ಮಾತಿನಲ್ಲಿ ಬ್ರ್ಯಾಂಡೋಲಿನಿಯ ನಿಯಮ

ಸಂಗ್ರಹಾನುವಾದ: ಚಿದಂಬರ ನರೇಂದ್ರ

ತಪ್ಪು ಮನುಷ್ಯನ ಜೊತೆ ವಾದ ಮಾಡುವುದು ಎಷ್ಟು ತ್ರಾಸದಾಯಕ? ನಾವು ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ, ಎಲ್ಲ ಮೂಲಗಳನ್ನು ಉಲ್ಲೇಖ ಮಾಡಿ, ಒಂದು ತಾರ್ಕಿಕ ವಾದವನ್ನು ಮಾಡಿದಾಗಲೂ, ಎದುರಿಗಿನ ವ್ಯಕ್ತಿ , “ಇಲ್ಲ ನಾನು ಇದನ್ನೆಲ್ಲ ಒಪ್ಪುವುದಿಲ್ಲ” ಎಂದು ಸುಲಭವಾಗಿ ಹೇಳಿಬಿಡುತ್ತಾನಲ್ಲ ! ಇದಕ್ಕೆ ಕಾರಣ ಬ್ರ್ಯಾಂಡೋಲಿನಿಯ ನಿಯಮ (Brandolini’s law). 2013 ರಲ್ಲಿ ಇಟ್ಯಾಲಿಯನ್ ಪ್ರೋಗ್ರಾಮರ್ Alberto Brandilini, “Bullshit asymmetry principle.” ನ್ನು ರೂಪಿಸಿದ.

ಈ ನಿಯಮದ ಪ್ರಕಾರ, “ಅರ್ಥವಿಲ್ಲದ ವಾದವನ್ನು ತಳ್ಳಿಹಾಕಲು ಅಗತ್ಯವಿರುವ ಶಕ್ತಿ ಅದನ್ನು ಹುಟ್ಟುಹಾಕಲು ಬೇಕಾಗುವ ಶಕ್ತಿಗಿಂತ ಅನೇಕ ಪಟ್ಟು ಹೆಚ್ಚಿನದು.”

ಸ್ಟೀವ್ ಎನ್ನುವ ಮನುಷ್ಯನನ್ನು ಕಲ್ಪನೆ ಮಾಡಿಕೊಳ್ಳಿ. ಅವನ ಪ್ರಕಾರ , space ನಿಂದ ನೋಡಿದರೆ ಕಾಣಿಸುವ ಏಕೈಕ ಮನುಷ್ಯ ನಿರ್ಮಿತ ರಚನೆ ಎಂದರೆ ಅದು the Great Wall china. ಆದರೆ ಈ ಮಾತನ್ನು ಕ್ಲಾರಿ ನಿರಾಕರಿಸಬಯಸುತ್ತಾಳೆ. ಖಗೋಳ ಯಾತ್ರಿಗಳು space ನಿಂದ ನೋಡಿದಾಗ ಇಂಥ ಯಾವುದೂ ಕಾಣಿಸಲಿಲ್ಲ ಎಂದು ಅವಳು ಸಾಕ್ಷಿ ಸಹಿತ ಹೇಳುತ್ತಾಳೆ. ಚೈನಾದ ಮಹಾಗೋಡೆ ಇರೋದು ಕೇವಲ 6 ಮೀಟರ್ ಎತ್ತರ, ಭೂಮಿಯ ಹೊರಗಿನಿಂದ ನೋಡಿದಾಗ ಇದು ಕಾಣುವುದು ಸಾಧ್ಯವೇ ಇಲ್ಲ ಎಂದು ತಾರ್ಕಿಕ ವಾದ ಮಾಡುತ್ತಾಳೆ.  ಆದರೆ ಕ್ಲಾರಿ ತನ್ನ ಮಾತು ಮುಗಿಸುವ ಮೊದಲೇ ಸ್ಟೀವ್ ಬೇರೆ ಯಾವುದೋ ಮಾತಿಗೆ ಹೋಗಿ ಬಿಟ್ಟಿರುತ್ತಾನೆ. ಅವನ ಸುಳ್ಳು ಮತ್ತೊಂದು ಕಡೆ ಹರಡಿ ಬಿಟ್ಟಿರುತ್ತದೆ.

ಬ್ರ್ಯಾಂಡೋಲಿನಿಯ ನಿಯಮದ ಕಾರಣವಾಗಿಯೋ, ಕಾನ್ಸ್ಪಿರಸಿ ಥಿಯರಿಗಳು, ರಾಜಕೀಯ ಪ್ರೊಪಗಾಂಡಾಗಳು, ಸುಳ್ಳು ಸುದ್ದಿಗಳು ಅಷ್ಟು ವೇಗದಲ್ಲಿ ಎಲ್ಲಕಡೆಗೆ ಹರಡಿಕೊಳ್ಳೋದು. ಏಕೆಂದರೆ ಸತ್ಯ ತಾನು ಚಪ್ಪಲಿ ಹಾಕಿಕೊಳ್ಳುವುದಕ್ಕಿಂತ ಮೊದಲೇ ಸುಳ್ಳು ಜಗತ್ತನ್ನೆಲ್ಲ ಒಮ್ಮೆ ಸುತ್ತಾಡಿ ಬಂದುಬಿಟ್ಟಿರುತ್ತದೆ. ಸುಳ್ಳಿಗೆ ಕೇವಲ ಒಂದು ಸಾಲು ಸಾಕು. ಆದರೆ, ತಿದ್ದುಪಡಿಗೆ ಹಲವಾರು ಪ್ಯಾರಾಗ್ರಾಫ್ ಗಳು, ಮೂಲಗಳು, ಕೇವಿಯಟ್ ಗಳು ಮತ್ತು ಜನರ ಸಹನೆಗೆ ಸವಾಲಾಗಬಲ್ಲಂಥ ಸೂಕ್ಷ್ಮ ವಿವರಣೆಗಳು ಬೇಕಾಗುತ್ತವೆ.

ಇಂಥ ಪ್ರತಿವಾದಗಳನ್ನು ನಾವು ನಿಲ್ಲಿಸ ಬೇಕು , ಇದು ಅಷ್ಟು ಪ್ರಯೋಜನಕಾರಿ ಅಲ್ಲ ಅಂತ ಬ್ರ್ಯಾಂಡೋಲಿನಿ ಹೇಳುತ್ತಿಲ್ಲ. ಬದಲಾಗಿ ಇಂಥ ವಾದಗಳಿಂದ ನಾವು ಬಳಲಿದರೆ ಇದು ನಮ್ಮ ವಾದದ ವೈಫಲ್ಯ ಅಲ್ಲ ಎನ್ನುವುದು ನಮಗೆ ಗೊತ್ತಿರಬೇಕು. ವಿಷಯ ಇಷ್ಟೇ ಈ ಆಟವನ್ನು ಶುರು ಮಾಡುವ ಮೊದಲೇ ನೀವು ಮೋಸಕ್ಕೊಳಗಾಗಿರುವುದು ನಿಮಗೆ ಗೊತ್ತಿರಬೇಕು.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.