~ ಚಿದಂಬರ ನರೇಂದ್ರ
ನಾವೆಲ್ಲರೂ ಪೂರ್ವಾಗ್ರಹ ಪೀಡಿತರು. ಉದಾಹರಣೆಗೆ, ನಾವು ಉಡುಗೊರೆಗಳನ್ನ ನಮ್ಮ ಪರಿಚಿತರಿಗೆ ಕೊಡುತ್ತೇವೆಯೇ ಹೊರತು ಅಪರಿಚಿತರಿಗಲ್ಲ. ನಮ್ಮ ಹಣ, ಅಂತಃಕರಣ, ಕಾಳಜಿ ಎಲ್ಲವೂ ನಮ್ಮ ಪ್ರೀತಿಪಾತ್ರರಿಗೆ ಮೀಸಲಾಗಿರುತ್ತದೆಯೇ ಹೊರತು ಬೇರೆಯವರಿಗೆ ಅಲ್ಲ. ನಾವು ಕೆಲವರ ಪರವಾಗಿ ಪೂರ್ವಾಗ್ರಹ ಪೀಡಿತರಾಗಿರುತ್ತೇವೆ ಮತ್ತು ಕೆಲವರ ವಿರುದ್ಧವಾಗಿ. ಈ ಉದಾಹರಣೆಗಳನ್ನ ಬ್ರಿಟಿಷ್ ಫಿಲಾಸೊಫರ್ Derik Parfit ಅವರು, Blameless wrongdoing ಎಂದು ಗುರುತಿಸುತ್ತಾರೆ.
ಒಂದೊಮ್ಮೆ ಕ್ಲಾರಿ ಎನ್ನುವ ಹೆಣ್ಣುಮಗಳು ತನ್ನ ಮಗನಿಗೆ ಕ್ರಿಸ್ಮಸ್ ಗಿಫ್ಟ್ ಆಗಿ ದುಬಾರಿ iPad ಕೊಡಿಸುತ್ತಾಳೆ ಎಂದುಕೊಳ್ಳೋಣ. ಅದೇ ಹಣದಲ್ಲಿ ಅದೇ ಊರಿನ ಐವರು ಹಸಿದ ಮಕ್ಕಳಿಗೆ ಒಂದು ತಿಂಗಳ ಮಟ್ಟಿಗಾದರೂ ಆಕೆ ಊಟ ಕೊಡಿಸಬಹುದಿತ್ತು ಎನ್ನುವುದು ಕ್ಲಾರಿ ಗೆ ಗೊತ್ತು. ಆದರೂ ಅವಳು ತನ್ನ ಪುಟ್ಟ ಮಗನಿಗೆ ಈ ದುಬಾರಿ ಅನವಶ್ಯಕ ಗಿಫ್ಟ ಕೊಡುವುದನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ.
ಒಬ್ಬ consequentialist (ಪರಿಣಾಮವಾದಿ) ಆಗಿ Derik Parfit ಆಲೋಚನೆ ಮಾಡುವುದೇನೆಂದರೆ ಕ್ಲಾರಿ ಮಾಡುವುದು wrong ಆದರೆ blameless. ಏಕೆಂದರೆ ಕ್ಲಾರಿಯ ಕ್ರಿಯೆಗಳು ಒಳ್ಳೆಯ ಮತ್ತು ಉದಾತ್ತ ಭಾವಗಳಿಂದ, ಹಾಗು ತನ್ನ ಕುಟುಂಬವನ್ನು ಪೋಷಿಸುವ ಮತ್ತು ರಕ್ಷಿಸುವ ಉದ್ದೇಶದಿಂದ ಪ್ರೇರಿತವಾದವು.
ಒಬ್ಬ ತಾಯಿಯಾಗಿ ಮೊದಲು ತನ್ನ ಮಕ್ಕಳ ಬೇಕು ಬೇಡಗಳನ್ನು ಗಮನಿಸುವುದು ಆಕೆಯ ಕರ್ತವ್ಯ. ಪ್ರತಿ ತಂದೆ ತಾಯಿಗೆ ಇಂಥದೊಂದು ಭಾವವಿದ್ದರೆ, ಜಗತ್ತು ಈಗಿನಕಿಂತಲೂ ಉತ್ತಮವಾಗಿರುತ್ತಿತ್ತು. ಹೌದು, ತಂದೆ ತಾಯಿ ಸಹಜವಾಗಿ ತಮ್ಮ ಮಕ್ಕಳ ಬಗ್ಗೆ ಮೊದಲು ಕಾಳಜಿ ಮಾಡುವುದು ತಪ್ಪಲ್ಲ.
ಆದರೂ ‘ತಪ್ಪಲ್ಲ’ ಎನ್ನುವುದು ‘ಒಳ್ಳೆಯದು’ ಎಂದು ಕೂಡ ಹೇಳಲಿಕ್ಕಾಗುವುದಿಲ್ಲ ಅಲ್ಲವೆ?
********************************

