ಲಾಕಾನ್ ಅವರ ಪ್ರಕಾರ ಬಯಕೆಯ ಮುಂದುವರಿಕೆಯ ಏಕೈಕ ಕಾರಣ “ಕೊರತೆ”. ನಿಮಗೆ ಯಾವುದರ ಕೊರತೆ ಇದೆಯೋ ನೀವು ಕೇವಲ ಅಂಥವನ್ನು ಮಾತ್ರ ಬಯಸುತ್ತೀರಿ. ಆದರೆ ನೀವು ಯಾವಾಗ ಒಂದು ಸಂಗತಿಯನ್ನು ಪೂರ್ತಿಯಾಗಿ ಪಡೆದುಕೊಳ್ಳುತ್ತೀರೋ ಆಗ ಅದರ ಕುರಿತಾದ ರಹಸ್ಯಗಳು ಕಡಿಮೆಯಾಗುತ್ತ ಹೋಗುತ್ತವೆ… । ಚಿದಂಬರ ನರೇಂದ್ರ
ನಿಜವಾಗಿ ಪ್ರೇಮಿಸುವ ಒಬ್ಬ ವ್ಯಕ್ತಿ ತನ್ನ ಪ್ರೇಮಿಗೆ ದ್ರೋಹ ಮಾಡಬಹುದೆ? ಹಾಗೆ ಯಾರಾದರೂ ದ್ರೋಹ ಮಾಡಬಹುದಾದರೆ ಅವರ ಪ್ರೇಮ ನಿಜವಾದದ್ದಲ್ಲ ಎನ್ನುವುದು ತಾನೇ ಎಲ್ಲರ ತಿಳುವಳಿಕೆ? ಆದರೆ ಆಧುನಿಕ ತತ್ವಶಾಸ್ತ್ರ ಮತ್ತು ಮನಶಾಸ್ತ್ರ, ಒಬ್ಬ ವ್ಯಕ್ತಿ ತಾನು ಅತ್ಯಂತ ತೀವ್ರವಾಗಿ ಪ್ರೀತಿಸುತ್ತಿರುವಾಗಲೂ ತನ್ನ ಪ್ರೇಮಿಗೆ ದ್ರೋಹ ಮಾಡಬಲ್ಲ ಎನ್ನುವ ಆಳವಾದ ಮತ್ತು ಸಂಕೀರ್ಣವಾದ ಸತ್ಯವನ್ನು ಅನಾವರಣಗೊಳಿಸುತ್ತವೆ. ಇದರ ಹಿಂದಿನ ಕಾರಣ ಪ್ರೀತಿ ಮತ್ತು ಬಯಕೆಗಳ ನಡುವೆ ನಡೆಯುತ್ತಿರುವ ಶಾಶ್ವತ ಯುದ್ಧ.
ಕೆಲವರು ಯಾಕೆ ದ್ರೋಹಕ್ಕೆ ಮುಂದಾಗುತ್ತಾರೆ ಎನ್ನುವುದನ್ನ ಅರ್ಥ ಮಾಡಿಕೊಳ್ಳಲು ನಾವು ಫ್ರೆಂಚ್ ಮನಶಾಸ್ತ್ರಜ್ಞ Jaques Lacan ಅವರ ಮಾತುಗಳನ್ನು ಗಮನಿಸಬೇಕು. ಲಾಕಾನ್ ಅವರ ಪ್ರಕಾರ ಬಯಕೆಯ ಮುಂದುವರಿಕೆಯ ಏಕೈಕ ಕಾರಣ “ಕೊರತೆ”. ನಿಮಗೆ ಯಾವುದರ ಕೊರತೆ ಇದೆಯೋ ನೀವು ಕೇವಲ ಅಂಥವನ್ನು ಮಾತ್ರ ಬಯಸುತ್ತೀರಿ. ಆದರೆ ನೀವು ಯಾವಾಗ ಒಂದು ಸಂಗತಿಯನ್ನು ಪೂರ್ತಿಯಾಗಿ ಪಡೆದುಕೊಳ್ಳುತ್ತೀರೋ ಆಗ ಅದರ ಕುರಿತಾದ ರಹಸ್ಯಗಳು ಕಡಿಮೆಯಾಗುತ್ತ ಹೋಗುತ್ತವೆ. ಹಾಗೆಯೇ ಆ ಸಂಗತಿಗಳ ಕುರಿತಾದ ಬಯಕೆಯೂ ಕಡಿಮೆಯಾಗುತ್ತ ಹೋಗುತ್ತದೆ. ಈ ದ್ವಂದ್ವವನ್ನು ಅಮೇರಿಕನ್ ಮನಶಾಸ್ತ್ರಜ್ಞೆ Esther Perel ಪರಿಣಾಮಕಾರಿಯಾಗಿ ವಿವರಿಸುತ್ತಾರೆ.
ಎಸ್ತರ್ ಅವರ ಪ್ರಕಾರ ಪ್ರೀತಿ ಮತ್ತು ಬಯಕೆ ( Love & Desire ) ಎರಡೂ ಬೇರೆ ಬೇರೆ ಸಿಸ್ಟಂ ನ ಪ್ರಕಾರ ಮುಂದುವರೆಯುತ್ತಿರುತ್ತವೆ. ಪ್ರೀತಿಗೆ ಬೇಕಾದದ್ದು, ಸುರಕ್ಷತೆ, predictability, ಶಾಶ್ವತತೆ , ಎದುರಿಗಿನ ವ್ಯಕ್ತಿಯನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳುವಿಕೆ. ಪ್ರೀತಿ ಮನೆ ಕಟ್ಟ ಬಯಸುತ್ತದೆ. ಆದರೆ ಬಯಕೆ ಇದಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡುತ್ತಿರುತ್ತದೆ. ಬಯಕೆಗೆ ಬೇಕಾಗಿರುವುದು ಅಪಾಯ, ಹೊಸತನ, ಅಂತರ, ನಿಷಿದ್ಧತೆ (taboo). ಬಯಕೆ ಕತ್ತಲನ್ನು ಹುಡುಕ ಬಯಸುತ್ತದೆ. ನಾವು ನಮ್ಮ ಸಂಗಾತಿ, ನಮಗೆ ಸುರಕ್ಷಿತ ತಾಣವಾಗಿರಬೇಕು, ನಮ್ಮ ಬದುಕಿನ ಒಂದು ರೋಮಾಂಚಕ ಪ್ರಯಾಣವಾಗಿರಬೇಕೆಂದು ಬಯಸುತ್ತೇವೆ. ಆದರೆ ಮರೆಯದಿರಿ, ಬೆಂಕಿ ಹೊತ್ತಿಕೊಳ್ಳಲು ಅದಕ್ಕೆ ಗಾಳಿ ಬೇಕೇ ಬೇಕು. ಯಾವಾಗ ನೀವು ನಿಮ್ಮ ಸಂಬಂಧವನ್ನು ಸುರಕ್ಷಿತ, ಪ್ರೆಡಿಕ್ಟೇಬಲ್ ಮತ್ತು ಪಳಗಿಸಿಕೊಳ್ಳುವ (domesticated) ರೀತಿಯಲ್ಲಿ ಬದುಕಲು ಶುರು ಮಾಡುತ್ತೀರೋ, ಆಗ ಬಯಕೆಯ ಕಾವು ಕಡಿಮೆಯಾಗುತ್ತದೆ.
ಒಮ್ಮೆ ಯೋಚಿಸಿ ನೋಡಿ, ಜನ ತಮ್ಮ ಸುಖೀ ಸಂಬಂಧಗಳ ನಡುವೆಯೇ ಬೇರೆ ಇನ್ನೊಂದು ಸಂಬಂಧಕ್ಕೆ ಯಾಕೆ ಮುಂದಾಗುತ್ತಾರೆ. ಅವರು ತಮ್ಮ ಸಂಗಾತಿಯನ್ನು ನಿಜವಾಗಿ ಪ್ರೀತಿಸುತ್ತಿದ್ದಾರೆಯಾದರೆ ಅವರು ಬೇರೆ ಏನನ್ನ ಹುಡುಕುತ್ತಿದ್ದಾರೆ? ಇದಕ್ಕೆ ಉತ್ತರವಾಗಿ ಎಸ್ತರ್ ಪೆರೆಲ್ ನಮ್ಮನ್ನು ನಡುಗಿಸುವ ಸತ್ಯವೊಂದನ್ನು ನಮ್ಮೆದುರು ತೆರೆದು ಇಡುತ್ತಾರೆ. ಯಾವಾಗ ಜನ ದ್ರೋಹಕ್ಕೆ ಮುಂದಾಗುತ್ತಾರೋ ಆಗ ಅವರು ಇನ್ನೊಬ್ಬರ ಹುಡುಕಾಟದಲ್ಲಿ ಇರುವುದಿಲ್ಲ ಬದಲಾಗಿ ಅವರು ತಮ್ಮದೇ ಇನ್ನೊಂದು ರೂಪದ ಹುಡುಕಾಟದಲ್ಲಿರುತ್ತಾರೆ. ವರ್ಷಗಳ ಸಂಬಂಧದಲ್ಲಿ ವ್ಯಕ್ತಿಗಳು ಜವಾಬ್ದಾರಿಯುತ ಗಂಡ ಅಥವಾ ಹೆಂಡತಿ, ಮಮತಾಮಯಿ ತಾಯಿ, ವಿಶ್ವಾಸಾರ್ಹ ಪೋಷಕ ಹೀಗೆ ಮುಂತಾಗಿ ಒಂದೇ ಪಾತ್ರದಲ್ಲಿ ಬಂಧಿಯಾಗಿಬಿಟ್ಟಿರುತ್ತಾರೆ. ಆ ವ್ಯಕ್ತಿ ಸಂಭವನೀಯ home machine ಆಗಿ ಬದಲಾಗಿಬಿಟ್ಟಿರುತ್ತಾರೆ. ಇಂಥ ಸಂದರ್ಭದಲ್ಲಿ ಈ affair ಎನ್ನುವುದು, ಇಂಥ home machine ನ ವಿರುದ್ಧ ಅವರು ಮಾಡುವ ಅಸ್ತಿತ್ವವಾದಿ ಬಂಡಾಯವಾಗಿರುತ್ತದೆ.
ಅವರಿಗೆ ತಮ್ಮ ವರ್ಷಗಳ ಸಂಗಾತಿಯನ್ನು ಬಿಟ್ಟು ಹೋಗುವ ಇಚ್ಛೆ ಇರುವುದಿಲ್ಲ ಬದಲಾಗಿ ಅವರಿಗೆ, ತಮ್ಮ ಈಗಿನ ಮೃತ, ಪ್ರೇಡಿಕ್ಟೇಬಲ್ ಪಾತ್ರದಿಂದ ಹೊರಬರುವ ಬಯಕೆ ತೀವ್ರವಾಗಿರುತ್ತದೆ. ಹಾಗಾದರೆ ಇದರ ಅರ್ಥ ದ್ರೋಹ ಸರಿಯಾದ ದಾರಿ ಎನ್ನಬಹುದೆ? ಇಲ್ಲ. ದ್ರೋಹ ಒಂದು ಪರಮಾಣು ಬಾಂಬ್ ನ ಥರ, ಇದು ವಿಶ್ವಾಸವನ್ನು, ಮನಸ್ಸನ್ನು ಒಡೆದು ಚೂರು ಚೂರು ಮಾಡುತ್ತದೆ. ಆದರೆ ಈ ಫಿಲಾಸೊಫಿಯ ಬಗ್ಗೆ ನಿಮಗೆ ಗೊತ್ತಿದ್ದಾಗ ನೀವು, ಯಾವುದೇ ವ್ಯಕ್ತಿಯನ್ನು ಸರಳವಾದ, ಒಂದೇ ಆಯಾಮದ ವಿಲನ್ ಥರ ನೋಡುವುದಿಲ್ಲ. ನಾವು ಮನುಷ್ಯರು ಬಹಳ ಸಂಕಿರ್ಣ, ಬಹಳ ದ್ವಂದ್ವಾತ್ಮಕ ಪ್ರಾಣಿಗಳು. ನಮಗೆ ಬದುಕಿನಲ್ಲಿ ಮಂದ ಮಾರುತದಂಥ ಶಾಂತಿ ಸಮಾಧಾನಗಳೂ ಬೇಕು ಹಾಗೆಯೇ ಬಿರುಗಾಳಿಯ ರೋಮಾಂಚನವೂ ಬೇಕು.

