ನಮ್ಮ ಪ್ರೀತಿಪಾತ್ರರೊಂದಿಗೆ ಯಾವುದೇ ನಿರೀಕ್ಷೆಗಳನ್ನು ಹೊಂದದೇ ಇರುವುದು ಅಸಾಧ್ಯವಿರಬಹುದು. ಆದ್ದರಿಂದ, ಇಟ್ಟುಕೊಳ್ಳುವುದೇ ಆದರೆ, ಸಕಾರಣ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಕು. ನೀರಿಕ್ಷೆಗಳು ಸಕಾರಣವಾಗಿದ್ದು, ಜ್ಞಾನ ಹಾಗೂ ವಿವೇಕದ ಮೇಲೆ ಆಧಾರಿತವಾಗಿರಬೇಕು.
ಬೆಂಕಿ ಬಿಸಿಯಾಗಿರುತ್ತದೆ ಎಂದು ನಮಗೆ ಗೊತ್ತಿದೆ. ಆ ವಾಸ್ತವಾಂಶವನ್ನು ಒಪ್ಪಿದ್ದೇವೆ. ಬೆಂಕಿಯನ್ನು ಮುಟ್ಟಿ ಸುಟ್ಟುಕೊಂಡರೆ ಬೆಂಕಿಯನ್ನು ನಿಂದಿಸುವುದಿಲ್ಲ. ಇಡೀ ಮನೆಯೇ ಸುಟ್ಟಾಗ, ನಾವು ಬೇರೆ ಅಂಶಗಳನ್ನು ನಿಂದಿಸಬಹುದು ಅಥವಾ ನಮ್ಮ ನಿರ್ಲಕ್ಷ್ಯವನ್ನು ಹಳಿಯುತ್ತೇವೆ. ಆದರೆ ಬೆಂಕಿ ಇರುವುದೇ ಹಾಗೆ ಎಂದು ಒಪ್ಪಿಕೊಳ್ಳುತ್ತೇವೆ. ಹಿಮದ ತಂಪನ್ನು, ಹೂ, ಹಣ್ಣು, ಮರಗಿಡಗಳ ಸೌಂದರ್ಯವನ್ನು ಸ್ವೀಕರಿಸಿದ್ದೇವೆ. ನಾವು ಪೂರ್ಣ ಚಂದ್ರನನ್ನು ಪ್ರಶಂಸಿಸುವಾಗ, ಬೇರೆ ಯಾರಾದರೂ ಬಂದು ಅವರೂ ಮೆಚ್ಚಿಕೊಳ್ಳಲು ಶುರು ಮಾಡಿದರೆ ನಾವು `ನೀವ್ಯಾಕೆ ನನ್ನ ಚಂದ್ರನನ್ನು ನೋಡುತ್ತಿದ್ದೀರಿ? ಅದನ್ನು ನೋಡಲು ನಿಮಗ್ಯಾವ ಹಕ್ಕೂ ಇಲ್ಲ!’ ಎನ್ನುವುದಿಲ್ಲ. ಅಲ್ಲಿ ಮಾಲೀಕತ್ವದ ಅಥವಾ ಸ್ವಾಮ್ಯದ ಭಾವನೆ ಇಲ್ಲ; ಯಾವುದೇ ಇಷ್ಟಾನಿಷ್ಟದ ವಿಚಾರವಿಲ್ಲದೇ ಕೇವಲ ಸ್ವೀಕೃತಿ ಇರುತ್ತದೆ. ವಿವೇಕಿಯು ಎಲ್ಲೆಡೆ ಪ್ರೀತಿ ಮತ್ತು ಅಕ್ಕರೆಯಿಂದ ಸಾಗುತ್ತಾನೆ ಎಂದು ಭಗವದ್ಗೀತೆಯು ಹೇಳುತ್ತದೆ. ಗಾಳಿಯು ಮುಕ್ತವಾಗಿ ಬೀಸುವಂತೆ ಅವನು ಯಾವುದಕ್ಕೂ ಅಂಟಿಕೊಳ್ಳದೆ ಚಲಿಸುತ್ತಾನೆ. ಎಲ್ಲವನ್ನೂ ಸ್ವೀಕರಿಸುತ್ತಾನೆ. ಆದರೆ, ಸಹವಾಸಿಗಳಾದ ಜಡ – ಜೀವ ವಸ್ತುಗಳ ಜೊತೆ ಹೀಗೆ ಇರಬಲ್ಲ ನಾವು, ಸಂಬಂಧಿತ ಮನುಷ್ಯರೊಡನೆ ಮಾತ್ರ ಇರಲು ಕಷ್ಟಪಡುತ್ತೇವೆ. ಏಕೆ ಹೀಗೆ?
ನಾನು ಒಬ್ಬರಿಂದ ಏನನ್ನೋ ನಿರೀಕ್ಷಿಸಿದರೆ, ಆ ವ್ಯಕ್ತಿ ನನ್ನಿಂದ ಮತ್ತೇನೋ ನಿರೀಕ್ಷಿಸುತ್ತಾರೆ. ಮೊದಲೇ ನಾವು ನಮ್ಮ ಕುರಿತ ಸ್ವಂತ ನಿರೀಕ್ಷೆಗಳನ್ನು ಪೂರೈಸಲು ಪರದಾಡುತ್ತಿರುತ್ತೇವೆ. ಅನೇಕ ಕೆಲಸಗಳನ್ನು ಮಾಡಲು ಬಯಸಿದರೂ, ಮಾಡಲು ಅಸಮರ್ಥರಾಗಿರುತ್ತೇವೆ. ನಮಗೆ ನಮ್ಮ ಕುರಿತೇ ನಿರಾಸೆ ಮತ್ತು ಜಿಗುಪ್ಸೆ ಮೂಡುತ್ತದೆ. ಹೀಗಿರುವಾಗ ಬೇರೆಯವರ ನಿರೀಕ್ಷೆಗಳನ್ನು ಎಷ್ಟು ತಾನೆ ಪೂರೈಸಬಲ್ಲೆವು?
ಉದಾಹರಣೆಗೆ ನೋಡಿ. ಪೋಷಕರು ತಮ್ಮ ಮಗು ಕ್ರೀಡೆ ಅಥವಾ ಅಧ್ಯಯನದಲ್ಲಿ ಅತ್ಯುತ್ತಮವಾಗಿ ಸಾಧನೆ ಮಾಡಬೇಕೆಂದು ನಿರೀಕ್ಷಿಸುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಮಗುವಿಗೆ ಅಸಾಧ್ಯವಾದುದನ್ನು ನಿರೀಕ್ಷಿಸುವುದು ಮತ್ತು ಅನಗತ್ಯವಾಗಿ ಒತ್ತಡ ಹೇರುವುದು ಕೊನೆಗೆ ಇಬ್ಬರಿಗೂ ಆಶಾಭಂಗವನ್ನು ಉಂಟುಮಾಡುತ್ತದೆ.
ಹಾಗೆಯೇ, ನಮ್ಮ ಪ್ರೀತಿಪಾತ್ರರೊಂದಿಗೆ ಯಾವುದೇ ನಿರೀಕ್ಷೆಗಳನ್ನು ಹೊಂದದೇ ಇರುವುದು ಅಸಾಧ್ಯವಿರಬಹುದು. ಆದ್ದರಿಂದ, ಇಟ್ಟುಕೊಳ್ಳುವುದೇ ಆದರೆ, ಸಕಾರಣ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಕು. ನೀರಿಕ್ಷೆಗಳು ಸಕಾರಣವಾಗಿದ್ದು, ಜ್ಞಾನ ಹಾಗೂ ವಿವೇಕದ ಮೇಲೆ ಆಧಾರಿತವಾಗಿರಬೇಕು.
ನಿಸರ್ಗಕ್ಕೆ ಸಂಬಂಧಿಸಿದಂತೆ, ನಾವು ಒಡೆತನ ಅಥವಾ ಸ್ವಾಮ್ಯದ ಭಾವನೆಯನ್ನು ಹೊಂದಿರುವುದಿಲ್ಲ. ಆದರೆ ಜನರ ಕುರಿತು ಈ ಭಾವನೆ ತುಂಬ ಆಳವಾಗಿ ಬೇರು ಬಿಟ್ಟಿರುತ್ತದೆ ಮತ್ತು ಅದು ಬಹಳ ವಿನಾಶಕಾರಿ. ನಮಗೆ ನಿಜಕ್ಕೂ ಮತ್ತೊಬ್ಬರ ಮೇಲೆ ಪ್ರೀತಿ ಮತ್ತು ಅಕ್ಕರೆ ಇರುವುದೇ ಆದಲ್ಲಿ, ಅವರ ಸ್ವಾತಂತ್ರ್ಯ ಮತ್ತು ಬದುಕಿನ ಅವಕಾಶಕ್ಕೂ (ಸ್ಪೇಸ್) ಸ್ಥಾನ ಕೊಡಬೇಕು. ಎರಡೂ ಕೈಗಳನ್ನು ಜೋಡಿಸಿದಾಗಲೂ ನಡುವೆ ಚಿಕ್ಕ ಅಂತರ ಇರುತ್ತದೆ. ಹಾಗೆಯೇ ನಾವು ಮತ್ತೊಬ್ಬರಿಗೂ ಅವರ ಬದುಕಲ್ಲಿ ಅವರಂತೆ ಇರುವ ಅವಕಾಶ ಕೊಡಬೇಕು. ಅವರದೇ ಆದ ಸ್ಪೇಸ್ ಕೊಡಬೇಕು. ಹಾಗೆ ಸ್ಪೇಸ್ ಕೊಟ್ಟಾಗ ನಾವು ಅವರ ಮೇಲೆ ಒಡೆತನ ಸಾಧಿಸದಂತೆ ನಮ್ಮನ್ನು ತಡೆದುಕೊಳ್ಳಲು ಸಾಧ್ಯ. ಮತ್ತು ಆ ಮೂಲಕ ನಾವು ಇತ್ತೀಚಿನ ಕಾಲದಲ್ಲಿ ಸಂಬಂಧಗಳ ನಡುವೆ ಅತಿದೊಡ್ಡ ಪಿಡುಗಾಗಿರುವ ಪೊಸೆಸ್ಸಿವ್’ನೆಸ್ ಇಂದ ಹೊರತಾಗುಳಿಯಲು ಸಾಧ್ಯ.
ನಿಮ್ಮ ಜಾಲತಾಣದ ಬರಹಗಳು ಚೆನ್ನಾಗಿರುತ್ತವೆ.ಆದರೆ ಲೇಖಕರ ಹೆಸರನ್ನೇಕೆ ಹಾಕುವುದಿಲ್ಲ?
ಅರಳಿಮರ ಬಳಗದವರೇ ಬರೆದಾಗ ಹೆಸರು ಹಾಕುವುದಿಲ್ಲ. ಉಳಿದಂತೆ, ವಿಶೇಷ ಲೇಖನಗಳು ಹಾಗೂ
ಹೊರಗಿನವರ ಹೆಸರು ಹಾಕುತ್ತಿದ್ದೇವೆ, ಗಮನಿಸಿ.