
~ ಯಾದಿರಾ
ಮರುಭೂಮಿಯ ಮಹಾಯೋಗಿನಿ ರಾ-ಉಮ್ ಬಳಿಗೆ ಮೂರ್ಖನೊಬ್ಬ ಬಂದ. ಈಚಲ ಮರದ ಕೆಳಗೆ ಧ್ಯಾನಾಸಕ್ತಳಾಗಿದ್ದ ರಾ-ಉಮ್ ಕಣ್ಣು ತೆರೆದಳು.
‘ಅಮ್ಮಾನಾನೊಬ್ಬ ಮೂರ್ಖ ಎಂದು ನನಗೆ ಗೊತ್ತಿದೆ. ಮೂರ್ಖತ್ವವನ್ನು ಹೇಗೆ ಕಳೆದುಕೊಳ್ಳುವುದು ಎಂದು ಮಾತ್ರ ಗೊತ್ತಾಗುತ್ತಿಲ್ಲ’ ಎಂದು ಆ ಮೂರ್ಖ ಅಲವತ್ತುಕೊಂಡ.
ರಾ-ಉಮ್ ಗಹಗಹಿಸಿ ನಕ್ಕು. ‘ಅಂದರೆ ನೀನು ಮೂರ್ಖ ಎಂದು ನಿನಗೆ ಗೊತ್ತಿದೆ. ಹಾಗಾದರೆ ನೀನು ಮೂರ್ಖನಾಗಿರಲು ಸಾಧ್ಯವೇ ಇಲ್ಲ’ ಎಂದಳು.
ಮೂರ್ಖನಿಗೆ ತಲೆಕೆಟ್ಟಂತಾಯಿತು. ಅವನು ವಿವರಿಸಿದ: ‘ಎಲ್ಲರೂ ನನ್ನನ್ನು ಮೂರ್ಖ ಎನ್ನುತ್ತಾರೆ’
ರಾ-ಉಮ್ ಗೆ ಸಿಟ್ಟು ಬಂತು: ‘ಮೂರ್ಖ… ಇತರರು ಹೇಳುವುದನ್ನು ಕೇಳಿಸಿಕೊಂಡು ನಿನ್ನನ್ನು ನೀನು ಅರಿಯುತ್ತಿದ್ದರೆ ನೀನು ಮೂರ್ಖನೇ ಸರಿ’.
ಆ ಮೂರ್ಖ ಅಂದೇ ರಾ-ಉಮ್ ಆಶ್ರಮಕ್ಕೆ ಸೇರ್ಪಡೆಯಾದ. ಮುಂದೆ ವ-ಐನ್-ಸಾಇಲ್ ಎಂಬ ಮುನಿಯಾಗಿ ಪ್ರಖ್ಯಾತನಾದ.