ದಾವ್ : ಒಂದಷ್ಟು ಹೊಳಹು

ದಾವ್… ಅದನ್ನೊಂದು ಸ್ಥಿತಿ ಮತ್ತು ಕಲೆ ಅನ್ನುತ್ತಾರೆ ಓಶೋ. ಹಾಗಂತ ಅದು ಸ್ಥಿತಿಯಾಗಲೀ ಕಲೆಯಾಗಲೀ ಆಗಿರಲೇ ಬೇಕೆಂದೇನೂ ಇಲ್ಲ. ಯಾಕಂದರೆ ದಾವ್ ಸ್ಥಾಯಿಯಲ್ಲ. ದಾವ್ ಅಂದರೆ ದಾರಿ ತಾನೆ? ಅದು ನಿತ್ಯ ಸಂಚಾರಿ. ದಾರಿಗೆ ಚಲನೆಯೇ ಗುಣ. ದಾವ್ ಕಲೆಯೂ ಅಲ್ಲ. ಯಾರಾದರೂ ದಾವ್ ಬಗ್ಗೆ ಆಡಿಕೊಂಡು ನಗಲಿಲ್ಲ ಅಂದರೆ, ಅದು ದಾವ್ ಆಗಿರುವುದಿಲ್ಲ ಅಂದಿದ್ದಾನೆ ಲಾವೋತ್ಸು. 

 

Tao (1)

ರದಿಂದ ತೊಟ್ಟು ಕಳಚಿ ಗಾಳಿಯೊಟ್ಟಿಗೆ ಅಲೆಅಲೆಯಾಗಿ ತೇಲುತ್ತಾ ನೆಲದ ಮೇಲೆ ಬಿದ್ದ ಎಲೆಯನ್ನು ನೋಡಿದನಂತೆ ಲಾವೋತ್ಸು.  ಆಗಲೇ ಅವನಿಗೆ ಹೊಳೆಯಿತಂತೆ; ಅಸ್ತಿತ್ವ ಕಾಳಜಿ ವಹಿಸುತ್ತೆ. ನಾವೇನೂ ಮಾಡಬೇಕಿಲ್ಲ. ಗಾಳಿಗೆ ನಮ್ಮನ್ನ ಕೊಟ್ಟುಕೊಳ್ಳಬೇಕಷ್ಟೆ. ಹೀಗೆ ಏನೂ ಮಾಡಬೇಕಿಲ್ಲದ ದಾರಿಯೇ ದಾವ್.
~

“ಜೀವನ ಪ್ರಯಾಣದ ಮಾರ್ಗ ಯಾವುದೇ ಧರ್ಮ ಅಲ್ಲ. ಹಾಗೆ ಮಾಡಿಟ್ಟ ದಾರಿ ನಿಜದ ಕಡೆಗೆ ಕರೆದೊಯ್ಯೋಕೆ ಸಾಧ್ಯ ಇಲ್ಲ. ನಿಜದ ತಿಳಿವನ್ನ ಪಡೆದುಕೊಳ್ಳೋಕೆ ಬೇಕಾದಷ್ಟು ದಾರಿಗಳಿವೆ ಅನ್ನೋದು ಸರಿ; ಹಾಗೇನೇ, ಹೇಳಲು ಅಥವಾ ತೋರಿಸಲು ಬರುವಂಥ ದಾರಿ ನಿಜದ ಕಡೆಗೆ ಕರೆದೊಯ್ಯೋದಿಲ್ಲ.” ಅನ್ನೋದು ದಾವ್ ತಿಳಿವು.

ಇಷ್ಟಕ್ಕೂ ನಿಜವನ್ನ ಹೇಳಿ ತಿಳಿಸೋದಕ್ಕೆ ಆಗೋದಿಲ್ಲ. ಕಾರಣ ಸಾಕಷ್ಟಿವೆ. ಅವುಗಳಲ್ಲಿ ಮೊದಲನೆಯದು- ನಿಜದ ತಿಳಿವು ಉಂಟಾಗೋದೇ ಮೌನದಲ್ಲಿ ಅನ್ನೋದು; ಹಾಗನ್ನುತ್ತದೆ ದಾವ್.
ಮೌನವಾಗಿದ್ದುಕೊಂಡು ತಿಳಿವು ಹರಡುವ ಮಂದಿಯೇ ನಿಜವಾದ ಸಾಧಕರು, ಸಂತರು. ಮಿಕ್ಕವರನ್ನೆಲ್ಲ ‘ರಾಜಪುರೋಹಿತರು ಅನ್ನಬಹುದೇನೋ!?

~

‘ದೊರೆ ಹೇಳಿದ್ದಾನೆ, ನೀನು ನನ್ನ ಜೊತೆ ಬರಲೇಬೇಕು’ ಅಂತ ಒತ್ತಾಯ ಮಾಡಿದ ಅಲೆಕ್ಸಾಂಡರನ ಸೈನಿಕನಿಗೆ ಸಂನ್ಯಾಸಿಯಬ್ಬ ಕೊಟ್ಟ ಉತ್ತರ ಹೀಗೆ ಇತ್ತಂತೆ… ‘ನಾನು ಸಂನ್ಯಾಸಿ. ಹಾಗೆಲ್ಲ ನಿನ್ನ ಜತೆ ರಾಜಾಜ್ಞೆಗೆಂದು ಬರಲಾರೆ. ಅಕಸ್ಮಾತ್ ಯಾರಾದರೂ ಸಂನ್ಯಾಸಿ ನಿನ್ನ ಜತೆ ಬಂದನೆಂದರೆ, ನೆನಪಿಟ್ಟುಕೋ- ಅವನು ನಿಜವಾಗಿಯೂ ಸಂನ್ಯಾಸಿಯಾಗಿರೋದಿಲ್ಲ, ರಾಜಪುರೋಹಿತರಾಗ್ತಾರೆ ಅಷ್ಟೇ!”  

ಇಲ್ಲಿ, ಈ ಸನ್ಯಾಸಿಯ ನಿಲುವು ಇತ್ತಲ್ಲ, ಅದು ‘ದಾವ್’. 

~

ದಾವ್… ಅದನ್ನೊಂದು ಸ್ಥಿತಿ ಮತ್ತು ಕಲೆ ಅನ್ನುತ್ತಾರೆ ಓಶೋ.
ಹಾಗಂತ ಅದು ಸ್ಥಿತಿಯಾಗಲೀ ಕಲೆಯಾಗಲೀ ಆಗಿರಲೇ ಬೇಕೆಂದೇನೂ ಇಲ್ಲ.
ಯಾಕಂದರೆ ದಾವ್ ಸ್ಥಾಯಿಯಲ್ಲ. ದಾವ್ ಅಂದರೆ ದಾರಿ ತಾನೆ? ಅದು ನಿತ್ಯ ಸಂಚಾರಿ. ದಾರಿಗೆ ಚಲನೆಯೇ ಗುಣ.
ದಾವ್ ಕಲೆಯೂ ಅಲ್ಲ.
ಯಾರಾದರೂ ದಾವ್ ಬಗ್ಗೆ ಆಡಿಕೊಂಡು ನಗಲಿಲ್ಲ ಅಂದರೆ, ಅದು ದಾವ್ ಆಗಿರುವುದಿಲ್ಲ ಅಂದಿದ್ದಾನೆ ಲಾವೋತ್ಸು. 

~

ದಾರಿಯನ್ನ ತಿಳಿದೆವೆಂದು ಹೇಳುವರಿಲ್ಲ. ಯಾಕಂದರೆ, ತಿಳಿದವರು ಹೇಳಿಕೊಳ್ಳೋದಿಲ್ಲ.
ದಾವ್ ಅಂದರೆ ದಾರಿ ಅನ್ನುತ್ತಾರೆ. ಹಾಗಂತ ಅದೇನೂ ನಮ್ಮ ರಾಷ್ಟ್ರೀಯ ಹೆದ್ದಾರಿಯಂತೆ ಮೈಲುಗಲ್ಲುಗಳನ್ನ ನಿಲ್ಲಿಸಿಕೊಂಡಿರೋದಿಲ್ಲ. ಈ ದಾರಿ, ಆಕಾಶದಲ್ಲಿ ಹಾರಾಡೋ ಹಕ್ಕಿಗಳದ್ದು ಇರ್ತವಲ್ಲ, ಹಾಗಿರತ್ತೆ. ಅದು ತನ್ನ ಮೇಲೆ ಹೆಜ್ಜೆ ಗುರುತುಗಳನ್ನ ಇರಿಸಿಕೊಳ್ಳೋದಿಲ್ಲ.
ಆದರೂ ಜನ ಹೆಜ್ಜೆ ಉಳಿಸಿದವರನ್ನೆ ನೆಚ್ಚಿಕೊಳ್ತಾರೆ. ಕಾಣುವುದೆಲ್ಲವೂ ಶಾಶ್ವತ ಅನ್ನುವ ಭ್ರಮೆ ನಮ್ಮದು. ಏನೂ ಮಾಡಬೇಕಾದ ಅಗತ್ಯವೇ ಇಲ್ಲದ ಎತ್ತರದಲ್ಲಿ ಕೆಲವರು ಇರ್ತಾರೆ. ಅಂಥವರು ಗಮನಿಸಲ್ಪಡುವ ನಮ್ಮ ಹಪಾಹಪಿಗೆ ನಿಲುಕೋದಿಲ್ಲ.
~

‘ನಾನು ಹೂವನ್ನೇನೋ ಕೊಡುವೆ, ಅದರ ಘಮವನ್ನ ಹೇಗೆ ತಾನೆ ಕೊಡಲಿ?’ ಅನ್ನುತ್ತೆ ದಾವ್.
‘ಮೂಗನ್ನ ಶುದ್ಧ ಮಾಡಿಕೋ. ಸಂವೇದನೆ ಬೆಳೆಸಿಕೋ. ಘಮ, ತಾನಾಗೇ ನಿನ್ನನ್ನ ಸೇರುವುದು. ಅದಕ್ಕಾಗಿ ಬೇರೆ ಪ್ರಯತ್ನ ಬೇಕಿಲ್ಲ’ ಅನ್ನುತ್ತೆ ದಾವ್.

Leave a Reply