ಶೋಹಿಚಿ ತೀರಿಕೊಂಡಿದ್ದು ಗೊತ್ತಾಗಿದ್ದು ಹೇಗೆ?

ಶೋಹಿಚಿ ಒಬ್ಬ ಒಕ್ಕಣ್ಣ ಝೆನ್ ಗುರು. ಅವನು ತೊಫುಕು ದೇವಾಲಯದಲ್ಲಿ ಶಿಕ್ಷಣ ನೀಡುತ್ತಿದ್ದ. ಅಪಾರ ಜ್ಞಾನವನ್ನು ಹೊಂದಿದ್ದ ಶೋಹಿಚಿ ವ್ಯರ್ಥವಾಗಿ ಮಾತಾಡುವುದನ್ನಾಗಲೀ ಸಂಕೇತಗಳನ್ನಾಗಲೀ ಇಷ್ಟಪಡುತ್ತಿರಲಿಲ್ಲ. ಅವನ ಶಿಕ್ಷಣ ವಿಧಾನವೆಂದರೆ ಮೌನದ ಸಾಧನೆ.

ಶೋಹಿಚಿಯ ಕಾರಣದಿಂದ ತೊಫುಕು ದೇವಾಲಯದಲ್ಲಿ ಯಾವ ಸದ್ದೂ ಇರುತ್ತಿರಲಿಲ್ಲ. ಸಂಪೂರ್ಣ ನಿಶ್ಶಬ್ದ. ಅಲ್ಲಿ ಅವನು ಧರ್ಮ ಸೂತ್ರಗಳನ್ನು ಪಠಿಸುವುದಕ್ಕೂ ಅನುಮತಿ ನೀಡುತ್ತಿರಲಿಲ್ಲ. ಅವನ ಶಿಷ್ಯರು ಮೌನ ಧ್ಯಾನವನ್ನು ಬಿಟ್ಟು ಬೇರೆ ಯಾವ ಸಾಧನೆಯನ್ನು ಮಾಡಬೇಕಾಗಿಯೂ ಇರಲಿಲ್ಲ.

ವರ್ಷಗಳು ಉರುಳಿದವು.

ಒಂದು ದಿನ ತೊಫುಕು ದೇವಾಲಯದ ಸಮೀಪದಲ್ಲಿ ವಾಸಿಸುತ್ತಿದ್ದ ಹೆಂಗಸಿಗೆ ಶಿಷ್ಯರು ಗಟ್ಟಿಯಾಗಿ ಸೂತ್ರಗಳನ್ನು ಪಠಿಸುತ್ತಿರುವುದು ಕೆಳಿಸಿತು. ಗಂಟೆಗಳ ಸದ್ದು ಕೂಡಾ.

“ಓಹ್! ಗುರು ಶೋಹಿಚಿ ತೀರಿಹೋದರು” ಅವಳು ಪಕ್ಕದಲ್ಲಿ ಕುಳಿತವಳಿಗೆ ಹೇಳಿದಳು.

Leave a Reply