಬದುಕುತ್ತಿದ್ದೀರಾದರೆ, ಸಾವು ನಿನಗೆ ಸ್ವಚ್ಛ ತಿಳುವಳಿಕೆಯ ಶುರುವಾತು.
********************************

