ಮೊದಲು ನಮ್ಮ ಹೃದಯ ನಲಿಯಲು ಅವಕಾಶ ನೀಡಬೇಕು. ಹೃದಯ ನಲಿಯತೊಡಗಿದಾಗ ಇಡೀ ಜೀವನವೇ ನಮ್ಮೊಂದಿಗೆ ನಲಿಯಲು ಆರಂಭಿಸುತ್ತದೆ ~ ಓಶೋ / The Rainbow Bridge । ಕನ್ನಡಕ್ಕೆ : ಚಿದಂಬರ ನರೇಂದ್ರ
ಜೀವನವನ್ನು ಒಂದು ಸಮಸ್ಯೆಯೆಂದು ಪರಿಗಣಿಸಬಾರದು; ವಾಸ್ತವವಾಗಿ ಜೀವನ ಸಮಸ್ಯೆಯೇ ಅಲ್ಲ. ಅದನ್ನು ದೇವರು ನಮಗೆ ನೀಡಿರುವ ಅತ್ಯಮೂಲ್ಯವಾದ ಉಡುಗೊರೆ ಎಂದು ಸ್ವೀಕರಿಸಬೇಕು. ಜೀವನವನ್ನು ಒಂದು ಹೊರೆಯಾಗಿ ಕಾಣಬಾರದು; ಅದನ್ನು ಒಂದು ನೃತ್ಯದಂತೆ ಸ್ವೀಕರಿಸಬೇಕು. ನಮ್ಮನ್ನು ನಾವೇ ಎಳೆದುಕೊಂಡು ಹೋಗುವ ಅಗತ್ಯವಿಲ್ಲ. ಜೀವನದ ಇಡೀ ಪಯಣವನ್ನು ನಾವು ನೃತ್ಯ ಮಾಡುತ್ತಾ ನಗುತ್ತಾ ಮತ್ತು ಪ್ರೀತಿಸುತ್ತಾ ದಾಟಬಹುದು.
ಜೀವನ ಒಂದು ಅದ್ಭುತವಾಗಬೇಕೆಂದೇ ರೂಪುಗೊಂಡಿದೆ. ಆದರೆ ಅದು ನಮ್ಮ ಆಯ್ಕೆಯನ್ನು ಅವಲಂಬಿಸಿದೆ. ನಾವು ದುಃಖವನ್ನು ಆರಿಸಿಕೊಂಡರೆ ಜೀವನವೂ ದುಃಖಮಯವಾಗುತ್ತದೆ. ಜೀವನ ಬಹಳ ಅನುಕೂಲಕರವಾದುದು; ನೀವು ದುಃಖವನ್ನು ಆರಿಸಿಕೊಂಡರೆ ಅದು ದುಃಖವಾಗುತ್ತದೆ, ಕತ್ತಲೆಯನ್ನು ಆರಿಸಿಕೊಂಡರೆ ಅದು ಕತ್ತಲೆಯಾಗುತ್ತದೆ. ನೀವು ಯಾವುದನ್ನು ಆರಿಸಿಕೊಳ್ಳುತ್ತೀರೋ ಅದೇ ಆಗಿ ನಿಮ್ಮ ಮುಂದೆ ತೆರೆದುಕೊಳ್ಳುವಷ್ಟು ಜೀವನವು ಸಹಕರಿಸುತ್ತದೆ. ನೀವು ಆನಂದವನ್ನು ಆರಿಸಿಕೊಂಡರೆ ಅದು ಆನಂದವಾಗುತ್ತದೆ; ದೇವರನ್ನು ಆರಿಸಿಕೊಂಡರೆ ಅದು ದೇವರ ಅನುಭೂತಿಯಾಗುತ್ತದೆ. ಎಲ್ಲವೂ ನಿಮ್ಮನ್ನು ಅವಲಂಬಿಸಿದೆ.
ಆದರೆ ಜನರು ನಿರಂತರವಾಗಿ ತಪ್ಪು ಸಂಗತಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುತ್ತಾರೆ; ಆನಂತರ ತಮ್ಮ ದುಃಖಕ್ಕೆ ಜೀವನವೇ ಕಾರಣವೆಂದು ದೂಷಿಸುತ್ತಾರೆ. ವಾಸ್ತವದಲ್ಲಿ ಅವರೇ ಅದಕ್ಕೆ ಹೊಣೆಗಾರರು. ಏನೇ ಸಂಭವಿಸಿದರೂ, ಅದು ಅವರ ಇಚ್ಛೆಯಿಂದಲೇ ಸಂಭವಿಸಿರುತ್ತದೆ. ತಿಳಿದೋ ತಿಳಿಯದೆಯೋ, ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಅವರು ಅದನ್ನೇ ಬಯಸಿರುತ್ತಾರೆ. ನಿಮ್ಮ ಅಸ್ತಿತ್ವದ ಯಾವುದೋ ಒಂದು ಮೂಲೆಯಲ್ಲಿ, ಯಾವುದೋ ಒಂದು ರೀತಿಯಲ್ಲಿ ನೀವು ಅದನ್ನು ಬಯಸಿರದಿದ್ದರೆ ಅದು ಸಂಭವಿಸುತ್ತಿರಲಿಲ್ಲ.
ಈ ಕ್ಷಣದಿಂದಲೇ ಆನಂದವನ್ನಷ್ಟೇ ಬಯಸಿ. ಆನಂದದ ಬಗ್ಗೆ ಯೋಚಿಸಿ, ಆನಂದವನ್ನು ಅನುಭವಿಸಿ, ಆನಂದವೇ ಆಗಿ. ನೀವು ಆನಂದಮಯವಾಗಿರುವುದೊಂದರಿಂದಲೇ ನಿಮ್ಮ ಇಡೀ ಜಗತ್ತು ಆನಂದಮಯವಾಗುತ್ತದೆ.
ನಿಮ್ಮ ಕಣ್ಣುಗಳು ಆನಂದದಿಂದ ತುಂಬಿರುವಾಗ, ನೀವು ಅದೇ ಹೂವುಗಳನ್ನು, ಅದೇ ಮರಗಳನ್ನು ಮತ್ತು ಅದೇ ಜನರನ್ನು ನೋಡುತ್ತೀರಿ. ಆದರೆ ಅವು ಯಾವುದೂ ಹಿಂದಿನಂತಿರುವುದಿಲ್ಲ. ಏಕೆಂದರೆ ಈಗ ನಿಮ್ಮ ಕಣ್ಣುಗಳಿಗೆ ಸಂಪೂರ್ಣ ಭಿನ್ನವಾದ ದೃಷ್ಟಿ ದೊರೆತಿರುತ್ತದೆ. ನಿಮ್ಮ ಕಣ್ಣುಗಳಲ್ಲಿ ಏನು ತುಂಬಿದೆಯೋ ಅದನ್ನೇ ನೀವು ಜಗತ್ತಿನಲ್ಲಿ ಕಾಣುತ್ತೀರಿ. ಆಗ ಇಡೀ ಜೀವನವೇ ಒಂದು ಸಂಭ್ರಮವಾಗುತ್ತದೆ.
ಆದರೆ ಅದಕ್ಕೂ ಮೊದಲು ನಮ್ಮ ಹೃದಯ ನಲಿಯಲು ಅವಕಾಶ ನೀಡಬೇಕು. ಹೃದಯ ನಲಿಯತೊಡಗಿದಾಗ ಇಡೀ ಜೀವನವೇ ನಮ್ಮೊಂದಿಗೆ ನಲಿಯಲು ಆರಂಭಿಸುತ್ತದೆ.
ನಕ್ಕುಬಿಡಿ, ಆಗ ಇಡೀ ಜಗತ್ತು ನಿಮ್ಮೊಂದಿಗೆ ನಗುತ್ತದೆ ಎಂಬ ಹಳೆಯ ಮಾತು ನಿಜವಾಗುತ್ತದೆ. ಅತ್ತರೆ, ನೀವು ಒಬ್ಬರೇ ಅಳಬೇಕಾಗುತ್ತದೆ. ನಿಮ್ಮ ದುಃಖದಲ್ಲಿ ಯಾರೂ ಭಾಗಿಯಾಗುವುದಿಲ್ಲ; ಆದರೆ ನಿಮ್ಮ ಆನಂದದಲ್ಲಿ ಅತಿಥಿಯಾಗಲು ಎಲ್ಲರೂ ಸಿದ್ಧರಿರುತ್ತಾರೆ.

