ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಮತ್ತು ನದಿಗಳಿಗೆ ದೀಪಾವಳಿಯೂ ಇಲ್ಲ, ಹೋಳಿಯೂ ಇಲ್ಲ. ಏಕೆಂದರೆ ಅವುಗಳ ಪಾಲಿಗೆ ಇಡೀ ಬದುಕೇ ದೀಪಾವಳಿ, ಇಡೀ ಬದುಕೇ ಹೋಳಿ – ಓಶೋ / Not Ram Bin Thaw | ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರಕೃತಿಯನ್ನು ಒಮ್ಮೆ ನೋಡಿ. ಅಲ್ಲಿ ಪರಮಾತ್ಮನು ಪ್ರತಿದಿನವೂ ದೀಪಾವಳಿಯನ್ನು ಆಚರಿಸುತ್ತಿದ್ದಾನೆ, ಪ್ರತಿದಿನವೂ ಹೋಳಿಯನ್ನು ಆಚರಿಸುತ್ತಿದ್ದಾನೆ.
ನಮ್ಮ ಹಬ್ಬಗಳು ಮಾತ್ರ ಆಗೊಮ್ಮೆ ಈಗೊಮ್ಮೆ ಬರುತ್ತವೆ. ವರ್ಷದಲ್ಲಿ ಕೆಲವೊಮ್ಮೆ ಹೋಳಿ ಆಚರಿಸುತ್ತೇವೆ. ಆಗ ಬಣ್ಣಗಳಲ್ಲಿ ಮಿಂದೇಳುತ್ತೇವೆ, ಒಬ್ಬರಿಗೊಬ್ಬರು ಬಣ್ಣ ಎರಚಿಕೊಳ್ಳುತ್ತೇವೆ. ಇನ್ನು ಕೆಲವೊಮ್ಮೆ ದೀಪಾವಳಿ ಆಚರಿಸುತ್ತೇವೆ. ಕತ್ತಲಿನಲ್ಲಿ ದೀಪಗಳನ್ನು ಬೆಳಗಿಸುತ್ತೇವೆ. ಆದರೆ ನಮ್ಮ ಬದುಕು ಮಾತ್ರ ಬರಡಾಗಿದೆ, ಜೀವಂತಿಕೆಯನ್ನು ಕಳೆದುಕೊಂಡಿದೆ. ಬಹುಶಃ ಈ ಬರಡು ಬದುಕಿನ ಕಾರಣದಿಂದಲೇ ಮನುಷ್ಯ ಹಬ್ಬಗಳನ್ನು ಸೃಷ್ಟಿಸಿಕೊಳ್ಳಬೇಕಾಯಿತು. ಆದರೆ ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಮತ್ತು ನದಿಗಳಿಗೆ ದೀಪಾವಳಿಯೂ ಇಲ್ಲ, ಹೋಳಿಯೂ ಇಲ್ಲ. ಏಕೆಂದರೆ ಅವುಗಳ ಪಾಲಿಗೆ ಇಡೀ ಬದುಕೇ ದೀಪಾವಳಿ, ಇಡೀ ಬದುಕೇ ಹೋಳಿ.
ಮನುಷ್ಯ ಅಂತರಂಗದಲ್ಲಿ ಅಸ್ವಸ್ಥನಾಗಿದ್ದಾನೆ. ಹಾಗಾಗಿ ಅವನು ದೀಪಾವಳಿಯಂತಹ ಒಂದು ದಿನದ ಸಂಭ್ರಮದಲ್ಲೇ ಸಮಾಧಾನ ಕಂಡುಕೊಳ್ಳುತ್ತಾನೆ. ದೀಪಾವಳಿ ಎನ್ನುವುದು ಅವನಿಗೆ ಕೇವಲ ಒಂದು ಸಮಾಧಾನದ ನೆಪವಷ್ಟೇ.
ಆ ದಿನ ಹೊಸ ಬಟ್ಟೆಗಳನ್ನು ಧರಿಸುತ್ತೇವೆ, ಮನೆಯಲ್ಲಿ ದೀಪಗಳನ್ನು ಬೆಳಗಿಸುತ್ತೇವೆ, ಪಟಾಕಿಗಳನ್ನು ಸಿಡಿಸುತ್ತೇವೆ. ಆದರೆ ಮರುದಿನ ಮತ್ತೆ ನಮ್ಮ ಹಳೆಯ ದುಃಖದ ಬದುಕಿಗೆ ಮರಳುತ್ತೇವೆ. ಅದೇ ಸೆರೆಮನೆ, ಅದೇ ಸಂಕಟ, ಅದೇ ನೋವು ಮತ್ತು ವೇದನೆ. ಹೋಳಿ ಬಂದಾಗ ಹಾಡುತ್ತೇವೆ, ಕುಣಿಯುತ್ತೇವೆ. ಎಲ್ಲೆಗಳನ್ನು ಮೀರುತ್ತೇವೆ. ಕಟ್ಟಳೆಗಳನ್ನು, ನಿಯಮಗಳನ್ನು ಬದಿಗಿಡುತ್ತೇವೆ. ಆ ದಿನ ಯಾವುದೇ ನಿಯಮಗಳನ್ನು ಪಾಲಿಸುವುದಿಲ್ಲ. ಯಾವುದೇ ಶಿಷ್ಟಾಚಾರಕ್ಕೆ ಬದ್ಧರಾಗಿರುವುದಿಲ್ಲ. ಯಾವುದೇ ನಿರ್ಬಂಧಗಳನ್ನು ಒಪ್ಪಿಕೊಳ್ಳುವುದಿಲ್ಲ. ಎಲ್ಲ ಶಿಸ್ತುಗಳೂ ಆ ದಿನ ಮುರಿದುಬೀಳುತ್ತವೆ. ನದಿಯೊಂದು ತನ್ನ ಎಲ್ಲೆಗಳನ್ನು ಮೀರಿ ಹರಿಯುವಂತೆ, ಆ ಒಂದು ದಿನ ಬದುಕು ಸ್ವಚ್ಛಂದವಾಗಿ ಹರಿಯುತ್ತದೆ.
ಆದರೆ ಆ ನದಿ ಕೇವಲ ಒಂದು ದಿನ ಮಾತ್ರ ಹೀಗೆ ಹರಿದರೆ ಸಾಕೇ? ಅದು ಸಾಗರವನ್ನು ಸೇರಬೇಕಲ್ಲವೇ? ಆದರೆ ಇದೂ ಕೂಡ ನಮ್ಮನ್ನು ನಾವೇ ಸಮಾಧಾನಪಡಿಸಿಕೊಳ್ಳಲು ಕಂಡುಕೊಂಡ ಒಂದು ನೆಪವಷ್ಟೇ. ಆದರೆ ಪ್ರಕೃತಿಯನ್ನು ನೋಡಿ. ಅಲ್ಲಿ ಸರ್ವಶಕ್ತನಾದ ಪರಮಾತ್ಮನು ಪ್ರತಿದಿನವೂ ದೀಪಾವಳಿಯನ್ನೂ ಹೋಳಿಯನ್ನೂ ಆಚರಿಸುತ್ತಿದ್ದಾನೆ. ಅಲ್ಲಿ ಪ್ರತಿದಿನವೂ ಬಣ್ಣಗಳು ಚೆಲ್ಲಾಡುತ್ತವೆ. ಪ್ರತಿದಿನವೂ ಹೂವುಗಳು ಅರಳುತ್ತವೆ. ಹಳೆಯ ಎಲೆಯೊಂದು ಉದುರುವ ಮುನ್ನವೇ ಹೊಸ ಎಲೆಯೊಂದು ಚಿಗುರುತ್ತದೆ; ಹಳೆಯದರ ಜಾಗದಲ್ಲಿ ಹೊಸ ಜೀವವೊಂದು ರೂಪುಗೊಳ್ಳುತ್ತದೆ. ಅಲ್ಲಿ ಹಬ್ಬದ ಸಂಭ್ರಮ ಒಂದು ಕ್ಷಣವೂ ನಿಲ್ಲುವುದಿಲ್ಲ. ನಿರಂತರವಾಗಿ ಸಂಭ್ರಮದ ಉತ್ಸವ ಸಾಗುತ್ತಲೇ ಇರುತ್ತದೆ.
ಅಲ್ಲಿ ನಕ್ಷತ್ರಗಳು, ಚಂದ್ರ ಮತ್ತು ಸೂರ್ಯ ಪ್ರತಿದಿನವೂ ಬೆಳಗುತ್ತಿರುತ್ತಾರೆ. ಅಲ್ಲಿ ಪ್ರತಿ ಕ್ಷಣವೂ ದೀಪಾವಳಿಯೇ!
ಧಾರ್ಮಿಕ ವ್ಯಕ್ತಿಯ ಬದುಕು ಕೂಡ ಹೀಗೆಯೇ ಇರಬೇಕು.
ಅವನ ಬದುಕಿನ ಪ್ರತಿಯೊಂದು ಕ್ಷಣವೂ ಸಂಭ್ರಮದಿಂದ ತುಂಬಿರಬೇಕು. ತಾನು ಅಸ್ತಿತ್ವದಲ್ಲಿದ್ದೇನೆ, ಬದುಕಿದ್ದೇನೆ ಎನ್ನುವುದೇ ಅವನ ಪಾಲಿಗೆ ಒಂದು ಸಂಭ್ರಮದ ಅನುಭವವಾಗಿರಬೇಕು. ಅವನ ಪ್ರತಿಯೊಂದು ಉಸಿರೂ ಕೃತಜ್ಞತೆಯ ಅಭಿವ್ಯಕ್ತಿಯಾಗಿರಬೇಕು.
***********************************

