ನೀವು ಕಾಯಿಲೆಯಿಂದ ಗುಣಮುಖರಾಗುವುದು ಮಾತ್ರ ವಿಧಿಯಲ್ಲಿ ಬರೆದಿರುವುದಲ್ಲ; ಅದಕ್ಕಾಗಿ ನೀವು ವೈದ್ಯರನ್ನು ಸಂಪರ್ಕಿಸುವುದೂ ವಿಧಿಯ ಭಾಗವೇ ಆಗಿದೆ | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಅದು ಆಗಬೇಕೆಂದಿದ್ದರೆ, ತಾನಾಗಿಯೇ ಆಗುತ್ತದೆ. ಇರುವುದನ್ನು ಇದ್ದಂತೆಯೇ ಸ್ವೀಕರಿಸಬೇಕು. ಈ ಮಾತುಗಳನ್ನು ನೀವು ನೂರಾರು ಬಾರಿ ಯಾರಾದರೂ ಹೇಳುವುದನ್ನು ಕೇಳಿರಬಹುದು. ಬಹುಶಃ ನೀವೂ ಕೂಡ ಉದ್ಯೋಗದ ವಿಷಯದಲ್ಲಿ, ಒಬ್ಬ ವ್ಯಕ್ತಿಯ ವಿಷಯದಲ್ಲಿ ಅಥವಾ ಪರೀಕ್ಷೆಯ ಸಂದರ್ಭದಲ್ಲಿ ಹೀಗೆ ಹೇಳಿರಬಹುದು.
ಆದರೆ ಸುಮಾರು 2,000 ವರ್ಷಗಳ ಹಿಂದೆ ಗ್ರೀಕ್ ಸ್ಟೋಯಿಕ್ ತತ್ವಜ್ಞಾನಿ ಕ್ರಿಸಿಪ್ಪಸ್ (Chrysippus) ಈ ಮನೋಭಾವವನ್ನು ಸೋಮಾರಿತನದ ತರ್ಕ (The Lazy Argument) ಎಂದು ಕರೆದಿದ್ದನು. ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ.
ಯಾರಾದರೂ, ತಾನು ಕಾಯಿಲೆಯಿಂದ ಗುಣಮುಖನಾಗಬೇಕೆಂದು ವಿಧಿಯಲ್ಲಿದ್ದರೆ ಗುಣಮುಖನಾಗುತ್ತೇನೆ, ಇಲ್ಲದಿದ್ದರೆ ಇಲ್ಲ. ಹಾಗಾಗಿ ವೈದ್ಯರ ಬಳಿಗೆ ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾವಿಸಬಹುದು.
ಅಥವಾ, ತನಗೆ ಮಗುವಾಗಬೇಕೋ ಬೇಡವೋ ಎನ್ನುವುದು ವಿಧಿಯ ಕೈಯಲ್ಲಿದೆ ಎಂದು ಯಾರಾದರೂ ನಂಬಬಹುದು. ಹಾಗಾಗಿ ಅವರು ಸಂಗಾತಿಯನ್ನು ಹುಡುಕುವ ಡೇಟಿಂಗ್ ಆ್ಯಪ್ಗಳನ್ನು ಬಳಸುವುದಿಲ್ಲ, ಯಾರೊಂದಿಗೂ ಪ್ರೀತಿಯಿಂದ ಮಾತನಾಡಲು ಪ್ರಯತ್ನಿಸುವುದಿಲ್ಲ, ಹೊಸ ವ್ಯಕ್ತಿಗಳನ್ನು ಭೇಟಿಯಾಗುವ ಪ್ರಯತ್ನವನ್ನೂ ಮಾಡುವುದಿಲ್ಲ.
ಇಲ್ಲಿ ಒಂದು ವಿಚಿತ್ರ ಸಂಗತಿಯಿದೆ. ಕ್ರಿಸಿಪ್ಪಸ್ ಸ್ವತಃ ವಿಧಿಯನ್ನು ನಂಬಿದ್ದನು. ಏಕೆಂದರೆ ಸ್ಟೋಯಿಕ್ ತತ್ವಜ್ಞಾನಿಗಳ ಪ್ರಕಾರ, ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಸಂಗತಿಯೂ ಪೂರ್ವನಿರ್ಧರಿತವಾಗಿದೆ.
ಹಾಗಿದ್ದಾಗ, ತನ್ನ ವಿಧಿಯ ಕುರಿತಾದ ನಂಬಿಕೆಯನ್ನು ಬಿಟ್ಟುಕೊಡದೆ, ಈ ರೀತಿಯ ತರ್ಕ ತಪ್ಪು ಎನ್ನುವುದನ್ನು ಕ್ರಿಸಿಪ್ಪಸ್ ಹೇಗೆ ಸಮರ್ಥಿಸಬೇಕಿತ್ತು?
ಅದಕ್ಕಾಗಿ ಅವನು ಕೆಲವು ಘಟನೆಗಳು ಪರಸ್ಪರ ಸಹವಿಧಿನಿರ್ಧಾರಿತವಾಗಿರುತ್ತವೆ (Co-fated) ಎಂಬ ವಾದವನ್ನು ಮಂಡಿಸಿದನು. ಅಂದರೆ, ನೀವು ಕಾಯಿಲೆಯಿಂದ ಗುಣಮುಖರಾಗುವುದು ಮಾತ್ರ ವಿಧಿಯಲ್ಲಿ ಬರೆದಿರುವುದಲ್ಲ; ಅದಕ್ಕಾಗಿ ನೀವು ವೈದ್ಯರನ್ನು ಸಂಪರ್ಕಿಸುವುದೂ ವಿಧಿಯ ಭಾಗವೇ ಆಗಿದೆ.
ಒಬ್ಬರಿಗೆ ಮಗುವಾಗುವುದು ವಿಧಿಯಲ್ಲಿರಲಿಲ್ಲ ಎನ್ನುವುದಲ್ಲ; ಬದಲಾಗಿ, ಅವರು ತನ್ನ ಸಂಗಾತಿಯೊಂದಿಗೆ ದೈಹಿಕ ಸಂಬಂಧ ಹೊಂದುವುದು ವಿಧಿಯಲ್ಲಿ ನಿರ್ಧರಿಸಲ್ಪಟ್ಟಿತ್ತು ಮತ್ತು ಅದರ ಫಲವಾಗಿ ಅವರಿಗೆ ಮಗುವಾಯಿತು.
ಗ್ರೀಕರೂ ಇದನ್ನು ಸೋಮಾರಿತನದ ತರ್ಕ ಎಂದು ಕರೆಯುತ್ತಾರೆ. ಏಕೆಂದರೆ, ನಾವು ನಿಜವಾಗಿಯೂ ಪ್ರಯತ್ನಪಟ್ಟು ಏನನ್ನಾದರೂ ಸಾಧಿಸಬೇಕಾದ ಅಗತ್ಯದಿಂದ ತಪ್ಪಿಸಿಕೊಳ್ಳಲು ತತ್ವಜ್ಞಾನದ ಹೆಸರಿನಲ್ಲಿ ಇಂತಹ ಸಮರ್ಥನೆಗಳನ್ನು ಹುಡುಕುತ್ತೇವೆ.
ನಮಗೆ ಯಾವುದೋ ಒಂದು ಸಂಗತಿ ಸಿಗಲೇಬೇಕು ಎಂದು ಭಾವಿಸುತ್ತೇವೆ. ಯಾವುದೋ ಒಂದು ಸಂಗತಿಗೆ ನಾವು ಅರ್ಹರು ಎಂದುಕೊಳ್ಳುತ್ತೇವೆ. ಅಥವಾ ನಾವು ಸುಮ್ಮನೆ ಕುಳಿತು ಸಾಕಷ್ಟು ಸಮಯ ಕಾಯುತ್ತಿದ್ದರೆ, ಬದುಕಿನಲ್ಲಿರುವ ಎಲ್ಲ ಒಳ್ಳೆಯ ಸಂಗತಿಗಳೂ ತಾವಾಗಿಯೇ ನಮ್ಮ ಬಳಿಗೆ ಬರುತ್ತವೆ ಎಂದು ನಂಬುತ್ತೇವೆ.
ಆದರೆ ನಾವೂ ಪ್ರಕೃತಿಯ ಒಂದು ಭಾಗವೇ ಆಗಿದ್ದೇವೆ. ವಿಧಿಯ ಒಂದು ಭಾಗವೇ ಆಗಿದ್ದೇವೆ. ನಾವು ಮಾಡುವ ಪ್ರತಿಯೊಂದು ಕೆಲಸವೂ ನಮಗೆ ದೊರೆಯುವ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ, ಒಂದು ಫಲಿತಾಂಶ ವಿಧಿಯಲ್ಲಿ ನಿರ್ಧರಿಸಲ್ಪಟ್ಟಿದ್ದರೂ, ಆ ಫಲಿತಾಂಶವನ್ನು ತಲುಪಲು ನಾವು ಮಾಡುವ ಪ್ರಯತ್ನವೂ ಅಷ್ಟೇ ವಿಧಿಯ ಭಾಗವಾಗಿದೆ. ಆದ್ದರಿಂದ, ನಾವು ಹುಟ್ಟಿನಿಂದಲೇ ಪಡೆದುಕೊಂಡಿರುವ ನಮ್ಮೆಲ್ಲ ಶಕ್ತಿ, ಸ್ವಾತಂತ್ರ್ಯ ಮತ್ತು ಬುದ್ಧಿವಂತಿಕೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು.
ವಿಧಿಯನ್ನು ನಂಬುವುದು ಎಂದರೆ ಪ್ರಯತ್ನವನ್ನು ಕೈಬಿಡುವುದಲ್ಲ. ನಮ್ಮ ಪ್ರಯತ್ನವೂ ವಿಧಿಯ ಒಂದು ಭಾಗವೇ ಆಗಿದೆ. ಫಲಿತಾಂಶದ ಬಗ್ಗೆ ಚಿಂತಿಸದೆ, ನಮ್ಮಿಂದ ಸಾಧ್ಯವಾದುದನ್ನೆಲ್ಲ ಪ್ರಾಮಾಣಿಕವಾಗಿ ಮಾಡಬೇಕು.
***********************************

