ದೊರೆಯ ಗರ್ವ ಕಳೆದ ಫಕೀರ

ಬಾಲ್ಕ್’ನ ಸುಲ್ತಾನ ಇಬ್ರಾಹೀಮನಿಗೆ ತನ್ನ ರಾಜ್ಯದ, ತನ್ನ ಅರಸೊತ್ತಿಗೆಯ ಬಗ್ಗೆ ಭಾರೀ ಗರ್ವ.

ಒಮ್ಮೆ ಇಬ್ರಾಹೀಮ್ ತನ್ನ ಅರಮನೆಯಲ್ಲಿ ದರ್ಬಾರು ನಡೆಸುತ್ತಿದ್ದಾಗ ಕಂಕುಳಲ್ಲಿ ಸುರುಳಿ ಸುತ್ತಿದ ಚಾಪೆಯನ್ನು ಅವುಚಿಕೊಂಡು ಒಬ್ಬ ಫಕೀರ ಒಳಬಂದ. ಅವನ ಮೊನಚು ಕಣ್ಣೋಟಕ್ಕೆ ಮಂಕಾದ ಭಟರು ಅವನನ್ನು ಬಾಗಿಲಲ್ಲಿ ತಡೆಯದೆ ಒಳಗೆ ಬಿಟ್ಟಿದ್ದರು.

ದರ್ಬಾರಿನ ನಡುವೆ ಪ್ರವೇಶಿಸಿದ ಫಕೀರನನ್ನು ಕಂಡು ಇಬ್ರಾಹೀಮನ ಹುಬ್ಬು ಮೇಲೇರಿತು. ಅವನು ನೋಡನೋಡುತ್ತಿದ್ದಂತೆಯೇ ಫಕೀರ ಅರಮೆನಯ ಒಂದು ಮೂಲೆಯಲ್ಲಿ ತನ್ನ ಚಾಪೆ ಬಿಡಿಸಿ ಹಾಸತೊಡಗಿದ.

“ಯಾರು ನೀನು? ಇಲ್ಲೇನು ಮಾಡುತ್ತಿದ್ದೀಯ!?” ಇಬ್ರಾಹೀಮ್ ಅಬ್ಬರಿಸಿದ.

“ನಾನು ದೂರದಿಂದ ಬಂದಿದ್ದೇನೆ. ಈ ರಾತ್ರಿಯನ್ನು ಛತ್ರದಲ್ಲಿಯೇ ಕಳೆಯಬೇಕಾಗಿದೆ. ಅದಕ್ಕಾಗಿ ಚಾಪೆ ಹಾಸಿಕೊಳ್ತಿದ್ದೇನೆ” ಅಂದ ಫಕೀರ.

“ಮಾತಿನ ಮೇಲೆ ಎಚ್ಚರವಿರಲಿ! ಇದು ಛತ್ರವಲ್ಲ, ನನ್ನ ಅರಮನೆ” ಎಂದು ಇಬ್ರಾಹೀಮ್ ಸಿಡುಕಿದ.

ಫಕೀರ ಚಾಪೆಯನ್ನು ನೆಲದ ಮೇಲೆ ಬಿಟ್ಟು ಕೈಕಟ್ಟಿ ನಿಂತು, “ಹುಜೂರ್, ಇಲ್ಲಿ ನಿಮಗಿಂತ ಮೊದಲು ಯಾರು ವಾಸಿಸ್ತಿದ್ದರು ಎಂದು ಕೇಳಬಹುದೆ?” ಎಂದ.

“ನನ್ನ ತಂದೆ” ಅಂದ ಇಬ್ರಾಹೀಮ್.

“ಅವರಿಗಿಂತ ಮೊದಲು?”

“ಅವರ ತಂದೆ, ನನ್ನ ತಾತ”

“ಅವರಿಗೂ ಮುಂಚೆ?”

“ನನ್ನ ಮುತ್ತಾತ. ನನ್ನ ಹಿಂದಿನ ಏಳು ತಲೆಮಾರು ಈ ಅರಮನೆಯಲ್ಲಿ ಬಾಳಿಹೋಗಿವೆ” ಎಂದ ಇಬ್ರಾಹೀಮ್ ಹೆಮ್ಮೆಯಿಂದ.

“ಹಾಗಾದರೆ, ಇಲ್ಲಿ ನೀನೇ ಮೊದಲನೆಯವನಲ್ಲ, ನೀನೇ ಕೊನೆಯವನೂ ಅಲ್ಲ. ನಿನಗಿಂತ ಮೊದಲೂ ಇಲ್ಲಿ ಎಷ್ಟೊಂದು ಜನ ಇದ್ದು ಹೋಗಿದ್ದಾರೆ, ಮುಂದೆಯೂ ಬಂದು ಹೋಗುತ್ತಾರೆ. ಇದು ಛತ್ರವಲ್ಲದೆ ಮತ್ತೇನು?” ಕೇಳಿದ ಫಕೀರ.

1 Comment

Leave a Reply