ಸಂಗ್ರಹಾನುವಾದ: ಚಿದಂಬರ ನರೇಂದ್ರ
ಹೆಸರಾಂತ ಕಾದಂಬರಿಕಾರ ಜಾರ್ಜ್ ಆರ್ವೆಲ್ ಅವರ ಪ್ರಕಾರ ನಾವು ರಾಜಕಾರಣ ಮತ್ತು ಅರ್ಥಶಾಸ್ತ್ರದ ಸುತ್ತ ಬಳಸುವ ಭಾಷೆ ಸವಕಲಾಗುತ್ತ ಹೋಗುತ್ತಿದೆ. ಈ ಭಾಷೆ ಪೊಳ್ಳಾಗುತ್ತ, ಅಸ್ಪಷ್ಟವಾಗುತ್ತ (vague) ಕೂಡ ಹೋಗುತ್ತಿದೆ.
ಆರ್ವೆಲ್ ಹೇಳುವಂತೆ ನಾವು ಬಹಳಷ್ಟು ಜನರು, ನೇರ ಅರ್ಥದ ಮತ್ತು ಅಂತಃಕರಣ ತುಂಬಿದ ಸಹಮತದ ಭಾಷೆಯನ್ನು ಬಿಟ್ಟು ಅಸಂಗತ ಕ್ಲೀಷೆಗಳನ್ನ ಬಳಸುತ್ತ ಹೋಗುತ್ತೇವೆ. ನಮ್ಮನ್ನು ಸಿದ್ಧ ಮಾದರಿಯ ಮಾತುಗಳು ಮತ್ತು ಚಟವಾಗಿಬಿಟ್ಟಿರುವ ಸಾಮಾನ್ಯ ಪದಪುಂಜಗಳು ಆವರಿಸಿಕೊಂಡು ಬಿಟ್ಟಿವೆ. ಉದಾಹರಣಿಗೆ ನಾವು ಚಿತ್ರಹಿಂಸೆ ಎನ್ನುವ ಪದದ ಬದಲಿಗೆ ಸುದೀರ್ಘ ವಿಚಾರಣೆ ಎನ್ನುವ ಪದ ಬಳಸುತ್ತೇವೆ. ಅರ್ಧದಷ್ಟು ಜನರನ್ನು ಕೆಲಸದಿಂದ ತೆಗೆದು ಹಾಕಲಾಯಿತು ಎನ್ನುವ ಸಾಲಿನ ಬದಲಿಗೆ ಉತ್ಪಾದಕತೆಯನ್ನು ಹೆಚ್ಚಿಸಲಾಗಿದೆ ಎಂದು ಉಪಯೋಗ ಮಾಡುತ್ತೇವೆ. ಸಾರ್ವಜನಿಕ ಕೊಲೆ ಯ ಬದಲಿಗೆ collateral damage ಎನ್ನುವ ಪದ ಬಳಸುತ್ತೇವೆ.
ಇವತ್ತು ನಮ್ಮ ರಾಜಕಾರಣಿಗಳಿಗೆ ಹೇಗೆ ಅನುಕೂಲಕರ ಸನ್ನಿವೇಶಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು ಎನ್ನುವುದನ್ನ ಕಲಿಸಲು ದೊಡ್ಡ ದೊಡ್ಡ ಟೀಂ ಗಳೇ ಇವೆ. ನಾವು ಪ್ರಾಮಾಣಿಕ, ಸ್ಪಷ್ಟ ಭಾಷೆಯನ್ನು ಬಿಟ್ಟು ಸೂಚನೆಯ, ಕಥೆ ಹೇಳುವ ಭಾಷೆಯನ್ನು ಬಳಸುತ್ತೇವೆ. ಇದು ಸಹಜವೇ, ಏಕೆಂದರೆ ಅದರಿಂದ ಒಬ್ಬರಿಗೆ ನಂಬಬಹುದಾದ ರೀತಿಯಲ್ಲಿ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳುವ ಅವಕಾಶ ಸಿಗುತ್ತದೆ. ಕೆಟ್ಟ ಪರಿಸ್ಥಿತಿಗಳಲ್ಲಿ ಆರಾಮಾಗಿ ತಪ್ಪಿಸಿಕೊಳ್ಳುವ ಅವಕಾಶ ಲಭ್ಯವಾಗುತ್ತದೆ. ಕಷ್ಟದ ಪರಿಸ್ಥಿತಿಗಳಲ್ಲಿ ಮಾಡಬಹುದಾದ ಅವಶ್ಯಕ ತ್ಯಾಗಗಳ ಬಗ್ಗೆ ಹೇಳುವುದು ಬಹಳ ಸುಲಭ, ಆದರೆ ಈ ನಿರ್ಧಾರದಿಂದ ನಿಮಗೆ ಇನ್ನಷ್ಟು ಹಿನ್ನಡೆಯಾಗಲಿದೆ ಎಂದು ಸ್ಪಷ್ಟವಾಗಿ ಎಚ್ಚರಿಸುವುದು ಅಷ್ಟು ಸುಲಭವಲ್ಲ.
ಆರ್ವೆಲ್ ನ ವಾದ ಏನೆಂದರೆ ನಮ್ಮ ಭಾಷೆ ಭೃಷ್ಟವಾಗುತ್ತ ಹೋದಂತೆ ನಮ್ಮ ಆಲೋಚನೆಗಳು ಸವಕಲಾಗುತ್ತ ಹೋಗುತ್ತವೆ. ಏಕೆಂದರೆ ನಾವು ನಮ್ಮ ಭಾಷೆಯನ್ನು ರಾಡಿಯಾಗಿಸಬಹುದಾದರೆ ನಮ್ಮ ಆಲೋಚನೆಗಳು ಕೂಡ ರಾಡಿಯಾದಬಹುದು.
ಆದ್ದರಿಂದ ನೀವು ಯಾವತ್ತಾದರೂ ದೊಡ್ಡ ದೊಡ್ಡ ಸತ್ತ ಮಾತುಗಳನ್ನ, ವಿಶೇಷಣಗಳನ್ನ, ರೆಡಿ ಮೇಡ್ ಕ್ಲೀಷೆಗಳನ್ನು ಕೇಳಿದಾಗ, ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ : ಅವರು ಏನು ಹೇಳಬಾರದೆಂದು ಪ್ರಯತ್ನ ಮಾಡುತ್ತಿದಾರೆ? ಏಕೆಂದರೆ ನಮ್ಮ ಆಧುನಿಕ ರಾಜಕೀಯ ಭಾಷೆ ಅರ್ಥವಿಲ್ಲದ ಮಾತುಗಳಿಂದ ಭೃಷ್ಟವಾಗಿಬಿಟ್ಟಿದೆ. ಅವರು ಸುಳ್ಳುಗಳನ್ನು ಸತ್ಯ ಎಂದು, ಅಸಹಜವನ್ನು ಸಹಜ ಎಂದೂ ಬಿಂಬಿಸಲು ಪ್ರಯತ್ನ ಮಾಡುತ್ತಿದ್ದಾರೆ.
*********************************

