ವಾದಿಸುವುದೇ ಒಂದು ಮೂರ್ಖತನ!

ಸೋಫಿಸ್ಟ್ ರು ಜನರಿಗೆ ಅದ್ಭುತವಾಗಿ ಮಾತನಾಡಲು, ಸಮರ್ಥವಾಗಿ ವಾದ ಮಾಡಲು  ಮತ್ತು ಪ್ರತಿಸ್ಪರ್ಧಿಯನ್ನು ಹಾಸ್ಯಾಸ್ಪದವಾಗಿ ತೋರಿಸಲು ಹಲವಾರು ತಂತ್ರಗಳು ಮತ್ತು ಉಪಾಯಗಳನ್ನು ಕಲಿಸುವವರು. ಇದು ಫಿಲಾಸೊಫಿಯನ್ನು ಕೇವಲ ಸ್ಪರ್ಧೆಯಾಗಿ ಕುಗ್ಗಿಸುತ್ತದೆ ಎನ್ನುವ ಕಾರಣದಿಂದ ಪ್ಲೇಟೋ ವಾದಗಳೆಂದರೆ ಅಸಹ್ಯಪಡುತ್ತಿದ್ದ… । ಸಂಗ್ರಹಾನುವಾದ : ಚಿದಂಬರ ನರೇಂದ್ರ

ವಾದಕ್ಕೆ ಪ್ರತಿವಾದ ಸಾಕು ವಾದ ವಿವಾದ
ಜೀವಸಂವಾದಕ್ಕೆ ಹಸಿದು ಬಂದೆ
ನೀಡು ಸಿಪ್ಪೆಯ ಸುಲಿದು ತಿಳಲನೊಂದೇ


~ ಬೇಂದ್ರೆ

ಪ್ಲೇಟೋ ನ ಪ್ರಕಾರ ವಾದಗಳು ಮೂರ್ಖತನದವು ಹಾಗೂ ಅಪಾಯಕಾರಿಯಾದಂಥವು. ಪ್ಲೇಟೋ ನನ್ನು  ಎಲ್ಲಾ ಕಾಲಗಳಲ್ಲಿಯೂ ಒಬ್ಬ ಶ್ರೇಷ್ಠ ಫಿಲಾಸೊಫರ್ ಎಂದು  ಪರಿಗಣಿಸಲಾಗುತ್ತದೆ; ಆದ್ದರಿಂದ ಪ್ಲೇಟೋ, ಡಿಬೇಟ್ ಬಗ್ಗೆ ಇಷ್ಟು ತೀಕ್ಷ್ಣವಾಗಿ ಟೀಕಿಸಿರುವುದು ವಿಚಿತ್ರವಾಗಿ ಕಾಣಬಹುದು. ಆದರೆ ಪ್ಲೇಟೋ ನ ಪ್ರಕಾರ, ವಾದಗಳು  ಎಂದಿಗೂ ಫಿಲಾಸೊಫಿ ಅಥವಾ ಸತ್ಯದ ಬಗ್ಗೆ ಇರುವುದಿಲ್ಲ. ಅವು ಅಹಂಕಾರ, ಸೊಕ್ಕು ಮತ್ತು ಯಾವ ಬೆಲೆ ತೆತ್ತಾದರೂ ಗೆಲ್ಲುವ ಮನುಷ್ಯ ಸ್ವಭಾವದ ಬಗ್ಗೆ ಇರುತ್ತವೆ. ತನ್ನ “ಡೈಲಾಗ್ಸ್” ಕೃತಿಯಲ್ಲಿ ಪ್ಲೇಟೋ ಸೋಫಿಸ್ಟ್‌ಗಳನ್ನು (ಅಪ್ರಾಮಾಣಿಕ ಡಿಬೇಟ್ ಪರಿಣಿತರು) ತೀಕ್ಷ್ಣವಾಗಿ ಟೀಕಿಸುತ್ತಾನೆ. ಸೋಫಿಸ್ಟ್‌ಗಳು,  ಪ್ರೊಫೆಷನಲ್  ವಾದ ಪ್ರತಿಭೆಗಳು, ಜನರಿಗೆ ವಾದಗಳಲ್ಲಿ ಹೇಗೆ ಗೆಲ್ಲಬೇಕು ಎನ್ನುವುದನ್ನ ಕಲಿಸಿಕೊಡುವವರು.

ಸೋಫಿಸ್ಟ್ ರು ಜನರಿಗೆ ಅದ್ಭುತವಾಗಿ ಮಾತನಾಡಲು, ಸಮರ್ಥವಾಗಿ ವಾದ ಮಾಡಲು  ಮತ್ತು ಪ್ರತಿಸ್ಪರ್ಧಿಯನ್ನು ಹಾಸ್ಯಾಸ್ಪದವಾಗಿ ತೋರಿಸಲು ಹಲವಾರು ತಂತ್ರಗಳು ಮತ್ತು ಉಪಾಯಗಳನ್ನು ಕಲಿಸುವವರು. ಇದು ಫಿಲಾಸೊಫಿಯನ್ನು ಕೇವಲ ಸ್ಪರ್ಧೆಯಾಗಿ ಕುಗ್ಗಿಸುತ್ತದೆ ಎನ್ನುವ ಕಾರಣದಿಂದ ಪ್ಲೇಟೋ ವಾದಗಳೆಂದರೆ ಅಸಹ್ಯಪಡುತ್ತಿದ್ದ. ಇಂಥ ಡಿಬೇಟ್ ಗಳಲ್ಲಿ ಎರಡೂ ಪಕ್ಷಗಳು ಒಂದು ರೀತಿಯ ಆಟದಂತೆ ಪರಸ್ಪರರನ್ನು ಮೀರಿಸಲು ಹಾಗೂ ಮಾತಿನ ಚಾತುರ್ಯದಿಂದ ಗೆಲ್ಲಲು ಪ್ರಯತ್ನಿಸುತ್ತವೆ.  ಗ್ರೀಕರು ಇದನ್ನು Eristic (ಸತ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಕೇವಲ ವಾದವನ್ನು ಗೆಲ್ಲಲು ಅನೈತಿಕ ತಂತ್ರಗಳನ್ನು ಬಳಸುವವರು) ಎಂದು ಕರೆಯುತ್ತಿದ್ದರು. ಎರಿಸ್ಟಿಕ್ ವಾದಿಗಳು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯಲು ಪ್ರಯತ್ನಿಸುವವರು, ಅವರು ತಮ್ಮ ಪ್ರತಿಸ್ಪರ್ಧಿಗಳನ್ನು ತಮಾಷೆ ಮಾಡುತ್ತಾರೆ, ಮತ್ತು ಗೆಲುವು ಸಾಧಿಸಲು ಯಾವುದೇ ತಪ್ಪಾದ ತರ್ಕಗಳನ್ನೂ ಬಳಸುತ್ತಾರೆ.

ಪ್ಲೇಟೋ ನ ಪ್ರಕಾರ,  ವಾದ–ವಿವಾದಗಳು ಕೇವಲ ಹಾನಿಯಿಲ್ಲದ ಮನರಂಜನೆ ಮಾತ್ರವಲ್ಲ. ಏಕೆಂದರೆ ಎರಿಸ್ಟಿಕ್‌ ಗಳು ಸೃಷ್ಟಿಸುವ ದೊಡ್ಡ ಸಮಸ್ಯೆ ಎಂದರೆ,  ಜನರು ವಾದಗಳಲ್ಲಿ ಗೆದ್ದವರನ್ನೇ ಸತ್ಯವೆಂದು ತಪ್ಪಾಗಿ ತಿಳಿಯುತ್ತಾರೆ. ಆದರೆ ಯಾರಾದರೂ ತಮ್ಮ ವಿನೋದಪ್ರಜ್ಞೆ  ಮತ್ತು ವೃತ್ತಿಪರ ತಂತ್ರಗಳನ್ನು ಬಳಸಿ  ವಾದಗಳಲ್ಲಿ ಗೆಲ್ಲುತ್ತಾರಾದರೆ, ಅವರ ಮಾತು-ವಾದ ಸರಿ ಇದ್ದೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಪ್ಲೇಟೋ ನ ದೃಷ್ಟಿಯಲ್ಲಿ, ಸತ್ಯ ಮತ್ತು ಫಿಲಾಸೊಫಿ ಸುದೀರ್ಘಕಾಲದ, ಸಹಕಾರಪೂರ್ಣ ಮತ್ತು ಸಂವಾದಾತ್ಮಕ (ಡೈಲೇಕ್ಟಿಕ್) ಪ್ರಕ್ರಿಯೆಯ ಫಲ.

ಮುಂದಿನ ಬಾರಿ ನೀವು ಯಾವುದೇ ವಾದವನ್ನು ಗಮನಿಸಿದಾಗ, ಅಥವಾ ಸೊಗಸಾಗಿ ಮಾತನಾಡುವ ಎರಿಸ್ಟಿಕ್ ವಾದಿಯನ್ನು ನೋಡಿದಾಗ, ಫಿಲಾಸೋಫಿ ಮತ್ತು ಡಿಬೇಟ್ ಗಳು  ಕೆಲವೊಮ್ಮೆ ಒಂದಕ್ಕೊಂದು ಹೊಂದಿಕೊಂಡಂತೆ ಕಂಡರೂ  ಅವು ಸದಾ ಒಂದೇ ಆಗಿರುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.