ಏಕಾಂತ: ನಮ್ಮೊಡನೆ ನಾವಿರುವ ಸುಂದರ ಅವಕಾಶ

ನಾವು ಎಷ್ಟೇ ಸಹಜೀವನದಲ್ಲಿದ್ದರೂ ಕುಟುಂಬ ವ್ಯವಸ್ಥೆಯಲ್ಲಿದ್ದರೂ ಆಜೀವ ಸಂಗಾತದಲ್ಲಿದ್ದರೂ ನಮ್ಮ ಬದುಕನ್ನು ನಾವೇ ನಡೆಸಬೇಕಿರುತ್ತದೆ. ಒಂದೇ ತಟ್ಟೆಯಲ್ಲಿ ಊಟ ಮಾಡುವಾಗ ನಮ್ಮ ಪಾಲಿನದನ್ನು ನಾವೇ ಅಗಿದು ನುಂಗಬೇಕಿರುವಂತೆಯೇ ಇದು ಕೂಡ. ನಮ್ಮ ಬದುಕಿನ ಕುರಿತಾದ ಆತ್ಯಂತಿಕ ನಿರ್ಣಯಗಳನ್ನು ನಾವೇ ಕೈಗೊಳ್ಳಬೇಕು. ಯಾರಿಂದ ಎಷ್ಟೇ ಸಲಹೆ ಪಡೆದುಕೊಂಡರೂ ನಮ್ಮ ಆಂತರ್ಯ ಏನು ಹೇಳುತ್ತದೆಯೋ ಅದರಂತೆ ನಡೆಯಬೇಕು.

ಕಾಕಿತನದ ನೋವನ್ನು ಅಭಿವ್ಯಕ್ತ ಪಡಿಸಲು ಭಾಷೆಯು `ಒಂಟಿತನ’ವೆಂಬ ಪದವನ್ನು ಸೃಷ್ಟಿಸಿತು. ಅದರ ವೈಭವವನ್ನು ಬಣ್ಣಿಸಲು `ಏಕಾಂತ’ವೆಂಬ ಪದವನ್ನು ಹುಟ್ಟುಹಾಕಿತು ಎನ್ನುತ್ತಾನೆ ತತ್ತ್ವಶಾಸ್ತ್ರಜ್ಞ ಪಾಲ್ ಟಿಲ್ಲಿಶ್.
ಏಕಾಂತ ನಮ್ಮೊಡನೆ ನಾವಿರಲು ಒದಗುವ ಒಂದು ಸುಂದರ ಅವಕಾಶ. ಹಾಗಂತ ಏಕಾಂತವೆಂದರೆ ಭೌತಿಕವಾಗಿ ಜನರಿಂದ ದೂರವಿರಬೇಕು ಎಂದಲ್ಲ. ಅದು ಮನಸ್ಸಿಗೆ ಸಂಬಂಧಿಸಿದ್ದು. ಯಾವ ಮಾನಸಿಕ ಸ್ಥಿತಿ ನಮ್ಮನ್ನು ಸಂಬಂಧಗಳನ್ನು ಬಂಧವಾಗಿಸಿಕೊಳ್ಳದಂತೆ ಇರಿಸುತ್ತದೆಯೋ ಅದು ಏಕಾಂತ ಸ್ಥಿತಿ. ಯಾವ ಮನಸ್ಥಿತಿಯಲ್ಲಿ ನಾವು ಸುತ್ತಮುತ್ತಲಿನ ಆಗುಹೋಗುಗಳಿಗೆ ಸ್ಪಂದಿಸದೆ ನಮ್ಮ ಅಂತರಂಗದೊಂದಿಗೆ – ಅದರ ಚಲನವಲನಗಳನ್ನು ಸಾಕ್ಷಿಯಾಗಿ ನೋಡುತ್ತ ಇರುತ್ತೇವೋ ಅದು ಏಕಾಂತ ಸ್ಥಿತಿ. ಯಾವ ಹೊತ್ತು ನಮ್ಮೊಂದಿಗೆ ನಮ್ಮ ಅಂತಸ್ಸಾಕ್ಷಿಯ ಹೊರತಾಗಿ ಯಾರೂ ಇರುವುದಿಲ್ಲವೋ ಆ ಸ್ಥಿತಿ ಏಕಾಂತದ್ದು.

ಪ್ರಾಮಾಣಿಕವಾಗಿರಬೇಕು
ಸದಾ ಕಲಕುತ್ತಲೇ ಇರುವ ಕೊಳದ ತಳದಲ್ಲಿ ಏನಿದೆ ಅಂತ ನೋಡೋದು ಕಷ್ಟ. ಸದಾ ಒಂದು ವಿಷಯದಿಂದ ಮತ್ತೊಂದಕ್ಕೆ ಜಿಗಿಯುತ್ತಲೇ ಇರುವ ಮನಸ್ಸಿನಾಳದಲ್ಲಿ ಏನಿದೆ ಎಂದು ನೋಡುವುದು ಕೂಡ ಅಷ್ಟೇ ಕಷ್ಟ. ಮನಸಿನ ಆಳದಲ್ಲಿ ಹುದುಗಿ ಹೋಗಿರಬಹುದಾದ ರಾಗದ್ವೇಷಗಳ ಚರಟವನ್ನು ಕಂಡುಕೊಳ್ಳೋದು ಅತಿ ಮುಖ್ಯ. ಹೂಳನ್ನು ಬಗೆದು ಹೊರಹಾಕಿದರೇನೆ ಕೊಳ ಸ್ವಚ್ಛವಾಗುಳಿದು ಒಳ್ಳೆಯ ನೀರನ್ನು ಒದಗಿಸಲು ಸಾಧ್ಯವಾಗೋದು. ಹಾಗೆಯೇ ಮನಸ್ಸನ್ನ ಸ್ವಚ್ಛವಾಗಿಟ್ಟುಕೊಂಡರಷ್ಟೆ ಸಚ್ಚಿಂತನೆಗಳು ಸಾಧ್ಯವಾಗೋದು.
ಹೀಗೆ ಶುಚಿಗೊಳಿಸುವ ಮುನ್ನ ಒಳಗಿನ ಕೊಳೆಯನ್ನು ಅರಿಯುವುದಕ್ಕೆ ಏಕಾಂತ ಸಹಾಯಕ್ಕೆ ಬರುತ್ತದೆ. ಈ ಅವಧಿಯಲ್ಲಿ ನಾವು ಸಂಪೂರ್ಣವಾಗಿ ಎಲ್ಲ ಸಂಪರ್ಕಗಳನ್ನೂ ಕಡೆದುಕೊಂಡು ಕೂರಬೇಕು. ನಮ್ಮ ಮನಸ್ಸನ್ನು ಜಾಲಾಡಬೇಕು. ನಮ್ಮ ಸರಿ ತಪ್ಪುಗಳು, ಅದರ ಹಿಂದಿನ ಕಾರಣಗಳು, ಅದರಿಂದಾದ ಲಾಭ ನಷ್ಟಗಳು – ಎಲ್ಲವನ್ನೂ ಅರಿತುಕೊಳ್ಳಬೇಕು. ಆದರೆ ಈ ಪ್ರಕ್ರಿಯೆಯಲ್ಲಿ ನಾವು ಪ್ರಾಮಾಣಿಕರಾಗಿರಬೇಕು. ನಮ್ಮ ತಪ್ಪುಗಳಿಗೆ ಸಮಜಾಯಿಷಿ ಕೊಟ್ಟುಕೊಳ್ಳುವಾಗ ನಮ್ಮ ಅಂತಸ್ಸಾಕ್ಷಿಗೆ ವಂಚನೆಯಾಗದಂತೆ ಎಚ್ಚರವಿಟ್ಟುಕೊಳ್ಳಬೇಕು. ಆಗ ಮಾತ್ರ ಏಕಾಂತವು ಫಲಪ್ರದವಾಗಿ ಪರಿಣಮಿಸುವುದು.

ಮನಸ್ಸು ತಿಳಿಯಾಗಲು
ಓರ್ವನೇ ನಿಲುವೆ ನೀನುತ್ಕಟ ಕ್ಷಣಗಳಲಿ
ಧರ್ಮಸಂಕಟಗಳಲಿ ಜೀವ ಸಮರದಲಿ |
ನಿರ್ವಾಣ ದೀಕ್ಷೆಯಲಿ ನಿರ್ಯಾಣ ಘಟ್ಟದಲಿ
ನಿರ್ಮಿತ್ರನಿರಲು ಕಲಿ ಮಂಕುತಿಮ್ಮ ||
ಎಂದು ಡಿ.ವಿ.ಜಿ ತಮ್ಮ `ಮಂಕುತಿಮ್ಮನ ಕಗ್ಗ’ದಲ್ಲಿ ಹೇಳುತ್ತಾರೆ.
ಮನಸ್ಸಿಗೆ ತೀರ ನೋವಾದಾಗ, ಕಸಿವಿಸಿ – ಗೊಂದಲಗಳಾದಾಗ ನಾವು ಮೌನದ ಮೊರೆ ಹೋಗುತ್ತೇವೆ. ಹಾಗೆಯೇ ಯಾರ ಸಹವಾಸವೂ ಬೇಡವೆನ್ನಿಸಿ ನಮ್ಮಷ್ಟಕ್ಕೆ ನಾವು ಇರಲು ಬಯಸುತ್ತೇವೆ. ಈ ಏಕಾಂತದ ಅವಧಿ ನಮ್ಮ ದುಗುಡವನ್ನು ನಿವಾರಿಸುತ್ತದೆ. ಪಾತ್ರೆಯನ್ನು ಅಲುಗಾಡಿಸದೆ ಸುಮ್ಮನೆ ಇಟ್ಟರೆ ಹೇಗೆ ತಿಳಿನೀರು ಮೇಲೆ ಎದ್ದು ಬರುವುದೋ ಹಾಗೆ ಏಕಾಂತವು ನಮ್ಮ ಮನಸ್ಸನ್ನು ತಿಳಿಯಾಗಿಸುತ್ತದೆ.
ನಾವು ಎಷ್ಟೇ ಸಹಜೀವನದಲ್ಲಿದ್ದರೂ ಕುಟುಂಬ ವ್ಯವಸ್ಥೆಯಲ್ಲಿದ್ದರೂ ಆಜೀವ ಸಂಗಾತದಲ್ಲಿದ್ದರೂ ನಮ್ಮ ಬದುಕನ್ನು ನಾವೇ ನಡೆಸಬೇಕಿರುತ್ತದೆ. ಒಂದೇ ತಟ್ಟೆಯಲ್ಲಿ ಊಟ ಮಾಡುವಾಗ ನಮ್ಮ ಪಾಲಿನದನ್ನು ನಾವೇ ಅಗಿದು ನುಂಗಬೇಕಿರುವಂತೆಯೇ ಇದು ಕೂಡ. ನಮ್ಮ ಬದುಕಿನ ಕುರಿತಾದ ಆತ್ಯಂತಿಕ ನಿರ್ಣಯಗಳನ್ನು ನಾವೇ ಕೈಗೊಳ್ಳಬೇಕು. ಯಾರಿಂದ ಎಷ್ಟೇ ಸಲಹೆ ಪಡೆದುಕೊಂಡರೂ ನಮ್ಮ ಆಂತರ್ಯ ಏನು ಹೇಳುತ್ತದೆಯೋ ಅದರಂತೆ ನಡೆಯಬೇಕು. ಶಿಕ್ಷಣ ಅಥವಾ ಮಾರ್ಗದರ್ಶನಗಳು ನಮ್ಮ ನಿರ್ಧಾರ ನಾವು ತೆಗೆದುಕೊಳ್ಳಲು ಅಗತ್ಯವಿರುವ ಸಾಮಥ್ರ್ಯ ಪಡೆಯಲಿಕ್ಕಷ್ಟೆ. ಆದರೆ ಅದನ್ನು ಬಳಸಿ ತೀರ್ಮಾನಿಸುವವರು ನಾವೇ ಆಗಿರುತ್ತೇವೆ. ಮತ್ತು ಇದನ್ನು ತೆಗೆದುಕೊಳ್ಳುವಾಗ ಸಮಚಿತ್ತದಿಂದ, ಯಾವ ಸಂಗತಿಯಿಂದಲೂ ವಿಚಲಿತರಾಗದಂತೆ ಆಲೋಚನೆ ನಡೆಸಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಏಕಾಂತ ದಿವ್ಯೌಷಧವಾಗಿ ನಮ್ಮ ಕೈಹಿಡಿಯುತ್ತದೆ.

ಸಂತೆಯಲ್ಲೂ ಏಕಾಂತ
`ಏಕಾಂತವು ಎಲ್ಲಾ ಸ್ಥಳಗಳ, ಜೀವನದ ಎಲ್ಲಾ ಸ್ತರಗಳ ಪರಿಚಯ ಮಾಡಿಸುತ್ತದೆ’ ಎನ್ನುತ್ತಾನೆ ಕವಿ ರಿಲ್ಕೆ. ಏಕಾಂತವು ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸಮೂಹದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡೇ ನಮ್ಮ ಸ್ಪೇಸ್ ಅನ್ನು ಕಾಯ್ದುಕೊಂಡಿದ್ದರೆ ಅದು ಅದ್ಭುತವಾದ ಏಕಾಂತದ ಅನುಭೂತಿಯನ್ನು ಕಟ್ಟಿಕೊಡುತ್ತದೆ. ಅಷ್ಟೇ ಅಲ್ಲ, ಏಕಾಂತವು ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಡುತ್ತದೆ. ನಮ್ಮನ್ನಾವರಿಸಿದ ಭಯದಿಂದ ಹೊರಬರುವ ಬಗೆಯನ್ನು ತಿಳಿಸಿಕೊಡುತ್ತದೆ. ಉನ್ನತಿಯನ್ನು ಸಾಧಿಸಬೇಕಾದರೆ ಏಕಾಂತದಲ್ಲಿ ಪ್ರತಿದಿನ ಹೊಸ ಹೊಸ ವಿಷಯದೊಡನೆ ಸಂಘರ್ಷ ಮಾಡುತ್ತಲೇ ಇರಬೇಕು. ಇದರಿಂದ ಸಾಧನೆಯ ಹೊಸ ದಾರಿಗಳು ನಮ್ಮೆದುರು ತೆರೆದುಕೊಳ್ಳುತ್ತವೆ. 

ಹಾಗೆಂದು, ಜನರಿಂದ ದೂರವಿದ್ದರಷ್ಟೆ ಏಕಾಂತವಲ್ಲ. ಜನರ ಜೊತೆಗಿದ್ದೂ ಒಂಟಿಯಾಗಿರುವುದನ್ನು, ಏಕಾಂತ ಹೊಂದುವುದನ್ನು ರೂಢಿಸಿಕೊಳ್ಳಬೇಕು. ಇಂತಹ ಏಕಾಂತವು ನಮ್ಮನ್ನು ಸಮೂಹದ ಜೊತೆಯಿರುತ್ತಲೇ ಆತ್ಮಚಿಂತನೆಗೆ ಒಳಪಡಿಸುತ್ತಾ ಹೋಗುತ್ತದೆ.  ನಾವು ಯಾರೆಂಬ, ಏನಾಗಿದ್ದೇವೆಂಬ ಪ್ರಶ್ನೆಯ ಬೆನ್ನತ್ತಿ ಅದರ ಹುಡುಕಾಟಕ್ಕೆ ತೊಡಗಿಸುತ್ತದೆ. ಈ ಏಕಾಂತ ಚಿಂತನೆಯು ನಮಗೆ ಜೀವನದ ಹಲವು ಮಗ್ಗಲುಗಳ ಆಧ್ಯಾತ್ಮಿಕ ಪರಿಚಯ ಮಾಡಿಸುತ್ತದೆ. ಇದನ್ನೇ `ದರ್ಶನ’ ಎಂದು ಕರೆಯುವುದು. ನಮ್ಮ ಪೂರ್ವಕಾಲದ ಬಹುತೇಕ ಋಷಿಗಳು ತಪೋವನದಲ್ಲಿ ಕುಳಿತೇ ತಪಸ್ಸು ಮಾಡಿದವರಲ್ಲ. ವೇದೋಪನಿಷತ್ತುಗಳ ಮಂತ್ರ ದ್ರಷ್ಟಾರರು ತಮ್ಮ ಕುಟೀರಗಳಲ್ಲಿ, ಕುಟುಂಬದೊಡನೆ ಇರುತ್ತಲೇ ಅವನ್ನು ಪಡೆದುಕೊಂಡವರು. ಇದು ಸಾಧ್ಯವಾಗಿದ್ದು ಆಂತರ್ಯದ ನಿರಂತರ ಏಕಾಂತಾನುಭವದಿಂದ. ಪ್ರಜ್ಞಾಪೂರ್ವಕವಾಗಿ ಹೊಂದುವ ಏಕಾಂತವು ನಮ್ಮಲ್ಲಿ ಸಮಾಧಾನವನ್ನೂ ಸಹನೆಯನ್ನೂ ಸ್ನೇಹಪರತೆಯನ್ನೂ ಕಲಿಸುತ್ತದೆ. ಆದ್ದರಿಂದಲೇ ಸಹಜಾವಧೂತರು, ಸಂತ ಸಾಧಕರು ಜನರಿಗೆ ಅಷ್ಟೊಂದು ಆಪ್ತವಾಗುವುದು. 

ಸ್ವಾನುಕಂಪವಾಗದಿರಲಿ

ನಾವು ಹುಟ್ಟು -ಸಾವುಗಳಲ್ಲಿ ಏಕಾಂಗಿಗಳು. ನಡುವಿನ ಬದುಕಿನಲ್ಲಿ ನಮ್ಮ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಎಂದೆಲ್ಲ ಜನರಿಂದ ಸುತ್ತುವರಿದಿರುತ್ತೇವೆ. ಆದರೆ ಹೊರಗಿನ ಈ ಜನರನ್ನು, ಅವರೊಂದಿಗಿನ ಬಾಂಧವ್ಯವನ್ನು ನಾವು ಒಳಗೆ ಬಿಟ್ಟುಕೊಳ್ಳಬಾರದು. ಅವರ ಬದುಕನ್ನು ಬದುಕಲು ಹೋಗಬಾರದು. ತಾವರೆ ಎಲೆ ಮೇಲಿನ ನೀರ ಹನಿಯು ಎಲೆಯನ್ನು ಆಶ್ರಯಿಸಿದ್ದರೂ ಅದರೊಂದಿಗೆ ಸಂಬಂಧ ಹೊಂದಿದ್ದರೂ ಹೇಗೆ ಅದಕ್ಕೆ ಅಂಟಿಕೊಂಡು ಉಳಿಯುವುದಿಲ್ಲವೋ ನಾವೂ ಹಾಗೆಯೇ ಅಂಟಿಕೊಳ್ಳದೆ ಇರಬೇಕು. ನಮ್ಮೊಳಗೆ ನಾವು ಏಕಾಂತದ ದಿವ್ಯ ಅವಕಾಶವನ್ನು ಉಳಿಸಿಕೊಂಡಿರಬೇಕು. ಇದು ಸಾಧ್ಯವಾದಾಗ ಮಾತ್ರ ನಿರ್ಲಿಪ್ತತೆ ಸಾಧ್ಯವಾಗುವುದು. ಹಾಗೂ ಅರಿಷಡ್ವರ್ಗಗಳನ್ನು ಗೆಲ್ಲಲು ಸಾಧ್ಯವಾಗುವುದು. ಮತ್ತು ಈ ಗೆಲುವು ನಮ್ಮನ್ನು ನಮ್ಮ ಸಹಜೀವಿಗಳೊಂದಿಗೆ ಪ್ರೇಮದಿಂದ, ಸ್ನೇಹದಿಂದ ಹಾಗೂ ನಿಷ್ಪಕ್ಷಪಾತವಾಗಿ ವ್ಯವಹರಿಸುವಂತೆ ಮಾಡುವುದು.

ಹಾಗಿಲ್ಲದೆ, ನಮ್ಮ ಏಕಾಂತ ನಮಗೆ ಹೊರೆ ಅನ್ನಿಸಿದಾಗ ಅದು ಸ್ವಾನುಕಂಪದ ಒಂಟಿತನಕ್ಕೆ ತಿರುಗುತ್ತದೆ. ಇದು ನಮ್ಮನ್ನು ಮಾನಸಿಕವಾಗಿ ಅಸ್ವಸ್ಥರಾಗಿಸುತ್ತದೆ. ಈ ಅಸ್ವಸ್ಥತೆಯು ನಮ್ಮಲ್ಲಿ ಅಸಹನೆ, ಕ್ರೌರ್ಯ ಇತ್ಯಾದಿ ಭಾವನೆಗಳನ್ನು ಬಿತ್ತುವ ಅಪಾಯವೂ ಇರುತ್ತದೆ. ಇದು ನಮ್ಮನ್ನು ಸಮಾಜದಿಂದ ವಿಮುಖವಾಗಿಸುತ್ತದೆ. ಆದ್ದರಿಂದ ನಮ್ಮ ಏಕಾಕಿತನವನ್ನು ಸ್ವಾನುಕಂಪದಿಂದ ಹೊರತಾಗುಳಿಸಬೇಕಿರುವುದು ಅತ್ಯಗತ್ಯ. 

7 Comments

  1. ನಿಜಕ್ಕೂ ಅದ್ಭುತ ಬರಹಗಳನ್ನು ಇಲ್ಲಿ ಓದುತ್ತಿದ್ದೇನೆ. ಥ್ಯಾಂಕ್ಯು

  2. ನಿಜಕ್ಕೂ ಅದ್ಭುತ ಬರಹಗಳನ್ನು ಇಲ್ಲಿ ಓದುತ್ತಿದ್ದೇನೆ. ಥ್ಯಾಂಕ್ಯು

Leave a Reply