ಭಾರತ ದೇಶದ ಗಿಳಿ : ಒಂದು ‘ರೂಮಿ’ ಕಥೆ

giLi 2.jpgರ್ಷಿಯಾದ ವ್ಯಾಪಾರಿಯೊಬ್ಬ ಭಾರತದಿಂದ ಗಿಳಿಯೊಂದನ್ನು ತಂದು ಸಾಕಿದ್ದ. ಅದನ್ನು ಚೆಂದದ ಪಂಜರದೊಳಗೆ ಇಟ್ಟು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ. ಆದರೆ ಆ ಗಿಳಿಗೆ ಸರಳುಗಳ ಒಳಗೆ ಬಂಧಿಯಾಗಿ ಜೀವನವೇ ಜಿಗುಪ್ಸೆ ಬಂದಿತ್ತು.

ಒಮ್ಮೆ ಆ ವ್ಯಾಪಾರಿ ವ್ಯವಹಾರ ನಿಮಿತ್ತ ಭಾರತಕ್ಕೆ ತೆರಳಬೇಕಾಗಿ ಬಂತು. ಪಂಜರದ ಬಳಿ ಬಂದು “ನಿನ್ನ ತಾಯ್ನಾಡಿನಿಂದ ಏನ್ನನಾದರೂ ತರಬೇಕೇ?” ಎಂದು ಕೇಳಿದ. ಮೊದಲೇ ಬೇಸರದಿಂದ ಇದ್ದ ಗಿಳಿಯು

“ನೀನು ನನ್ನ ಭಾರತ ದೇಶಕ್ಕೆ ಹೋಗುತ್ತಿದ್ದೀಯ. ಪ್ರಯಾಣದ ನಡುವೆ ಯಾವುದಾದರೊಂದು ಕಾಡಿಗೆ ಹೋಗು. ಅಲ್ಲಿ ನನ್ನ ಸಮುದಾಯದ ಬಾಂಧವರು ಸಾವಿರ ಸಾವಿರ ಸಂಖ್ಯೆಯಲ್ಲಿದ್ದಾರೆ. ನಾನು ಇಲ್ಲಿ, ನಿನ್ನ ಪಂಜರದಲ್ಲಿದ್ದೇನೆ ಎಂದು ವಿಷಯ ತಿಳಿಸಿಬಿಡು. ಅಷ್ಟು ಸಾಕು” ಎಂದಿತು.

ವ್ಯಾಪಾರಿಯು ಭಾರತಕ್ಕೆ ಹೋದ. ಗಿಳಿಯ ಕೋರಿಕೆಯಂತೆ ಅಲ್ಲಿನ ಕಾಡಿಗೆ ತೆರಳಿ, ಗಿಳಿವಿಂಡಿನ ಎದುರು ನಿಂತು, ತನ್ನ ಪಂಜರದ ಗಿಳಿಯ ಸಂದೇಶ ತಿಳಿಸಿದ. ಅದನ್ನು ಕೇಳುತ್ತಿದ್ದಂತೆಯೇ ಮರದ ಮೇಲಿದ್ದ ಒಂದು ಗಿಳಿಯು ತೊಪ್ಪನೆ ಕೆಳಗೆ ಬಿದ್ದುಬಿಟ್ಟಿತು. ಈ ಗಿಳಿ ಎಲ್ಲೋ ತನ್ನ ಪಂಜರದ ಗಿಳಿಯ ಹತ್ತಿರದ ಸಂಬಂಧಿ ಇರಬೇಕು. ತನ್ನ ಬಂಧು ಅಷ್ಟು ದೂರದೇಶದಲ್ಲಿ ಇದ್ದಾನೆಂದು ಕೇಳಿ ದುಃಖದಿಂದ ಸತ್ತುಹೋಯಿತೇನೋ ಎಂದು ವ್ಯಾಪಾರಿ ಯೋಚಿಸಿದ.

ಆತ ಪರ್ಷಿಯಾಕ್ಕೆ ಮರಳಿದ ಮೇಲೆ ಪಂಜರದ ಗಿಳಿ ಆತನನ್ನು ಕೇಳಿತು. “ಭಾರತದಲ್ಲಿ ಕಾಡಿಗೆ ಹೋಗಿದ್ದೆಯಾ? ನನ್ನ ಸಂಬಂಧಿಕರನ್ನು ಕಂಡೆಯಾ? ಅವರು ಏನು ಹೇಳಿದರು?” ಎಂದು ಪ್ರಶ್ನೆಗಳ ಮಳೆಗರೆಯಿತು.

ವ್ಯಾಪಾರಿ ಪಂಜರದ ಗಿಳಿಯ ಬಂಧುವಿನ ನಿಧನ ವಾರ್ತೆಯನ್ನು ಹೇಗೆ ಹೇಳುವುದೆಂದು ತಿಳಿಯದೆ ವಿಷಣ್ಣನಾದ. ಸಮಾಧಾನ ಪೀಠಿಕೆ ಹಾಕುತ್ತಾ, “ನಿನ್ನ ಸಂಗತಿ ಕೆಳಿದ ಕೂಡಲೇ ಮರದ ಮೇಲಿಂದ ಗಿಳಿಯೊಂದು ಕೆಳಗುರುಳಿ ಅಂಗಾತ ಬಿದ್ದುಬಿಟ್ಟಿತು. ಆ ನಿನ್ನ ಬಂಧು ನಿನ್ನ ಅಗಲಿಕೆಯ ವಾರ್ತೆ ಕೇಳಿ ಪ್ರಾಣ ತೊರೆದಿರಬೇಕು” ಎಂದ.

ವ್ಯಾಪಾರಿಯ ಮಾತನ್ನು ಕೇಳುತ್ತಲೇ ಗಿಳಿಯು ತೊಪ್ಪೆಯಾಗಿ ಪಂಜರದೊಳಗೆ ಕುಸಿದು ಬಿತ್ತು. ತನ್ನ ಭಾರತದ ಬಂಧುವಿನ ಅಕಾಲಿಕ ನಿಧನವಾರ್ತೆಯನ್ನು ಕೇಳಿ ಈ ಗಿಳಿಯೂ ಸತ್ತುಹೋಯಿತಲ್ಲ ಎಂದು ಅವನು ದುಃಖಿಸಿದ. ಗಿಳಿಯನ್ನು ಪಂಜರದಿಂದ ಎತ್ತಿ ಹೊರತೆಗೆದು ಮೇಜಿನ ಮೇಲಿರಿಸಿದ. ಹೊರಗೆ ಇರಿಸುತ್ತಲೇ ಗಿಳಿಯು ಥಟ್ಟನೆ ಗರಿ ಬಿಚ್ಚಿ ಕಿಟಕಿಯಿಂದ ಹೊರಗೆ ಹಾರಿಹೋಯಿತು.

ವ್ಯಾಪಾರಿ ಅವಾಕ್ಕಾಗಿ ನೋಡುತ್ತಾ ನಿಂತು. ಅಲ್ಲೇ ಮರದ ಮೇಲೆ ಕುಳಿತ ಗಿಳಿ, “ನಾನು ಪಂಜರದಲ್ಲಿದ್ದೇನೆ ಎಂಬ ಸಂದೇಶದಲ್ಲಿ ನನ್ನ ಬಿಡುಗಡೆಗೆ ದಾರಿ ಯಾವುದಾದರೂ ಇದೆಯೇ ಎನ್ನುವ ಪ್ರಶ್ನೆ ಅಡಕವಾಗಿತ್ತು. ಅದನ್ನು ಕೇಳಿದ ಭಾರತದ ಗಿಳಿಯು ಪ್ರಾಯೋಗಿಕವಾಗಿ ನಿನ್ನ ಮೂಲಕವೇ ಉತ್ತರ ಕಳುಹಿಸಿಕೊಟ್ಟಿತು! ಇಷ್ಟು ದಿನ ಬಂಧನದಲ್ಲಿ ಇಟ್ಟಿದ್ದರೂ ಬಿಡುಗಡೆಯ ಉಪಾಯವನ್ನು ಹೊತ್ತು ತಂದ ನಿನಗೆ ಧನ್ಯವಾದ” ಎಂದು ಹೇಳಿ ಹಾರಿಹೋಯಿತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.