ಜಾಣ ಮೂರ್ಖತನ ಅಪಾಯಕಾರಿಯಾದದ್ದು. ಇಲ್ಲಿ ಜಾಣ ವ್ಯಕ್ತಿಯೊಬ್ಬ ತನ್ನ ಜಾಣತನವನ್ನ ಮೂರ್ಖಸಂಗತಿಗಳಿಗಾಗಿ ಉಪಯೋಗ ಮಾಡುತ್ತಾನೆ ಅನ್ನುತ್ತಾನೆ ಮುಸಿಲ್… ~ ಚಿದಂಬರ ನರೇಂದ್ರ
ತತ್ವಜ್ಞಾನಿ ಮತ್ತು ಬರಹಗಾರ ರಾಬರ್ಟ್ ಮುಸಿಲ್ ನ ಪ್ರಕಾರ, ಜಗತ್ತಿನಲ್ಲಿ ಎರಡು ಥರದ ಮೂರ್ಖತನಗಳಿವೆ. ಒಂದು ಸಾಧಾರಣ ಮೂರ್ಖತನವಾದರೆ ಇನ್ನೊಂದು ಜಾಣ ಮೂರ್ಖತನ. ಸಾಧಾರಣ ಮೂರ್ಖತನದಲ್ಲಿ ಒಬ್ಬ ವ್ಯಕ್ತಿಗೆ ಕೆಲವು ಮೆಂಟಲ್ ಟಾಸ್ಕ್ ಗಳನ್ನು ನಿರ್ವಹಿಸುವುದು ಸಾಧ್ಯವಾಗುವುದಿಲ್ಲ. ಇದು ಮೆದುಳಿನ ಆಲೋಚನಾಶಕ್ತಿಗೆ ಸಂಬಂಧಪಟ್ಟಿದ್ದು. ಆದರೆ ಇದು distraction ಮತ್ತು ನಿದ್ರಾಹೀನತೆಗೆ ಕೂಡ ಸಂಬಂಧಪಟ್ಟಿದ್ದಾಗಿರಬಹುದು. ಇದು ನಮ್ಮೆಲ್ಲರ ಜೊತೆಗೂ ನಡೆದಿರುವ ಸಂಗತಿ. ನಮ್ಮೆಲ್ಲರಿಗೆ ಕೂಡ ಒಂದು ಟಾಸ್ಕ್ ಕಠಿಣತರವಾಗಿ, ಕಾಂಪ್ಲಿಕೇಟೆಡ್ ಆಗಿ , ನಮಗೆ ನಿಲುಕದಿರುವ ಹಾಗೆ ಅನಿಸಿದ್ದಿರಬಹುದು, ಆಗ ನಾವು ನಮ್ಮನ್ನು ಮೂರ್ಖರೆಂದು ಅಂದುಕೊಂಡಿರಬಹುದು ಕೂಡ.
ಆದರೆ ಜಾಣ ಮೂರ್ಖತನ ಅಪಾಯಕಾರಿಯಾದದ್ದು. ಇಲ್ಲಿ ಜಾಣ ವ್ಯಕ್ತಿಯೊಬ್ಬ ತನ್ನ ಜಾಣತನವನ್ನ ಮೂರ್ಖಸಂಗತಿಗಳಿಗಾಗಿ ಉಪಯೋಗ ಮಾಡುತ್ತಾನೆ. ಉದಾಹರಣೆಗೆ ಒಬ್ಬ ಅದ್ಭುತ ಭಾಷಣಕಾರ ಒಂದು ಡಿಂಫೆಂಡ್ ಮಾಡಿಕೊಳ್ಳಬಾರದ ಸಂಗತಿಯ ಪರವಾಗಿ ವಾದ ಮಾಡುವುದು. ಅಥವಾ ಒಬ್ಬ ಪ್ರಖರ ವಿದ್ವಾಂಸ ಒಂದು ಕೇಡಿನ ವ್ಯವಸ್ಥೆಗೆ ತನ್ನನ್ನು ತಾನು ಮಾರಿಕೊಳ್ಳುವುದು. ಜಾಣ ಮೂರ್ಖತನಕ್ಕೆ ಹಲವಾರು ಸಂಪನ್ಮೂಲಗಳು. ಅದು ಸರ್ಕಾರಗಳ ಪರವಾಗಿ white paper ಬರೆಯಬಹುದು, ಅರಾಯಕಾರಿ ಕಾನೂನುಗಳನ್ನು ರಚಿಸಬಹುದು, ಜನರನ್ನು ಪಾತಾಳಕ್ಕೆ ಹೋಗಿ ಬೀಳುವಂತೆ ಮನವೊಲಿಸಬಹುದು. ಉದಾಹರಣೆಗೆ ಆಲ್ಬರ್ಟ್ ಸ್ಪೀರ್ ನ ತೆಗೆದುಕೊಳ್ಳಿ, ಆಲ್ಬರ್ಟ್ ಅತ್ಯಂತ ಜಾಣ ಮನುಷ್ಯನಾಗಿದ್ದ. ಅವನು ಒಬ್ಬ ಅದ್ಭುತ ವಾಸ್ತುಶಿಲ್ಪಿಯಾಗಿದ್ದ. ಅವನಿಗೆ ಜನರ ಮನವೊಲಿಸುವ ಕಲೆ ಕರತಲಾಮಲಕವಾಗುತ್ತು. ಆದರೆ ಅವನು ಹಿಟ್ಲರ್ ನ ಶಸ್ತ್ರಾಸ್ತ್ರಗಳ ದೇಖರೇಖಿಯ ಉಸ್ತುವಾರಿ ವಹಿಸಿಕೊಂಡ.
ಅವನು ಒಂದು ಮೂರ್ಖ ಮತ್ತು ಕೇಡಿನ ಕೆಲಸಕ್ಕಾಗಿ ತನ್ನ ನೈತಿಕ ತಾರ್ಕಿಕತೆಯನ್ನು ಮಾರಿಕೊಂಡ. ಅವನು ತನ್ನ ವಿದ್ವತ್ತನ್ನು ಒಂದು ಕೇಡಿನ ಕೆಲಸದ ಸಲಕರಣೆಯಾಗಿ ಬಳಸಲು ಅವಕಾಶ ನೀಡಿದ. ರಾಬರ್ಟ್ ಮುಸಿಲ್ ನ ಪ್ರಕಾರ ಅಪಾಯ ಇರೋದು ಹಳ್ಳಿಯ ಒಬ್ಬ ಭೋಳೆ ಮೂರ್ಖನಿಂದ ಅಲ್ಲ. ಅಪಾಯ ಒದಗಿ ಬರೋದು ಅತಿ ಶಿಕ್ಷಿತ, ಅದ್ಭುತ ಮಾತುಗಾರ ಮೂರ್ಖರಿಂದ. ಇವರು ತಮ್ಮ ಜಾಣತನವನ್ನೆಲ್ಲ ತಪ್ಪು ದಾರಿಗೆ ಬಳಸಿ ಆತಂಕಕ್ಕೆ ಕಾರಣರಾಗುತ್ತಾರೆ.
ನೀವು ಮಾನವ ಇತಿಹಾಸದಲ್ಲಿ ಯಾರಿಗೂ ಸರಿದೂಗುವಂಥ ಶಿಕ್ಷಣ ಪಡೆಯಬಹುದು, ವಿವಿಧ ಕಲೆಗಳಲ್ಲಿ ಚಾಣಾಕ್ಷರಾಗಬಹುದು. ಆದರೆ ನೀವು ಒಬ್ಬ ಮೂರ್ಖನ, ಒಬ್ಬ ಕೆಟ್ಟ ಮನುಷ್ಯನ ಸಲಕರಣೆಯಾಗಲು ನಿಮ್ಮನ್ನು ನೀವು ಒಪ್ಪಿಸಿತೊಂಡಿರೆಂದರೆ, ನೀವೂ ಕೂಡ ಮೂರ್ಖರು, ನೀವೂ ಕೂಡ ಕೇಡಿನ ಮನುಷ್ಯರು.
*******************^***********

